Cabinet Expansion : ಸಂಪುಟ ವಿಸ್ತರಣೆ ಮಾಡಿದರೂ, ಮಾಡದೇ ಇದ್ದರೂ ಸಂಕಷ್ಟ ಸಿ.ಎಂಗೇ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕಳೆದ ವಾರದ ಕರ್ನಾಟಕದ ಭೇಟಿಯಿಂದಾಗಿ ಬಿಜೆಪಿ (BJP) ಯಲ್ಲಿ ಹೊಗೆಯಾಡುತ್ತಿದ್ದ ಅಸಮಾಧಾನ ಸಂಪೂರ್ಣ ಕರಗಿಹೋಗುವ ನಿರೀಕ್ಷೆ ಇತ್ತು. ಆದರೆ, ಅಮಿತ್ ಶಾ ಕೋರ್ ಕಮಿಟಿ ಸಭೆಯಲ್ಲಿ ಭಾಗಿಯಾಗಿ, ಮುಂದಿನ ಚುನಾವಣಾ ಸಿದ್ಧತೆಗಳ ಬಗ್ಗೆ ರಾಜ್ಯ ಬಿಜೆಪಿ ನಾಯಕರಿಗೆ ಸ್ವಲ್ಪ ಮಟ್ಟಿನ ಪಾಠಗಳನ್ನು ಮಾಡಿಹೋದರು. ಈ ಸಂದರ್ಭದಲ್ಲಿ ಬಿಜೆಪಿ ಒಳಗೆ ಸಚಿವ ಸ್ಥಾನ ಆಕಾಂಕ್ಷಿಗಳು (Cabinet Expansion) ಬೂದಿಮುಚ್ಚಿದ ಕೆಂಡದಂತೆ ಉರಿಯುತ್ತಿರುವ ಬಗ್ಗೆ ಸಿ.ಎಂ. ಬೊಮ್ಮಾಯಿ ಸೇರಿದಂತೆ ಹಲವರು ಶಾ ಅವರ ಗಮನಕ್ಕೆ ತಂದರು. ಇವನ್ನು ಅಮಿತ್ ಶಾ ಕೇಳಿಸಿಕೊಂಡವರೇ, ಮುಂದಿನವಾರ ದೆಹಲಿಯಲ್ಲಿ ತೀರ್ಮಾನ ಮಾಡಿ ಅಂತಿಮ ನಿರ್ಧಾರ ಮಾಡೋಣ ಎಂದು ಭರವಸೆಯ ಮಂಜುಗಡ್ಡೆಯನ್ನು ಇಟ್ಟು ಹೊರಟರು.

ಅಮಿತ್ ಶಾ ಅತ್ತ ದೆಹಲಿ ಪಯಣ ಬೆಳಸುತ್ತಿದ್ದಂತೆ ಇತ್ತ ಬಿಜೆಪಿ ವಲಸಿಗರು ಹಾಗೂ ಸಚಿವ ಆಕಾಂಕ್ಷಿಗಳು ಒಬ್ಬೊಬ್ಬರೇ ಬಾಯಿತೆರೆಯಲು ಶುರುಮಾಡಿದರು. ಇದರಲ್ಲಿ, ಕಳೆದ ಬಾರಿಯೇ ಸಚಿವರಾಗುವ ಪಣತೊಟ್ಟಿದ್ದ ಬೆಳಗಾವಿಯ ಅನಿಲ್ ಬೆನಕಿ, ಅಭಯ್ ಪಾಟೀಲ್ ಮಾಧ್ಯಮಗಳ ಮುಂದೆ ನಾನು ಆಕಾಂಕ್ಷಿ. ಎಂಥ ಸ್ಥಾನ ಕೊಟ್ಟರೂ ನಿಭಾಯಿಸಲು ಸಿದ್ದ ಎಂದು ಹೇಳಿಕೆ ನೀಡಿದರು.

ಸಿ.ಎಂ ರೇಸಲ್ಲಿದ್ದ ಅರವಿಂದ್ ಬೆಲ್ಲದ್ ಅಮಿತ್ ಶಾ ಭೇಟಿಯಾಗಿ ಗುಸುಗುಸು ಮಾತನಾಡಿಕೊಂಡಿದ್ದೇ ಅವರಿಗೆ ಸೂಪರ್ ಪವರ್ ಬಂದಿದೆ. ಬೆಲ್ಲದ್ ಪ್ರಕಾರ, 6 ತಿಂಗಳ ಹಿಂದೆ ಶಾ ಅವರ ಭೇಟಿಯಾಗಬೇಕು ಅಂದಿದ್ದೆ. ಬೆಂಗಳೂರಿನ ಈ ಭೇಟಿ ಸಂದರ್ಭದಲ್ಲಿ ಶಾ ಸಹಾಯಕರು ರಾತ್ರಿ ಕರೆ ಮಾಡಿ ಬೆಳಗ್ಗೆ ಬನ್ನಿ ಎಂದರು. ಅಲ್ಲಿ ಅಮಿತ್ ಶಾ ಅವರು ರಾಜ್ಯದ ಸ್ಥಿತಿಗತಿ ಬಗ್ಗೆ ಚರ್ಚೆ ಮಾಡಿದರು. ನಮ್ಮ ಸರ್ಕಾರ ಅವಧಿ ಪೂರ್ಣಗೊಳಿಸಲಿದೆ. ಹಿರಿಯರಿಗೆ ಕೋಕ್ ಕೊಟ್ಟು ಕಿರಿಯರಿಗೆ ಅವಕಾಶ ನೀಡುವ ಸಾಧ್ಯತೆಯ ಬಗ್ಗೆ ಚರ್ಚೆ ನಡೆಸಿದರು ಎಂದು ಹೇಳಿಕೆ ನೀಡಿ ಮತ್ತಷ್ಟು ಕಾರ್ಮೋಡಕ್ಕೆ ಕಾರಣರಾದರು.

ಈಗ ಮತ್ತೆ ಸಿ.ಎಂ. ಬೊಮ್ಮಾಯಿ, ಕಿಸೆಯಲ್ಲಿ ಸಚಿವ ಸಂಪುಟ ವಿಸ್ತರಣೆಯ ಪಟ್ಟಿ, ಕೈಯಲ್ಲಿ ಅಭಿವೃದ್ಧಿ ಕಾಮಗಾರಿಯ ಫೈಲ್ ಗಳನ್ನು ಹಿಡಿದು ಹೈಕಮಾಂಡ್ ಅವರನ್ನು ಭೇಟಿಯಾಗಲು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಮೇಲು ನೋಟಕ್ಕೆ ಇದು ರಾಜ್ಯದ ಅಭಿವೃದ್ಧಿಗಲ್ಲ, ಒಂಥರ ಸಂಪುಟ ವಿಸ್ತಾರಣಾ ಪ್ರವಾಸ ಅಂತಲೇ ಹೇಳಬೇಕು.

ದೆಹಲಿ ಮೂಲದ ಪ್ರಕಾರ, ಸಂಪುಟ ವಿಸ್ತರಣೆ ಮಾಡಲು ಹೈಕಮಾಂಡ್ ಆಸಕ್ತಿ ತೋರಿಸುತ್ತಿಲ್ಲ. ಅಮಿತ್ ಶಾ ಮುಂದಿನವಾರ ಚರ್ಚೆ ನಡೆಸಿ ತೀರ್ಮಾನ ಮಾಡೋಣ ಅಂತ ಬೆಂಗಳೂರ ಭೇಟಿಯಲ್ಲಿ ಹೇಳಿದ್ದು ಕೇವಲ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡು ಆಯಸ್ಸು ಜಾಸ್ತಿ ಮಾಡಿಕೊಳ್ಳುವ ತಂತ್ರ ಎಂದು ಸಿ.ಎಂ ಬೊಮ್ಮಾಯಿ ಅವರಿಗೆ ಈಗ ತಿಳಿಯುತ್ತಿದೆ.

ಒಂದು ಪಕ್ಷ ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿ ನೇಮಕ ಆಗದೇ ಇದ್ದರೆ, ಚುನಾವಣೆ ಮುನ್ನವೇ ಬಿಜೆಪಿಯಲ್ಲಿ ಸ್ಫೋಟ ಸಂಭವಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಹೈಕಮಾಂಡ್ ಸ್ಫೋಟ ತಡೆಗೆ ಏನಾದರು ಉಪಾಯ ಮಾಡಿಯೇ ಸಂಪುಟ ವಿಸ್ತರಣೆಯನ್ನು ಮುಂದೂಡಲಿದೆಯೇ ಅನ್ನೋದನ್ನು ಕಾದು ನೋಡಬೇಕು.

ಆದರೆ, ವಿಸ್ತರಣೆ ಆಗದೇ ಚುನಾವಣೆ ಎದುರಿಸಲು, ವಿಸ್ತರಣೆ ಮಾಡುವಾ ಸಚಿವ ಸ್ಥಾನ ತ್ಯಾಗ ಮಾಡುವರಿಂದ ಎದುರಾಗುವ ಭಿನ್ನಮತೀಯ ಕಾವು ದೆಹಲಿ ನಾಯಕರಿಗಿಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಮ್ ಗೆ ಹೆಚ್ಚು ತಟ್ಟುತ್ತದೆ ಅನ್ನೋದು ಸತ್ಯ.
ಸಿ.ಎಂ. ಆಪ್ತವಲಯದಲ್ಲಿ ಕೇಳಿಬರುತ್ತಿರುವುದೇನೆಂದರೆ,

-ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಂಪುಟಕ್ಕೆ ತಕ್ಕ ಸರ್ಜರಿ ಆಗಬೇಕು.
-ಗರಿಷ್ಠ 6 ಸಚಿವರನ್ನು ಕೈಬಿಡಬೇಕಾಗಿಬರಬಹುದು. ಅದಕ್ಕಿಂತ ಹೆಚ್ಚಾದರೆ ಮತ್ತೆ ಸಮಸ್ಯೆ ಎದುರಿಸಬೇಕಾಗುತ್ತದೆ.
-ಹೆಚ್ಚೆಂದರೆ 10 ಮಂದಿಗೆ ಸಂಪುಟದಲ್ಲಿ ಸ್ಥಾನ ಒದಗಸಲೇಬೇಕಾಗುತ್ತದೆ.

ಇವಿಷ್ಟು ಸಿ.ಎಂ ಅವರು ಈಗಾಗಲೇ ಹೈಕಮಾಂಡ್ ಮುಂದಿಟ್ಟಿರುವ ಅಂಶಗಳು.

ಕರ್ನಾಟಕದ ಉಸ್ತುವಾರಿ ಹೊತ್ತುಕೊಂಡಿರುವ ನಡ್ಡ ಅವರ ಯೋಚನೆ ಬೇರೆಯೇ ಇದೆ. ಸಂಪುಟ ವಿಸ್ತರಣೆಗಿಂತ, ನೀವು ಕೈಬಿಡುವ ಸಚಿವರು ಚುನಾವಣೆಯ ಸಂದರ್ಭದಲ್ಲಿ ಹೆಚ್ಚು ಅಪಾಯಕಾರಿ ಆದರೆ ಗತಿ ಏನು ಎಂದು ಸಿ.ಎಂ. ಬೊಮ್ಮಾಯಿ ಅವರನ್ನು ಕೇಳಿದ್ದಾರೆ. ಈ ಬಗ್ಗೆ ಅಮಿತ್ ಶಾ ಅವರೊಂದಿಗೆ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವುದು ಸೂಕ್ತ ಎಂದು ಅಭಿಪ್ರಾಯ ಪಟ್ಟಿದ್ದಾರೆ ಎನ್ನಲಾಗಿದೆ. ಎರಡೆರಡು ಸಲ ನಡ್ಡಾ ಅವರೊಂದಿಗಿನ ಸಿ.ಎ ಚರ್ಚೆ ಕೂಡ ಫಲಪ್ರದವಾಗಿಲ್ಲ.

ಇತ್ತ ಪ್ರಹ್ಲಾದ್ ಜೋಶಿ ಅವರ ಮೂಲಕ ಅಮಿತ್ ಶಾ ಅವರನ್ನು ಭೇಟಿಯಾಗುವ ಸಿ.ಎಂ. ಬಸವರಾಜ ಬೊಮ್ಮಾಯಿ ಯೋಜನೆ ಕೂಡ ಕೈಗೂಡದೇ ಇರುವುದರಿಂದ ಬಿಜೆಪಿಯಲ್ಲಿ ಒತ್ತಡದ ವಾತಾವರಣವಿದೆ. ಅತ್ತ ಸಿ.ಎಂ. ಬಸವರಾಜ ಬೊಮ್ಮಾಯಿ ದೆಹಲಿ ಪ್ರವಾಸ ಕೈಗೊಳ್ಳುವ ಮೊದಲೇ, ಬಿ.ವೈ ವಿಜಯೇಂದ್ರ, ರಮೇಶ್ ಜಾರಕಿಹೊಳಿ, ಶ್ರೀಮಂತ ಪಾಟೀಲ, ಆರ್.ಶಂಕರ್, ಬಸವನ ಗೌಡ ಪಾಟೀಲ ಯತ್ನಾಳ್, ರಾಜೂಗೌಡ, ರೇಣುಕಾಚಾರ್ಯ ಮುಂತಾದವರು ದೆಹಲಿಯ ಹೋಟೆಲ್ ನಲ್ಲಿ ಬೀಡು ಬಿಟ್ಟಿದ್ದಾರೆ. ಈ ಮೂಲಕ ಸಚಿವ ಸ್ಥಾನಕ್ಕಾಗಿ ಒತ್ತಡ ಏರಲು ಆರಂಭಿದ್ದಾರೆ ಎನ್ನಲಾಗುತ್ತಿದೆ.

ಏಪ್ರಿಲ್ ಮೂರನೇ ವಾರದಲ್ಲಿ ಹೊಸಪೇಟೆಯಲ್ಲಿ ನಡೆಯು ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚಿಸಿದ ನಂತರ ಆಪರೇಷನ್ ಸಂಪುಟಕ್ಕೆ ಒಂದು ದಿಕ್ಕು ಕಾಣಬಹುದು ಎನ್ನುವ ಮಾತು ಈಗ ಕೇಳಿಬರುತ್ತಿದೆ. ಏನೇ ಆದರೆ ಸಂಪುಟ ವಿಸ್ತರಣೆ ಆದರೂ, ಮುಂದೂಡಿದರು ಅದರ ಪರಿಣಾಮದ ಕಾವನ್ನು ಸಿ.ಎಂ. ಸಾಹೇಬರೇ ಅನುಭವಿಸಬೇಕು.

ಇದನ್ನೂ ಓದಿ : Zameer Ahmed Khan : ರಾಹುಲ್ ಕಾರ್ಯಕ್ರಮಕ್ಕೂ ಗೈರಾದ್ರು ಜಮೀರ್ : ಸದ್ಯದಲ್ಲೇ ಕಾಂಗ್ರೆಸ್‌ಗೆ ಗುಡ್‌ಬೈ

ಇದನ್ನೂ ಓದಿ : Bangalore Karaga : ಕರಗಕ್ಕೂ ಧರ್ಮ ಸಂಘರ್ಷದ ಕರಿನೆರಳು : ಕರಗ ಸಮಿತಿ ಭೇಟಿ ಮಾಡಿದ ಮೌಲ್ವಿಗಳು

(Cabinet Expansion will affect Karnataka C.M Basavaraj boomai)

Comments are closed.