ಚಾಮರಾಜನಗರ ಘಟನೆ….! ಇದು ಕೊಲೆಯೋ? ಸಾವೋ? ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನೆ…!

ದೆಹಲಿ: ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯಲ್ಲಿ ನಡೆದ ಅತಿದೊಡ್ಡ ದುರಂತ ದೇಶದಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 24 ಜನರು ಸಾವನ್ನಪ್ಪಿದ ಘಟನೆಗೆ ಎಲ್ಲೆಡೆಯಿಂದ ಖಂಡನೆ ವ್ಯಕ್ತವಾಗುತ್ತಿದ್ದು, ಸರ್ಕಾರದ ವೈಫಲ್ಯ ಎಂದು ಪ್ರತಿಪಕ್ಷಗಳು ಟೀಕಿಸಿದ್ದರೇ, ಇದು ಸಾವೋ ಕೊಲೆಯೋ ಎಂದು ರಾಹುಲ್ ಗಾಂಧಿ ಕುಟುಕಿದ್ದಾರೆ.  

ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 24 ಕೊರೋನಾ ಸೋಂಕಿತರು ಸಾವನ್ನಪ್ಪಿದ್ದು, ಮೊದಲ ನೋಟಕ್ಕೆ ಈ ಸಾವಿಗೆ ಆಕ್ಸಿಜನ್ ಕೊರತೆ ಕಾರಣ ಎನ್ನಲಾಗುತ್ತಿದೆ. ಅಧಿಕಾರಿಗಳ ನಡುವಿನ ಸಂವಹನದ ಕೊರತೆಯಿಂದ ಪೊರೈಕೆಯಾಗಬೇಕಾದ ಆಕ್ಸಿಜನ್ ತಲುಪಿಲ್ಲ ಎನ್ನಲಾಗಿದೆ. ಹೀಗಾಗಿ 24 ರೋಗಿಗಳು ಸಾವನ್ನಪ್ಪಿದ್ದಾರೆ. ‘

ಈ ಘಟನೆಯನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದ್ದು, ತಕ್ಷಣ ಈ ಸಾವಿನ ಹೊಣೆ ಹೊತ್ತು ಸಂಬಂಧಿಸಿದ ಸಚಿವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದೆ. ಈ ಮಧ್ಯೆ ಈ ಘಟನೆಯನ್ನು ಸಾವೋ ಕೊಲೆಯೋ ಎಂದು ಕಾಂಗ್ರೆಸ್ ನಾಯಕ ಹಾಗೂ ವಯನಾಡು ಸಂಸದ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಈ ಘಟನೆಯಲ್ಲಿ ಸಾವನ್ನಪ್ಪಿದ ಕೊರೋನಾ ರೋಗಿಗಳ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದು, ತಮ್ಮವರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಸಂತಾಪ. ಸರ್ಕಾರದ ವ್ಯವಸ್ಥೆ ಎಚ್ಚರಗೊಳ್ಳುವ ಮುನ್ನ ಇನ್ನೆಷ್ಟು ಸಾವುಗಳು ಸಂಭವಿಸಬೇಕು ಎಂದು ಪ್ರಶ್ನಿಸಿದ್ದಾರೆ.

ಚಾಮರಾಜನಗರದ ಘಟನೆ ಬೆಳಕಿಗೆ ಬರುತ್ತಿದ್ದಂತೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದ್ದು, ಆರೋಗ್ಯ ಇಲಾಖೆ ಸಚಿವ ಡಾ.ಸುಧಾಕರ್ ಸ್ಥಳಕ್ಕೆ ಧಾವಿಸಿದ್ದಾರೆ. ವರದಿ ತರಿಸಿಕೊಂಡು ತಪ್ಪಿಸ್ಥರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಹೇಳಿದ್ದು, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಪ್ರಕರಣದ ಕುರಿತು ತನಿಖೆಗೆ ಆದೇಶಿಸಿದ್ದಾರೆ.

Comments are closed.