Karnataka cabinet expansion : ಮತ್ತೊಮ್ಮೆ ದೆಹಲಿಗೆ ಸಿಎಂ ಬೊಮ್ಮಾಯಿ : ಮುನ್ನಲೆಗೆ ಬಂತು ಸಂಪುಟ ವಿಸ್ತರಣೆ ಸರ್ಕಸ್

ಬೆಂಗಳೂರು : ಈಗಾಗಲೇ ನೊರೆಂಟು ಭಾರಿ ಸದ್ದು ಮಾಡಿದ್ದ ರಾಜ್ಯ ಸಚಿವ ಸಂಪುಟ ವಿಸ್ತರಣೆ ಸರ್ಕಸ್ ಮತ್ತೊಮ್ಮೆ ಸದ್ದು ಮಾಡಿದೆ. ರಾಜ್ಯದ ಸಿಎಂ‌ ಬಸವರಾಜ್ ಬೊಮ್ಮಾಯಿ (Basavaraj Bommai visit Delhi) ಗುರುವಾರ ಮಧ್ಯಾಹ್ನ ದೆಹಲಿಗೆ ತೆರಳಿದ್ದು, ಸಿಎಂ ದೆಹಲಿ ಪ್ರವಾಸದ ಬೆನ್ನಲ್ಲೇ ಸಚಿವ ಸ್ಥಾನಾಕಾಂಕ್ಷಿಗಳ ನೀರಿಕ್ಷೆ ಗರಿಗೆದರಿದೆ. ಮಹಾರಾಷ್ಟ್ರ ರಾಜಕೀಯದಲ್ಲಿ ಅಲ್ಲೋಲ‌ಕಲ್ಲೋಲ ಸೃಷ್ಟಿಯಾಗಿರುವಾಗಲೇ ರಾಜ್ಯದಲ್ಲೂ ರಾಜಕೀಯ ಚಟುವಟಿಕೆ ಗರಿಗೆದರಿದೆ. ಹೈಕಮಾಂಡ್ ಸೂಚನೆ ಮೇರೆಗೆ ಸಿಎಂ ಬೊಮ್ಮಾಯಿ ದೆಹಲಿಗೆ ತೆರಳಲಿದ್ದು, ಸಚಿವ ಸಂಪುಟ ವಿಸ್ತರಣೆ (Karnataka cabinet expansion) ಅಥವಾ ಪುನರಚನೆಗಾಗಿ ಸಿಎಂರನ್ನು ಹೈಕಮಾಂಡ್ ಕರೆದಿದೆ ಎನ್ನಲಾಗ್ತಿದೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಸಿಎಂ‌ ಬಸವರಾಜ್ ಬೊಮ್ಮಾಯಿ ಒಟ್ಟಿಗೆ ಸೇರಿ ಪಕ್ಷ ನಿಷ್ಠರ ಹೆಸರನ್ನು ಸಚಿವ ಸ್ಥಾನಕ್ಕಾಗಿ ಅಂತಿಮಗೊಳಿಸಿದ್ದು, ಕೇವಲ ಸಚಿವ ಸ್ಥಾನ ಮಾತ್ರವಲ್ಲ ನಿಗಮ ಮಂಡಳಿಗಾಗಿಯೂ ಆಯ್ಕೆ ಪಟ್ಟಿ ಅಂತಿಮಗೊಂಡಿದೆ ಎನ್ನಲಾಗ್ತಿದೆ. ಒಂದೆಡೆ ಸಿಎಂ ದೆಹಲಿಗೆ ತೆರಳುತ್ತಿದ್ದರೇ, ಇತ್ತ ರಾಜ್ಯದ ಸಚಿವ ಸ್ಥಾನ ಆಕಾಂಕ್ಷಿಗಳು ಸಿಎಂ ಮನೆಯತ್ತ ದೌಡಾಯಿಸಿದ್ದಾರೆ. ಲಕ್ಷ್ಮಣ ಸವದಿ ಸಿಎಂ ನಿವಾಸಕ್ಕೆ ಬಂದಿದ್ದಲ್ಲದೇ ಸಿಎಂ ಕಾರಿನಲ್ಲೇ ತೆರಳಿದ್ದಾರೆ. ಲಕ್ಷ್ಮಣ ಸವದಿ ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು ಇತ್ತೀಚಿಗಷ್ಟೇ ಅವರು ವಿಧಾನಪರಿಷತ್ ಸ್ಥಾನಕ್ಕೆ ಆಯ್ಕೆಗೊಂಡಿದ್ದಾರೆ.

ಇನ್ನೂ ಹಲವು ಶಾಸಕರು ಸಿಎಂ ಭೇಟಿ ಮಾಡಿದ್ದು, ತಮ್ಮ ಸಚಿವ ಸ್ಥಾನದ ಬಗ್ಗೆ ಹೈಕಮಾಂಡ್ ಬಳಿ ಪ್ರಸ್ತಾಪಿಸುವಂತೆ ಮನವಿ ಮಾಡಿದ್ದಾರಂತೆ. ಇನ್ನೊಂದೆಡೆ ಮಹಾರಾಷ್ಟ್ರ ಸರ್ಕಾರದ ರಾಜಕೀಯ ಅಸ್ಥಿರತೆಗೆ ಕಾರಣವಾಗಿದ್ದ ಏಕನಾಥ್ ಶಿಂಧೆಗೆ ಸಪೋರ್ಟ್ ನೀಡಿದ್ದಾರೆ ಹಾಗೂ ಮಹಾರಾಷ್ಟ್ರ ಸರ್ಕಾರದ ಪತನದಲ್ಲಿ ರಮೇಶ್ ಜಾರಕಿಹೊಳಿ ಪಾತ್ರವಿದೆ ಎಂಬ ಮಾತು ಕೇಳಿಬಂದಿತ್ತು. ಇದಕ್ಕೆ ಪೂರಕ ಎಂಬಂತೆ ರಮೇಶ್ ಜಾರಕಿಹೊಳಿ ಕೂಡ ಮುಂಬೈನಲ್ಲೇ ಬೀಡು ಬಿಟ್ಟಿದ್ದರು.

ಈಗ ರಾಜ್ಯದಲ್ಲಿ ಸಂಪುಟ ವಿಸ್ತರಣೆ ಸದ್ದು ಮಾಡುತ್ತಿದಂತೆ ಬೆಂಗಳೂರಿಗೆ ದೌಡಾಯಿಸಿದ್ದು, ಸಚಿವ ಸ್ಥಾನ ಪಡೆಯಲು ಸರ್ಕಸ್ ನಡೆಸಿದ್ದಾರೆ ಎನ್ನಲಾಗಿದೆ. ಕೇವಲ ಲಕ್ಷ್ಮಣ ಸವದಿ ಮತ್ತು ರಮೇಶ್ ಜಾರಕಿಹೊಳಿ ಮಾತ್ರವಲ್ಲ ಮಾಜಿ ಸಚಿವ ಈಶ್ವರಪ್ಪ ಕೂಡ ಸಿಎಂರನ್ನು ಭೇಟಿ ಮಾಡಿದ್ದಾರೆ. ಈ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ. 40% ಕಮಿಷನ್ ಹಗರಣದ ಫಲವಾಗಿ ಈಶ್ವರಪ್ಪ ರಾಜೀನಾಮೆ‌ ನೀಡಿದ್ದರು.

ಆದರೆ ಸಿಎಂ ದೆಹಲಿ ಪ್ರವಾಸ ಸಂಪುಟ ವಿಸ್ತರಣೆ ಕಾರಣಕ್ಕೆ ಎಂಬುದಕ್ಕೆ ಯಾವುದೇ ಆಧಾರವಿಲ್ಲ. ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಬಿಜೆಪಿ ಹೈಕಮಾಂಡ್ ಸಂಪುಟ ವಿಸ್ತರಣೆಗೆ ಕೈಹಾಕೋದು ಅನುಮಾನ ಎನ್ನಲಾಗ್ತಿದೆ. ರಾಷ್ಟ್ರಪತಿ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ನಾಮಪತ್ರ ಸಲ್ಲಿಸಲಿದ್ದು, ಅವರಿಗೆ ಸೂಚಕರಾಗಿ ಸಹಿ ಮಾಡಲು ಸಿಎಂ ದೆಹಲಿಗೆ ತೆರಳಿದ್ದಾರೆ ಎಂಬ ಮಾತು ಕೇಳಿಬಂದಿದೆ. ಒಟ್ಟಿನಲ್ಲಿ ಮತ್ತೊಮ್ಮೆ ರಾಜ್ಯದಲ್ಲಿ ಸಂಪುಟ ವಿಸ್ತರಣೆ ಸರ್ಕಸ್ ಮುನ್ನಲೆಗೆ ಬಂದಿದೆ.

ಇದನ್ನೂ ಓದಿ : Maharashtra Crisis : 20 ಬಂಡಾಯ ಶಾಸಕರ ಜೊತೆ ನಾವು ಸಂಪರ್ಕದಲ್ಲಿದ್ದೇವೆಂದ ಶಿವಸೇನೆ

ಇದನ್ನೂ ಓದಿ : Crazy Structure : ಜಗತ್ತಿನ ವಿಚಿತ್ರ ಕಟ್ಟಡಗಳು ನಿಮಗೆ ಗೊತ್ತಾ? ಇದು ಆಗರ್ಭ ಶ್ರೀಮಂತರ ಆಲೋಚನೆಯಿಂದ ಹುಟ್ಟಿದ್ದು!!

CM Basavaraj Bommai visit Delhi , Karnataka cabinet expansion curious

Comments are closed.