Congress candidates list: 43 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್: ಯಾರೆಲ್ಲಾ ಕಣದಲ್ಲಿ..?

ಗುಜರಾತ್: Congress candidates list: ಗುಜರಾತ್ ವಿಧಾನಸಭಾ ಚುನಾವಣಾ ಕಣ ರಂಗೇರಿದೆ. ಡಿಸೆಂಬರ್ 1 ಹಾಗೂ 5ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, 8ರಂದು ಎರಡೂ ಹಂತಗಳ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. ಈ ಬೆನ್ನಲ್ಲೇ ಕಾಂಗ್ರೆಸ್ ಪಕ್ಷವು 43 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಪಕ್ಷದ ಹಲವು ಪ್ರಮುಖರಿಗೆ ಟಿಕೆಟ್ ನೀಡಿದೆ.
ಕಾಂಗ್ರೆಸ್ ಪ್ರಕಟಿಸಿರುವ ಮೊದಲ ಪಟ್ಟಿಯಲ್ಲಿ 7 ಮಹಿಳೆಯರಿಗೆ ಟಿಕೆಟ್ ನೀಡಲಾಗಿದೆ. ಜೊತೆಗೆ ಕೆಲ ಮಾಜಿ ಶಾಸಕರು ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ವಡೋದರಾ ಕಾಂಗ್ರೆಸ್ ನಾಯಕ ನರೇಂದ್ರ ರಾವತ್ ಅವರ ಪತ್ನಿಗೂ ಸಯ್ಯಾಜಿಗುಂಜ್ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡಲಾಗಿದೆ.

ರಾಜ್ಯಸಭಾ ಸದಸ್ಯ ಅಮೀ ಯಾಜ್ಞಿಕ್ ಅವರಿಗೆ ಟಿಕೆಟ್ ನೀಡಲಾಗಿದ್ದು, ಸಿಎಂ ಭೂಪೇಂದ್ರ ಪಟೇಲ್ ಪ್ರತಿನಿಧಿಸುವ ಘಟಲೋದಿಯಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. 2012 ಮತ್ತು 2017ರಲ್ಲಿ ಬಿಜೆಪಿಯ ಬಾಬು ಬೋಖಿರಿಯಾ ವಿರುದ್ಧ ಸೋತಿದ್ದ ಪೋರಬಂದರ್ ಕ್ಷೇತ್ರದಿಂದ ಹಿರಿಯ ನಾಯಕ ಮತ್ತು ಪಕ್ಷದ ಮಾಜಿ ಶಾಸಕ ಅರ್ಜುನ್ ಮೋದ್ವಾಡಿಯಾ ಅವರಿಗೆ ಟಿಕೆಟ್ ನೀಡಲಾಗಿದೆ.

ಅಭ್ಯರ್ಥಿಗಳನ್ನು ಪ್ರಕಟಿಸಿರುವ 43 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಕೇವಲ ಝಲೋಡ್(ಎಸ್‍ಟಿ) ಕ್ಷೇತ್ರದಲ್ಲಿ ಮಾತ್ರ ಶಾಸಕರನ್ನು ಹೊಂದಿದೆ. ಹೀಗಿದ್ದೂ ಈ ಕ್ಷೇತ್ರದಲ್ಲಿ ಹಾಲಿ ಶಾಸಕ ಭವೇಶ್ ಕತರಾ ಅವರ ಬದಲಾಗಿ ಮಿತೇಶ್ ಗರಸಿಯಾ ಅವರಿಗೆ ಟಿಕೆಟ್ ನೀಡಲಾಗಿದೆ. 2012-17ರ ಅವಧಿಯಲ್ಲಿ ಗರಸಿಯಾ ಈ ಕ್ಷೇತ್ರದಲ್ಲೇ ಶಾಸಕರಾಗಿ ಕರ್ತವ್ಯ ನಿರ್ವಹಿಸಿದ್ದರು.

ಜಸ್ದಾನ್ ಕ್ಷೇತ್ರದ ಮಾಜಿ ಶಾಸಕ ಭೋಲಾಭಾಯಿ ಗೊಹೆಲ್ ಅವರು ಮತ್ತೆ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಭಾವನಗರದ ಮಹುವಾ ಕ್ಷೇತ್ರದಿಂದ ಹಿರಿಯ ನಾಯಕ ಮತ್ತು ಬಿಜೆಪಿಯ ಮಾಜಿ ಶಾಸಕ ಕನುಭಾಯಿ ಕಲ್ಸರಿಯಾ ಅವರನ್ನು ಅದೇ ಸ್ಥಾನಕ್ಕೆ ಕಾಂಗ್ರೆಸ್ ಆಯ್ಕೆ ಮಾಡಿ ಟಿಕೆಟ್ ನೀಡಿದೆ. 2017ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ಸಂಖೇಡಾ (ಎಸ್‍ಟಿ) ಕ್ಷೇತ್ರಕ್ಕೆ ಮಾಜಿ ಶಾಸಕ ಧೀರೂಭಾಯಿ ಭಿಲ್‍ಗೆ ಮಣೆ ಹಾಕಲಾಗಿದೆ.

43 ಅಭ್ಯರ್ಥಿಗಳ ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ 10 ಪಟೇಲ್ ಅಥವಾ ಪಾಟಿದಾರ್ ಅಭ್ಯರ್ಥಿಗಳು, 11 ಆದಿವಾಸಿಗಳು, 10 ಒಬಿಸಿಗಳು, ಐವರು ಎಸ್‍ಟಿ ಅಭ್ಯರ್ಥಿಳಿಗೆ ಟಿಕೆಟ್ ನೀಡಲಾಗಿದೆ. ಆಡಳಿತಾರೂಢ ಬಿಜೆಪಿ ಇನ್ನೂ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿಲ್ಲ. ಹೊಸದಾಗಿ ಗುಜರಾತ್ ಚುನಾವಣಾ ಅಖಾಡ ಪ್ರವೇಶ ಮಾಡಿರುವ ಆಮ್ ಆದ್ಮಿ ಪಕ್ಷ 118 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ.


ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದ ಬಳಿಕ ಪಟ್ಟಿ ಪ್ರಕಟ ಮಾಡಲಾಯಿತು. 2 ದಶಕಗಳಿಗೂ ಹೆಚ್ಚು ಕಾಲದಿಂದ ಬಿಜೆಪಿ ಅಧಿಕಾರದಲ್ಲಿರುವ ಪ್ರಧಾನಿ ಮೋದಿ ತವರೂರು ಗುಜರಾತ್ ಮೇಲೆ ಪ್ರಾಬಲ್ಯ ಹೊಂದುವ ಗುರಿಯನ್ನು ಕಾಂಗ್ರೆಸ್ ಹೊಂದಿದೆ.

ಇದನ್ನೂ ಓದಿ: Shyam Saran Negi:ಭಾರತದ ಮೊದಲ ಮತದಾರ ಶ್ಯಾಮ್ ಸರನ್ ನೇಗಿ ನೆನಪು ಮಾತ್ರ

ಇದನ್ನೂ ಓದಿ: PM Bangalore Visit: ನ.11ರಂದು ಬೆಂಗಳೂರಿಗೆ ಪ್ರಧಾನಿ ಭೇಟಿ: ಮೋದಿ ಸನ್ಮಾನಕ್ಕೆ ಸಿದ್ಧವಾಗಿದೆ ‘ಕೆಂಪೇಗೌಡ ಪೇಟ’

Congress candidates list: congress announces first list of candidates with 43 names

Comments are closed.