‘ಮಹಾತ್ಮ ಗಾಂಧೀಜಿಯವರನ್ನು ದುರ್ಬಳಕೆ ಮಾಡಿಕೊಂಡಿದ್ದೇ ಕಾಂಗ್ರೆಸ್’’ : ವಿಪಕ್ಷ ನಾಯಕ ಆರ್.ಅಶೋಕ್ ಕಿಡಿ
ಬೆಂಗಳೂರು: Congress has misused: ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆಗೆ ನಿರ್ಧರಿಸಿರುವ ಕಾಂಗ್ರೆಸ್ ಸರ್ಕಾರದ ನಡೆದ ವಿರುದ್ಧ ವಿಪಕ್ಷ ನಾಯಕ ಆರ್. ಅಶೋಕ್ ಕಿಡಿಕಾರಿದ್ದಾರೆ. ಈ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ಮೊದಲು ತನ್ನ ಸತತ ಸೋಲಿಗೆ ಕಾರಣ ಹುಡುಕಿಕೊಳ್ಳಲಿ.
ಅದರ ಬದಲು ಹತಾಶೆಯಿಂದ ಮತ್ತೆ ಹೋಗಿ ಬ್ಯಾಲೆಟ್ ಪೇಪರ್ ತರುವುದಲ್ಲ. ಜನ ಒಂದು ವ್ಯವಸ್ಥೆಗೆ ಅಂಟಿಕೊಂಡ ಮೇಲೆ ಆ ವ್ಯವಸ್ಥೆಯನ್ನು ಬದಲಾವಣೆ ಮಾಡುವುದು ಸರಿಯಲ್ಲ. ಇದರಿಂದ ಜನರು ಗೊಂದಲಕ್ಕೆ ಒಳಗಾಗುತ್ತಾರೆ.ತುಘಲಕ್ ದರ್ಬಾರ್ ಎಂದರೆ ಇದೇ ಎಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಕಿಡಿಕಾರಿದ್ದಾರೆ.
ಈ ಬಾರಿಯ ಜಂಟಿ ಅಧಿವೇಶನದಲ್ಲಿ ಅಬಕಾರಿ ಇಲಾಖೆಯಲ್ಲಿ ಆರು ಸಾವಿರ ಕೋಟಿ ರೂಪಾಯಿ ಗುಳುಂ ಮಾಡಿರುವ ಬಗ್ಗೆ ಬಯಲು ಮಾಡಿದ್ದೇವೆ. ಈ ಅಕ್ರಮಕ್ಕೆ ಸಂಬಂಧಿಸಿದ ಆಡಿಯೋ ಸಾಕ್ಷ್ಯ, ಲೋಕಾಯುಕ್ತ ದೂರು ಸೇರಿದಂತೆ ಎಲ್ಲಾ ದಾಖಲೆಗಳನ್ನು ನೀಡಿದ್ದರೂ ಸಹ ಇನ್ನೂ ದಾಖಲೆ ಬೇಕು ಎಂದು ಕೇಳುತ್ತಿದ್ದಾರೆ. ಇದು 80 ಪರ್ಸೆಂಟ್ ಲೂಟಿ ಸರ್ಕಾರ ಎಂದು ಸಿಎಂ ಸಿದ್ದರಾಮಯ್ಯ ಊರಿನವರೇ ಆದ ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಗುರುಸ್ವಾಮಿ ಹೇಳಿದ್ದಾರೆ.
ರಾಹುಲ್ ಗಾಂಧಿಯವರಿಗೆ ಈ ಬಗ್ಗೆ ದೂರು ಕೊಡುವುದಾಗಿ ಗುರುಸ್ವಾಮಿ ಹೇಳಿದ್ದಾರೆ . ನಾವು ಅಬಕಾರಿ ಲೂಟಿ ವಿರುದ್ಧ ಬೀದಿಗಿಳಿದು ಹೋರಾಟ ಮಾಡುತ್ತೇವೆ. ಆಗಿರುವ ಲೂಟಿ ಹಣ ವಾಪಸ್ ಸರ್ಕಾರದ ಖಜಾನೆಗೆ ಬರಬೇಕು. ಸಚಿವರು ರಾಜೀನಾಮೆ ನೀಡಲೇಬೇಕು . ಈ ಬಗ್ಗೆ ಸದನದ ಹೊರಗೆ ಹೋರಾಟ ಆರಂಭಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ .
ಜಿಬಿಎ ಚುನಾವಣಾ ಉಸ್ತುವಾರಿ ರಾಮಮಾಧವ್ ಬೆಂಗಳೂರಿಗೆ ಬರುತ್ತಿರುವ ವಿಚಾರವಾಗಿಯೂ ಮಾತನಾಡಿದ ಅವರು, ನಾಳೆ ಶಾಸಕರು, ಪರಾಜಿತರು, ಪದಾಧಿಕಾರಿಗಳ ಜೊತೆ ಸಭೆ ಇದೆ. ಜಿಬಿಎ ಚುನಾವಣೆ ತಯಾರಿ ಸಂಬಂಧ ಸಭೆ ನಡೆಸಲಿದ್ದೇವೆ. ಐದು ಪಾಲಿಕೆಯವರನ್ನು ಕರೆದು ಚುನಾವಣೆಯಲ್ಲಿ ಗೆಲ್ಲುವ ಸಂಬಂಧ ಚರ್ಚೆ ನಡೆಸಲಿದ್ದೇವೆ ಎಂದು ಮಾಹಿತಿ ನೀಡಿದ್ರು.
ಇದೇ ವೇಳೆ ವಿಬಿಜಿ ರಾಮ್ಜಿ ಕುರಿತಾದ ಜಾಹೀರಾತನ್ನು ಸಮರ್ಥಿಸಿಕೊಂಡ ಆರ್. ಅಶೋಕ್, ನಾವು ಪಕ್ಷದ ವತಿಯಿಂದ ಜಾಹೀರಾತು ನೀಡಿದ್ದೇವೆ.
ಕಾಂಗ್ರೆಸ್ನವರು ಜನರ ತೆರಿಗೆ ಹಣದಿಂದ ಜಾಹೀರಾತು ನೀಡಿದ್ದಾರೆ. ನಾವು ಅವರಂತೆ ಜನರ ಹಣ ಪೋಲು ಮಾಡಿಲ್ಲ. ನಮ್ಮ ಜಾಹೀರಾತಿಗೆ ಕಾಂಗ್ರೆಸ್ ನವರು ಏನೇನೋ ಕಮೆಂಟ್ ಮಾಡುತ್ತಿದ್ದಾರೆ ಎಂಬುದು ಗಮನಕ್ಕೆ ಬಂದಿದೆ. ಗಾಂಧಿಜಿ ಅವರ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ನವರಿಗೆ ಖಂಡಿತ ಇಲ್ಲ ಎಂದು ಲೇವಡಿ ಮಾಡಿದ್ರು.
Also Read: ಗೃಹಲಕ್ಷ್ಮೀ ಫಲಾನುಭವಿಗಳ ಸಮಸ್ಯೆ ಇತ್ಯರ್ಥಕ್ಕೆ ಕ್ರಮ: ಸಚಿವ ಲಕ್ಷ್ಮೀ ಹೆಬ್ಬಾಳಕರ್
ಇಂದು ಗಾಂಧೀಜಿ ಹೆಸರಿಗೆ ಅವಮಾನವಾಗಿದೆ ಎಂದು ಬಾಯಿಬಡಿದುಕೊಳ್ಳುತ್ತಿರುವ ಕಾಂಗ್ರೆಸ್ನವರು ಗಾಂಧೀಜಿ ಅವರ ಹೆಸರಿಗಿಂತ ನೆಹರೂ ಕುಟುಂಬದವರ ಹೆಸರಿನಲ್ಲೇ ಅತೀ ಹೆಚ್ಚು ಯೋಜನೆಗಳನ್ನು ತಂದಿದೆ. ಅಸಲಿಗೆ ಈ ಕಾಂಗ್ರೆಸ್ನವರು ನಕಲಿ ಗಾಂಧಿಗಳು. ಗಾಂಧೀಜಿಗೂ ನೆಹರೂ ಕುಟುಂಬಕ್ಕೂ ಸಂಬಂಧವೇ ಇಲ್ಲ. ಇದೇ ಗಾಂಧೀಜಿ ಹೆಸರಿಟ್ಟುಕೊಂಡು ಬೋಫೋರ್ಸ್ ಹಗರಣ ಮಾಡಿದ್ದಾರೆ. ಸಂವಿಧಾನ ತಿದ್ದುಪಡಿ ಮಾಡಿದ್ದಾರೆ.
ಗಾಂಧೀಜಿಯವರಿಗೆ ಕಾಂಗ್ರೆಸ್ನವರ ಕಾಟ ತಡೆಯಲು ಆಗುತ್ತಿಲ್ಲ ಎಂಬುದಕ್ಕೆ ಕೋಲು ಹಿಡಿದಿರುವ ಜಾಹೀರಾತು ನೀಡಿದ್ದೇವೆ. ಗಾಂಧೀಜಿ ಬಳಿ ಕೋಲು ಮೊದಲೇ ಇತ್ತು . ಕಾಂಗ್ರೆಸ್ನವರ ಅವ್ಯವಹಾರ, ಮದ್ಯದ ಭ್ರಷ್ಟಾಚಾರ ನೋಡಿ ಅವರು ಕೈಗೆ ಆ ಕೋಲನ್ನು ತೆಗೆದುಕೊಂಡಿದ್ದಾರೆ ಎಂದು ಸಮರ್ಥನೆ ನೀಡಿದ್ದಾರೆ.
ಇನ್ನು ರಾಜ್ಯದಲ್ಲಿ ಅಧಿಕಾರ ಬದಲಾವಣೆ ಕುರಿತಂತೆ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿಯೂ ಮಾತನಾಡಿದ ಅವರು, ಮತ್ತೆ ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ – ಡಿಕೆಶಿ ವಾರ್ ಶುರುವಾಗಿದೆ. ಯತೀಂದ್ರ ಅವರೇ ನಮ್ಮ ಹೈಕಮಾಂಡ್ ಅಂತಾ ಡಿಕೆಶಿ ಹೇಳಿದ್ದಾರೆ. ಎಲ್ಲರೂ ಹೈಕಮಾಂಡ್ ತೀರ್ಮಾನ ಅಂತಿಮ ಎಂದರೆ ಯತೀಂದ್ರ ತಾವೇ ತಮ್ಮ ತೀರ್ಮಾನ ಕೊಟ್ಟಿದ್ದಾರೆ. ನಮ್ಮಪ್ಪನೇ ಐದು ವರ್ಷ ಸಿಎಂ ಎಂದು ಹೇಳಿದ್ದಾರೆ .ಕಾಂಗ್ರೆಸ್ ಹೈಕಮಾಂಡ್ ಪವರ್ಲೆಸ್ ಹೈಕಮಾಂಡ್ ಎಂದು ಆರ್. ಅಶೋಕ್ ವ್ಯಂಗ್ಯವಾಡಿದ್ದಾರೆ.



