ರೆಸಾರ್ಟ್ ಪಾಲಿಟಿಕ್ಸ್ ಬಿರುಸು: 7ನೇ ಸೀಟಿನ ಜಿದ್ದಾಜಿದ್ದಿನಲ್ಲಿ ಗೆಲುವಿನ ನಗೆ ಬೀರಲಿದೆಯೇ ಜೆಡಿಎಸ್?
ಕರ್ನಾಟಕ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ವಿಧಾನಪರಿಷತ್ತಿನ ಒಟ್ಟು 7 ಸ್ಥಾನಗಳಿಗಾಗಿ ಇಂದು ಮತದಾನ ಪ್ರಕ್ರಿಯೆ ನಡೆಯಲಿದೆ.
ಕರ್ನಾಟಕ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ವಿಧಾನಪರಿಷತ್ತಿನ ಒಟ್ಟು ಏಳು ಸ್ಥಾನಗಳಿಗಾಗಿ ಇಂದು ಮತದಾನ ಪ್ರಕ್ರಿಯೆ ನಡೆಯಲಿದೆ. ಈ ಮಹತ್ವದ ಸೀಟುಗಳಿಗಾಗಿ ರಾಜಕೀಯ ಪಕ್ಷಗಳು ತಮ್ಮದೇ ಆದ ತಂತ್ರ ಹಾಗೂ ಪ್ರತಿತಂತ್ರಗಳನ್ನು ರೂಪಿಸುತ್ತಿವೆ. ಇಂದಿನ ಈ ಮತದಾನ ಪ್ರಕ್ರಿಯೆಯು ಪ್ರಮುಖ ಪಕ್ಷಗಳಿಗೆ ಅತ್ಯಂತ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದ್ದು, ಅಡ್ಡಮತದಾನದ ಭೀತಿಯು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ವಿಧಾನಸೌಧದ ಮೊದಲ ಮಹಡಿಯ ಕೊಠಡಿ ಸಂಖ್ಯೆ 106ರಲ್ಲಿ ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಶಾಸಕರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. ಇಡೀ ಚುನಾವಣೆಯನ್ನು ಪಾರದರ್ಶಕವಾಗಿ ನಡೆಸಲು ಚುನಾವಣಾಧಿಕಾರಿ ಎಂ.ಕೆ.ವಿಶಾಲಾಕ್ಷಿ ಅವರ ನೇತೃತ್ವದಲ್ಲಿ ಕಟ್ಟುನಿಟ್ಟಿನ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಮತದಾನ ಮುಕ್ತಾಯಗೊಂಡ ತಕ್ಷಣವೇ, ಅಂದರೆ ಸಂಜೆ 5 ಗಂಟೆಯಿಂದ ಮತಗಳ ಎಣಿಕೆ ಕಾರ್ಯ ಆರಂಭವಾಗಲಿದ್ದು, ರಾತ್ರಿಯ ಹೊತ್ತಿಗೆ ಯಾರಿಗೆ ಜಯ ಸಿಗಲಿದೆ ಎಂಬ ಸ್ಪಷ್ಟ ಚಿತ್ರಣ ಸಿಗಲಿದೆ. ಈ ಬಾರಿ ಒಬ್ಬ ಅಭ್ಯರ್ಥಿ ನಿರಾಯಾಸವಾಗಿ ಮೇಲ್ಮನೆಗೆ ಆಯ್ಕೆಯಾಗಲು ಕನಿಷ್ಠ 28 ಶಾಸಕರ ಮೊದಲ ಪ್ರಾಶಸ್ತ್ಯದ ಮತಗಳ ಅಗತ್ಯವಿದೆ.
ಇದನ್ನೂ ಓದಿ : ರೈತರಿಗೆ ಸಿಹಿಸುದ್ದಿ! ಪಿಎಂ ಕಿಸಾನ್ 23ನೇ ಕಂತಿನ ಹಣ ಬಿಡುಗಡೆ ದಿನಾಂಕ ಫಿಕ್ಸ್
ಆಡಳಿತಾರೂಢ ಕಾಂಗ್ರೆಸ್ ಪಕ್ಷದಿಂದ ಬಿ.ಕೆ.ಹರಿಪ್ರಸಾದ್, ತಿಪ್ಪಣ್ಣಪ್ಪ ಕಮಕನೂರ, ಪಿ.ವಿ.ಮೋಹನ್, ಬಿ.ಎಸ್.ಶಿವಣ್ಣ ಮತ್ತು ವಿನಯ್ ಕಾರ್ತಿಕ್ ಪ್ರಕಾಶ್ ಅವರು ಕಣದಲ್ಲಿದ್ದಾರೆ. ಪ್ರತಿಪಕ್ಷ ಬಿಜೆಪಿಯಿಂದ ಕೌಟಿಲ್ಯ ರಘು ಹಾಗೂ ಲಿಂಗರಾಜ್ ಪಾಟೀಲ್ ಇಬ್ಬರು ಸ್ಪರ್ಧಿಸುತ್ತಿದ್ದಾರೆ.ಇನ್ನು ಸಂಖ್ಯಾಬಲದ ಕೊರತೆಯ ನಡುವೆಯೂ ಜೆಡಿಎಸ್ ತನ್ನ ಏಕೈಕ ಅಭ್ಯರ್ಥಿಯಾಗಿ ಗೋವಿಂದರಾಜು ಅವರನ್ನು ಕಣಕ್ಕಿಳಿಸಿ ಚುನಾವಣೆಯನ್ನು ರೋಚಕ ಘಟ್ಟಕ್ಕೆ ತಂದಿಟ್ಟಿದೆ.
ಸದ್ಯದ 224 ಸದಸ್ಯರ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ 135 ಶಾಸಕರನ್ನು ಹೊಂದಿದ್ದು, 4 ಸ್ಥಾನಗಳನ್ನು ಯಾವುದೇ ತೊಂದರೆಯಿಲ್ಲದೆ ಗೆಲ್ಲುವ ಸಾಮರ್ಥ್ಯ ಹೊಂದಿದೆ. ಹಾಗೆಯೇ 62 ಶಾಸಕರ ಬಲವಿರುವ ಬಿಜೆಪಿ ತನ್ನಿಬ್ಬರು ಅಭ್ಯರ್ಥಿಗಳನ್ನು ಸುಲಭವಾಗಿ ಗೆಲ್ಲಿಸಿಕೊಳ್ಳಬಲ್ಲುದು.
ಆದರೆ ಅಸಲಿ ಆಟ ಶುರುವಾಗುವುದೇ ಏಳನೇ ಸ್ಥಾನಕ್ಕಾಗಿ. ಈ ಕೊನೆಯ ಸೀಟಿಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ. 18 ಶಾಸಕರನ್ನು ಮಾತ್ರ ಹೊಂದಿರುವ ಜೆಡಿಎಸ್, ಬಿಜೆಪಿಯ ಉಳಿಕೆ 6 ಮತಗಳು ಹಾಗೂ ಪಕ್ಷೇತರರ ಬೆಂಬಲದೊಂದಿಗೆ 26 ಮತಗಳನ್ನು ಕ್ರೋಢೀಕರಿಸಲು ಯತ್ನಿಸುತ್ತಿದೆ. ಅತ್ತ ಕಾಂಗ್ರೆಸ್ ಸಹ ತನ್ನ ಐದನೇ ಅಭ್ಯರ್ಥಿಯನ್ನು ಗೆಲ್ಲಿಸಲು ಪಕ್ಷೇತರರು ಹಾಗೂ ಅತೃಪ್ತರ ಮತಗಳನ್ನು ಸೆಳೆಯಲು ಸರ್ವಪ್ರಯತ್ನ ನಡೆಸುತ್ತಿದೆ.
ಇದನ್ನೂ ಓದಿ : ತಿಂಗಳಿಗೆ 1,500 ಹೂಡಿಕೆ, ಮೆಚ್ಯೂರಿಟಿಗೆ 1 ಲಕ್ಷಕ್ಕೂ ಹೆಚ್ಚು! ಬಂಪರ್ ಯೋಜನೆ
ಕೊನೆಯ ಕ್ಷಣದಲ್ಲಿ ಸ್ವಪಕ್ಷದ ಶಾಸಕರು ಬೇರೆ ಪಕ್ಷಕ್ಕೆ ಮತ ಹಾಕದಂತೆ ತಡೆಯಲು ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳು ರೆಸಾರ್ಟ್ ರಾಜಕೀಯದ ಮೊರೆ ಹೋಗಿವೆ. ಬೆಂಗಳೂರಿನ ಹೊರವಲಯದ ಖಾಸಗಿ ರೆಸಾರ್ಟ್ಗಳಲ್ಲಿ ಶಾಸಕರಿಗೆ ಬಿಡಾರ ಹೂಡಲಾಗಿದ್ದು, ಯಾವುದೇ ಅಪರಿಚಿತ ಕರೆಗಳನ್ನು ಸ್ವೀಕರಿಸದಂತೆ ಸೂಚನೆ ನೀಡಲಾಗಿದೆ. ಅಣಕು ಮತದಾನದ ಮೂಲಕ ಶಾಸಕರಿಗೆ ತರಬೇತಿಯನ್ನೂ ನೀಡಲಾಗಿದ್ದು, ಇಂದಿನ ಫಲಿತಾಂಶವು ರಾಜ್ಯ ರಾಜಕಾರಣದ ಮುಂದಿನ ದಿಕ್ಸೂಚಿಯನ್ನು ನಿರ್ಧರಿಸಲಿದೆ.



