Siddaramaiah : ಸೋತು ಗೆದ್ದ ಸಿದ್ದರಾಮಯ್ಯ ; ಒಂದೇ ಕಲ್ಲಿಗೆ 3 ಹಕ್ಕಿ ಹೊಡೆದ ಟಗರು

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) ಕರ್ನಾಟಕದ ಚಾಣಾಕ್ಷ ರಾಜಕಾರಣಿಗಳಲ್ಲಿ ಒಬ್ಬರು. ರಾಜಕೀಯ ದಾಳಗಳನ್ನು ಉರುಳಿಸೋದ್ರಲ್ಲಿ ಸೈ ಎನಿಸಿಕೊಂಡವರು. ಚತುರ ಚಾಣಾಕ್ಷ ಸಿದ್ದರಾಮಯ್ಯ ರಾಜ್ಯಸಭಾ ಚುನಾವಣೆಯಲ್ಲಿ ಒಂದೇ ಕಲ್ಲಿಗೆ 3 ಹಕ್ಕಿ ಹೊಡೆದಿದ್ದಾರೆ.

ಶುಕ್ರವಾರ ನಡೆದ ರಾಜ್ಯಸಭಾ ಚುನಾವಣೆಯಲ್ಲಿ (Rajyasabha Election) ಕಾಂಗ್ರೆಸ್”ನ ಮೊದಲ ಅಭ್ಯರ್ಥಿ ಜೈರಾಮ್ ರಮೇಶ್ (Jairamn ramesh) ಗೆದ್ದು, 2ನೇ ಅಭ್ಯರ್ಥಿ ಮನ್ಸೂರ್ ಖಾನ್ (Mansoor Khan) ಸೋತ ವಿಚಾರ ನಿಮ್ಗೆ ಗೊತ್ತೇ ಇದೆ. ಇದೇ ವೇಳೆ ಬಿಜೆಪಿ ತನ್ನ ಮೂರೂ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕಾಂಗ್ರೆಸ್’ನ 2ನೇ ಅಭ್ಯರ್ಥಿ ಮನ್ಸೂರ್ ಖಾನ್ ಸೋತರೂ ಸಿದ್ದರಾಮಯ್ಯ ತಮ್ಮ ದಾಳ ಉರುಳಿಸಿ ಗೆದ್ದಿದ್ದಾರೆ. ಹಾಗಾದ್ರೆ ಸಿದ್ದರಾಮಯ್ಯ ಸೋತು ಗೆದ್ದದ್ದು ಹೇಗೆ ?

Siddaramaiah : ಸಿದ್ದು ದಾಳ ನಂ.1:

ರಾಜ್ಯ ರಾಜಕಾರಣದಲ್ಲಿ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾದಾಗಲೆಲ್ಲಾ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ಜೆಡಿಎಸ್ ಜಾಯಮಾನ. 2018ರ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬರದೇ ಇದ್ದಾಗ ಗೇಮ್ ಆಡಿದ್ದ ಜೆಡಿಎಸ್, ಕೇವಲ 37 ಸ್ಥಾನಗಳನ್ನಿಟ್ಟುಕೊಂಡು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಮುಖ್ಯಮಂತ್ರಿ ಪಟ್ಟವನ್ನೇ ತನ್ನಾದಾಗಿಸಿಕೊಂಡಿತ್ತು. 2020ರಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಸಂಖ್ಯಾಬಲವಿಲ್ಲದೇ ಇದ್ದರೂ, ಕಾಂಗ್ರೆಸ್ ನೆರವಿನಿಂದ ದೇವೇಗೌಡರನ್ನು ರಾಜ್ಯಸಭೆಗೆ ಕಳುಹಿಸುವಲ್ಲಿ ಜೆಡಿಎಸ್ ಯಶಸ್ವಿಯಾಗಿತ್ತು. ಈ ಬಾರಿಯೂ ಅಂಥದ್ದೇ ಆಟಕ್ಕೆ ದಳಪತಿಗಳು ಮುಂದಾಗಿದ್ರು. 32 ಸ್ಥಾನಗಳನ್ನಿಟ್ಟುಕೊಂಡು ಮತ್ತೆ ಕಾಂಗ್ರೆಸ್ ನೆರವಿನಿಂದ ರಾಜ್ಯಸಭೆಯ 4ನೇ ಸ್ಥಾನವನ್ನು ಗೆಲ್ಲುವುದು ಜೆಡಿಎಸ್ ಲೆಕ್ಕಾಚಾರವಾಗಿತ್ತು. ಆದರೆ ಜೆಡಿಎಸ್ ಲೆಕ್ಕಾಚಾರವನ್ನು ಸಿದ್ದರಾಮಯ್ಯ ಬುಡಮೇಲು ಮಾಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸೋತರೂ ಪರವಾಗಿಲ್ಲ, ಜೆಡಿಎಸ್ ಅಭ್ಯರ್ಥಿ ಗೆಲ್ಬಾರ್ದು ಎಂಬ ಉದ್ದೇಶದಿಂದ ಕಾಂಗ್ರೆಸ್’ನಿಂದ 2ನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅಂದುಕೊಂಡದ್ದನ್ನು ಸಾಧಿಸಿದ್ದಾರೆ.

Siddaramaiah : ಸಿದ್ದು ದಾಳ ನಂ.2 :

ರಾಜ್ಯಸಭಾ ಚುನಾವಣೆಯ ತಂತ್ರಗಾರಿಕೆಯ ಮೂಲಕ ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ರಾಜ್ಯದ ಇತರ ನಾಯಕರಿಗಿಂತ ತಾವೇ ಪ್ರಭಾವಿ ಎಂಬುದನ್ನು ಸಿದ್ದರಾಮಯ್ಯ ಸಾಬೀತು ಪಡಿಸಿದ್ದಾರೆ. ಕಾಂಗ್ರೆಸ್”ನ 2ನೇ ಅಭ್ಯರ್ಥಿಯನ್ನು ಹಿಂದಕ್ಕೆ ಸರಿಸಿ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಜೆಡಿಎಸ್ ವರಿಷ್ಠ ದೇವೇಗೌಡ್ರು, ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮೊರೆ ಹೋಗಿದ್ರು. ಖರ್ಗೆ ಮೂಲಕ ಕೈ ಹೈಕಮಾಂಡ್ ಮನವೊಲಿಸುವುದು ಗೌಡರ ತಂತ್ರವಾಗಿತ್ತು. ಆದರೆ ಇದು ಗೊತ್ತಾಗುತ್ತಲೇ ಫೀಲ್ಡಿಗಿಳಿದ ಸಿದ್ದರಾಮಯ್ಯ, ಯಾವ ಕಾರಣಕ್ಕೂ ಅಭ್ಯರ್ಥಿ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ ಎಂಬುದನ್ನು ಹೈಕಮಾಂಡ್ ನಾಯಕರಿಗೆ ಖಡಕ್ಕಾಗಿ ಹೇಳಿ ಬಿಟ್ರು. ಕೊನೆಗೆ ಕಾಂಗ್ರೆಸ್ ಹೈಕಮಾಂಡ್, ಸಿದ್ದರಾಮಯ್ಯ ಮಾತಿಗೆ ಮಣಿಯಬೇಕಾಯಿತು. ಹೀಗೆ ಮಲ್ಲಿಕಾರ್ಜುನ ಖರ್ಗೆಯವರಂತಹ ಹಿರಿಯ ನಾಯಕನನ್ನೇ ಮೀರಿಸಿ ಹೈಕಮಾಂಡ್ ಮಟ್ಟದಲ್ಲಿ ಪ್ರಭಾವ ಹೆಚ್ಚಿಸಿಕೊಳ್ಳುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ.

ಸಿದ್ದು ದಾಳ ನಂ.3:

ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ತೆನೆ ಪಕ್ಷವನ್ನು ದುರ್ಬಲ ಮಾಡುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ಜೊತೆಗೆ ಒಂದಷ್ಟು ಮಂದಿ ಜೆಡಿಎಸ್ ಶಾಸಕರು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸೇರುವ ಸಾಧ್ಯತೆಗಳು ದಟ್ಟವಾಗಿವೆ. ಜೆಡಿಎಸ್ ದುರ್ಬಲವಾದಷ್ಟೂ ಹಳೇಮೈಸೂರು ಭಾಗದಲ್ಲಿ ಕಾಂಗ್ರೆಸ್’ಗೇ ಲಾಭ. ಇದನ್ನು ಸ್ಪಷ್ಟವಾಗಿ ಅರಿತಿರುವ ಸಿದ್ದರಾಮಯ್ಯ ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್’ನಿಂದ ಅಂತರ ಕಾಯ್ದುಕೊಳ್ಳುವ ಮೂಲಕ ಇನ್ನು ಮುಂದೆ ಜೆಡಿಎಸ್ ಜೊತೆ ಮೈತ್ರಿ ಪ್ರಶ್ನೆಯೇ ಇಲ್ಲ ಎಂಬ ಸಂದೇಶವನ್ನು ತಳಮಟ್ಟದ ಕೈ ಕಾರ್ಯಕರ್ತರಿಗೆ ಅತ್ಯಂತ ಸ್ಪಷ್ಟವಾಗಿ ರವಾನಿಸಿದ್ದಾರೆ.

ಇದನ್ನೂ ಓದಿ : Anocovax : ದೇಶದಲ್ಲಿ ಮೊಟ್ಟ ಮೊದಲ ಪ್ರಾಣಿಗಳ ಕೋವಿಡ್​ 19 ಲಸಿಕೆ ಲೋಕಾರ್ಪಣೆ : ಏನಿದರ ಮಹತ್ವ ಇಲ್ಲಿದೆ ಮಾಹಿತಿ

ಇದನ್ನೂ ಓದಿ : Sonia Gandhi : ಜೂನ್​ 23ರಂದು ವಿಚಾರಣೆಗೆ ಹಾಜರಾಗುವಂತೆ ಸೋನಿಯಾ ಗಾಂಧಿಗೆ ಇಡಿ ಸಮನ್ಸ್​

Former CM Siddaramaiah who hit 3 birds in one stone

Comments are closed.