Karnataka Cabinet Expansion: ರಾಜ್ಯದಲ್ಲಿ ಸಂಪುಟ ಸಂಕ್ರಾಂತಿ ಸರ್ಕಸ್ : ಸಿಎಂ ಮನೆಗೆ ದೌಡಾಯಿಸಿದ ಅಕಾಂಕ್ಷಿಗಳು

Karnataka Cabinet Expansion ರಾಜ್ಯದಲ್ಲಿ ಸಂಕ್ರಾಂತಿ ಬಳಿಕ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ ಎಂಬ ವಿಚಾರ ಮುನ್ನಲೆಗೆ ಬಂದಿದ್ದು ಸಚಿವಸ್ಥಾನಾಕಾಂಕ್ಷಿಗಳ ಎದೆಬಡಿತ ಹೆಚ್ಚಿದೆ. ಈಗಾಗಲೇ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲು ಕಸರತ್ತು ನಡೆಸಿ ವಿಫಲರಾಗಿರುವ ಶಾಸಕರು ಅಂತಿಮ ಹಂತದ ಸರ್ಕಸ್ ಆರಂಭಿಸಿದ್ದಾರೆ. ಸಿಎಂ ಭೇಟಿ ಮಾಡುವ ಮೂಲಕ ನಾವು ಸಚಿವ ಸ್ಥಾನದ ನೀರಿಕ್ಷೆಯಲ್ಲಿದ್ದೇವೆ ಎಂಬ ಸಂದೇಶ ನೀಡಲು ಪ್ರಯತ್ನಿಸುತ್ತಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ ಸಿಎಂ ಬದಲಾವಣೆ ಹಾಗೂ ಸಚಿವ ಸಂಪುಟ ವಿಸ್ತರಣೆ ಹೈಡ್ರಾಮಾಗಳು ನಡೆಯೋದು ಕಾಮನ್ ಸಂಗತಿ. ಈ ಐದು ವರ್ಷದ ಅವಧಿಯಲ್ಲೂ ಈಗಾಗಲೇ ಎರಡನೇ ಸಿಎಂ ಕಾರ್ಯನಿರ್ವಹಿಸುತ್ತಿದ್ದು, ಸಂಕ್ರಾಂತಿ ಬಳಿಕ ಮೂರನೇ ಸಿಎಂ ಎಂಬ ಊಹಾಪೋಹವೂ ದಟ್ಟವಾಗಿದೆ. ಈ ಮಧ್ಯೆ ಇನ್ನೇನೂ ಒಂದೂವರೆ ವರ್ಷ ಮಾತ್ರ ಬಾಕಿ ಇರುವ ಸಚಿವ ಸಂಪುಟದಲ್ಲಿ ಒಮ್ಮೆಯಾದರೂ ಸ್ಥಾನ ಪಡೆಯಬೇಕೆಂಬ ಕಾರಣಕ್ಕೆ ಹಲವು ಶಾಸಕರು ಸಿಎಂ ಮನೆಗೆ ಎಡತಾಕಲಾರಂಭಿಸಿದ್ದಾರೆ.

ಈ ಪೈಕಿ ಶತಾಯ ಗತಾಯ ಮಂತ್ರಿಯಾಗಲೇಬೇಕಂದು ಪಣತೊಟ್ಟಿರುವ ಹಿರಿಯೂರು ಶಾಸಕಿ ಪೂರ್ಣಿಮಾ ಸಿಎಂ ಆರ್.ಟಿ.ನಗರ ನಿವಾಸಕ್ಕೆ ಭೇಟಿ ನೀಡಿ ಸಿಎಂಗೆ ಮನವಿ ಸಲ್ಲಿಸಿ ದ್ದಾರೆ. ಹಿಂದಿನ ಭಾರಿಯೂ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ಪಡೆಯುವ‌ ನೀರಿಕ್ಷೆಯಲ್ಲಿದ್ದ ಪೂರ್ಣಿಮಾ ಸ್ಥಾನ ಸಿಗದೇ ಇದ್ದಾಗ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಈಗಲೂ ಸಿಎಂ ಭೇಟಿ‌ಮಾಡಿರುವ ಪೂರ್ಣಿಮಾ ತಮ್ಮ ಕ್ಷೇತ್ರದ ಅಭಿವೃದ್ಧಿ ಹಾಗೂ ಕಾರ್ಯಕ್ಷಮತೆ, ಜಾತಿಪಂಗಡದ ಆಧಾರದ ಮೇಲೆ ಸ್ಥಾನ ನೀಡಬೇಕೆಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ. ಇನ್ನು ಬಿಜೆಪಿಯ ಹಿರಿಯ ಶಾಸಕ ಹಾಗೂ ಮೈಸೂರು ಭಾಗದ ಬಿಜೆಪಿಯ ಕಟ್ಟಾಳು ರಾಮದಾಸ್ ಕೂಡ ಸಚಿವ ಸ್ಥಾನದ ನೀರಿಕ್ಷೆಯಲ್ಲಿದ್ದು ಈ ಕಾರಣಕ್ಕಾಗಿಯೇ ಸಿಎಂ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ‌ . ಆರ್. ಟಿ.ನಗರ ನಿವಾಸದಲ್ಲಿ ರಾಮದಾಸ್ ಸಿಎಂ ಭೇಟಿ ಮಾಡಿದ್ದಾರೆ.

ಇದನ್ನು ಓದಿ : ಬೆಂಗಳೂರಲ್ಲಿ ಕೊರೊನಾ ಸೋಂಕು ಹೆಚ್ಚುವ ಭೀತಿ : ಚಿಕಿತ್ಸೆಗೆ ಮತ್ತೊಂದು ಆಸ್ಪತ್ರೆ ಮೀಸಲಿರಿಸಿದ ಆರೋಗ್ಯ ಇಲಾಖೆ

ಇದಲ್ಲದೇ ಬಿಎಸ್ವೈ ಆಪ್ತ ರೇಣುಕಾಚಾರ್ಯ, ಬೆಂಗಳೂರು ಶಾಸಕ ಸತೀಶ್ ರೆಡ್ಡಿ, ಕಾರವಾರ ಶಾಸಕಿ ರೂಪಾಲಿ ನಾಯ್ಕ್ ಕೂಡಾ ಸ್ಥಾನ ಪಡೆಯುವ ನೀರಿಕ್ಷೆಯಲ್ಲಿದ್ದಾರೆ. ಇನ್ನು ಸಚಿವ ಸಂಪುಟದಿಂದ ಮಂಡ್ಯದ ನಾರಾಯಣಗೌಡ್ ಹಾಗೂ ಶಶಿಕಲಾ ಜೊಲ್ಲೆಯನ್ನು ಕೈಬಿಡುತ್ತಾರೆ ಎನ್ನಲಾಗಿದ್ದು ಒಟ್ಟಾರೆ ಸಚಿವ ಸಂಪುಟ ವಿಸ್ತರಣೆಯಾಗೋದೇ ನಿಜವಾದಲ್ಲಿ ರಾಜ್ಯದಲ್ಲಿ ಮತ್ತಷ್ಟು ಪೊಲಿಟಿಕಲ್ ಹೈಡ್ರಾಮಾಗಳನ್ನು ಉಚಿತವಾಗಿ ನೋಡೋ ಭಾಗ್ಯ ಜನರಿಗೆ ಸಿಗಲಿದೆ.

Comments are closed.