Karnataka MLA Election 2023 : ಬೈಂದೂರಲ್ಲಿ ಗೋಪಾಲ ಪೂಜಾರಿ Vs ಡಾ.ಗೋವಿಂದ ಬಾಬು ಪೂಜಾರಿ ಕದನ

ಬೈಂದೂರು : ಉಡುಪಿ ಜಿಲ್ಲೆಯ ಗಡಿಭಾಗದಲ್ಲಿರುವ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲೀಗ ಚುನಾವಣಾ (Karnataka MLA Election 2023) ಕಾವು ಏರುತ್ತಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿರುವ ಬೈಂದೂರಿನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ನಡುವೆ ಬಿಗ್ ಫೈಟ್ ಏರ್ಪಡುವ ಸಾಧ್ಯತೆಯಿದೆ. ಕಾಂಗ್ರೆಸ್ ಹಳೆ ಹುಲಿ ಮಾಜಿ ಶಾಸಕ ಗೋಪಾಲ ಪೂಜಾರಿ ಅವರನ್ನೇ ಕಣಕ್ಕೆ ಇಳಿಸುವ ಕುರಿತು ಸಿದ್ದತೆ ಮಾಡಿಕೊಂಡಂತಿದೆ. ಆದ್ರೆ ಬಿಜೆಪಿಯಲ್ಲಿ ಮಾತ್ರ ಅಚ್ಚರಿಯ ಹೆಸರು ಕೇಳಿಬಂದಿದ್ದು, ಹಾಲಿ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಅವರಿಗೆ ಟಿಕೆಟ್ ಕೈತಪ್ಪುವ ಸಾಧ್ಯತೆ ದಟ್ಟವಾಗಿದೆ.

ಕರಾವಳಿ ಭಾಗದ ವಿಧಾನಸಭಾ ಕ್ಷೇತ್ರಗಳಲ್ಲಿಯೇ ಬೈಂದೂರು ವಿಭಿನ್ನ. ಕ್ಷೇತ್ರದಲ್ಲಿ ಇದುವರೆಗೆ ಕಾಂಗ್ರೆಸ್ ಅತೀ ಹೆಚ್ಚು ಗೆಲುವು ದಾಖಲಿಸಿವೆ. 1972 ರಲ್ಲಿ ಮೊದಲ ಬಾರಿಗೆ ಚುನಾವಣೆಯನ್ನು ಎದುರಿಸಿದ್ದ ಬೈಂದೂರು ವಿಧಾನಸಭಾ ಕ್ಷೇತ್ರವನ್ನು ಕಾಂಗ್ರೆಸ್ ತನ್ನ ಮಡಿಲಿಗೆ ಹಾಕಿಕೊಂಡಿತ್ತು. ತದನಂತದಲ್ಲಿ ಜನತಾ ಪಕ್ಷ ಹಾಗೂ ಬಿಜೆಪಿ ಒಟ್ಟು 4 ಬಾರಿ ಗೆಲುವು ಕಂಡಿದ್ರೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಎಂಟು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕ್ಷೇತ್ರದಲ್ಲಿ ಗೋಪಾಲ ಪೂಜಾರಿ ಮಾತ್ರವೇ ನಾಲ್ಕು ಬಾರಿ ಶಾಸಕರಾದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸದ್ಯ ಕ್ಷೇತ್ರ ಬಿಜೆಪಿ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಅವರ ತೆಕ್ಕೆಯಲ್ಲಿದೆ.

ಮುಂದಿನ ಚುನಾವಣೆಯಲ್ಲಿ ಶತಾಯಗತಾಯ ಕ್ಷೇತ್ರವನ್ನು ಮರಳಿ ಪಡೆಯಲು ಕಾಂಗ್ರೆಸ್ ಹವಣಿಸುತ್ತಿದೆ. ಸದ್ಯಕ್ಕೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಗೋಪಾಲ ಪೂಜಾರಿ ಅವರ ಹೆಸರು ಬಲವಾಗಿ ಕೇಳಿಬರುತ್ತಿದೆ. ಕರಾವಳಿ ಭಾಗದಲ್ಲಿನ ವಿಧಾನಸಭಾ ಕ್ಷೇತ್ರಗಳ ಪೈಕಿ ಯು.ಟಿ.ಖಾದರ್ ಹೊರತು ಪಡಿಸಿದ್ರೆ ಕಾಂಗ್ರೆಸ್ ನಲ್ಲಿ ಟಿಕೆಟ್ ಪಕ್ಕಾ ಆಗಿರೋದು ಗೋಪಾಲ ಪೂಜಾರಿ ಅವರಿಗೆ ಮಾತ್ರ. ಹಿಂದಿನ ಎರಡು ಬಾರಿ ಶಾಸಕರಾಗಿ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ದಿ ಕಾರ್ಯ, ಕಳೆದ ಚುನಾವಣೆಯ ಸೋಲಿನ ಅನುಕಂಪವನ್ನು ಮುಂದಿನ ಚುನಾವಣೆಯಲ್ಲಿ ಅಸ್ತ್ರವಾಗಿ ಬಳಸಿಕೊಳ್ಳುವ ಲೆಕ್ಕಾಚಾರದಲ್ಲಿದೆ ಕಾಂಗ್ರೆಸ್. ಕ್ಷೇತ್ರದಲ್ಲಿ ಬಿಲ್ಲವ ಮತಗಳು ಹೆಚ್ಚಿರುವ ಕಾರಣಕ್ಕೆ ಕಾಂಗ್ರೆಸ್ ಈ ಬಾರಿ ಗೋಪಾಲ ಪೂಜಾರಿ ಅವರಿಗೆ ಟಿಕೆಟ್ ನೀಡುವುದು ಬಹುತೇಕ ಖಚಿತವಾಗಿದೆ. ಇನ್ನೊಂದೆಡೆಯಲ್ಲಿ ಗೋಪಾಲ ಪೂಜಾರಿ ಅವರ ಜೊತೆಗೆ ಇತರ ಹೆಸರುಗಳು ಕ್ಷೇತ್ರದಲ್ಲಿ ಕೇಳಿಬರುತ್ತಿದೆ.

ಇನ್ನು ಬಿಜೆಪಿ ಈ ಬಾರಿ ಸಾಕಷ್ಟು ಲೆಕ್ಕಾಚಾರಗಳನ್ನು ಹಾಕುತ್ತಿದೆ. ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ಶಾಸಕರಾದವರು ಮರು ಆಯ್ಕೆಯಾದ ಇತಿಹಾಸವೇ ಬೈಂದೂರು ಕ್ಷೇತ್ರದಲ್ಲಿ ಇಲ್ಲ. ಮುಂದಿನ ಚುನಾವಣೆಯಲ್ಲಿ ಹಾಲಿ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ನಿಶ್ಚಯವಾಗಿ ಗೆಲ್ಲುತ್ತಾರೆ ಅಂತಾ ಖುದ್ದು ಬಿಜೆಪಿಯ ಆಂತರಿಕ ಸಮೀಕ್ಷೆಯೂ ಹೇಳುತ್ತಿಲ್ಲ. ಹಾಲಿ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಅವರ ವಿರುದ್ದ ಪಕ್ಷದ ಕಾರ್ಯಕರ್ತರ ವಲಯದಲ್ಲಿಯೇ ಸಾಕಷ್ಟು ಅಸಮಾಧಾನಗಳು ಇದ್ದಂತೆಯ ಕಂಡು ಬರುತ್ತಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಅವರು ಕ್ಷೇತ್ರಕ್ಕೆ ಆಗಮಿಸಿದ ಸಂದರ್ಭದಲ್ಲಿಯೂ ಶಾಸಕರನ್ನು ತರಾಟೆ ತೆಗೆದುಕೊಂಡಿದ್ದರು. ಒಂದಿಷ್ಟು ಅಭಿವೃದ್ದಿ ಕಾರ್ಯಗಳನ್ನು ಕ್ಷೇತ್ರದಲ್ಲಿ ಮಾಡಿದ್ದರೂ ಕೂಡ, ಕೆಲವೊಂದು ವಿವಾದಗಳು ಬಿ.ಎಂ.ಸುಕುಮಾರ್ ಶೆಟ್ಟಿ ಅವರ ಮರು ಆಯ್ಕೆಗೆ ಮುಳುವಾಗುವ ಸಾಧ್ಯತೆಯೂ ಇದೆ. ಜೊತೆಗೆ ಆರ್ ಎಸ್ ಎಸ್ ನಾಯಕರು ಹೊಸಬರಿಗೆ ಟಿಕೆಟ್ ನೀಡುವಂತೆ ಸೂಚಿಸಿದ್ದಾರೆ. ಬಿ.ಎಸ್.ಯಡಿಯೂರಪ್ಪ ಜೊತೆಗೆ ಉತ್ತಮ ನಂಟು ಹೊಂದಿದ್ದರೂ ಕೂಡ ಯಡಿಯೂರಪ್ಪ ಸುಕುಮಾರ್ ಶೆಟ್ಟಿ ಅವರ ಕೈ ಹಿಡಿಯುವ ಸಾಧ್ಯತೆ ತೀರಾ ಕಡಿಮೆ. ಅಲ್ಲದೇ ಬೈಂದೂರು ಕ್ಷೇತ್ರದಲ್ಲಿ ಈ ಬಾರಿ ಹೊಸ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬೇಕು ಅನ್ನೋ ಕೂಗು ಕೇಳಿಬರುತ್ತಿದೆ. ಇದನ್ನೂ ಓದಿ : ವಿಧಾನಸಭಾ ಚುನಾವಣೆ 2023: ಬಂಟ್ವಾಳದಲ್ಲಿ ಬಿಜೆಪಿಯಿಂದ ರಾಜೇಶ್ ನಾಯಕ್ Vs ಕಾಂಗ್ರೆಸ್ ನಿಂದ ಪದ್ಮರಾಜ್, ಅಶ್ವಿನ್ ಕುಮಾರ್ ರೈ

ಮುಂದಿನ ಚುನಾವಣೆಯಲ್ಲಿ ಬಿಜೆಪಿ ಬೈಂದೂರು ಕ್ಷೇತ್ರದಲ್ಲಿ ಗೆಲುವು ದಾಖಲಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಲು ಹವಣಿಸುತ್ತಿದೆ. ಬಿಜೆಪಿ ಕ್ಷೇತ್ರದಲ್ಲಿ ಜಾತೀವಾರು ಲೆಕ್ಕಾಚಾರದ ಜೊತೆಗೆ ಸುದೀರ್ಘ ಅವಧಿಗೆ ಕ್ಷೇತ್ರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಯುವ ನಾಯಕರಿಗೆ ಈ ಬಾರಿ ಮಣೆ ಹಾಕುವ ಸಾಧ್ಯತೆ ದಟ್ಟವಾಗಿ ಕಾಣಿಸುತ್ತಿದೆ. ಸದ್ಯ ಬೈಂದೂರು ಕ್ಷೇತ್ರಕ್ಕೆ ಡಾ.ಗೋವಿಂದ ಬಾಬು ಪೂಜಾರಿ ಅವರ ಹೆಸರು ಬಹುತೇಕ ಫೈನಲ್ ಆದಂತಿದೆ. ಬಡತನದಲ್ಲಿ ಹುಟ್ಟಿದ ಗೋವಿಂದ ಬಾಬು ಪೂಜಾರಿ ಸ್ವಸಾಮರ್ಥ್ಯದ ಮೂಲಕ ಪ್ರಖ್ಯಾತ ಉದ್ಯಮಿಯಾಗಿ ರೂಪುಗೊಂಡಿದ್ದಾರೆ. ರಾಜ್ಯ, ಹೊರ ರಾಜ್ಯಗಳಲ್ಲಿಯೂ ಸಾವಿರಾರು ಜನರಿಗೆ ಉದ್ಯೋಗವನ್ನು ಒದಗಿಸಿದ್ದಾರೆ. ಅಲ್ಲದೇ ಬೈಂದೂರು ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಸುವ ಕಾರ್ಯವನ್ನೂ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಒಂದಿಷ್ಟು ಸಮಾಜ ಸೇವೆ ಮಾಡುವ ಮೂಲಕ ಕ್ಷೇತ್ರದಲ್ಲಿಯೂ ಮನೆ ಮಾತಾಗಿದ್ದಾರೆ. ಒಂದು ಕಡೆ ಜಾತಿ ಬಲ. ಇನ್ನೊಂದೆಡೆಯಲ್ಲಿ ಹೊಸ ಮುಖ. ಜೊತೆಗೆ ಯಾವುದೇ ರಾಜಕೀಯ ಭ್ರಷ್ಟಾಚಾರದ ಆರೋಪಗಳಿಲ್ಲದಿರುವುದು ಪ್ಲಸ್ ಪಾಯಿಂಟ್.

ಗೋವಿಂದ ಬಾಬು ಪೂಜಾರಿ ಆರ್ ಎಸ್ ಎಸ್ ಪ್ರಮುಖರ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅಲ್ಲದೇ ಹೈಕಮಾಂಡ್ ನಾಯಕರು ಕೂಡ ಕ್ಷೇತ್ರದಲ್ಲಿ ಪಕ್ಷದ ಕಾರ್ಯ ಮಾಡುವಂತೆ ಈಗಾಗಲೇ ಸೂಚನೆ ಕೊಟ್ಟಿದ್ದಾರೆ. ಇನ್ನೊಂದೆಡೆಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕೂಡ ಗೋವಿಂದ ಬಾಬು ಪೂಜಾರಿ ಅವರ ಪರ ಒಲವು ಹೊಂದಿದ್ದಾರೆ. ಗೋವಿಂದ ಬಾಬು ಪೂಜಾರಿ ಅವರಿಗೆ ಟಿಕೆಟ್ ನೀಡಿದ್ರೆ ಬಿಜೆಪಿಗೆ ಹಲವು ರೀತಿಯಲ್ಲಿಯೂ ಲಾಭವಾಗುವ ಸಾಧ್ಯತೆಯಿದೆ. ಬಿಲ್ಲವ ಅಭ್ಯರ್ಥಿಗಳ ನಡುವೆ ಚುನಾವಣೆ ನಡೆದ್ರೆ, ಕಾಂಗ್ರೆಸ್ ಪಕ್ಷದ ಪರ ಒಲವು ಹೊಂದಿರುವ ಯುವ ಮತದಾರರು ಬಿಜೆಪಿ ಕಡೆಗೆ ವಾಲುವ ಸಾಧ್ಯತೆಯೂ ಇದೆ. ಅಷ್ಟೇ ಅಲ್ಲೇ ಮುಂದಿನ ಲೋಕಸಭಾ ಚುನಾವಣೆಯಲ್ಲಿಯೂ ಬಿಲ್ಲವ ಮತಗಳನ್ನು ಸೆಳೆಯುವ ಲೆಕ್ಕಾಚಾರದಲ್ಲಿದೆ. ಇದನ್ನೂ ಓದಿ : ಕರ್ನಾಟಕ ವಿಧಾನಸಭಾ ಚುನಾವಣೆ 2023: ಮಂಗಳೂರು ದಕ್ಷಿಣದಲ್ಲಿ ವೇದವಾಸ್ ಕಾಮತ್ V/S ಐವನ್ ಡಿಸೋಜಾ ಬಿಗ್ ಫೈಟ್ ಸಾಧ್ಯತೆ

ಈಗಾಗಲೇ ಬಂಟ್ವಾಳ ಕ್ಷೇತ್ರದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಅವರ ಬದಲು ಬಿಲ್ಲವ ಮುಖಂಡ ಪದ್ಮರಾಜ್ ಅವರಿಗೆ ಟಿಕೆಟ್ ನೀಡಲು ಕಾಂಗ್ರೆಸ್ ಸಜ್ಜಾಗಿದೆ. ಪದ್ಮರಾಜ್ ಕಾಂಗ್ರೆಸ್ ಪಕ್ಷದಿಂದ ಕಣಕ್ಕೆ ಇಳಿದ್ರೆ ದಕ್ಷಿಣ ಕನ್ನಡ ಮಾತ್ರವಲ್ಲ ಉಡುಪಿ ಜಿಲ್ಲೆಯಲ್ಲಿಯೂ ಬಿಲ್ಲವ ಮತಗಳು ಕಾಂಗ್ರೆಸ್ ಪರ ವಾಲುವ ಸಾಧ್ಯತೆಯಿದೆ. ಹೀಗಾಗಿಯೇ ಬಿಜೆಪಿ ಬೈಂದೂರು ಕ್ಷೇತ್ರದಲ್ಲಿ ಗೋವಿಂದ ಬಾಬು ಪೂಜಾರಿ ಅವರಿಗೆ ಟಿಕೆಟ್ ನೀಡುವ ಮೂಲಕ ಬಿಲ್ಲವ ಸಮುದಾಯವನ್ನು ಬಿಜೆಪಿಯ ಕಡೆಗೆ ವಾಲುವಂತೆ ಮಾಡುವ ಲೆಕ್ಕಾಚಾರವೂ ನಡೆಯುತ್ತಿದೆ. ಇದೇ ಕಾರಣಕ್ಕೆ ಗೋವಿಂದ ಬಾಬು ಪೂಜಾರಿ ಅವರಿಗೆ ಟಿಕೆಟ್ ಬಹುತೇಕ ಫೈನಲ್ ಆಗುವ ಸಾಧ್ಯತೆಯಿದೆ.

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿರುವ ಮಾಜಿ ಶಾಸಕ ಕೆ.ಜಯಪ್ರಕಾಶ್ ಹೆಗ್ಡೆ ಅವರ ಹೆಸರು ಕೂಡ ಬೈಂದೂರು ಬಿಜೆಪಿ ಅಭ್ಯರ್ಥಿಯ ಲಿಸ್ಟ್ ನಲ್ಲಿದೆ. ಆದರೆ ಸಂಸದೆ ಶೋಭಾ ಕರಂದ್ಲಾಜೆ ಅವರು ರಾಜ್ಯ ರಾಜಕಾರಣಕ್ಕೆ ಮರಳು ಸಾಧ್ಯತೆಯಿದ್ದು, ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಅವರನ್ನು ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಸ ಬೇಕೆಂಬ ಮಾತುಗಳು ಕೇಳಿಬರುತ್ತಿದೆ. ಒಟ್ಟಿನಲ್ಲಿ ಕಾಂಗ್ರೆಸ್ ನಿಂದ ಗೋಪಾಲ ಪೂಜಾರಿ ಹಾಗೂ ಬಿಜೆಪಿಯಿಂದ ಗೋವಿಂದ ಬಾಬು ಪೂಜಾರಿ ಅವರ ನಡುವೆ ಮುಂದಿನ ಚುನಾವಣೆಯಲ್ಲಿ ಬಿಗ್ ಫೈಟ್ ನಡೆಯುವ ಸಾಧ್ಯತೆಯಿದೆ.

ಇದನ್ನೂ ಓದಿ : Karnataka Election Congress : ಹೊಸ ಮುಖಗಳಿಗೆ ಅವಕಾಶ : ಕರಾವಳಿ ನಾಯಕರಿಗೆ ಡಿಕೆಶಿ, ಸಿದ್ದರಾಮಯ್ಯ ಸೂಚನೆ

Karnataka MLA Election 2023 Byndoor MLA constituency Govinda Babu Poojari vs Gopal Poojari Big Fight

Comments are closed.