Minister Sivarama Hebbar :ನಮ್ಮ ಸರ್ಕಾರ ಚೆನ್ನಾಗಿಯೇ ನಡೆಯುತ್ತಿದೆ, ಮಾಧುಸ್ವಾಮಿ ಹೇಳಿಕೆ ಬಗ್ಗೆ ಗೊತ್ತಿಲ್ಲ : ಸಚಿವ ಶಿವರಾಮ ಹೆಬ್ಬಾರ್​​

ಹಾವೇರಿ :Minister Sivarama Hebbar : ಈ ಸರ್ಕಾರ ನಡೆಯುತ್ತಿಲ್ಲ, ಏಳೆಂಟು ತಿಂಗಳು ಮಾತ್ರ ಬಾಕಿ ಉಳಿದಿದೆ ಎಂದು ಮ್ಯಾನೇಜ್​ ಮಾಡ್ತಿದ್ದೇವೆ ಎಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿದ್ದಾರೆ ಎನ್ನಲಾದ ಆಡಿಯೋವೊಂದು ವೈರಲ್​ ಆಗಿದ್ದು ರಾಜಕೀಯ ವಲಯದಲ್ಲಿ ಭಾರೀ ಸಂಚಲನವನ್ನು ಸೃಷ್ಟಿಸಿದೆ . ಸೊಸೈಟಿಗಳಲ್ಲಿ ಹಣ ವಸೂಲಿ ವಿಚಾರವಾಗಿ ಸಾಮಾಜಿಕ ಹೋರಾಟಗಾರರೊಬ್ಬರ ಜೊತೆಯಲ್ಲಿ ಕಾನೂನು ಸಚಿವ ಮಾಧುಸ್ವಾಮಿ ಈ ರೀತಿ ಮಾತನಾಡಿದ್ದು ಈ ಆಡಿಯೋ ಇದೀಗ ವಿಪಕ್ಷಗಳಿಗೆ ಪಾಲಿಗೆ ಅಸ್ತ್ರವಾಗಿ ಮಾರ್ಪಟ್ಟಿದೆ. ಕಾನೂನು ಸಚಿವರ ಈ ಹೇಳಿಕೆ ವಿಚಾರವಾಗಿ ಇಂದು ಹಾವೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಪ್ರತಿಕ್ರಿಯೆ ನೀಡಿದ್ದಾರೆ.


ಕಾನೂನು ಸಚಿವ ಮಾಧುಸ್ವಾಮಿ ಯಾವ ಅರ್ಥದಲ್ಲಿ ಈ ರೀತಿಯ ಹೇಳಿಕೆ ನೀಡಿದ್ದಾರೋ ನನಗೆ ಗೊತ್ತಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಒಳ್ಳೆಯ ಕಾರ್ಯಕ್ರಮ ಕೊಟ್ಟು ಸರ್ಕಾರವನ್ನು ಚೆನ್ನಾಗಿಯೇ ನಿರ್ವಹಿಸುತ್ತಿದ್ದೇವೆ. ಇನ್ನುಳಿದಿರುವ ಆರೇಳು ತಿಂಗಳುಗಳಲ್ಲಿ ಸರ್ಕಾರವು ಇನ್ನಷ್ಟು ವೇಗದಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡಲಿದೆ. ಕರ್ನಾಟಕದ ಜನಮಾನಸದಲ್ಲಿ ಒಳ್ಳೆಯ ಸರಕಾರವಿದೆ ಎನ್ನುವ ಪರಿಕಲ್ಪನೆ ಹೋಗದ ರೀತಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.


ಬಿಬಿಎಂಪಿ, ಜಿಲ್ಲಾ ಹಾಗೂ ತಾಲೂಕು ಪಂಚಾಯ್ತಿ ಚುನಾವಣೆಯ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಅವರು, ನಮ್ಮ ಸರಕಾರ ಯಾವುದೇ ಚುನಾವಣೆಯನ್ನು ಮಾಡಲು ರೆಡಿಯಿದೆ. ಚುನಾವಣೆಗಳನ್ನು ಮಾಡುವುದಕ್ಕೆ ನಾವು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಆದರೆ ಕೋರ್ಟಿನಲ್ಲಿರುವ ತೀರ್ಪುಗಳಿಗಾಗಿ ನಾವು ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.


ಸರ್ಕಾರದ ಜಾಹಿರಾತಿನಲ್ಲಿ ಜವರಹಲಾಲ್​ ನೆಹರೂ ಹೆಸರು ಕೈಬಿಟ್ಟ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಅವರು, ಈ ಬಗ್ಗೆ ಈಗಾಗಲೇ ಸಿಎಂ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ. ಕಾಂಗ್ರೆಸ್ಸಿನವರಿಗೆ ತಗಾದೆಯನ್ನು ತೆಗೆಯಲು ಯಾವುದಾದರೊಂದು ವಿಚಾರದಲ್ಲಿ ನೆಪ ಬೇಕಾಗಿದೆ. ನೆಹರೂ ಫೋಟೋ ಹಾಕಿದರೆ ಮತ್ತೊಬ್ಬರ ಬಗ್ಗೆ ಕೇಳುತ್ತಾರೆ. ಅನಗತ್ಯವಾಗಿ ಗೊಂದಲವನ್ನು ಸೃಷ್ಟಿಸಲು ಕಾಂಗ್ರೆಸ್​ ನಾಯಕರು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.


ಕರ್ನಾಟಕಕ್ಕೆ ಮೂರನೇ ಸಿಎಂ ಬರ್ತಾರೆ ಎಂದು ಕಾಂಗ್ರೆಸ್​​ ನಾಯಕರು ಹೇಳಿದ್ದರು. ಪಕ್ಷಕ್ಕೆ ಗೊತ್ತಾಗುವ ಮುಂಚೆ ಮೂರನೇ ಸಿಎಂ ಬರುತ್ತಾರೆ ಇವರೇ ಹೇಳುತ್ತಾರೆ. ಮೂರನೇ ಸಿಎಂ ಬರ್ತಾರೆ ಎಂದು ಹೇಳಿ ರಾಜ್ಯದಲ್ಲಿ ಗೊಂದಲ ಸೃಷ್ಟಿಸಲು ಯತ್ನಿಸಿದರು. ಅದು ಸಾಧ್ಯವಾಗದಿದ್ದಾಗ ಇದೀಗ ನೆಹರೂ ಹೆಸರನ್ನು ಇಟ್ಟುಕೊಂಡು ಇದೀಗ ಮತ್ತೊಂದು ವಿವಾದವನ್ನು ಸೃಷ್ಟಿಸಲು ಮುಂದಾಗಿದ್ದಾರೆ ಎಂದು ಹೇಳಿದರು.


ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಹೆಬ್ಬಾರ್​, ಸಚಿವ ಸಂಪುಟ ವಿಸ್ತರಣೆ ಮಾಡುವುದು ಮುಖ್ಯಮಂತ್ರಿಗಳ ಪರಮೋಚ್ಛ ಅಧಿಕಾರವಾಗಿದೆ. ಯಾರನ್ನು ಸಂಪುಟದಲ್ಲಿ ಇಡಬೇಕು, ಯಾರನ್ನು ಬಿಡಬೇಕು ಅನ್ನೋದನ್ನು ಅವರೇ ನಿರ್ಣಯಿಸುತ್ತಾರೆ.ಪಕ್ಷದ ಹಿರಿಯ ನಾಯಕರ ಜೊತೆ ಚರ್ಚೆ ಮಾಡಿ ಸೂಕ್ತ ಸಮಯದಲ್ಲಿ ಸರಿಯಾದ ನಿರ್ಣಯ ಕೈಗೊಳ್ತಾರೆ ಎಂದು ಹೇಳಿದರು.

ಇದನ್ನು ಓದಿ : Mangalore airport : ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬರ್​ ಆತಂಕ : ಯುವತಿ ಸೇರಿದಂತೆ ಇಬ್ಬರು ಖಾಕಿ ವಶಕ್ಕೆ

ಇದನ್ನೂ ಓದಿ : Minister Umesh Katthi : ಯಾರ ನೇತೃತ್ವದಲ್ಲಿ ಚುನಾವಣೆ ಎದುರಿಸಬೇಕೆಂಬುದಕ್ಕೆ ಕಾಂಗ್ರೆಸ್​ನಲ್ಲಿ ಸ್ಪಷ್ಟತೆಯಿಲ್ಲ : ಕತ್ತಿ ವ್ಯಂಗ್ಯ

Minister Sivarama Hebbar clarified Minister Madhuswamy’s statement

Comments are closed.