ಜಿಲ್ಲಾ ವೈದ್ಯಾಧಿಕಾರಿಯನ್ನು ಅಬಕಾರಿ ಇಲಾಖೆಗೆ ವರ್ಗಾಯಿಸಿದ ರಾಜ್ಯ ಸರ್ಕಾರ : ಶಾಸಕ ವಿ.ಸುನೀಲ್​ ಕುಮಾರ್​ ಗರಂ

ಬೆಂಗಳೂರು : ಮಂಡ್ಯ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಯಾಗಿದ್ದ ಡಾ. ಕೆ. ಮೋಹನ್​ ಅವರನ್ನು ಮೈಸೂರು ಗ್ರಾಮಾಂತರದ ಅಬಕಾರಿ ಉಪ ಆಯುಕ್ತರಾಗಿ ನೇಮಕ ಮಾಡಿರುವ ಸಿದ್ದರಾಮಯ್ಯ ಸರ್ಕಾರದ ನಿರ್ಧಾರದ ವಿರುದ್ಧ ಬಿಜೆಪಿ ಶಾಸಕ ವಿ. ಸುನೀಲ್​ ಕುಮಾರ್​ (MLA V Sunil Kumar) ಕಿಡಿಕಾರಿದ್ದಾರೆ.

ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ಅವ್ಯವಹಾರವನ್ನು ಮರೆಮಾಚಲು ಸಿದ್ದರಾಮಯ್ಯ ಸರ್ಕಾರ ಈ ರೀತಿ ಮಾಡಿದೆ. ಸಿಎಂ ಸಿದ್ದರಾಮಯ್ಯ ಅವರ ಆಡಳಿತ ಯಂತ್ರ ಹಳಿತಪ್ಪಿದೆ ಅನ್ನೋದಕ್ಕೆ ಇದಕ್ಕಿಂತ ಹೆಚ್ಚು ಉದಾಹರಣೆ ಬೇಕೇ ಎಂದು ಸುನೀಲ್​ ಕುಮಾರ್​ ಎಕ್ಸ್​ನಲ್ಲಿ ಪ್ರಶ್ನೆ ಮಾಡಿದ್ದಾರೆ.

ಈ ರೀತಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯನ್ನು ಅಬಕಾರಿ ಆಯೋಗಕ್ಕೆ ವರ್ಗಾವಣೆ ಮಾಡಿರುವುದು ಅಬಕಾರಿ ಹಾಗೂ ಆರೋಗ್ಯ ಇಲಾಖೆಯ ವೃಂದ ನಿಯಮಕ್ಕೆ ಸಂಪೂರ್ಣ ವಿರುದ್ಧವಾಗಿದೆ. ಸಿದ್ದರಾಮಯ್ಯನವರೂ “ಇಂದ್ರೀಯ” ವಶವಾಗಿ ಆಡಳಿತದ ಹದ ಕಳೆದುಕೊಂಡಿದ್ದಾರೆ ಎಂಬುದಕ್ಕೆ ಇದು ನಿದರ್ಶನವಾಗಿದೆ.

ಅಬಕಾರಿ ಇಲಾಖೆಯಲ್ಲಿ ನಡೆದಿರುವ 6000 ಕೋಟಿ ರೂ.ಗೂ ಅಧಿಕ ಮೊತ್ತದ ಅವ್ಯವಹಾರ ಹಾಗೂ ಕಿಕ್ ಬ್ಯಾಕ್ ದಂಧೆಯ ಹಿಂದೆ ಇಂಥ ಅವೈಜ್ಞಾನಿಕ ಹಾಗೂ ನಿಯಮ ಬಾಹಿರ ವರ್ಗಾವಣೆಯ ಸೂಚನೆಗಳು ಕೆಲಸ ಮಾಡಿರುವ ಸಾಧ್ಯತೆಗಳು ದಟ್ಟವಾಗಿದೆ. ಮುಖ್ಯಮಂತ್ರಿಗಳೇ ಆಯಕಟ್ಟಿನ ಇಲಾಖೆಗೆ ಮಾತ್ರ ನೀವು ಈ ರೀತಿ ಎರವಲು ಸೇವೆಯ ಶಿಫಾರಸು ಮಾಡುತ್ತೀರಾ ? ಎಂದು ಪ್ರಶ್ನಿಸಿದ್ದಾರೆ. ಆರೋಗ್ಯ ಇಲಾಖೆಯಲ್ಲಿ ವೈದ್ಯರಿಲ್ಲದೇ ಸಾರ್ವಜನಿಕರು ನರಳುತ್ತಿದ್ದಾರೆ.

ಇದನ್ನೂ ಓದಿ: ಶಕ್ತಿ ಯೋಜನೆಗೆ ಹೊಸ ರೂಪ: ಉಚಿತ ಬಸ್‌ ಪ್ರಯಾಣಕ್ಕೆ ಬರಲಿದೆ ‘ಸ್ಮಾರ್ಟ್ ಕಾರ್ಡ್’

ಇಂತಹ ಸಂಕಷ್ಟದ ಸಂದರ್ಭದಲ್ಲಿ ಜಿಲ್ಲಾ ವೈದ್ಯಾಧಿಕಾರಿಯನ್ನು ಅಬಕಾರಿ ಇಲಾಖೆಗೆ ನಿಯೋಜನೆ ಮಾಡುವಂತೆ ನೀವೇ ನಿರ್ದೇಶನ ನೀಡುತ್ತೀರಿ ಎಂದರೆ ನಿಮ್ಮನ್ನು ಅದೆಂತಾ ಒತ್ತಡ ಹಾಗೂ ವ್ಯಾಮೋಹ ಕಾಡುತ್ತಿರಬಹುದು ? ಅಧಿಕಾರ ಹಸ್ತಾಂತರದ ಚಿಂತೆ ನಿಮ್ಮನ್ನು ಆವರಿಸಿದೆಯೇ ಎಂದು ಸಿಎಂ ಸಿದ್ದರಾಮಯ್ಯರನ್ನು ಮಾಜಿ ಸಚಿವ ವಿ.ಸುನೀಲ್​ ಕುಮಾರ್​​ ಪ್ರಶ್ನೆ ಮಾಡಿದ್ದಾರೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories