ಮಂಡ್ಯ : ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಇಂದು ಮಂಡ್ಯ ಪ್ರವಾಸ ಕೈಗೊಂಡಿದ್ದರು. ಈ ವೇಳೆಯಲ್ಲಿ ಮಹಿಳೆಯ ಜೊತೆಗೆ ಗದ್ದೆಗೆ ಇಳಿದು ನಾಟಿ ಮಾಡಿದ್ದಾರೆ. ರೈತ ಮಹಿಳೆಯಾದ ತನಗೆ ಕೃಷಿ ಮಂತ್ರಿಯಾಗುವ ಅವಕಾಶ ಕೊಟ್ಟ ಪ್ರಧಾನಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಜನಾಶೀರ್ವಾದ ಯಾತ್ರೆ ಸಚಿವೆ ಶೋಭಾ ಕರಂದ್ಲಾಜೆ ಅವರು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ರುದ್ರಾಕ್ಷಿಪುರ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿದ್ರು. ಈ ವೇಳೆಯಲ್ಲಿ ಜನರಿಗೆ ಸರಬರಾಜು ಆಗುತ್ತಿರುವ ಪಡಿತರ ಪರಿಶೀಲನೆ ನಡೆಸಿದ ನಂತರದಲ್ಲಿ ಹೊನಗನಹಳ್ಳಿಯಲ್ಲಿ ಗದ್ದೆಗೆ ಇಳಿದು ಮಹಿಳೆಯರ ಜೊತೆಗೆ ನಾಟಿ ಮಾಡಿದ್ದಾರೆ.

ಕೃಷಿಗೆ ಉತ್ತೇಜನ ನೀಡಬೇಕು. ಸಣ್ಣ ಸಣ್ಣ ರೈತರಿಗೂ ಉತ್ತೇಜನ ನೀಡುವ ಕಾರ್ಯವನ್ನು ಮಾಡಲಾಗುತ್ತಿದೆ. ರೈತರಿಗೆ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಈಗಾಗಲೇ ಕೃಷಿ ಮೂಲ ಸೌಕರ್ಯ ನಿಧಿಯಲ್ಲಿ ಒಂದು ಲಕ್ಷ ಕೋಟಿ ಮೀಸಲಿಡಲಾಗಿದೆ. ಸಬ್ಸಿಡಿ, ಸಾಲ, ಕೃಷಿ ಉತ್ಪನ್ನಗಳನ್ನ ಒದಗಿಸಿ ಕೃಷಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಆತ್ಮನಿರ್ಭರ ಯೋಜನೆಯಡಿ ಸಾವಯವ ಬೆಲ್ಲ ಹೆಚ್ಚು ರಫ್ತಾಗಬೇಕು ಎಂದಿದ್ದಾರೆ.

ರೈತರ ಆದಾಯವನ್ನು ದ್ವಿಗುಣಗೊಳಿಸುವುದು ಪ್ರಧಾನಿ ನರೇಂದ್ರ ಮೋದಿ ಅವರ ಆಶಯವಾಗಿದೆ. ಹೀಗಾಗಿ ಸಣ್ಣಪುಟ್ಟ ರೈತರನ್ನುಒಗ್ಗೂಡಿಸುವ ಕಾರ್ಯ ನಡೆಯುತ್ತಿದೆ. ಕೊರೊನಾ ಸಂಕಷ್ಟದ ಕಾಲದಲ್ಲಿಯೂ ಆಹಾರದ ಕೊರತೆಯಾಗದಂತೆ ರೈತರು ನೋಡಿಕೊಂಡಿದ್ದಾರೆ. ಹೀಗಾಗಿ ಅವರಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂದಿದ್ದಾರೆ.