ಬೆಂಗಳೂರು : ಕರ್ನಾಟಕ ಬಿಜೆಪಿ (Karnataka BJP State President) ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ (BY vijayendra)ಅವರನ್ನು ನೇಮಕ ಮಾಡಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಕರ್ನಾಟಕ ಬಿಜೆಪಿಗೆ ಹೊಸ ಸಾರಥಿ ಸಿಕ್ಕಂತಾಗಿದೆ. ಬಿವೈ ವಿಜಯೇಂದ್ರ ನೇಮಕ ಇದೀಗ ರಾಜ್ಯದಲ್ಲಿ ಹೊಸ ಸಂಚಲನ ಮೂಡಿಸಿದೆ. ಬಿವೈ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗುವ ಕುರಿತು News Next ವರದಿ ಪ್ರಕಟಿಸಿತ್ತು.
ಕರ್ನಾಟಕ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲು ಅವರು ರಾಜೀನಾಮೆಯ ಬೆನ್ನಲ್ಲೇ ಹೊಸ ರಾಜ್ಯಾಧ್ಯಕ್ಷ ನೇಮಕದ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪುತ್ರ ಶಿಕಾರಿಪುರದ ಶಾಸಕ ಬಿವೈ ವಿಜಯೇಂದ್ರ ಅವರನ್ನು ನೇಮಕದ ಕುರಿತು ಚರ್ಚೆ ನಡೆದಿತ್ತು. ಕೊನೆಗೂ ಬಿಜೆಪಿ ಹೈಕಮಾಂಡ್ ರಾಜ್ಯ ಬಿಜೆಪಿ ಅಧ್ಯಕ್ಷರ ನೇಮಕ ಮಾಡಿದೆ

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಕೆ.ಎಸ್ ಈಶ್ವರಪ್ಪ, ಸಿಟಿ ರವಿ, ಆರ್.ಅಶೋಕ್ ವಿ ಸೋಮಣ್ಣ, ಬಸನಗೌಡ ಪಾಟೀಲ ಯತ್ನಾಳ್ ಸೇರಿದಂತೆ ಹಲವರ ಹೆಸರು ಬಿಜೆಪಿ ರಾಜ್ಯಾಧ್ಯಕ್ಷರ ಹುದ್ದೆಗೆ ಕೇಳಿಬಂದಿತ್ತು. ಆದರೆ ಅಂತಿಮವಾಗಿ ವಿಜಯೇಂದ್ರ ಅವರ ಹೆಸರನ್ನು ಅಂತಿಮಗೊಳಿಸಿದೆ. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ವಿಜಯೇಂದ್ರ ಅವರ ನೇಮಕ ಹೆಚ್ಚು ಮಹತ್ವ ಪಡೆದುಕೊಂಡಿದೆ.
ಇದನ್ನೂ ಓದಿ : ಬಿಜೆಪಿಗೆ ಬಿಎಸ್ ಯಡಿಯೂರಪ್ಪ ಅನಿವಾರ್ಯ : ಕರ್ನಾಟಕ ರಾಜ್ಯ ಬಿಜೆಪಿಗೆ ಬಿವೈ ವಿಜಯೇಂದ್ರ ಅಧ್ಯಕ್ಷ
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪುತ್ರರಾಗಿರುವ ಬಿವೈ ವಿಜಯೇಂದ್ರ ಅವರು ೨೦೨೦ರಿಂದಲೂ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಭಾರತೀಯ ಜನತಾ ಪಕ್ಷದ ಕರ್ನಾಟಕ ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ವಕೀಲರಾಗಿದ್ದ ವಿಜಯೇಂದ್ರ ಅವರು ರಾಜಕೀಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಹಲವು ದಶಕಗಳಿಂದಲೂ ಶಿಕಾರಿಪುರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಬಿಎಸ್ ಯಡಿಯೂರಪ್ಪ ಅವರು ಚುನಾವಣಾ ರಾಜಕೀಯದಿಂದ ನಿವೃತ್ತರಾದ ಬೆನ್ನಲ್ಲೆ ವಿಜಯೇಂದ್ರ ಅವರು ಕಳೆದ ಬಾರಿಯ ಚುನಾವಣೆಯಲ್ಲಿ ಶಿಕಾರಿಪುರದಿಂದ ಸ್ಪರ್ಧಿಸಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ಬಿಜೆಪಿ ಸರಕಾರದ ಅವಧಿಯಲ್ಲಿ ಬಿವೈ ವಿಜಯೇಂದ್ರ ಅವರು ಎರಡು ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ತಂದುಕೊಟ್ಟಿದ್ದರು.
ಇದನ್ನೂ ಓದಿ : ರಾಜ್ಯಪಾಲರಾಗ್ತಾರಾ ಡಿವಿ ಸದಾನಂದ ಗೌಡ : ಸಕ್ರಿಯ ರಾಜಕಾರಣದಿಂದ ನಿವೃತ್ತಿ ಎಂದ ಡಿವಿಎಸ್
ರಾಜ್ಯದಲ್ಲಿ ಬಿಜೆಪಿ ಸರಕಾರವನ್ನು ನಡೆಸುವಲ್ಲಿಯೂ ವಿಜಯೇಂದ್ರ ಪ್ರಮುಖ ಪಾತ್ರವಹಿಸಿದ್ದರು. ಆದರೆ ಪಕ್ಷ ಅಧಿಕಾರಕ್ಕೆ ಬಂದು ತಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರೂ ಕೂಡ ತಾವು ಸರಕಾರದಲ್ಲಿ ಯಾವುದೇ ಹುದ್ದೆಯನ್ನೂ ಅಲಂಕರಿಸಿರಲಿಲ್ಲ. ಬದಲಾಗಿ ಪಕ್ಷ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಕಳೆದ ಚುನಾವಣೆಯಲ್ಲಿ ಲಿಂಗಾಯಿತ ಸಮುದಾಯದ ಬೇಸರ ಶಮನಕ್ಕೆ ಇದೀಗ ಯಡಿಯೂರಪ್ಪ ಅವರ ಕೈಗೆ ಬಿಜೆಪಿಯ ಅಧಿಕಾರದ ಗದ್ದುಗೆ ಸಿಕ್ಕಂತಾಗಿದೆ. ಬರಗಾಲ ಸಮೀಕ್ಷೆಗಾಗಿ ಬಿಎಸ್ ಯಡಿಯೂರಪ್ಪ ಈಗಾಗಲೇ ರಾಜ್ಯ ಪ್ರವಾಸ ಕೈಗೊಂಡಿದ್ದು, ಇದೀಗ ಪುತ್ರ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ರಾಜಾಹುಲಿ ಮತ್ತೆ ರಾಜಕೀಯದಲ್ಲಿ ಸಕ್ರೀಯರಾಗುವ ಸಾಧ್ಯತೆಯಿದೆ.
ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ರಾಜ್ಯಕ್ಕೆ ಲಿಂಗಾಯಿತ ಸಮುದಾಯದ ಬಿವೈ ವಿಜಯೇಂದ್ರ ಅವರನ್ನು ನೇಮಕ ಮಾಡುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಮಾಸ್ಟರ್ ಸ್ಟ್ರೋಕ್ ಕೊಟ್ಟಿದೆ. ಒಕ್ಕಲಿಗ ಸಮುದಾಯದ ನಾಯಕ ಎಚ್‌ಡಿ ಕುಮಾರಸ್ವಾಮಿ ಅವರ ಜೆಡಿಎಸ್ ಪಕ್ಷ ಬಿಜೆಪಿ ಜೊತೆ ಕೈ ಜೋಡಿಸಿದೆ. ಇದೀಗ ಲಿಂಗಾಯಿತ ಸಮುದಾಯದ ವಿಜಯೇಂದ್ರ ಅವರ ರಾಜ್ಯಾಧ್ಯಕ್ಷರಾಗಿರುವುದು ರಾಜ್ಯ ಬಿಜೆಪಿಗೆ ಆನೆ ಬಲ ತಂದಂತಾಗಿದೆ.
Vijayendra appointed as Karnataka BJP state president