Aluru Venkata Rao: ಕನ್ನಡದ ಕುಲಪುರೋಹಿತ ಆಲೂರು ಶ್ರೀ ವೆಂಕಟರಾಯ

ಕನ್ನಡದ ಕುಲಪುರೋಹಿತ ಆಲೂರು ವೆಂಕಟರಾಯರು ( Aluru Venkata Rao) ಜುಲೈ 12, 1880 ರಂದು ಬಿಜಾಪುರದಲ್ಲಿ (Bijapur) ಜನಿಸಿದರು. ಇವರ ವಂಶಜರು ಈಗಿನ ಗದಗ ಜಿಲ್ಲೆಯ (Gadaga District) ರೋಣ ತಾಲ್ಲೂಕಿನ (ಹೊಳೆ) ಆಲೂರಿಗೆ ಬಂದು ನೆಲೆಸಿದ್ದರಿಂದ ಆಲೂರು ಇವರ ಮನೆತನದ ಹೆಸರಾಯಿತು. ಆಲೂರರು 1903ರಲ್ಲಿ  ಪುಣೆಯ ಫರ್ಗೂಸನ್ ಕಾಲೇಜಿನಲ್ಲಿ ಬಿ. ಎ ಪದವಿ ಪಡೆದು, ಮುಂಬಯಿಯಲ್ಲಿ ಕಾನೂನಿನ ಅಭ್ಯಾಸಕ್ಕೆ ತೊಡಗಿ 1905ರಲ್ಲಿ ವಕೀಲರಾದರು. ನಂತರ  ಆಲೂರರು ಕರ್ನಾಟಕದ ಇತಿಹಾಸ, ಸಾಹಿತ್ಯಗಳ ವ್ಯಾಸಂಗಕ್ಕೆ ತೊಡಗಿದರು. ‘ವಾಗ್ಭೂಷಣ’ ಪತ್ರಿಕೆಯ ಸಂಪಾದಕತ್ವವನ್ನು (Editor) ವಹಿಸಿಕೊಂಡರು. ತಮ್ಮ ಸಾಮರ್ಥ್ಯದಿಂದ ಆ ಪತ್ರಿಕೆಗೆ ಹೊಸ ರೂಪವನ್ನು ಕೊಟ್ಟರು.

ಸಾಹಿತ್ಯ ರಚನೆಯನ್ನು ಗಂಭೀರವಾಗಿ ಸ್ವೀಕರಿಸಿದ ಆಲೂರರು ಶಿಕ್ಷಣ ಮೀಮಾಂಸೆ, ಶ್ರೀ ವಿದ್ಯಾರಣ್ಯರ ಚರಿತ್ರೆ, ಕರ್ನಾಟಕ ಗತವೈಭವ, ಸಂಸಾರ ಸುಖ, ಕರ್ನಾಟಕದ ವೀರರತ್ನಗಳು, ಕರ್ನಾಟಕತ್ವದ ಸೂತ್ರಗಳು, ಕರ್ನಾಟಕತ್ವದ ವಿಕಾಸ, ರಾಷ್ರೀಯತ್ವದ ಮೀಮಾಂಸೆ, ಗೀತಾ ರಹಸ್ಯ, ನಾವು ಈಗ ಬೇಡುವ ಸ್ವರಾಜ್ಯ, ಸ್ವರಾಜ್ಯವೆಂದರೇನು?, ಸುಖವೂ ಶಾಂತಿಯೂ, ಸ್ವಾತಂತ್ರ್ಯ ಸಂಗ್ರಾಮ, ಗೀತಾಪ್ರಕಾಶ, ಗೀತಾಪರಿಮಳ, ಗೀತಾ ಸಂದೇಶ, ನನ್ನ ಜೀವನ ಸ್ಮೃತಿಗಳು, ಪೂರ್ವತರಂಗ, ಉತ್ತರತರಂಗ, ಮಧ್ವಸಿದ್ಧಾಂತ ಪ್ರವೇಶಿಕೆ, ಗೀತಾಭಾವ ಪ್ರದೀಪ ಪೂರ್ಣಬ್ರಹ್ಮವಾದ, ಬಿಡಿ ನುಡಿಗಳು ಮುಂತಾದವುಗಳನ್ನು ಪ್ರಕಟಿಸಿದರು. ಆಲೂರರು ಪ್ರಸಿದ್ಧ ‘ಜಯಕರ್ನಾಟಕ’ ಪತ್ರಿಕೆಯನ್ನು 1922ರಲ್ಲಿ ಸ್ಥಾಪಿಸಿದರು.

ಆಲೂರರು ಕರ್ನಾಟಕಕ್ಕಾಗಿ ಹೇಗೆ ಹೋರಾಡಿದರೋ ಅದೇ ರೀತಿಯಲ್ಲಿ ರಾಷ್ಟ್ರೀಯತ್ವಕ್ಕಾಗಿ ಹೊಡೆದಾಡಿದರು. 1928ರಲ್ಲಿ ಅವರು “ರಾಷ್ಟ್ರೀಯ ಮೀಮಾಂಸೆ” ಎಂಬ ಒಂದು ಕಿರುಹೊತ್ತಗೆಯನ್ನು ಬರೆದು ಪ್ರಕಟಿಸಿದರು. ವೀರ ಸಾವರ್ಕರ್, ಬಾಲಗಂಗಾಧರ ತಿಲಕ ಇಂತಹ ಮಹಾರಾಷ್ಟ್ರೀಯ ನಾಯಕರೊಡನೆ ತೀರ ನಿಕಟ ಸಂಪರ್ಕ ಹೊಂದಿದ್ದ ಆಲೂರರು ಅಖಿಲ ಭಾರತೀಯ ದೃಷ್ಟಿಯನ್ನು ಬೆಳೆಸಿಕೊಂಡರು. ಆದರೆ ಅವರು ಕರ್ನಾಟಕವಷ್ಟೇ ತಮ್ಮ ಕಾರ್ಯಕ್ಷೇತ್ರವೆಂಬುದನ್ನು ಬಹುಬೇಗ ಕಂಡುಕೊಂಡರು.

ಆಲೂರರು ಗಾಂಧೀಜಿಯವರು ನೀಡಿದ ಅಸಹಕಾರ ಚಳವಳಿಗೆ ಓಗೊಟ್ಟು ವಕೀಲಿಗೆ ಶರಣು ಹೊಡೆದರು. ಆಲೂರರಿಗೂ ದೇಶಪಾಂಡೆ ಗಂಗಾಧರರಾಯರಿಗೂ ರಾಜಕೀಯವಾಗಿ ಒಮ್ಮತವಿದ್ದರೂ ಭಾಷೆಯ ವಿಷಯದಲ್ಲಿ ಭಿನ್ನಾಭಿಪ್ರಾಯ ಮೂಡಿತು. ಗಂಗಾಧರರಾಯರು ಮರಾಠಿ ಪರವಾಗಿದ್ದರು, ಆಲೂರರು ಕಟ್ಟಾ ಕನ್ನಡ ಪರ. ಅವರಿಗೆ ಕಾಂಗ್ರೆಸ್ ನೀತಿಗಳು, ಸೆರೆಮನೆಗೆ ಹೋಗುವುದೇ ವಾಡಿಕೆ ಮಾಡಿಕೊಂಡಿದ್ದ ಕೆಲವರ ನಡೆಗಳು ಇಷ್ಟವಾಗದಿದ್ದಾಗ ಆ ಸಂಪರ್ಕಗಳನ್ನು ಕಡಿದುಕೊಳ್ಳಲು ಹಿಂದೆ ಮುಂದೆ ನೋಡಲಿಲ್ಲ.

ಆಲೂರರು ತಮ್ಮ ಜೀವನದ ಕೊನೆಯ ಭಾಗದಲ್ಲಿ ಬಹಳ ಮಟ್ಟಿಗೆ ಸಾರ್ವಜನಿಕ ಜೀವನದಿಂದ ದೂರವಿದ್ದು  ತಮ್ಮನ್ನು ಒಳಗೆ ಸೆಳೆದುಕೊಂಡರು. ಒಂದು ಕಡೆ ರಾಜಕಾರಣದಿಂದ ದೂರವಾದದ್ದು, ಇನ್ನೊಂದು ಕಡೆ ಆಧ್ಯಾತ್ಮಿಕ ಜೀವನದತ್ತ ಒಲವು – ಇವರು ಸಾರ್ವಜನಿಕವಾಗಿ ದೂರಸರಿಯಲು ಕಾರಣವಾಯಿತು. ಇದರಿಂದ ಕನ್ನಡದ ಕೆಲಸಕ್ಕೆ ವೆತ್ಯಯವಾಯಿತು. ಶ್ರೀ ಅರವಿಂದರ ಬರವಣಿಗೆ ಚಿಕ್ಕವಯಸ್ಸಿನಲ್ಲಿಯೇ ಅವರ ಮೇಲೆ ಪ್ರಭಾವವನ್ನು ಬೀರಿದ್ದಿತು. ನಾವು ಒಂದಿನಿತು ಕನ್ನಡದ ಅಮೃತಸುಧೆಯನ್ನು ನಮ್ಮ ಕಾಲದಲ್ಲಿ ಸವಿದಿದ್ದರೆ ಅದು ಆಲೂರ ವೆಂಕಟರಾಯರಂತಹ ಮಹನೀಯರು ನಮಗೆ ನೀಡಿದ ತೀರ್ಥಪ್ರಸಾದ.ಕನ್ನಡ ಕುಲಪುರೋಹಿತರ ಪಾದಚರಣಕ್ಕೆ ಪ್ರಣಾಮಗಳು.

ಇದನ್ನೂ ಓದಿ: Puneeth Rajkumar : ಪುನೀತ್ ರಾಜ್‌ಕುಮಾರ್ ಸ್ಮರಣೆ, 1 ಲಕ್ಷಕ್ಕೂ ಅಧಿಕ ಜನರಿಂದ ನೇತ್ರದಾನ

ಇದನ್ನೂ ಓದಿ: 20 Years for NatWest Final : ದಾದಾ ಶರ್ಟ್ ಬಿಚ್ಚಿ ಅಬ್ಬರಿಸಿದ್ದ ಕ್ಷಣಕ್ಕೆ.., ಭಾರತೀಯ ಕ್ರಿಕೆಟ್’ನ ಮಹೋನ್ನತ ಗೆಲುವಿಗೆ ತುಂಬಿತು 20 ವರ್ಷ

(Birth Anniversary of Aluru Venkat Rao: Interesting Information about Kannada Kulapurohita)

Comments are closed.