ಇಲ್ಲಿಗೆ ಬಂದ್ರೆ ಸಂಕಷ್ಟಗಳು ದೂರ : ವರ್ಷಕ್ಕೊಮ್ಮೆ 36 ಗಂಟೆ ದರ್ಶನ ನೀಡುತ್ತಾಳೆ ಚೌಡೇಶ್ವರಿ

ನಮ್ಮಲ್ಲಿ ಸಾವಿರಾರು ದೇವಾಲಯಗಳಿವೆ. ಆದ್ರೆ ಅವುಗಳು ಒಂದಕ್ಕಿಂತ ಒಂದು ಭಿನ್ನ. ಒಂದೇ ದೇವರು ಪೂಜೆಗೊಳಗಾದ್ರೂ ದೇವಾಲಯದಿಂದ ದೇವಾಲಯಕ್ಕೆ ಆಚರಣೆಗಳು ಬದಲಾಗುತ್ತೆ . ಅದಕ್ಕೆ ಕಾರಣ ಆ ಸ್ಥಳದ ಪೌರಾಣಿಕ ಹಿನ್ನೆಲೆಗಳು. ಸಾಮಾನ್ಯವಾಗಿ ಯಾವುದೇ ದೇವಾಲಯದಲ್ಲಿ ಕನಿಷ್ಠ ದಿನಕ್ಕೆ ಒಂದು ಬಾರಿಯಾದ್ರೂ ದೇವರ ದರ್ಶನ ಪಡೆಯ ಬಹುದು. ಕೆಲವು ಕಡೆಯಲ್ಲಿ ಮೂರು ಹೊತ್ತು ದೇವರಿಗೆ ಪೂಜೆ ನಡೆಯುತ್ತೆ. ಆದ್ರೆ ಈ ದೇವಾಲಯದಲ್ಲಿ (Hemmanahalli Chowdeshwari) ಮಾತ್ರ ದೇವರ ದರ್ಶನ ಭಾಗ್ಯ ಸಿಗೋದು ವರ್ಷಕ್ಕೆ ಒಂದು ಬಾರಿ, ಅದು ಕೇವಲ 36 ಗಂಟೆ ಮಾತ್ರ.

ಹೌದು, ಜಗನ್ಮಾತೆ ಚೌಡೇಶ್ವರಿಯ ದೇವಾಲಯವಿದು. ಇಲ್ಲಿ ವರ್ಷಕ್ಕೆ ಒಂದು ಬಾರಿ ಮಾತ್ರ ತಾಯಿ ದರ್ಶನ ನೀಡುತ್ತಾಳೆ. ಈ ವೇಳೆ ಆಕೆಯ ದರ್ಶನ ಮಾಡೋಕೆ ಅಂತಾನೆ ಲಕ್ಷಾಂತರ ಮಂದಿ ಇಲ್ಲಿಗೆ ಆಗಮಿಸುತ್ತಾರೆ. ಅಂದ್ರೆ ಪ್ರತಿ ವರ್ಷ ಹೋಳಿ ಹುಣ್ಣಿಮೆಯ ನಂತರದ ಗುರುವಾರದಂದು ಈ ದೇವಾಲಯವನ್ನು ತೆರೆಯಲಾಗುತ್ತೆ . ಇದೇ ಸಮಯದಲ್ಲಿ ಇಲ್ಲಿ ಜಾತ್ರೆಯನ್ನು ಕೂಡಾ ನಡೆಯುತ್ತೆ.

ಇದರ ಮರುದಿನ ಅಂದ್ರೆ ಶುಕ್ರವಾರದಂದು ತಾಯಿಗೆ ಕೆಂಡೋತ್ಸವನ್ನು ಮಾಡಲಾಗುತ್ತೆ. 50 ಸಾವಿರಕ್ಕೂ ಹೆಚ್ಚು ಮಂದಿ ಈ ಕೆಂಡಸೇವೆಯಲ್ಲಿ ಭಾಗಿಯಾಗಿ ತಮ್ಮ ಇಷ್ಟಾರ್ಥವನ್ನು ಈಡೇರಿಸುವಂತೆ ತಾಯಿಯನ್ನು ಬೇಡುತ್ತಾರೆ. ಇಲ್ಲಿ ಕೆಂಡ ಸೇವೆ ಮಾಡಿದ್ರೆ ತಮ್ಮ ಸಂಕಷ್ಟವನ್ನು ಚೌಡೇಶ್ವರಿ ತಾಯಿ ಪರಿಹರಿಸುತ್ತಾಳೆ ಅನ್ನೋ ನಂಬಿಕೆ ಇಲ್ಲಿಯ ಭಕ್ತರಲಿದೆ.

ಇನ್ನು ಮಕ್ಕಳಾದವರು, ಮದುವೆಯಾಗದವರು, ವ್ಯಾಪಾರದಲ್ಲಿ ಸಮಸ್ಯೆ ಇದ್ದವರು ದೇವಿಯ ನಂದಾದೀಪಕ್ಕೆ ಎಣ್ಣೆ ಹಾಕಿ ಉರುಳು ಸೇವೆ ಮಾಡಿದ್ರೆ ಎಲ್ಲ ಇಷ್ಟಾರ್ಥವು ಫಲಿಸುತ್ತೆ ಅನ್ನೋದು ಇಲ್ಲಿನ ನಂಬಿಕೆ. ಈ ನಂದಾದೀಪದಲ್ಲೂ ಒಂದು ವಿಶೇಷವಿದೆ ಅದೇನಂದ್ರೆ ದೇವಾಲಯದ ಬಾಗಿಲು ಹಾಕಿದ ನಂತರವೂ ಇಡೀ ವರ್ಷ ಇಲ್ಲಿ ದೀಪ ಆರದೇ ಉರಿಯುತ್ತಾನೆ ಇರುತ್ತೆ. ಮುಂದಿನ ವರ್ಷ ದೇವಾಲಯದ ಬಾಗಿಲು ತೆರೆದಾಗಲೂ ದೇವರ ಮುಂದಿನ ಈ ದೀಪ ಉರಿಯೋದೇ ವಿಶೇಷ.

ಇನ್ನು ಇದೇ ವೇಳೆ ಜಾತ್ರೆ ನಡೆಯೋದ್ರಿಂದ ತಾಯಿಗೆ ವಿವಿಧ ಅಲಂಕಾರಗಳನ್ನು ಮಾಡಲಾಗುತ್ತೆ. ಇದರಲ್ಲಿ ತಾಯಿಗೆ ಮಾಡುವ ಹೂವಿನ ಅಲಂಕಾರ ಭಕ್ತರನ್ನು ಬೇರೆಯೇ ಲೋಕಕ್ಕೆ ಕೊಡೊಯ್ಯುತ್ತೆ. ಇದಾದ ನಂತರ ಗಣಪತಿ ಪೂಜೆ, ಅಂಕುರ ಅರ್ಪಣ , ಗಂಗಾಪೂಜೆ ಸೇರಿದಂತೆ ವಿವಿಧ ಬಗೆಯ ಹವನಗಳು ನಡೆಯುತ್ತೆ . 36 ಗಂಟೆಗಳ ಬಳಿಕ ಮತ್ತೆ ದೇವಾಲಯದ ಬಾಗಿಲನ್ನು ಮಣ್ಣಿನಿಂದ ಮುಚ್ಚಲಾಗುತ್ತೆ.

ಹುತ್ತದಲ್ಲಿ ನೆಲೆ ನಿಂತ ತಾಯಿ
ಸ್ಥಳ ಪುರಾಣದ ಪ್ರಕಾರ ಈ ತಾಯಿ ವರ್ಷದಲ್ಲಿ ಒಂದೇ ಬಾರಿ ದರ್ಶನ ಕೊಡೋಕೂ ಒಂದು ಕಾರಣವಿದೆ. ದ್ವಾಪರಯುಗದಲ್ಲಿ ಶ್ರೀಕೃಷ್ಣ ಈ ತಾಯಿಯ ವಸ್ತ್ರ ತೆಗೆದುಕೊಂಡಿದ್ದನಂತೆ, ಅವರಿಂದ ಸಂಕೋಚಗೊಂಡ ತಾಯಿ ಹುತ್ತದ ಒಳಗೆ ಸೇರಿದಳಂತೆ. ಆದ್ರೆ ವರ್ಷಕೊಂದು ಬಾರಿ ಹುತ್ತದಿಂದ ಬಂದು ಭಕ್ತರಿಗೆ ದರ್ಶನ ನೀಡುತ್ತಾಳೆ ಅನ್ನೋ ನಂಬಿಕೆ ಇಲ್ಲಿದೆ. ಈ ಊರಿನಲ್ಲಿ ಮೊದಲು ತುಂಬಾ ಹುತ್ತಗಳಿದ್ದವು ಅಂತ ಸ್ಥಳೀಯರು ಹೇಳುತ್ತಾರೆ. ಈ ಚೌಡೇಶ್ವರಿ ತಾಯಿ , ಸಿಗಂದೂರು ಚೌಡೇಶ್ವರಿ ತಾಯಿಯ ಸಹೋದರಿ ಅಂತಾನು ಹೇಳಲಾಗುತ್ತೆ

ಅಮೃತ ಮಣ್ಣಿನಿಂದ ಗರ್ಭಗುಡಿಗೆ ಬಾಗಿಲು
ಈ ಗರ್ಭಗುಡಿಯ ಬಾಗಿಲನ್ನು ಮುಚ್ಚುವ ಮಣ್ಣಿನಲ್ಲೂ ಒಂದು ವಿಶೇಷವಿದೆ. ಅದೇನು ಗೊತ್ತಾ ಈ ಮಣ್ಣನ್ನು ಅಮೃತ ಮಣ್ಣು ಅಂತ ಕರೀತಾರೆ . ಇದನ್ನು ಎಳನೀರು ಹಾಗೂ ಮಣ್ಣಿನಿಂದ ತಯಾರಿಸಲಾಗುತ್ತೆ.ಗರ್ಭ ಗೃಹದ ಬಾಗಿಲು ಮುಚ್ಚಿದ ನಂತರ ಇದನ್ನು ಬಾಗಿಲಿಗೆ ಲೇಪಿಸಿ ಮುಚ್ಚಲಾಗುತ್ತೆ. ಮುಂದಿನ ವರ್ಷ ಈ ಮಣ್ಣನ್ನು ಭಕ್ತರು ಪ್ರಸಾದ ಅಂತ ಮನೆಗೆ ಒಯ್ಯುತ್ತಾರೆ ಇದರಿಂದ ರೋಗ ರುಜಿನ ನಿವಾರಣೆ ಆಗುತ್ತೆ ಅನ್ನೋ ನಂಬಿಕೆ ಭಕ್ತರದು

ಅಂದ ಹಾಗೆ ಈ ವಿಸ್ಮಯಕಾರಿ ದೇವಾಲಯ ಇರೋದು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹೆಮ್ಮನಹಳ್ಳಿಯಲ್ಲಿ. ಹೆಮ್ಮನಹಳ್ಳಿ ಚೌಡೇಶ್ವರಿ ಅಂತ ಕರೆಸಿಕೊಳ್ಳೋ ಈ ತಾಯಿಯನ್ನು ನೋಡೋಕೆ ಬೇರೆ ಬೇರೆ ರಾಜ್ಯದಿಂದಲೂ ಭಕ್ತರು ಬರುತ್ತಾರೆ. ಬೆಂಗಳೂರಿ ನಿಂದ 79 ಕಿಲೋ ಮೀಟರ್ ದೂರದಲ್ಲಿದೆ ಈ ದೇವಾಲಯ . ಇನ್ನು ಇಲ್ಲಿಗೆ ಮಂಗಳೂರು 325 ಕಿಲೋ ಮೀಟರ್, ಮೈಸೂರಿ ನಿಂದ 69 ಕಿಮೀ ಹಾಗೂ ಮದ್ದೂರಿನಿಂದ 7 ಕಿಲೋ ಮೀಟರ್ ನಷ್ಟು ದಾರಿ ಇದೆ. ಸಾದ್ಯವಾದ್ರೆ ಈ ವರ್ಷದ ಜಾತ್ರೆಯಲ್ಲಿ ಭಾಗಿಯಾಗಿ ದೇವಿಯ ಕೃಪೆಗೆ ಪಾತ್ರರಾಗಿ.

ಇದನ್ನೂ ಓದಿ : ಮಣ್ಣಿಗೆ ಒಲಿತಾನೆ ಶಿವ : ಮಣ್ಣಿನ ಗೊಂಬೆಯ ಹರಕೆಯಿಂದ ಈಡೇರುತ್ತೆ ಅಭೀಷ್ಟ

ಇದನ್ನೂ ಓದಿ : ತಿರುಪತಿ ತಿಮ್ಮಪ್ಪನ ವಿಗ್ರಹದ ವಿಸ್ಮಯ ನಿಮಗೆ ಗೊತ್ತಾ ?

( Mandya near Hemmanahalli Chowdeshwari gives 36 hours of darshan once a year )

Comments are closed.