Kolhapur Ganagatte Mayamma : ಕೊಲ್ಲಾಪುರದಿಂದ ಬಂದು ನೆಲೆಸಿದ್ದಾಳೆ ಮಾಯಮ್ಮ: ದುಡ್ಡಿನ ಹರಕೆಯೇ ಈಕೆಗೆ ಪ್ರಿಯ

ನಮ್ಮ ಅಭಿಷ್ಟವನ್ನು ಈಡೇರಿಸೋಕೆ ನಾವು ದೇವರ ಮೊರೆ ಹೊಗುತ್ತೀವಿ. ಅದರಲ್ಲೂ ಆತನಿಗೆ ಪ್ರಿಯಾದ ವಸ್ತುವನ್ನು ಅರ್ಪಿಸಿದ್ರೆ ಕೋರಿಕೊಂಡಿದ್ದು ಈಡೇರುತ್ತೆ ಅನ್ನೋ ನಂಬಿಕೆ ಇದೆ. ಅದಕ್ಕೆ ಅಂತಾನೆ ದೇವರಿಗೆ ಇಷ್ಟವಾದ ಹೂವು, ಹಣ್ಣು, ಪತ್ರೆ ಗಳನ್ನು ದೇವರಿಗೆ ಅರ್ಪಿಸೋದನ್ನು ನಾವು ಕಾಣ್ತಿವಿ. ಈ ( Kolhapur Ganagatte Mayamma) ದೇವಾಲಯದಲ್ಲೂ ಈ ರೀತಿ ದೇವರಿಗೆ ಪ್ರಿಯವಾದನ್ನು ಅರ್ಪಿಸಿದ್ರೆ ಬೇಡಿದ್ದು ಈಡೇರುತ್ತೆ .ಆದ್ರೆ ಇದರಲ್ಲಿ ಒಂದು ವಿಶೇಷವಿದೆ ಅದೇನಿ ಗೊತ್ತಾ ಹರಕೆ ರೂಪದಲ್ಲಿ ಆಕೆ ಕೇಳೋದು ಹಣ್ಣು ಹೂವಲ್ಲ ಬದಲಾಗಿ ಲಕ್ಷ್ಮಿ ಸ್ವರೂಪ ವಾದ ಹಣವನ್ನು.

ಹೌದು ಈಕೆ ಲಕ್ಷ್ಮಿ ಸ್ವರೂಪಿಣಿ ಯಾದ ತಾಯಿ . ಈಕೆಗೆ ದುಡ್ಡೇ ಪ್ರಿಯ. ದುಡ್ಡಿನಿಂದಲೇ ಈಕೆಗೆ ಅಲಂಕಾರ ನಡೆಯುತ್ತೆ. ದುಡ್ಡೇ ಇಲ್ಲಿ ಆಕೆಗೆ ನೈವೇದ್ಯ. ಇಲ್ಲಿ ಭಕ್ತಿಯಿಂದ ಹಣವನ್ನು ಸಮರ್ಪಿಸಿದ್ರೆ ಈ ತಾಯಿ ಒಲಿತಾಳೆ ಅಂತಾರೆ ಭಕ್ತರು. ಹೀಗಾಗಿ ಇಲ್ಲಿ ಬರೋ ಭಕ್ತರು ತಮ್ಮ ಕೈಲಾದಷ್ಟು ಹಣವನ್ನು ಭಕ್ತಿಯಿಂದ ತಾಯಿಗೆ ಸಮರ್ಪಿಸಿ ಕೃತಾರ್ಥರಾಗುತ್ತಾರೆ.

ಇಲ್ಲಿ ತಾಯಿಗೆ ದುಡ್ಡಿನಿಂದಲೇ ಅಲಂಕಾರ ಮಾಡಲಾಗುತ್ತೆ. 10 ರೂ ಪಾಯಿಯಿಂದ ಹಿಡಿದು 2000 ರೂಪಾಯಿ ನೋಟುಗಳನ್ನು ಜೋಡಿಸಿ ಹಾರವನ್ನು ತಯಾರಿ ಮಾಡಿ ಮಾತೆಗೆ ತೊಡಿಸಲಾಗುತ್ತೆ. ಈಕೆ ಹಣದ ಆಭಿಷೇಕವನ್ನು ದುಡ್ಡಿನಿಂದಲೇ ಮಾಡೋದು ವಿಶೇಷ. ಇಲ್ಲಿ ಗರ್ಭಗುಡಿಯನ್ನು ಹಣದಿಂದಲೇ ಶೃಂಗಾರ ಮಾಡಿರೋದನ್ನು ನಾವು ಕಾಣಬಹುದು.

ಇನ್ನು ಈ ದೇವಾಲಯದಲ್ಲಿ ಇರುವ ಹರಕೆಯನ್ನು ನೋಡೋದಾದ್ರೆ ಸಂತಾನ ಭಾಗ್ಯ ವ್ಯಾಪಾರ ವ್ಯವಹಾರಗಳಿಗೆ ಸಂಬಂಧಿಸಿದಂತೆ ಭಕ್ತರು ಹರಕೆ ಹೇಳುತ್ತಾರೆ. ಆದರೆ ಅವರ ಹರಕೆಯ ರೂಪವೂ ಹಣವೇ ಆಗಿರುತ್ತೆ. ಅಂದ್ರೆ ಇಲ್ಲಿ ಮಕ್ಕಳು ಆಗೋಕೆ ಹರಕೆ ಹೊತ್ತುಕೊಳ್ಳೋ ಮಂದಿ ಮಗುವಿನ ತೂಕದ ಹಣ ನೀಡೋದಾಗಿ ಹರಕೆ ಹೊರುತ್ತಾರೆ. ಮಕ್ಕಳಾದ ನಂತರ ತುಲಾಭಾರ ಹರಕೆ ನಡೆಯುತ್ತೆ ದೇವಾಲಯದಲ್ಲಿ ನೀಡುವ ನಾಣ್ಯಗಳನ್ನು ಒಂದು ತಕ್ಕಡಿಗೂ, ಮಗುವನ್ನು ಮತ್ತೊಂದು ತಕ್ಕಡಿ ಗೂ ಹಾಕಿ ತುಲಾಭಾರ ಮಾಡಲಾಗುತ್ತೆ. ನಂತರ ನಾಣ್ಯಗಳ ಬೆಲೆಯನ್ನು ದೇವಾಲಯಕ್ಕೆ ಒಪ್ಪಿಸಲಾಗುತ್ತೆ. ಈ ರೀತಿ ಹರಕೆ ತೀರಿಸಲಾಗುತ್ತೆ.

ಈ ತಾಯಿಗೆ ಹಣ ಪ್ರಿಯವಾಗುತ್ತೆ ಕಾರಣವಿದೆ ಅಂತಾರೆ ಭಕ್ತರು. ಅದೇನಂದ್ರೆ ಈಕೆ ಕೊಲ್ಲಾಪುರದ ಲಕ್ಷ್ಮೀ ಸ್ವರೂಪ ಅಂತ ಇಲ್ಲಿ ನಂಬಲಾಗುತ್ತೆ. ಇದಕ್ಕೆ ಕಾರಣ ಇಲ್ಲಿನ ಸ್ಥಳ ಪುರಾಣ. ಇಲ್ಲಿನ ಸ್ಥಳ ಪುರಾಣದ ಪ್ರಕಾರ ನೂರಾರು ವರ್ಷಗಳ ಹಿಂದೆ ಕೊಲ್ಲಪುರದಿಂದ ಚಿನ್ನವನ್ನು ಕೋಣವ ಮೇಲೆ ಹೇರಿಕೊಂಡು ವ್ಯಾಪಾರಿಗಳು ಈ ದಾರಿಯಲ್ಲಿ ಬರುತ್ತಿದ್ರಂತೆ. ಒಬ್ಬ ವ್ಯಾಪಾರಿ ಕೊಲ್ಲಾಪುರದಿಂದ ಚಿನ್ನದ ಜೊತೆ ತೂಕ ನೋಡೋಕೆ ಕಲ್ಲು ತೆಗೆದುಕೊಂಡು ಬಂದಿದ್ರಂತೆ .ಆದ್ರೆ ಗಣಗಟ್ಟೆ ಬಳಿ ಬರುತ್ತಿದ್ದಂತೆ ಆ ಕಲ್ಲನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ. ಅದೇ ಮುಂದೆ ಈ ಮಾಯಮ್ಮ ದೇವಿ ಆದಳು ಅನ್ನೋ ನಂಬಿಕೆ ಇದೆ. ಮುಂದೆ ಆ ಊರಿನ ಬಾಲಕಿಯೊಬ್ಬಳ ದೇಹದಲ್ಲಿ ಬಂದು ತನಗೆ ದೇವಾಲಯ ನಿರ್ಮಿಸಿ ಅಂತ ಮಾಯಮ್ಮ ಹೇಳಿದಳು. ಮುಂದೆ ಊರಿನ ಜನರು ಈ ದೇವಾಲಯ ನಿರ್ಮಿಸಿದ್ರು ಅನ್ನೋದು ಭಕ್ತರ ಅಂಬೋಣ.

ಇಲ್ಲಿ ಮತ್ತೊಂದು ವಿಶೇಷ ಆಚರಣೆ ಇದೆ. ಅದು ಪಲ್ಲಕ್ಕಿ ಹರಕೆ. ಇದನ್ನು ಚೀಟಿ ಹರಕೆ ಅಂತಾನು ಕರೀತಾರೆ. ಇಲ್ಲಿ ಭಕ್ತರು ಒಂದು ಚೀಟಿಯಲ್ಲಿ ಕೆಲಸ ಆಗುತ್ತೆ. ಇನ್ನೊಂದು ಚೀಟಿಯಲ್ಲಿ ಕೆಲಸ ಆಗಲ್ಲ ಅಂತ ಬರೆದು ದೇವಾಲಯದ ಯಾವುದಾದರೂ ಎರಡು ಮೂಲೆಯಲ್ಲಿ, ಮಣ್ಣಿನಲ್ಲಿ ಅಡಗಿಸಿ ಇಡುತ್ತಾರೆ. ದೇವಿಯನ್ನು ಹೊತ್ತ ಅರ್ಚಕರು ಚೀಟಿಯನ್ನು ಪತ್ತೆ ಹಚ್ಚಿ ತೆಗೆದು ಕೊಡುತ್ತಾರೆ . ಇದನ್ನು ಮಾಯಮ್ಮನ ಪವಾಡ ಅಂತ ಭಕ್ತರು ನಂಬುತ್ತಾರೆ.

ಈ ಮಾಯಮ್ಮ ದೇವಿಗೆ ಚಿನ್ನದ ಬಳೆ, ಸೀರೆ, ಗಾಜಿನ ಬಳೆಯನ್ನೂ ನೀಡುವ ಸಂಪ್ರದಾಯವಿದೆ. ಇನ್ನು ಈ ದೇವಾಲಯದಲ್ಲಿ ಒಂದು ರಾತ್ರಿ ಕಳೆದರೆ ಅಭಿಷ್ಟ ಈಡೇರುತ್ತೆ ಅನ್ನೋ ನಂಬಿಕೆ ಇದೆ. ಹಾಗಾಗಿ ಭಕ್ತರು ಇಲ್ಲಿಗೆ ಬಂದು ಒಂದು ದಿನ ಕಳೀತಾರೆ. ಇವರಿಗೆ ಉಳಿದುಕೊಳ್ಳಲು ಅನುಕೂಲವಾಗುವಂತೆ ಕೊಠಡಿಗಳನ್ನು ನಿರ್ಮಿಸಲಾಗಿದೆ . ಸೋಮವಾರ ಹಾಗು ಶುಕ್ರವಾರ ಇಲ್ಲಿಗೆ ಬರೋ ಭಕ್ತರ ಸಂಖ್ಯೆ ಹೆಚ್ಚು. ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ಇಲ್ಲಿ ಜಾತ್ರೆ ನಡೆಯುತ್ತೆ ಆಗ ಇಲ್ಲಿ ಬಲಿ ಸಂಪ್ರದಾಯ ರೂಡಿಯಲ್ಲಿದೆ. ಅಂದು ದೇವಾಲಯದ ಬಯಲಿನಲ್ಲಿ ಭಕ್ತರು ತಾಯಿಗೆ ನೈವೇದ್ಯ ಮಾಡುತ್ತಾರೆ. ಇಲ್ಲಿ ಮಾಯಮ್ಮನಿಗೆ ನಡೆದುಕೊ ಪಡೆದುಕೊ ಅನ್ನೋ ಮಾತು ರೂಡಿಯಲ್ಲಿದೆ.

ಅಂದಹಾಗೆ ಈ ವಿಶೇಷ ದೇವಾಲಯವಿರೋದು ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲೂಕಿನ ಗಾಣಗಟ್ಟೆಯಲ್ಲಿ. ಗಾಣಗಟ್ಟೆ ಮಾಯಮ್ಮ ದೇವಾಲಯ ಅಂತಲೇ ಕರೆಸಿಕೊಳ್ಳುವ ದೇವಾಲಯ ಜಿಲ್ಲೆಯಲ್ಲೇ ಮುಖ್ಯ ಶ್ರದ್ಧಾ ಕೇಂದ್ರ. ಸಾವಿರಾರು ಮಂದಿ ಭಕ್ತರು ಇಲ್ಲಿಗೆ ಬಂದು ತಾಯಿಯ ದರ್ಶನ ಪಡೀತಾರೆ. ಬೆಂಗಳೂರಿನಿಂದ 263 ಕಿಲೋ ಮೀಟರ್ ದೂರದಲ್ಲಿದೆ ಈ ದೇವಾಲಯ. ಜಗಳೂರು ಕೂಡ್ಲಿಗಿ ಉಜ್ಜಿನಿ ಬಂದ್ರೆ ಇಲ್ಲಿಂದ ಬಸ್ ಹಾಗೂ ಖಾಸಗಿ ವಾಹನ ಸೌಲಭ್ಯವಿದೆ. ನೀವು ಕೂಡಾ ಒಂದು ಬಾರಿ ಬಂದು ಮಾಯಮ್ಮನಿಗೆ ನಡೆದುಕೊಂಡು ಪಡೆದುಕೊಳ್ಳಿ.

ಇದನ್ನೂ ಓದಿ : ಮಣ್ಣಿಗೆ ಒಲಿತಾನೆ ಶಿವ : ಮಣ್ಣಿನ ಗೊಂಬೆಯ ಹರಕೆಯಿಂದ ಈಡೇರುತ್ತೆ ಅಭೀಷ್ಟ

ಇದನ್ನೂ ಓದಿ : ಹಲವು ಮಕ್ಕಳ ತಾಯಿಯ ಮಹಿಮೆ ಅಪಾರ : ಬೇಡಿ ಬಂದವರಿಗೆ ನೀಡುತ್ತಾಳೆ ಸಂತಾನ ಭಾಗ್ಯ

(Kolhapur Ganagatte Mayamma Temple)

Comments are closed.