ಗೆಜ್ಜೆಗಿರಿಯಲ್ಲಿ ಹಣದುರುಪಯೋಗದ ಬಹಿರಂಗ ಆರೋಪ : ಜಾಣಮೌನ ಪ್ರದರ್ಶಿಸುತಿದ್ಯಾ ಸರಕಾರ, ಸಚಿವವರು ..?

ಮಂಗಳೂರು : ಕೋಟಿ ಚೆನ್ನಯ್ಯರ ಮೂಲಕ್ಷೇತ್ರವಾಗಿರುವ ಗೆಜ್ಜೆಗಿರಿಯಲ್ಲಿ ಹುಟ್ಟಿಕೊಂಡಿರುವ ವಿವಾದ ಸದ್ಯಕ್ಕೆ ಬಗೆ ಹರಿಯುವ ಲಕ್ಷಣ ಕಾಣಿಸುತ್ತಿಲ್ಲ. ಇಷ್ಟು ದಿನ ತೆರೆಮರೆಯಲ್ಲಿ ನಡೆಯುತ್ತಿದ್ದ ಆರೋಪ ಪ್ರತ್ಯಾರೋಪ ಇದೀಗ ಸಾರ್ವಜನಿಕವಾಗಿಯೇ ನಡೆಯುತ್ತಿದ್ದು, ಪ್ರಮುಖವಾಗಿ ಹಣ ದುರುಪಯೋಗದ ಆರೋಪ ಕೇಳಿಬಂದಿದೆ.

ಗೆಜ್ಜೆಯಲ್ಲಿ ಕ್ಷೇತ್ರಾಡಳಿತ ಸಮಿತಿ ಹಾಗೂ ಜಮೀನಿನ ಮಾಲಕತ್ವ ಹೊಂದಿರುವ ಶ್ರೀಧರ ಪೂಜಾರಿ ಅವರು ಪರಸ್ಪರ ಆರೋಪಗಳನ್ನು ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದ ಮೂಲಕ ಆರೋಪಗಳನ್ನು ಮಾಡುತ್ತಿದ್ದಾರೆ. ಈ ಆರೋಪಗಳು ಇನ್ನೊಂದು ಘಟ್ಟವನ್ನು ತಪುಪಿದ್ದು ಪರಸ್ಪರದ ಹಣ ದುರುಪಯೋಗವಾಗಿರುವ ಕುರಿತು ಆರೋಪಿಸುತ್ತಿದ್ದಾರೆ. ಕ್ಷೇತ್ರಾಡಳಿತ ಸಮಿತಿಯವರು ಸರಿಯಾದ ಲೆಕ್ಕಪತ್ರ ನೀಡಿಲ್ಲ ಅನ್ನೋದು ಶ್ರೀಧರ ಪೂಜಾರಿ ಅವರ ಆರೋಪವಾದ್ರೆ, ಶ್ರೀಧರ ಪೂಜಾರಿ ಅವರು ಹುಂಡಿ ಹಾಗೂ ಕಾಣಿಕೆ ಡಬ್ಬದ ಹಣವನ್ನು ತನ್ನ ಸ್ವಂತಃಕ್ಕೆ ಬಳಸಿದ್ದಾರೆ ಎಂಬುವುದು ಕ್ಷೇತ್ರಾಡಳಿತ ಸಮಿತಿಯ ಆರೋಪ.

ಶ್ರೀಧರ ಪೂಜಾರಿ ಹಾಗೂ ಕ್ಷೇತ್ರಾಡಳಿತ ಸಮಿತಿಯವರ ನಡೆಯುತ್ತಿರುವ ಆರೋಪ ಪ್ರತ್ಯಾರೋಪದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. ಲಕ್ಷಾಂತರ ಭಕ್ತರ ಹಣದಲ್ಲಿಯೇ ದೇವಸ್ಥಾನವನ್ನು ನಿರ್ಮಾಣ ಮಾಡಲಾಗಿದ್ದು, ನಿತ್ಯವೂ ಲಕ್ಷಾಂತರ ರೂಪಾಯಿ ಹಣ ಕಾಣಿಕೆ ರೂಪದಲ್ಲಿ ಕ್ಷೇತ್ರಕ್ಕೆ ಹರಿದು ಬರುತ್ತಿದೆ. ಈ ಕುರಿತು ಎರಡೂ ಕಡೆಯವರು ಬಹಿರಂಗವಾಗಿ ಪರಸ್ಪರ ಆರೋಪಿಸುತ್ತಿದ್ದಾರೆ. ಇಷ್ಟಿದ್ದರೂ ಕೂಡ ಧಾರ್ಮಿಕ ದತ್ತಿ ಸಚಿವರಾಗಿರುವ ಕೋಟ ಶ್ರೀನಿವಾಸ ಪೂಜಾರಿ ಅವರು ಮಾತ್ರ ಪ್ರತಿಕ್ರಿಯೆಗೆ ಸಿಗುತ್ತಿಲ್ಲ. ಇನ್ನು ರಾಜ್ಯ ಸರಕಾರ ಕೂಡ ಯಾವುದೇ ನಿರ್ಧಾರವನ್ನು ಕೈಗೊಳ್ಳದೆ ಮೌನಕ್ಕೆ ಶರಣಾಗಿದೆ ಅನ್ನೋ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಧಾರ್ಮಿಕ ಕ್ಷೇತ್ರಗಳಲ್ಲಿ ಸಾರ್ವಜನಿಕರಿಂದ ಸಂದಾಯವಾಗಿರುವ ಹಣದ ದುರುಪಯೋಗದ ಕುರಿತು ಆರೋಪಗಳು ಕೇಳಿಬಂದಾಗ ಸರಕಾರ ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಇತ್ಯರ್ಥ ಪಡಿಸಬೇಕು ಅನ್ನೋ ಕುರಿತು ನ್ಯಾಯಾಲಯದಲ್ಲಿ ದಾಖಲಾಗಿರುವ ಹಲವು ಪ್ರಕರಣಗಳೇ ಸಾರಿ ಹೇಳುತ್ತಿವೆ. ಆದರೂ ಗೆಜ್ಜೆಗಿರಿಯಲ್ಲಿ ಹಣ ದುರುಪಯೋಗದ ಕುರಿತು ಶ್ರೀಧರ ಪೂಜಾರಿ ಹಾಗೂ ಕ್ಷೇತ್ರಾಡಳಿತ ಸಮಿತಿಯವರು ಆರೋಪಿಸುತ್ತಿದ್ದರೂ ಕೂಡ ಯಾವುದೇ ಕ್ರಮಗಳನ್ನು ಕೈಗೊಳ್ಳದೇ ಇರುವುದು ಭಕ್ತರು ಹುಂಡಿಗೆ ಹಾಕಿದ ಹಣದ ಉಪಯೋಗದ ಹಲವು ಪ್ರಶ್ನೆಗಳನ್ನು ಎತ್ತಿದೆ.

ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಭಕ್ತರು ಗೆಜ್ಜೆಗಿರಿಯನ್ನು ಜೀರ್ಣೋದ್ದಾರ ಮಾಡಿದ್ದಾರೆ. ಮಾತ್ರವಲ್ಲದೇ ಕ್ಷೇತ್ರಕ್ಕೆ ಹಣದ ಹೊಳೆಯನ್ನೇ ಹರಿಸುತ್ತಿದ್ದಾರೆ. ಗೆಜ್ಜೆಗಿರಿ ಕ್ಷೇತ್ರವನ್ನು ಕರಾವಳಿಯ ಪ್ರಮುಖ ಧಾರ್ಮಿಕ ಕೇಂದ್ರವನ್ನಾಗಿಸಬೇಕಾಗಿದ್ದ ಕ್ಷೇತ್ರಾಡಳಿತ ಸಮಿತಿ ಹಾಗೂ ಜಾಗದ ಮಾಲೀಕ ಶ್ರೀಧರ ಪೂಜಾರಿ ಅವರು ಇದೀಗ ಸಾರ್ವಜನಿಕವಾಗಿ ಕಿತ್ತಾಟಕ್ಕಿಳಿದಿರೋದು ಕ್ಷೇತ್ರದ ಭಕ್ತರಿಗೆ ಮುಜುಗರವನ್ನುಂಟು ಮಾಡಿದೆ.

ಮಾತ್ರವಲ್ಲ ಹಣ ದುರುಪಯೋಗದ ಆರೋಪ ಭಕ್ತರನ್ನು ಆತಂಕಕ್ಕೀಡು ಮಾಡಿದೆ. ಈ ನಡುವಲ್ಲೇ ಕಂಕನಾಡಿ ಗರೋಡಿಯಲ್ಲಿ ಭಕ್ತರ ಸಭೆಯೊಂದು ನಡೆದಿದ್ದು, ಕ್ಷೇತ್ರದ ಪಾವಿತ್ರತೆಯನ್ನು ಉಳಿಸಬೇಕೆಂದು ಆ ಸಭೆ ಆಗ್ರಹಿಸಿದೆ. ದೇಶ ವಿದೇಶದಲ್ಲಿರುವ ಸಾವಿರಾರು ಭಕ್ತರು ಸಾಮಾಜಿಕ ಜಾಲತಾಣದ ಮೂಲಕ ಕ್ಷೇತ್ರದ ಪಾವಿತ್ರತೆಯನ್ನು ಕಾಪಾಡಬೇಕೆಂದು ಆಗ್ರಹಿಸುತ್ತಿದ್ದಾರೆ.

Comments are closed.