Holi celebration 2023: ಗೆಜ್ಜೆ ಕಟ್ಟಿ ಹೆಜ್ಜೆ ಹಾಕುವ ಸಂಭ್ರಮ: ಮನೆ ಅಂಗಳದಲ್ಲಿ ಮರಾಠಿಗರ ಹೋಳಿ ಸಂಭ್ರಮ

(Holi celebration 2023) ಕರಾವಳಿ ಸಂಸ್ಕೃತಿಯಲ್ಲಿ ಒಂದಾಗಿರುವ ಹೋಳಿ ಹಬ್ಬವನ್ನು ಮರಾಠಿ ನಾಯ್ಕ್ ಸಮುದಾಯದವರು ವಿಶಿಷ್ಟವಾಗಿ ಆಚರಿಸುತ್ತಿದ್ದಾರೆ. ಪ್ರತಿ ವರ್ಷ ಮಾರ್ಚ್‌ ತಿಂಗಳ ಏಕಾದಶಿಯಂದು ಆರಂಭಗೊಂಡು ಐದು ದಿನಗಳ ಕಾಲ ನಡೆಯುವ ಇವರ ಆಚರಣೆ ಇದೀಗ ಮುಕ್ತಾಯ ಹಂತದಲ್ಲಿದೆ. ಈ ಸಮುದಾಯವು ವಿಶಿಷ್ಟ ಹೋಳಿ ಆಚರಣೆಗೆ ಹೆಸರಾಗಿದ್ದು, ಏಕಾದಶಿ ದಿನದಂದು ಹತ್ತರಿ ಕಟ್ಟೆಯಲ್ಲಿ ಕಾಯಿ ಏರಿಸುವುದರ ಮೂಲಕ ಗದ್ದುಗೆ ಅಮ್ಮನವರ ಸೇವೆಯನ್ನು ಪ್ರಾರಂಭಿಸಿ ಹೋಳಿ ಕುಣಿತ ಆರಂಭಿಸುತ್ತಾರೆ.

ಸಮುದಾಯದ ಉತ್ಸಾಹಿ ಯುವಕರು ಮನೆಯಲ್ಲಿರುವ ಬಣ್ಣ ಬಣ್ಣದ ಬಟ್ಟೆಯನ್ನು ತೊಟ್ಟುಕೊಂಡು ತಮ್ಮ ಕುಲದೇವಿಯಾದ ಗದ್ದುಗೆ ಅಮ್ಮ( ದೂಳಮ್ಮ/ ತುಳಜಾ ಭವಾನಿಯಮ್ಮ)ನ ಸೇವೆಗೆ ಮುಂದಾಗುತ್ತಾರೆ. ಮೊದಲಿಗೆ ದೇವರಿಗೆ ತೆಂಗಿನಕಾಯಿ ತೆಗೆದಿಟ್ಟು ನಂತರ ಊರಿನ ಪ್ರಮುಖ ಮನೆಗಳಿಗೆ ತೆರಳುತ್ತಾರೆ. ತಲೆಯ ಮೇಲೆ ಮುಂಡಾಸು, ಕೇಸರಿ ಹೂ ಸುತ್ತಿಕೊಂಡು, ಬಣ್ಣ ಬಣ್ಣದ ಉಡುಪು ಧರಿಸಿಕೊಂಡು ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಗುಮ್ಮಾಟೆ, ಜಾಗಟೆ, ತಾಳಗಳೊಂದಿಗೆ ಊರೆಲ್ಲಾ ಸುತ್ತಿಕೊಂಡು ಲಯಬದ್ದವಾಗಿ ಹಾಡು ಹಾಡುತ್ತಾ ಕುಣಿಯುತ್ತಾರೆ. ಈ ಕುಣಿತವನ್ನು ನೋಡುವುದೇ ಕಣ್ಣಿಗೆ ಒಂದು ಹಬ್ಬವಾಗಿದೆ

ತಿರುಗಾಟ ಸಮಯದಲ್ಲಿ ಮರಾಠಿ ಸಮುದಾಯದ ಪ್ರತೀ ಮನೆಯಿಂದಲೂ ಕನಿಷ್ಠ ಒಬ್ಬೊಬ್ಬರು ಪಾಲ್ಗೊಳ್ಳಬೇಕು ಎನ್ನುವ ನಿಯಮವಿದೆ. ಈ ವಿಶಿಷ್ಟ ಸೇವೆಯ ಸಂದರ್ಭಕ್ಕೆಂದೇ ಹರಕೆ ಹೊತ್ತುಕೊಂಡ ಕುಟುಂಬಗಳೂ ಕೂಡ ಈ ಸೇವೆಯಲ್ಲಿ ಪಾಲ್ಗೊಳ್ಳುತ್ತಾರೆ. ದೇವರ ಹೊಗಳಿಕೆ ಮಾಡುತ್ತಾ, ಕುಣಿಯುತ್ತಾ ಹರಕೆ ಹೊತ್ತವರ ಮನೆಗೆ ಹೋಗಿ ಹರಕೆ ತೀರಿಸುವುದು ಇದರ ವಾಡಿಕೆ. ಏಕಾದಶಿಗೆ ಒಂದು ದಿನದ ಮೊದಲೇ ಶುದ್ಧಾಚಾರದಿಂದ ಹಬ್ಬಕ್ಕೆ ಅಣಿಯಾಗುವ ಕ್ರಮ ಇದಕ್ಕಿದೆ. ಮರಾಠಿ ಸಂಪ್ರದಾಯದಲ್ಲಿ ಹೋಳಿ ಆಚರಣೆಯು ಬಣ್ಣಗಳ ಎರಚಾಟವಿಲ್ಲದೆ ಕೇವಲ ಸಾಂಪ್ರದಾಯಿಕವಾಗಿ ನಡೆಯುತ್ತದೆ. ಹಾಡು, ಕುಣಿತ ಅಷ್ಟೇ ಅಲ್ಲದೆ ಈ ಹೋಳಿ ಆಚರಣೆಯಲ್ಲಿ ಧಾರ್ಮಿಕ ನಂಬಿಕೆಗಳು ಗಾಢವಾಗಿ ಹಾಸುಹೊಕ್ಕಿವೆ.

ಹೋಳಿ ಕುಣಿತದ ತಂಡ ಮನೆಯ ಮುಂದೆ ಬರುತ್ತಿದ್ದಂತೆಯೇ ಮನೆಯ ಯಜಮಾನರು ಈ ತಂಡಕ್ಕೆ ಬೆಲ್ಲ, ನೀರು ನೀಡಿ ಉಪಚರಿಸುತ್ತಾರೆ.ಮನೆಯಲ್ಲಿ ಮದುವೆಯಾಗದೇ ಇರುವವರು, ಮಕ್ಕಳು ಆಗದೇ ಇರುವವರು ಇದ್ದರೆ ಹೋಳಿ ತಂಡದ ಮುಖ್ಯಸ್ಥರಿಂದ ಪ್ರಾರ್ಥನೆಯನ್ನು ಕೂಡ ಮಾಡಿಸುತ್ತಾರೆ. ಈ ರೀತಿ ಪ್ರಾರ್ಥನೆ ಮಾಡಿಸಿ ಅದೆಷ್ಟೋ ಕಡೆಗಳಲ್ಲಿ ದೇವಿಯ ಅನುಗ್ರಹದಿಂದ ಫಲ ಸಿಕ್ಕಿದೆ. ಹೀಗಾಗಿ ಹೋಳಿಯ ತಂಡಗಳು ಮನೆಗೆ ಬರುವುದೆಂದರೆ ಅದೊಂದು ರೀತಿ ಮನೆಗೆ ಅದೃಷ್ಟ ಎಂಬ ಭಾವನೆ ಇದೆ. ಅಲ್ಲದೇ ಮನೆಯಲ್ಲಿ ಪುಟ್ಟ ಕಂದಮ್ಮಗಳು ಇದ್ದರೆ ಆ ಮಗುವನ್ನು ಎತ್ತಿಕೊಂಡು ಲಾಲಿಹಾಡು ಹಾಡುತ್ತಾರೆ. ಈ ಲಾಲಿಹಾಡನ್ನು ನೋಡುವುದು ಕಣ್ಣಿಗೆ ಇನ್ನಷ್ಟು ಆನಂದ.

ಇದನ್ನೂ ಓದಿ : ಉಡುಪಿ ಜಿಲ್ಲೆಯ ಗುಪ್ತ ರತ್ನ ಶ್ರೀ ಕಲ್ಲುಗಣಪತಿ

ಹೋಳಿ ಹುಣ್ಣಿಮೆಯ ಹಿಂದಿನ ಏಳು ದಿನಗಳು ಶುದ್ಧಾಚಾರದಲ್ಲಿದ್ದು ವಿಜೃಂಭಣೆಯಿಂದ ಹಬ್ಬ ಆಚರಿಸುತ್ತಾರೆ. ಪ್ರತಿ ತಿರುಗಾಟದ ದಿನ ಸಮುದಾಯದ ಒಂದೊಂದು ಮನೆಯಲ್ಲಿ ಭೋಜನ ವ್ಯವಸ್ಥೆ ಕೂಡ ಅದ್ದೂರಿಯಾಗೇ ಇರುತ್ತದೆ. ಹೋಳಿ ಹುಣ್ಣಿಮೆಯ ದಿನ ಹೋಳಿ ದಹನ ಮಾಡಿ ನಂತರ ಮಂಗಳವಾರ ಅಥವಾ ಶುಕ್ರವಾರದ ದಿನದಂದು ಮಾರಿ ಪೂಜೆ/ ಗೋಂದಳ ಪೂಜೆಯ ಮೂಲಕ ಶುದ್ದಾಚಾರಕ್ಕೆ ಕೊನೆ ಹಾಡುತ್ತಾರೆ. ಈ ಸಾಂಪ್ರದಾಯಿಕ ಸಂಭ್ರಮಾಚರಣೆಯನ್ನು ಬರಿ ಮರಾಠಿ ಸಮುದಾಯವಷ್ಟೇ ಅಲ್ಲದೇ ಕುಡುಬಿ ಸಮುದಾಯದವರು ಕೂಡ ನಡೆಸಿಕೊಂಡು ಬಂದಿದ್ದಾರೆ. ಕುಡುಬಿ ಹಾಗೂ ಮರಾಠಿ ಸಮುದಾಯದ ಹೋಳಿ ಆಚರಣೆಯಲ್ಲಿ ಹೆಚ್ಚಿನ ವ್ಯತ್ಯಾಸವೇನು ಇಲ್ಲ. ಮರಾಠಿ ಸಮುದಾಯದಲ್ಲಿ ತಲೆಗೆ ಕೇಸರಿ ಹೂವನ್ನು ಧರಿಸಿದರೆ, ಕುಡುಬಿ ಸಮುದಾಯದವರು ತಲೆಗೆ ಹಕ್ಕಿ ಪುಕ್ಕವನ್ನು ಸಿಕ್ಕಿಸಿಕೊಳ್ಳುತ್ತಾರೆ.

Holi celebration 2023: Celebration of stepping on the grass: Marathi Holi celebration in the house yard

Comments are closed.