ಕೊಳ್ಳೇಗಾಲ ಮತ್ತು ಸುತ್ತಮುತ್ತಲಿರುವ ಊರುಗಳ ಪರಿಸರವೇ ಹಾಗೆ.. ಅಗತ್ಯತೆಗೆ ಮೀರಿದ ಮೂಢತನ, ಮುಗ್ಧತೆ ಇಂದಿಗೂ ಇಲ್ಲಿನ ಕಪಟ ಮಾಂತ್ರಿಕರಿಗೆ, ಡೋಂಗಿ ಪೂಜಾರಿಗಳಿಗೆ ವರದಾನವಾಗಿದೆ. ಹೀಗಾಗಿಯೇ ಇಲ್ಲಿ ಯಥೇಚ್ಚವಾಗಿ ಕಪಟ ಮಾಂತ್ರಿಕರು ತಳವೂರಿಕೊಂಡಿದ್ದಾರೆ. ನಂಬಿ ಬರುವ ಸಮುದ್ರದ ಅಲೆಗಳಂಥ ಜನಸಾಗರವನ್ನು ಕಂಡ ನಾನು ಇವರೆಂಥ ಮೂಢರು ಎಂದು ಕೊಂಡೆನೇ ಹೊರತು, ಅವರ್ಯಾರಿಗೂ ನಾನು ಕೂಗಿ ಕರೆದು ಬುದ್ಧಿ ಹೇಳುವಂತಿರಲಿಲ್ಲ.

ಅಲ್ಲಿ ನೆರೆದಿದ್ದ ಭಕ್ತರ ಮುಖಗಳಲ್ಲಿ ಅಗಾಧವಾದ ಭಕ್ತಿ ಎದ್ದು ಕಾಣುತ್ತಿತ್ತು. ದೇವಸ್ಥಾನದೊಳಗೆ ಕೂತು, ಜುಟ್ಟು ಸ್ವಾಮಿ ಮುಂದೆ ತಮ್ಮ ನೋವು ಹೇಳಿಕೊಳ್ಳುತ್ತಿದ್ದವರ ಮುಖದಲ್ಲಿ ಪರಿಹಾರ ಸಿಗಬಹುದೇನೋ ಎಂಬ ಆಶಾಭಾವನೆ ಇತ್ತು. ಕಾಯಿಲೆ ಕಸಾಲೆ ಹೊತ್ತು ಬಂದವರಲ್ಲಿ ತಾಯಿ ಚೌಡೇಶ್ವರಿ ನಿಂತ ನಿಲುವಿನಲ್ಲೇ ಕಾಯಿಲೆ ಮಂಗಮಾಯ ಮಾಡಿಬಿಡ್ತಾಳೆ ಎನ್ನುವ ಬಲವಾದ ನಂಬಿಕೆ ಇತ್ತು. ಹೀಗಾಗಿ ನೂರಾರು ಜನ ಅವನ ಸುತ್ತ ಕೂತು ಕವಡೆ ಶಾಸ್ತ್ರ ಕೇಳುತ್ತಿದ್ದರು. ಆತನೂ ಕೂಡ ಸರ್ವೇ ಸಾಮಾನ್ಯವಾಗಿ ಬರುವ ಕೌಟುಂಬಿಕ ಸಮಸ್ಯೆ ಮತ್ತು ಕಾಯಿಲೆಗಳನ್ನು ಟಾರ್ಗೆಟ್ ಮಾಡಿಕೊಂಡೇ ಪ್ರಶ್ನೆ ಕೇಳುತ್ತಿದ್ದ.

ಆತ ಕೇಳುತ್ತಿದ್ದ ಪ್ರಶ್ನೆಗಳಿಗೆ ಅವರೇ ಉತ್ತರ ಕೊಡುತ್ತಿದ್ದರು .ಈ ರೀತಿ ಕೇಳಿಕೊಂಡ ಪ್ರಶ್ನೆಗಳು ಹಾಗೂ ಉತ್ತರಗಳನ್ನೇ ಮೂರು ಗಂಟೆಯ ಮೇಲೆ ದೇವರು ಬಂದಾಗ ಅವನು ಕರೆದು ಕರೆದು ಹೇಳುತ್ತಿದ್ದದ್ದು. ಈ ಮೂಢ ಜನ ನಂಬುತ್ತಿದ್ದದ್ದು. ಇನ್ನು ಈ ಕಪಟ ಮಾಂತ್ರಿಕರು ಮತ್ತೊಂದು ಆಟ ಆಡ್ತಾರೆ. ಆ ಅನುಭವ ನಿಮಗೂ ಆಗಿರಬಹುದು. ನೀವು ಎಲ್ಲಿಯಾದರೂ ದೇವರ ಶಾಸ್ತ್ರ ಕೇಳೋಕೆ ಹೋಗಿದ್ದರೆ ಅಲ್ಲಿ ನೀವು ಯಾಕೆ ಬಂದಿದ್ದೀರಿ ಎಲ್ಲಿಂದ ಬಂದಿದ್ದೀರಾ ಅಂತ ಕೇಳೋಕೆ ಆ ಊರಿನವರೇ ಕೆಲವರು ಇರುತ್ತಾರೆ. ಅವರು ನಿಮ್ಮಂತೆಯೇ ಪರಿಹಾರಕ್ಕಾಗಿ ಬಂದವರು ಅಂತ ಹೇಳುತ್ತಾರೆ. ಅವರ ಬಳಿ ನೀವು ಯಾಕೆ ಬಂದಿದ್ದೀರಿ ಅಂತ ಹೇಳಿಕೊಂಡರೆ ಮುಗೀತು ಆ ವಿಚಾರ ಪೂಜಾರಿಗೆ ತಲುಪುತ್ತದೆ. ಅದೇ ವಿಚಾರವನ್ನು ದೇವರು ಮೈಮೇಲೆ ಬಂದಂತೆ ನಟಿಸಿ ನಿಮ್ಮ ಬಳಿ ಹೇಳ್ತಾನೆ. ನೀವು ದೇವರೇ ನಿಜವಾಗಿಯೂ ಬಂದಿದೆ ಅಂತ ನಂಬುತ್ತೀರಾ. ಅಷ್ಟೇ ..

ಅವನು ಹೇಳಿದ ಮಾತನ್ನು ಕೇಳಿ ಸಾವಿರಾರು ರೂಪಾಯಿ ದುಡ್ಡು ಕೊಟ್ಟು ಪರಿಹಾರ ಸಿಕ್ತು ಎಂಬ ಭಾವನೆಯಲ್ಲಿ ಮನೆಗೆ ಹಿಂದಿರುಗುತ್ತಾರೆ. ಕಾಕತಾಳೀಯ ಎಂಬಂತೆ ನೀವು ಅಂದುಕೊಂಡ ಕೆಲಸ ಆಗಿಬಿಟ್ಟರೆ ಮುಗಿದೇ ಹೋಯಿತು. ನೀವೇ ಆತನಿಗೆ ಮತ್ತಷ್ಟು ಪ್ರಚಾರ ಕೊಡ್ತೀರಾ. ನಿಮ್ಮ ಅಕ್ಕಪಕ್ಕದವರಿಗೆ ತಿಳಿಸಿ ಅಲ್ಲಿ ಹೋಗಿ ಬರುವಂತೆ ಸಲಹೆ ನೀಡ್ತೀರಿ. ಅಷ್ಟು ಸಾಕು ಮಾಂತ್ರಿಕನ ಸುಲಿಗೆಗೆ. ಹೀಗೆ ದೇವರ ಹೆಸರಲ್ಲಿ ಮತ್ತು ದೆವ್ವ ಭೂತ ಪ್ರೇತಗಳ ಹೆಸರಲ್ಲಿ ಕೊಳ್ಳೇಗಾಲದ ಸುತ್ತ ನಿತ್ಯವೂ ಹಣ ಲೂಟಿಯಾಗುತ್ತಿದೆ. ಪರಿಹಾರ ಆಗಲಿಲ್ಲ ಅಂದ್ರೂ ಆತನ ವಿರುದ್ಧ ಯಾರೂ ದೂರು ಕೊಡುವುದಿಲ್ಲ. ಹಣ ಕೊಟ್ಟು ದೇವಿ ನಮಗೆ ಒಲಿಯಲಿಲ್ಲ ಅಂತ ಸುಮ್ಮನಾಗುತ್ತಾರೆ. ಮತ್ತೊಂದು ದೇವಸ್ಥಾನವನ್ನು ಮತ್ತೊಬ್ಬ ಮಾಂತ್ರಿಕನನ್ನು ಹುಡುಕುವ ಈ ಜನ ಮೂಢ ಭಕ್ತಿಯನ್ನ ಬಿಡಲೇಬೇಕು .ಅಂದಹಾಗೆ ದೇವರು ಮೈಮೇಲೆ ಬಂದಂತೆ ಇಲ್ಲಿ ದೆವ್ವಗಳು ಮೈಮೇಲೆ ಬರುತ್ತವೆ. ದೆವ್ವ ಮೈಮೇಲೆ ಬಂದಾಗ ಯಾವ್ಯಾವ ರೀತಿ ಆಟ ಆಡ್ತಾರೆ ಅನ್ನೋ ವಿಚಾರವನ್ನು ಮುಂದಿನ ಸಂಚಿಕೆಯಲ್ಲಿ ತಿಳಿಸ್ತೀನಿ.
(ಮುಂದುವರಿಯುತ್ತದೆ…)
- ಕೆ.ಆರ್.ಬಾಬು