ಧಾರವಾಡದ ನನ್ನ ಕಚೇರಿಯ ಹುಡುಗ ಸೂರ್ಯಕಾಂತ ಶಿರೂರ ವಾಪಸ್ ಕಚೇರಿಗೆ ಬರಲೇಬೇಕಿತ್ತು…ಆತನ ರಜೆ ಮುಗಿದಿತ್ತು…ಆತನನ್ನು ಬೆಂಗಳೂರು ಬಸ್ ಹತ್ತಿಸಿ ನಾನು ಬೀದರ್ ಕಡೆಗೆ ಹೊರಟೆ.. ಸ್ನೇಹಿತರೇ ಪತ್ರಿಕೋದ್ಯಮದಲ್ಲಿ ನಾನು ಸಂಪಾದಿಸಿದ್ದು ಸ್ನೇಹಿತರನ್ನ… ಬಿಟ್ರೆ ಬೇರೆ ಏನನ್ನೂ ಇಲ್ಲ.. ನಾನು ಭಾನಾಮತಿಗೆ ಸಂಬಂಧಪಟ್ಟಂತೆ ಇನ್ನೂ ಹೆಚ್ಚಿನ ಮಾಹಿತಿ ಕಲೆ ಹಾಕುವುದಿತ್ತು.. ಹೀಗಾಗಿ ಕುಲಕರ್ಣಿ ಅಜ್ಜ ಹೇಳಿದ್ದು ನೆನಪಾಯ್ತು… ಗುಲ್ಬರ್ಗ ಹಾಗೂ ಬೀದರ್ ಕಡೆ ಹೆಚ್ಚಾಗಿ ಭಾನಾಮತಿ ಮಾಡ್ತಾರೆ..ಅಲ್ಲಿ ಬಾಬಾ ಗಳಿದ್ದಾರೆ ಅಂತ ಹೇಳಿದ್ರು… ಅದರಲ್ಲೂ ಬೀದರ್ ಜಿಲ್ಲೆಯ ಮನ್ನಾ ಎಕ್ಕೆಳ್ಳಿ ಎಂಬ ಗ್ರಾಮದಲ್ಲಿ ಭಾನಾಮತಿ ಜೋರಾಗಿದೆ ಅಂದಿದ್ರು…

ಆಗಲೇ ಹೇಳಿದಂತೆ ನಾನು ಸ್ನೇಹಿತರನ್ನು ಸಂಪಾದಿಸಿದ್ದೆನ್ನಲ್ಲ; ಅದು ಅಲ್ಲಿ ಉಪಯೋಗಕ್ಕೆ ಬಂದಿತ್ತು… ಬೀದರ್ ನಲ್ಲಿ ನನ್ನ ಗೆಳೆಯ ವೀರಶೆಟ್ಟಿ ಕುಂಬಾರನಿಗೆ ಬರುತ್ತಿರುವುದಾಗಿ ತಿಳಿಸಿದ್ದೆ… ಆತ ನನಗಾಗಿ ಕಾಯುತ್ತಿದ್ದ…ಪಾಪ ಆತನು ಪತ್ರಕರ್ತನೇ… ಕಡು ಬಡತನ ಕಿತ್ತು ತಿನ್ನುತ್ತಿತ್ತು…ಕಾರಣ ದುಡಿಯೋನು ಅವನೊಬ್ಬ… ತಿನ್ನೋರು ಹತ್ತರಿಂದ ಹನ್ನೆರಡು ಮಂದಿ… ಇದೆಲ್ಲವೂ ಗೊತ್ತಿದ್ದ ನಾನು ಆತನ ಮನೆಗೆ ಹೋಗೋಕೆ ಇಷ್ಟಪಡಲಿಲ್ಲ… ಹೀಗಾಗಿ ಬೀದರ್ ನ ಬಸ್ ಸ್ಟ್ಯಾಂಡ್ ನಲ್ಲಿ ಬಸ್ ಇಳಿದವನೇ ಎದುರಿಗೆ ಇದ್ದ ಲಾಡ್ಜ್ ಗೆ ಹೋಗಿ ರೂಮು ತೆಗೆದುಕೊಂಡು ಫ್ರೆಶ್ ಆದೆ… ಇಬ್ಬರೂ ಸೇರಿ ಚಹಾ ಕುಡಿದು ಮಾತಿಗೆ ಕುಳಿತೆವು…ವೀರಶೆಟ್ಟಿ ಕುಂಬಾರ ನನ್ನನ್ನು ಒಬ್ಬ ಮಂತ್ರವಾದಿಯ ಬಳಿಗೆ ಕರೆದುಕೊಂಡು ಹೋಗೋಕೆ ನಿರ್ಧರಿಸಿದ್ದ… ಆತ ಆ ಭಾಗಕ್ಕೆ ಪವರ್ಫುಲ್ ಬಾಬಾ.. ಆತನ ಬಳಿಗೆ ಹೋದ ನಾನು ಬಾನಾಮತಿಯ ಬಗ್ಗೆ ಕೇಳಿದ್ದೆ… ಅದೊಂದು ಕ್ಷುದ್ರ ವಿದ್ಯೆ ಅಂತ ಮಾತು ಆರಂಭಿಸಿದ್ದ ಮಾಂತ್ರಿಕ…ಅವನು ಬಾನಾಮತಿ ಬಗ್ಗೆ ಹೇಳಿದ್ದ ಅಷ್ಟು ಮಾಹಿತಿಯನ್ನು ಇಲ್ಲಿ ಅವನು ಹೇಳಿದಂತೆಯೇ ಕೊಡಲಾಗಿದೆ ಓದಿ…

ಸರಿ ಸುಮಾರು 64 ಕ್ಷುದ್ರ ವಿದ್ಯೆಗಳ ಪೈಕಿ ಘನಘೋರ ಮತ್ತು ಕಠಿಣ ಸಾಧನೆಯಿಂದ ಓರ್ವ ಮಾಂತ್ರಿಕ ವಶಪಡಿಸಿಕೊಂಡು ಅಟ್ಟಹಾಸ ಮೆರೆಯುವಂತಹ ವಿದ್ಯೆಯೇ ಭಾನಾಮತಿ ವಿದ್ಯೆ….ಈ ಭಾನಾಮತಿ ಎಂಬುದು ಕ್ಷುದ್ರ ವಿದ್ಯೆಗಳಲ್ಲಿಯೇ ವಿಶಿಷ್ಟವಾದ ವಿದ್ಯೆ… ಈ ವಿದ್ಯೆಯನ್ನು ಕಲಿಯಲು ‘ಗುರು’ ಅತ್ಯವಶ್ಯಕ… ಆತನ ಮಾರ್ಗದರ್ಶನದಲ್ಲಿ ಸತತ ಸಾಧನೆ, ಕಠಿಣ ವ್ರತ, ಪೂಜೆ, ನೀತಿ – ನಿಯಮಾಧಿಗಳನ್ನು ಅನುಸರಿಸಿದಾಗ ಮಾತ್ರ ಮಾಂತ್ರಿಕನಿಗೆ ಭಾನಾಮತಿ ವಶವಾಗುತ್ತದಂತೆ…. ಈ ವಿದ್ಯೆಯ ಶಕ್ತಿಯಿಂದ ಅತಿಮಾನುಷವಾದುದನ್ನ ಮಾಡಬಹುದಂತೆ..!

ಅದರಲ್ಲೂ ಪ್ರಮುಖವಾಗಿ ಮರೆಯಲ್ಲಿದ್ದುಕೊಂಡು ಕೆಡುಕನ್ನು ಮಾಡುವಂತಹ ಶಕ್ತಿ ಇದರಿಂದ ಲಭಿಸುತ್ತದಂತೆ… ಕುಲಕರ್ಣಿ ಅಜ್ಜ ಹೇಳಿದಂತೆ ಈ ಬಾಬಾ ಕೂಡ ಭಾನಾಮತಿಗೆ ಸರಿ ಸುಮಾರು 200 ವರ್ಷಗಳ ಇತಿಹಾಸವಿದೆ ಎಂದಿದ್ದ… ಇವತ್ತಿಗೂ ಈ ವಿದ್ಯೆ ಅಜರಾಮರ… ಕಾರಣ: ಅಂದು, ಇಂದು, ನಾಳೆ ಎಂದೆಂದಿಗೂ ಮೂಢನಂಬಿಕೆಯನ್ನು ನಂಬುವ ಜನ ಇರೋದ್ರಿಂದ…. ಈ ಕಾರಣದಿಂದಾಗಿ ಬಹುತೇಕ ಕಡೆ ವಿಜ್ಞಾನಕ್ಕೆ ಸವಾಲೊಡ್ಡುವಂತೆ ಈ ಭಾನಾಮತಿ ಆಟ ನಡೆಯುತ್ತದೆ…

ನಮ್ಮ ದೇಶದ ಅದರಲ್ಲೂ ನಮ್ಮರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ಈ ಭಾನಾಮತಿ ಉಪಟಳ, ಎಷ್ಟಿತ್ತೆಂದರೆ ಹಿಂದಿನ ಕಾಲದಲ್ಲಿ ಇದನ್ನು ಹತ್ತಿಕ್ಕಲೆಂದೇ ಒಂದು ವಿಶೇಷ ಸಿಬ್ಬಂದಿಗಳ ತಂಡ ರಚಿಸಲಾಗುತ್ತಿಂತೆ… ಹೈದರಾಬಾದ್ ನಿಜಾಮರ ಆಳ್ವಿಕೆಯ ಕಾಲದಲ್ಲಿ ಈ ಭಾನಾಮತಿ ಮಾಡುವವರನ್ನು ಹಿಡಿದು ದಂಡಿಸಲೆಂದೇ ಒಂದು ವಿಶೇಷ ಪಡೆ ಇತ್ತು ಎಂಬುದು ಇತಿಹಾಸದಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿದೆ ಎಂದಿದ್ದ ಬಾಬಾ…
ಇಂತಹ ಭಾನಾಮತಿ ವಿದ್ಯೆಯನ್ನು ಕರಗತ ಮಾಡಿಕೊಳ್ಳುವುದು ಸುಲಭದ ಮಾತಲ್ಲ ಸಾರ್… ಅದು ಅಷ್ಟು ಸಲೀಸಾಗಿ ಕರಗತವೂ ಆಗೋದಿಲ್ಲ… ಅದಕ್ಕೆ ಘೋರ ತಪಸ್ಸು ಮತ್ತು ನಿಶ್ಚಲ ಮನಸ್ಸು ಇರಬೇಕು ಅಂದಿದ್ದ…ಬಚ್ಚಲ ಕಿಂಡಿಯಿಂದ ಬರುವ ನೀರನ್ನು ಗಟಗಟನೆ ಕುಡಿಯೋಕು ಸಿದ್ಧವಾಗಿರಬೇಕು ಅಂದಿದ್ದ ಆ ಬಾಬಾ.. ಭಾನಾಮತಿ ಅನ್ನೋ ಘನಘೋರ ವಿದ್ಯೆಯನ್ನ ಹೇಗೆ ವಶೀಕರಣ ಮಾಡಿಕೊಳ್ತಾರೆ ಅನ್ನೋದನ್ನು ಬಾಬಾ ತಿಳಿಸಿದ್ದ ಆ ಬಗ್ಗೆ ಮುಂದಿನ ಸಂಚಿಕೆಯಲ್ಲಿ ತಿಳಿಸ್ತೀನಿ….
(ಮುಂದುವರಿಯುತ್ತದೆ….)
- ಕೆ.ಆರ್.ಬಾಬು
