ಶಬರಿಮಲೆ ಯಾತ್ರೆಗಿನ್ನು ಕೋವಿಡ್ ನೆಗೆಟಿವ್ ವರದಿ ಕಡ್ಡಾಯ

0

ಶಬರಿಮಲೆ : ದೇಶದ ಪವಿತ್ರ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿರುವ ಶಬರಿಮಲೆಯ ಅಯ್ಯಪ್ಪ ಸ್ವಾಮಿಯ ದರ್ಶನಕ್ಕಿನ್ನು ಕೋವಿಡ್ ನೆಗೆಟಿವ್ ವರದಿಯನ್ನು ಕಡ್ಡಾಯಗೊಳಿಸಲಾಗಿದೆ. ವರ್ಚುವಲ್‌ ಸರತಿ ವ್ಯವಸ್ಥೆಯ ಮೂಲಕ ಮಾತ್ರ ಪ್ರವೇಶ ನೀಡಲು ನಿರ್ಧರಿಸಲಾಗಿದೆ.

ಕೊರೊನಾ ಸೋಂಕು ಹರಡುವಿಕೆಯ ಹಿನ್ನೆಲೆಯಲ್ಲಿ ಕಳೆದ 6 ತಿಂಗಳಿನಿಂದಲೂ ಭಕ್ತರ ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತು. ಶಬರಿಮಲೆಯು ಎರಡು ತಿಂಗಳು ಅವಧಿಯ ದರ್ಶನಕ್ಕಾಗಿ ನವೆಂಬರ್‌ 16ರಂದು ಬಾಗಿಲು ತೆರೆಯಲಿದ್ದು, ಈ ವೇಳೆಯಲ್ಲಿ ಯಾತ್ರೆ ಕೈಗೊಳ್ಳುವ ಭಕ್ತರು ಕೋವಿಡ್‌-19 ನೆಗೆಟಿವ್‌ ಪ್ರಮಾಣ ಪತ್ರ ಹೊಂದಿರುವುದನ್ನು ಕಡ್ಡಾಯಗೊಳಿಸಲಾಗಿದೆ. ಇದಲ್ಲದೆ ವರ್ಚುವಲ್‌ ಸರತಿ ವ್ಯವಸ್ಥೆಯ ಮೂಲಕ ಮಾತ್ರ ಪ್ರವೇಶ ನೀಡಲು ನಿರ್ಧರಿಸಲಾಗಿದೆ.

ಕೊರೊನಾ ಹಿನ್ನೆಲೆಯಲ್ಲಿ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಭಕ್ತರಿಗೆ ದರ್ಶನಕ್ಕೆ ಅವಕಾಶವನ್ನು ಕಲ್ಪಿಸುವ ನಿಟ್ಟಿನಲ್ಲಿ ಕೇರಳ ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್‌ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆ ನಡೆಯಿತು.

ಸಭೆಯಲ್ಲಿ ದೇವಸ್ಥಾನದಲ್ಲಿಯೂ ಮಾಸ್ಕ್ ಬಳಕೆ, ಸಾಮಾಜಿಕ ಅಂತರ ಪಾಲನೆ ಸೇರಿದಂತೆ‌ ಕೇಂದ್ರ ಸರಕಾರ ಹೊರಡಿಸಿರುವ ಆದೇಶಗಳ ಪಾಲನೆಗೆ ಅಗತ್ಯಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಹಲವು ನಿರ್ಧಾರಗಳನ್ನು ಕೈಗೊಳ್ಳಲಾಯಿತು.

ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ವರ್ಷಂಪ್ರತಿ ಲಕ್ಷಾಂತರ‌ ಮಂದಿ ಆಗಮಿಸುತ್ತಾರೆ. ಅದ್ರಲ್ಲೂ ನವಂಬರ್, ಡಿಸೆಂಬರ್ ಹಾಗೂ ಜನವರಿ ತಿಂಗಳಲ್ಲಿ ಭಕ್ತರ ಸಂಖ್ಯೆ ಅಧಿಕವಾಗಿರುತ್ತದೆ. ಆದರೆ ಕೊರೊನಾ ಹಿನ್ನೆಲೆಯಲ್ಲಿ ಭಕ್ತರಿಗೆ ಕಳೆದಾರು ತಿಂಗಳಿನಿಂದಲೂ ಧರ್ಮಶಾಸ್ತ ಅಯ್ಯಪ್ಪಸ್ವಾಮಿಯ ದರ್ಶನ ಲಭಿಸಿರಲಿಲ್ಲ.

Leave A Reply

Your email address will not be published.