‘ಮಹಾ ಶಿವರಾತ್ರಿ’ ರುದ್ರನ ಮಂಗಳಕರ ರಾತ್ರಿ ಸಂಪಾದಿಸಿ

0

ಮಾಘಮಾಸ ಕೃಷ್ಣ ಪಕ್ಷದ ಚತುರ್ದಶಿಯಂದು ಆಚರಿಸಲಾಗುವ ಶಿವರಾತ್ರಿ, ಶಿವ ಭಕ್ತರ ಪಾಲಿಗೆ ಮಂಗಳಕರ ರಾತ್ರಿ. ಹಗಲು ಉಪವಾಸವಿದ್ದು, ರಾತ್ರಿ ವೇಳೆ ಜಾಗರಣೆ ಮಾಡಿ, ಶಿವಧ್ಯಾನ ಮಾಡಿ ಶಿವನ ಕೃಪೆಗೆ ಪಾತ್ರವಾಗುವ ಶುಭ ದಿನ. ಈ ದಿನ ಶಿವನನ್ನು ಭಕ್ತಿಯಿಂದ ಪೂಜಿಸಿದರೆ, ತಾವು ಮಾಡಿದ ಪಾಪಗಳೆಲ್ಲವೂ ಪರಿಹಾರವಾಗಿ, ಮೋಕ್ಷ ಪ್ರಾಪ್ತವಾಗುತ್ತದೆ ಎಂಬುದು ಭಕ್ತರ ಬಲವಾದ ನಂಬಿಕೆ. ಮದುವೆಯಾಗದ ಹೆಣ್ಣುಮಕ್ಕಳು ಶಿವಗುಣರೂಪಿಯಾದ ಅನುರೂಪ ಪತಿಗಾಗಿ ಪ್ರಾರ್ಥಿಸಿದರೆ, ಮುತ್ತೈದೆಯರು ಪತಿಯ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥಿಸುವುದು ಸಂಪ್ರದಾಯ. ಶಿವರಾತ್ರಿಯಂದು ಶಿವನನ್ನು ಪೂಜಿಸಿದರೆ, ಸುಖ, ಶಾಂತಿ, ಸಮೃದ್ಧಿ ದೊರೆಯುವುದೆಂಬ ನಂಬಿಕೆ ಆಸ್ತಿಕರದು.

ಶಿವರಾತ್ರಿಯ ಮಹಿಮೆ:
ಕೈಲಾಸವಾಸಿ ಶಿವನಿಗೆ ಶಿವರಾತ್ರಿ ಅತ್ಯಂತ ಪ್ರಿಯವಾದ ದಿನ. ಶಿವರಾತ್ರಿಯಂದು ತನ್ನನ್ನು ಪೂಜಿಸುವ ಭಕ್ತರಿಗೆ ತಾನು ವಿಶೇಷವಾಗಿ ಅನುಗ್ರಹ ನೀಡುವುದಾಗಿ ಸ್ವತ: ಶಿವನೇ ಪಾರ್ವತಿಯಲ್ಲಿ ಅರುಹಿದ್ದಾನೆ ಎನ್ನುತ್ತದೆ ಶಿವಪುರಾಣ. ಶಿವ -ಪಾರ್ವತಿಯರ ವಿವಾಹ ಮಹೋತ್ಸವದ ದಿನವಿದು ಎಂಬುದು ವಿಶೇಷ. ಹಿಮವಂತನ ಮಗಳು ಪಾರ್ವತಿ ಈ ದಿನದಂದು ರಾತ್ರಿಯಿಡಿ ಶಿವನಾಮ ಪಠಿಸುತ್ತಾ, ತಪಸ್ಸು ಮಾಡಿ, ಶಿವನನ್ನು ಮೆಚ್ಚಿಸಿ, ವಿವಾಹವಾದಳೆಂಬುದು ಪ್ರತೀತಿ. ಶಿವ ರುದ್ರತಾಂಡವನಾಡಿದ ರಾತ್ರಿಯೂ ಇಂದೇ ಎನ್ನಲಾಗುತ್ತದೆ.

ದೇವತೆಗಳು ಹಾಗೂ ಅಸುರರ ನಡುವೆ ಸಮುದ್ರ ಮಂಥನ ನಡೆದು ವಿಷ ಉದ್ಭವವಾದಾಗ, ಅದನ್ನು ಶಿವ ಕುಡಿದ. ವಿಷ ಗಂಟಲೊಳಗಿಂದ ಇಳಿಯದಂತೆ ಪಾರ್ವತಿ ಇಡೀ ರಾತ್ರಿ ತಡೆದಳು ಎನ್ನುತ್ತದೆ ಶಿವಪುರಾಣದ ಇನ್ನೊಂದು ಮಹಿಮೆ. ಹಾಗಾಗಿ, ಭಕ್ತರು ಇಡೀ ರಾತ್ರಿ ಎಚ್ಚರವಿದ್ದು, ನೀಲಕಂಠನನ್ನು ಸ್ತುತಿಸುತ್ತಾರೆ. ಭಗೀರಥನ ತಪಸ್ಸಿಗೆ ಮೆಚ್ಚಿ ಇಳೆಗೆ ಇಳಿದು ಬಂದ ಗಂಗೆಯನ್ನು ಶಿವ ತನ್ನ ಜಡೆಯಲ್ಲಿ ತುಂಬಿಸಿಕೊಂಡಿದ್ದ.

ಇದರಿಂದ ವಿಚಲಿತನಾದ ಭಗೀರಥ ಗಂಗೆಯನ್ನು ಭೂಮಿಗೆ ಹರಿಸುವಂತೆ ಶಿವನನ್ನು ಪ್ರಾರ್ಥಿಸಿದ. ಆತನ ಭಕ್ತಿಗೆ ಮೆಚ್ಚಿ ಶಿವ ಗಂಗೆಯನ್ನು ಹರಿಯಬಿಟ್ಟಿದ್ದು ಇದೇ ದಿನ ಎನ್ನುತ್ತದೆ ಪುರಾಣ. ಲಿಂಗಪುರಾಣದ ಪ್ರಕಾರ, ಲಿಂಗ ರೂಪಿಯಾಗಿ ಭಕ್ತರಿಗೆ ಅನುಗ್ರಹ ನೀಡಿದ ದಿನವಿದು. ಶಿವನ ಆದಿ ಮತ್ತು ಅಂತ್ಯ ಹುಡುಕಲು ಹೊರಟ ವಿಷ್ಣು ಹಾಗೂ ಬ್ರಹ್ಮನಿಗೆ, ಶಿವರಾತ್ರಿಯಂದು ಶಿವ ಲಿಂಗರೂಪಿಯಾಗಿ ದರ್ಶನ ನೀಡಿದ ಎಂಬುದು ಪ್ರತೀತಿ.

ಬೇಡನ ಶಿವಭಕ್ತಿ:
ಶಿವರಾತ್ರಿ ಆಚರಣೆಯ ಕುರಿತಾಗಿ ಪ್ರಚಲಿತದಲ್ಲಿರುವ ಕಥೆಯಿದು. ಹಿಂದೆ ಬೇಡನೊಬ್ಬ ಕಾಡಿನಲ್ಲಿ ಬೇಟೆಗಾಗಿ ತೆರಳಿದ್ದ. ದಿನವಿಡಿ ಅಲೆದರೂ ಆತನಿಗೆ ಯಾವುದೇ ಬೇಟೆ ಸಿಗಲಿಲ್ಲ. ಬೇಟೆ ಅರಸಿ ಹೊರಟ ಬೇಡ ದಾರಿ ತಪ್ಪಿ ಅರಣ್ಯದಲ್ಲೇ ಅಲೆಯತೊಡಗಿದ. ಅದಾಗಲೇ ಸಂಜೆಯಾಗಿತ್ತು. ಕ್ರೂರ ಪ್ರಾಣಿಗಳು ಆತನನ್ನು ಸುತ್ತುವರಿಯತೊಡಗಿದವು. ಭಯಗ್ರಸ್ತನಾದ ಬೇಡ ಮರವೇರಿದ. ಮನದಲ್ಲೇ ಶಿವನನ್ನು ಧ್ಯಾನಿಸುತ್ತಾ ಮರದ ಎಲೆಗಳನ್ನು ಕಿತ್ತು ಕೆಳಗಡೆ ಹಾಕತೊಡಗಿದ. ಆ ಎಲೆಗಳು ಅವನಿಗರಿವಿಲ್ಲದಂತೆಯೇ ಕೆಳಗಡೆಯಿದ್ದ ಶಿವಲಿಂಗದ ಮೇಲೆ ಬೀಳತೊಡಗಿದವು. ಕಾಕತಾಳೀಯವೆಂದರೆ ಆತ ಏರಿದ್ದ ಮರ ಬಿಲ್ವಮರವಾಗಿತ್ತು. ಶಿವರಾತ್ರಿಯಂದು ಪೂರ್ತಿ ಜಾಗರಣೆಯಿದ್ದು, ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸಿದ ಬೇಡನಿಗೆ ಶಿವ ಅಭಯ ನೀಡಿದ. ಶಿವನೇ ಆತನನ್ನು ರಕ್ಷಿಸಿದ ಎಂಬ ಸುದ್ದಿ ಹರಡಿ ಭಕ್ತರು ಶಿವರಾತ್ರಿಯಂದು ಶಿವನನ್ನು ಪೂಜಿಸಲು ಆರಂಭಿಸಿದರು. ಪುಣ್ಯದ ಲವಾಗಿ ಬೇಡ ಮುಂದಿನ ಜನ್ಮದಲ್ಲಿ ರಾಜಾ ಚಿತ್ರಭಾನುವಾಗಿ ಜನಿಸಿದ ಎಂಬುದು ಕಥೆ. ಮಹಾಭಾರತದಲ್ಲಿ ಬರುವ ಈ ಕಥೆಯನ್ನು ಮರಣಶಯ್ಯೆಯಲ್ಲಿ ಮಲಗಿದ್ದ ಭೀಷ್ಮ ಹೇಳಿದನೆಂಬುದು ಪ್ರತೀತಿ.

                ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯಂ
     ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ. 
     ಸಮಸ್ಯೆಗಳು ಹತ್ತು-ಹಲವಾರು, ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ. 
           ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು. 
              ಶ್ರೀ ಶ್ರೀ ವಾದಿರಾಜ್ ಭಟ್, ಜ್ಯೋತಿಷ್ಯರು
                 ಮೋ : 9743666601

Leave A Reply

Your email address will not be published.