ದೆವ್ವಕ್ಕೆ ಬೀಡಿ ಕೊಟ್ಟ ಕಥೆ..! ನಿಜಕ್ಕೂ ದೆವ್ವ ಭೂತ ಇದಾವಾ..? ಭಾಗ -06

0

ಭಾರತದಂತಹ ಸಂಸ್ಕೃತಿಯ ದೇಶದ ತುಂಬ ದೇವರ ಬಗ್ಗೆ ಎಂತಹ ನಂಬಿಕೆ ಇದೆಯೋ ಅಷ್ಟೇ ಬಲವಾದ ನಂಬಿಕೆ ದೆವ್ವಗಳ ಮೇಲೂ ಇದೆ. ಹಾಗೆಯೇ ಮಾಟ ಮಂತ್ರ, ವಾಮಾಚಾರ, ಭಾನಾಮತಿ, ಕಾಶ್ಮೋರದಂತಹ ಕ್ಷುದ್ರ ವಿದ್ಯೆಗಳನ್ನು ನಂಬುವ ಜನರೂ ಇದ್ದಾರೆ. ಒಂದು ಪಕ್ಷ ದೇವರನ್ನು ನಂಬದೇ ಇದ್ದರೂ ದೆವ್ವವನ್ನು ನಂಬುವವರ ಸಂಖ್ಯೆ ಮಾತ್ರ ಜಾಸ್ತಿಯೇ ಇದೆ.

ಈ ಭಯ ಮತ್ತು ಮೂಢನಂಬಿಕೆಗಳನ್ನು ನಂಬುವ ಅಧಿಕ ಜನರೇ ಈ ಕಳ್ಳ ಮಾಟಗಾರರ, ಮೋಡಿಗಾರರ ಮೂಲ ಬಂಡವಾಳ. ಮಾವೆಂದರೆ ಮೋಡಿ ಎಂದರೇನು ಮತ್ತು ಈ ಮಾಟಗಾರ ಮೋಡಿಗಾರ ಮಂತ್ರವಾದಿಗಳ ಬಾಯಿಯಿಂದ ಮೂಡಿ ಬರುವ ರೌದ್ರಾವೇಷದ ಮಂತ್ರದ ಉಚ್ಚಾರಣೆಗೆ ನಿಜಕ್ಕೂ ಅರ್ಥವಿದೆಯಾ..? ಇಂತಹದೊಂದು ಪ್ರಶ್ನೆಗೆ ಉತ್ತರ ಹುಡುಕಿಕೊಂಡು ಹೊರಟವನು ನಾನು..ಈ ದೆವ್ವ ಭೂತದ ಬಗ್ಗೆ ಯಾರನ್ನಾದರೂ ಕೇಳಿ ನೋಡಿ ಒಬ್ಬೊಬ್ಬರು ಒಂದೊಂದು ರೀತಿಯ ವಿಷಯಗಳನ್ನು ತಾವೇ ಕಣ್ಣಾರೆ ಕಂಡಂತೆ ಹೇಳಿಬಿಡ್ತಾರೆ. ಅದೇ ರೀತಿ ನನಗೂ ಒಬ್ಬ ಅಜ್ಜ ಒಂದು ದೆವ್ವದ ಬುರುಡೆ ಕಥೆ ಹೇಳಿದ್ದ..

ಆ ಅಜ್ಜನ ಹೆಸರು ನಂಜುಂಡಪ್ಪ.. ನನಗೆ ಈಗಲೂ ನೆನಪಿದೆ ತುರುವೆಕೆರೆ ಸಮೀಪದ ಗ್ರಾಮದವನು. ವೃತ್ತಿಯಲ್ಲಿ ಕಟ್ಟಿಗೆ ವ್ಯಾಪಾರಿ..ಮಹಾನ್ ದೈವಭಕ್ತ. ಬೆಳಿಗ್ಗೆ ಪೂಜೆ ಮುಗಿಸಿಕೊಂಡು ಒಗ್ಗಟ್ಟಿಗೆ ತರೋಕೆ ನಿತ್ಯ ಕಾಡಿಗೆ ಹೋಗಿ ಬರುತ್ತಿದ್ದ…ಅದೊಂದು ದಿನ ಊರಿನಲ್ಲಿ ಆತ ನನಗೆ ಅನಿರೀಕ್ಷಿತವಾಗಿ ಭೇಟಿಯಾದ. ಅಜ್ಜ.. ನಾನು ಈ ದೆವ್ವಗಳ ಬಗ್ಗೆ ಭೂತಗಳ ಬಗ್ಗೆ ಪುಸ್ತಕ ಬರೀಬೇಕು ಅನ್ಕೊಂಡಿದ್ದೀನಿ ಅಂತ ಹೇಳಿದೆ..ಆ ಅಜ್ಜ ಒಳ್ಳೇ ಕೆಲ್ಸ ಕಣಪ್ಪಾ ಅಂತ ನನ್ನ ಬೆನ್ನು ತಟ್ಟಿ ದೆವ್ವ ಭೂತ ನಿಜವಾಗಲೂ ಇದಾವೆ ಮಾಟ ಮಂತ್ರ ಅವೆಲ್ಲಾ ಸುಳ್ಳು ಕೇವಲ ಹೊಟ್ಟೆಪಾಡಿಗಾಗಿ ಮಾಡ್ತಾರ್ ಕಣಪ್ಪ ಅಂದಿದ್ದ..ಅಜ್ಜ ದೆವ್ವ ಭೂತ ನಿಜಕ್ಕೂ ಇದು ನೀವು ನೋಡಿದ್ದಿರಾ ಅಂದೆ ಅದಕ್ಕಾತ ಒಂದು ಕಥೆಯನ್ನೇ ಹೇಳಿದ್ದ.. ಆ ದೆವ್ವಕ್ಕೆ ಬೀಡಿ ಕೊಟ್ಟ ಕಥೆ..

ತಾತನ ಕಣ್ಣುಗಳಲ್ಲಿ ಅದೇನೋ ಕುತೂಹಲ ಕಾಣಿಸುತ್ತಿತ್ತು ಬಾಯಿಗೊಂದು ಬೀಡಿ ಕಚ್ಕೊಂಡು ನೋಡು ಮರಿ ನಾನು ಕಣ್ಣಾರೆ ದೆವ್ವವನ್ನು ಕಂಡಿದ್ದೇನೆ. ಅದು ಬೇರೆ ಯಾರೂ ಅಲ್ಲ. ನಮ್ಮೂರಿನ ಕೊನೆ ಮನೆ ಕೆಂಪಣ್ಣನ ಮಗ ನರಸಿಂಹನ ದೆವ್ವ..ವರ್ಷದ ಹಿಂದೆ ಮನೆಯಲ್ಲಿ ಕಿತ್ತಾಡಿಕೊಂಡು ಕಾಡೊಳಗಿನ ಹುಣಸೆ ಮರಕ್ಕೆ ನೇಣು ಹಾಕಿಕೊಂಡಿದ್ದ. ಅವನ ಆತ್ಮ ಈಗ್ಲೂ ಕತ್ತಲ ರಾತ್ರಿಯಲ್ಲಿ ಸಂಚರಿಸುತ್ತೆ.. ಅವನು ದೆವ್ವ ಆಗಿದ್ದಾನೆ ಕಣಪ್ಪ..ಅದೊಂದು ದಿನ ನಾನು ಕಾಡಿಗೆ ಮಾಮೂಲಿಯಂತೆ ಕಟ್ಗೆ ಕಡಿಯೋಕೆ ಹೋಗಿದ್ದೆ. ಮಳೆ ಅಂದ್ರೆ ಮಳೆ..ಮನೆಗೆ ವಾಪಸ್ ಬರೋಣ ಅನ್ನುವಷ್ಟರಲ್ಲಿ ಕತ್ತಲಾಯ್ತು..ಮನೆಗೂ ಕಾಡ್ಗೆ ಮೂರು ಮೈಲಿ ದೂರ..ಅವತ್ತು ಅಮಾವಾಸ್ಯೆ ಬೇರೆ ಆಗಲೇ ಕತ್ತಲು ಕವಿದಿತ್ತು..ಮಳೆ ನಿಂತ ಮೇಲೆ ಮನೆ ಕಡೆಗೆ ಹೊರಟೆ…ನನಗೋ ಮೊದ್ಲೇ ಮಂಡು ಧೈರ್ಯ.. ಕತ್ತಲಾದರೆ ಏನಂತೆ.. ಊರ ಕಡೆಗೆ ಹೆಜ್ಜೆ ಹಾಕಿದೆ. ಕಟ್ಟಿಗೆ ಬೇರೆ ಮಳೆಯಲ್ಲಿ ನೆನೆದು ಮಣ ಭಾರ ಆಗಿದ್ವು. ಕಟ್ಟಿಗೆಯನ್ನು ಅಲ್ಲೇ ಬಿಸಾಡಿ ಊರ್ ಕಡೆ ಹೊರಟೆ…ಒಂದೂವರೆ ಮೈಲಿ ದಾಟಿ ಬಂದಿರಬೇಕು ಇದ್ದಕ್ಕಿದ್ದಂತೆ ನಂಜುಂಡಪ್ಪ ನಂಜುಂಡಪ್ಪ ಅಂತ ಯಾರೋ ಕರೆದಂಗೆ ಆಯ್ತು. ಹಿಂದೆ ತಿರುಗಿ ನೋಡ್ತೀನಿ ಯಾರೂ ಇಲ್ಲ..ಮತ್ತೆ ಸ್ವಲ್ಪ ದೂರ ಮುಂದೆ ಬಂದೆ..ನಂಜುಂಡ ನಂಜುಂಡ ಅಂತ ಏಕವಚನದಲ್ಲಿ ಕೂಗಿದ್ರು…ಯಾರೋ ನಮ್ಮೂರಿನ ಹುಡುಗರು ಇರಬೇಕು ಆಟ ಆಡಿಸೋಕ್ಕಿಂಗ್ ಮಾಡ್ತಾವ್ರೆ ಅಂತ ಮತ್ತೆ ಗದರದೆ…ಯಾರೂ ಇಲ್ಲ ಹಿಂದೆ ತಿರುಗಿ ನೋಡಿದ್ರೆ ಒಬ್ಬರೂ ಕಾಣುತ್ತಿಲ್ಲ…

ಧ್ವನಿ ಮಾತ್ರ ಕೇಳಿಸ್ತು ನಂಜುಂಡಪ್ಪ ನಾನು ಕೊನೆಮನೆ ಕೆಂಪಿನ ಮಗ ನರಸಿಂಹ ಅಂತೂ ಆ ಧ್ವನಿ..ನೇಣು ಹಾಕ್ಕೊಂಡು ಸತ್ತು ಹೋದ ನರಸಿಂಹ ನೆನಪಾದ ..ಸ್ವಲ್ಪ ಧೈರ್ಯ ಮಾಡ್ಕೊಂಡು ಎಲ್ಲಿದ್ದೀಯಾ ಬಾರ್ಲಾ ಮುಂದ್ಕೆ ಅಂದೆ..ಮತ್ತೆ.. ನಿನ್ನ ಮುಂದೇನೆ ಇದ್ದೀನಿ ಕಣಜ್ಜ ನಾನು..ಕಾಣಲ್ಲ ಅಷ್ಟೆ ಒಂದು ಬೀಡಿ ಕೊಡು ಒಂದು..ಬೀಡಿ ಕೊಟ್ಟೆ..ಕಡ್ಡಿನೂ ಹಚ್ದೆ.. ಅವನು ಮಾತ್ರ ಕಾಣ್ಲಿಲ್ಲ ಬೀಡಿ ಹೊತ್ತುಕೊಂಡು ಉರಿತ್ತಿತ್ತು.. ಹೊಗೇನೂ ಬರುತ್ತಿತ್ತು ಕಣಪ್ಪ..ಅಷ್ಟಕ್ಕೆ ಅಜ್ಜ ಬುರುಡೆ ಬಿಡುತ್ತಾನೆ ಎನ್ನುವುದು ಗೊತ್ತಾಯಿತು.. ಸಾಕು ನಿಲ್ಸ್ ಅಜ್ಜ ಅಂದೆ…ಹೂಂ ನಿಜ ಕಣಪ್ಪಾ ನರಸಿಂಹ ದೆವ್ವಾ ಆಗಿದ್ದಾನೆ ಅಂತು ಅಜ್ಜ…

ಸ್ನೇಹಿತರೇ ಇಂಥ ಕಥೆಯನ್ನು ನಾವು ನೀವು ಕೇಳಿಯೇ ಇರ್ತೀವಿ… ಈ ಕಥೆಗಳೇ ಮುಂದೆ ರೆಕ್ಕೆ ಪುಕ್ಕ ಕಟ್ಕೊಂಡು ದೊಡ್ಡವಾಗುತ್ತವೆ…ದೆವ್ವ ಇದೆ ಅಂತ ನಂಬುವಂತೆ ಮಾಡುತ್ತವೆ. ರಾತ್ರಿ ಹೊತ್ತು ನಾವು ಎಲ್ಲಾದರೂ ಒಂಟಿಯಾಗಿ ಹೋಗುವಾಗ ಇಂಥ ಕಥೆ ನೆನಪಿಗೆ ಬಂದ್ರೆ ಏನು ಕಂಡ್ರು ಅದು ದೆವ್ವಗಳಂತೆ ಕಾಣುತ್ತವೆ.

ಇದರ ಬೆನ್ನಲ್ಲೇ ಕಾಯಿಲೆ ಏನಾದ್ರೂ ಬಂದ್ರೆ ಮುಗಿದೇ ಹೋಯಿತು…ದೆವ್ವ ಮೆಟ್ಟಿಕೊಂಡಿದೆ ಅನ್ನೋ ತೀರ್ಮಾನಕ್ಕೆ ಬಂದು ಬಿಡ್ತಿವಿ..ಗುಡಿ ಗೋಪುರ ಸುತ್ತೋ ಕೆಲಸ ಶುರುವಾಗುತ್ತೆ ..ಕಾಯಿಲೆ ಉಲ್ಬಣವಾದರೆ ಅದಕ್ಕೆ ಮಾಟ ಮಂತ್ರ ಎನ್ನಲಾಗುತ್ತದೆ. ಹೀಗೆ ಭಯದಲ್ಲಿ ಬಂದವರನ್ನು ಸುಳ್ಯಕ್ಕೆ ಅಂತಲೇ ಕಾಯುವ ಕಪಟ ಮಾಂತ್ರಿಕ ಮತ್ತಷ್ಟು ಹೆದರುವಂತೆ ಮಾಟದ ಕತೆ ಹೆಣೆಯುತ್ತಾನೆ. ಈ ಮಾಂತ್ರಿಕನನ್ನೇ ನಮ್ಮ ಮೂಢ ಜನ ವೈದ್ಯರು ಎಂದು ಭಾವಿಸುತ್ತಾರೆ…ಆ ಬಗ್ಗೆ ಮುಂದಿನ ಲೇಖನದಲ್ಲಿ ಬರೀತೀನಿ…

(ಮುಂದಿನ ಭಾಗದಲ್ಲಿ : ಮಾಂತ್ರಿಕನ ಮನೆ ಹೊಕ್ಕ ನನ್ನನ್ನು ಸ್ವಾಗತಿಸಿತ್ತು ಮಾನವನ ತಲೆ ಬುರುಡೆ)
  • ಕೆ.ಆರ್.ಬಾಬು

Leave A Reply

Your email address will not be published.