ಸಿಗಂಧೂರು ಚೌಡೇಶ್ವರಿ ಸನ್ನಿಧಿಯಲ್ಲಿ ಪಟ್ಟಕ್ಕಾಗಿ ಕಿತ್ತಾಟ : ಅಷ್ಟಕ್ಕೂ ವಿವಾದ ಹುಟ್ಟಿಕೊಂಡಿದ್ದು ಹೇಗೆ ಗೊತ್ತಾ ?

ಶಿವಮೊಗ್ಗ : ಭಕ್ತರ ಇಷ್ಟಾರ್ಥಗಳನ್ನು ಸಿದ್ದಿಸೋ ಮೂಲಕ ರಾಜ್ಯದ ಪ್ರಮುಖ ಪುಣ್ಯ ಕ್ಷೇತ್ರಗಳಲ್ಲೊಂದಾಗಿದೆ ಸಿಗಂಧೂರು ಚೌಡೇಶ್ವರಿ ದೇವಸ್ಥಾನ. ಆದ್ರೀಗ ಚೌಡೇಶ್ವರಿಯ ದೇಗುಲದಲ್ಲಿ ಗದ್ದುಗೆಗಾಗಿ ಗುದ್ದಾಟ ಶುರುವಾಗಿದ್ದು, ಆಂತರಿಕ ಕಚ್ಚಾಟ ಬೀದಿಗೆ ಬಂದಿದೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಸಿಗಂಧೂರು ಚೌಡೇಶ್ವರಿ ಕ್ಷೇತ್ರವೀಗ ವಿವಾದ ಕೇಂದ್ರವಾಗಿ ಮಾರ್ಪಟ್ಟಿದೆ. ಕಳೆದ ಹಲವು ವರ್ಷಗಳಿಂದಲೂ ಅರ್ಚಕ ಶೇಷಗಿರಿ ಭಟ್ ಹಾಗೂ ದೇಗುಲದ ಧರ್ಮದರ್ಶಿ ರಾಮಪ್ಪ ಅವರ ನಡುವೆ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಇದೀಗ ಬಯಲಾಗಿದೆ. ದಕ್ಷಿಣೆ, ಹುಂಡಿ ಹಣ, ಹಣಕಾಸಿನ ವ್ಯವಹಾರದ ಸಲುವಾಗಿ ಹುಟ್ಟಿಕೊಂಡಿದ್ದ ವಿವಾದ ಇದೀಗ ಗದ್ದುಗೆಯ ವರೆಗೂ ಬಂದು ನಿಂತಿದೆ.

ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಭಕ್ತರಿಗೆ ದರ್ಶನದ ವ್ಯವಸ್ಥೆ ಸ್ಥಗಿತವಾಗಿತ್ತು. ಆದರೆ ಲಾಕ್ ಡೌನ್ ತೆರವಾಗುತ್ತಿದ್ದಂತೆಯೇ ಭಕ್ತರಿಗೆ ದೇವರ ದರ್ಶನ, ಭೋಜನ ವ್ಯವಸ್ಥೆಯನ್ನೂ ಕಲ್ಪಿಸಲಾಗಿತ್ತು. ಈ ನಡುವಲ್ಲೇ ಕಾಣಿಕೆಯ ಹುಂಡಿಯ ಹಣ ಹಾಗೂ ಹಣಕಾಸಿನ ವ್ಯವಹಾರವನ್ನು ತನಗೆ ಬಿಟ್ಟುಕೊಡಬೇಕು ಅಂತಾ ಕ್ಷೇತ್ರದ ಅರ್ಚಕ ಶೇಷಗಿರಿ ಭಟ್ ಒತ್ತಡ ಹೇರುತ್ತಿದ್ದಾರೆ ಅಂತಾ ಧರ್ಮದರ್ಶಿ ರಾಮಪ್ಪ ಆರೋಪಿಸುತ್ತಿದ್ದಾರೆ.

ಆದರೆ ಚೌಡೇಶ್ವರಿ ದೇವಿ ಸಣ್ಣ ಚಪ್ಪರದಲ್ಲಿದ್ದಾಗಲೂ ಶೇಷಗಿರಿ ಭಟ್ ಅದನ್ನು ಪೂಜಿಸಿಕೊಂಡು ಬಂದಿದ್ದಾರೆ. ಮಾತ್ರವಲ್ಲ ಇದೀಗ ದೊಡ್ಡ ಚಪ್ಪರದಲ್ಲಿದ್ದಾಗಲೂ ಅದೇ ಭಕ್ತಿಯಿಂದಲೇ ಪೂಜಿಸುತ್ತಿದ್ದಾರೆ. ಹಲವು ವರ್ಷಗಳಿಂದಲೂ ದೇವಿಯ ಜೊತೆಗೆ ಇದ್ದು ಪೂಜೆಯನ್ನು ಸಲ್ಲಿಸಿದ್ದಾರೆ. ಕಾಣಿಕೆ ಡಬ್ಬ ಇಲ್ಲದಿದ್ದಾಗಲೂ ಅವರು ಭಕ್ತಿಯಿಂದಲೇ ಪೂಜೆ ಮಾಡಿಕೊಂಡು ಬಂದಿದ್ದಾರೆ. ಅವರು ಕಾಣಿಕೆ ಡಬ್ಬದ ಜೊತೆಗೆ ಬಂದವರಲ್ಲ. ಶೇಷಗಿರಿ ಭಟ್ ಅವರ ಕುರಿತು ನಮಗೂ ಗೊತ್ತಿದೆ, ಅಲ್ಲದೇ ಚೌಡೇಶ್ವರಿ ತಾಯಿಗೂ ಗೊತ್ತಿದೆ. ಶೇಷಗಿರಿ ಭಟ್ ಆ ರೀತಿ ಕೇಳುವವರಲ್ಲ ಎಂಬುದು ಸ್ಥಳೀಯರ ವಾದ.

ಕಳೆದೊಂದು ದಶಕಗಳಿಂದಲೂ ಆಡಳಿತ ಮಂಡಳಿಯ ಧರ್ಮದರ್ಶಿ ಧರ್ಮಪ್ಪ ಹಾಗೂ ಪ್ರಧಾನ ಅರ್ಚಕ ಶೇಷಗಿರಿ ಭಟ್ ಸಾಕಷ್ಟು ಅನ್ಯೋನ್ಯತೆಯಿಂದಲೇ ಇದ್ದರು. ಇದೇ ಕಾರಣದಿಂದಲೇ ಸಿಗಂಧೂರ ಚೌಡೇಶ್ವರಿ ದೇವಿಯ ದೇಗಲದಲ್ಲಿ ಹಲವು ಅಭಿವೃದ್ದಿ ಕಾರ್ಯಗಳ ನ್ನು ನಡೆಸಲಾಗಿತ್ತು. ಧರ್ಮಪ್ಪ ಅವರ ಮನೆ ದೇವರಾಗಿದ್ದ ಚೌಡೇಶ್ವರಿಯ ಕ್ಷೇತ್ರಕ್ಕೆ ಇಂದು ರಾಜ್ಯವಲ್ಲದೇ ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಿದ್ದಾರೆ. ಇಷ್ಟೊಂದು ಪ್ರಖ್ಯಾತಿಯನ್ನು ಪಡೆದಿರುವುದರ ಹಿಂದೆ ಇಬ್ಬರ ಶ್ರಮವೂ ಸಾಕಷ್ಟಿದೆ. ಆದರೆ ಕಳೆದೆರಡು ವರ್ಷ ಗಳಿಂದಲೂ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ಆಗ ಹೊತ್ತಿಕೊಂಡ ಸಣ್ಣ ಮುನಿಸು ಇಂದು ಇಷ್ಟರ ಮಟ್ಟಿಗೆ ತಂದು ನಿಲ್ಲಿಸಿದೆ.

ವರ್ಷಂಪ್ರತಿ ಕೋಟ್ಯಾಂತರ ರೂಪಾಯಿ ಆದಾಯ ಬರುತ್ತಿದ್ದರೂ ಕೂಡ ಸಿಗಂಧೂರು ಚೌಡೇಶ್ವರಿ ದೇವಿ ಮನೆ ದೇವರು ಆನ್ನುವ ಕಾರಣಕ್ಕೆ ಸರಕಾರ ಕೂಡ ತನ್ನ ವಶಕ್ಕೆ ಪಡೆದಿರಲಿಲ್ಲ. ಅಲ್ಲದೇ ದೇವಸ್ಥಾನದಲ್ಲಿ ಯಾವುದೇ ಸೇವೆಗಳನ್ನು ಭಕ್ತರು ನೀಡಿದ್ರೂ ಕೂಡ ಯಾವುದಕ್ಕೂ ಲೆಕ್ಕಾಚಾರವಿರಲಿಲ್ಲ. ಇದೇ ಕಾರಣಕ್ಕೆ ದೇವಸ್ಥಾನದ ವ್ಯವಹಾರಗಳು ಸರಿಯಾಗಿ ನಡೆಯಬೇಕು, ಪ್ರತಿಯೊಂದಕ್ಕೂ  ಲೆಕ್ಕವಿರಬೇಕು ಅನ್ನೋ ಕಾರಣಕ್ಕೆ ಶೇಷಗಿರಿ ಭಟ್ಟರು ಸೇವಾ ಕೌಂಟರ್ ಸ್ಥಾಪಿಸಿ, ಕಂಪ್ಯುಟರ್ ಗಳನ್ನು ತಂದಿಟ್ಟದ್ದರು.

ಆದರೆ ಆಡಳಿತ ಮಂಡಳಿ ಇದನ್ನು ವಿರೋಧಿಸಿತ್ತು. ಮಾತ್ರವಲ್ಲ ದೇವಸ್ಥಾನದಲ್ಲಿ ಯಾವುದೇ ಅಭಿವೃದ್ದಿ ಯೋಜನೆಗಳನ್ನು ಆರಂಭಿಸಿದಾಗ ಕೂಡ ಅರ್ಚಕರಿಗೆ ಜೀವ ಬೆದರಿಕೆಯನ್ನು ಒಡ್ಡಲಾಗುತ್ತಿತ್ತು. ಅರ್ಚಕರ ಮನೆಯ ಮೇಲೆಲ್ಲಾ ಕಲ್ಲು ತೂರಲಾಗುತ್ತಿತ್ತು, ಅಲ್ಲದೇ ಮಕ್ಕಳ ವಿಚಾರದಲ್ಲಿಯೂ ಬೆದರಿಕೆಯನ್ನೊಡ್ಡಲಾಗುತ್ತಿತ್ತು. ಹಲವು ಸಮಯಗಳಿಂದಲೂ ಶೇಷಗಿರಿ ಭಟ್ ಅವರು ದೇವಿಯ ಆರಾಧನೆಯನ್ನು ಮಾಡಿಕೊಂಡು ಬಂದಿದ್ದಾರೆ. ಇದೀಗ ಅವರನ್ನು ದೇವಿಯಿಂದ ದೂರ ಮಾಡಲು ಸಂಚು ನಡೆಯುತ್ತಿದೆ ಅನ್ನೋದು ಸ್ಥಳೀಯರ ದೂರು.

ಇಷ್ಟು ವರ್ಷ ತೆರೆ ಮರೆಯಲ್ಲಿ ನಡೆಯುತ್ತಿದ್ದ ಗುದ್ದಾಟ ಇದೀಗ ನವರಾತ್ರಿಯ ವೇಳೆಯಲ್ಲಿ ನಡೆಯುತ್ತಿದ್ದ ಚಂಡಿಕಾಯಾಗದ ವಿಚಾರವಾಗಿ ಬಹಿರಂಗವಾಗಿದೆ. ಚಂಡಿಯಾಗಕ್ಕೆ ಅವಕಾಶ ನೀಡದ ಕಾರಣಕ್ಕೆ ಅರ್ಚಕ ಶೇಷಗಿರಿ ಭಟ್ ತನ್ನ ಕುಟುಂಬಸ್ಥರೊಂದಿಗೆ ದೇವಸ್ಥಾನದಲ್ಲಿ ಮೌನ ಪ್ರತಿಭಟನೆಯನ್ನೂ ನಡೆಸಿದ್ದರು. ಮೌನ ಪ್ರತಿಭಟನೆಯ ವೇಳೆಯಲ್ಲಿ ಶೇಷಗಿರಿ ಭಟ್ ಹಾಗೂ ಅವರ ಸಹೋದರ ದೇವಸ್ಥಾನದ ಸಿಬ್ಬಂದಿ ಹಾಗೂ ಭಕ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಪೊಲೀಸರ ಸಮ್ಮುಖದಲ್ಲಿಯೇ ಕಿಟಕಿಯ ಗಾಜುಗಳನ್ನು ಒಡೆಯಲಾಗಿದೆ ಅನ್ನೋ ಆರೋಪವೂ ಕೇಳಿಬಂದಿದೆ.

ರಾಮಪ್ಪ ಹಾಗೂ ಶೇಷಗಿರಿ ಭಟ್ ಅವರ ವೈಮನಸ್ಸು ಪರಿಹರಿಸುವ ನಿಟ್ಟಿನಲ್ಲಿ ಸ್ಥಳೀಯ ಶಾಸಕ ಹಾಲಪ್ಪ ಸಾಕಷ್ಟು ಬಾರಿ ಪ್ರಯತ್ನಿಸಿ ದ್ದರೂ ಫಲಕೊಟ್ಟಿಲ್ಲ. ಅಷ್ಟೇ ಯಾಕೆ ಸಾಗರ ಉಪವಿಭಾಗಾಧಿಕಾರಿಗಳ ಸಮ್ಮುಖದಲ್ಲಿಯೇ ರಾಜಿಸಂಧಾನ ನಡೆದಿದ್ದರೂ ಕೂಡ ಆಂತರಿಕ ಕಚ್ಚಾಟ ಮತ್ತೊಮ್ಮೆ ಸ್ಪೋಟಗೊಂಡಿದೆ. ಈ ನಡುವಲ್ಲೇ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ದೇವಸ್ಥಾನವನ್ನು ಸರಕಾರ ತನ್ನ ವಶಕ್ಕೆ ಪಡೆಯುವಂತೆ ಆಗ್ರಹಿಸಿದ್ದಾರೆ.

ಒಟ್ಟಿನಲ್ಲಿ ಚೌಡೇಶ್ವರಿಯ ಸನ್ನಿಧಿಯಲ್ಲಿ ಹುಟ್ಟಿಕೊಂಡಿರುವ ಪಟ್ಟಕ್ಕಾಗಿ ಕಿತ್ತಾಟ ಸದ್ಯಕ್ಕೆ ಮುಗಿಯೋ ಲಕ್ಷಣಗಳು ಕಾಣಿಸುತ್ತಿಲ್ಲ. ದೇವಸ್ಥಾನ ದಲ್ಲಿ ನಡೆಯುತ್ತಿರುವ ವಿವಾದಗಳಿಂದಾಗಿ ಭಕ್ತರಿಗೂ ಇರಿಸು ಮುರಿಸು ಉಂಟಾಗಿದೆ. ಆದರೆ ದೇವಸ್ಥಾನದಲ್ಲಿನ ಗದ್ದುಗೆಯ ಗುದ್ದಾಟಕ್ಕೆ ಆ ಚೌಡೇಶ್ವರಿಯೇ ಪರಿಹಾರ ಸೂಚಿಸಬೇಕಾಗಿದೆ.

Comments are closed.