ಯುಗ ಯುಗಗಳಿಂದಲೂ ಆಚರಿಸಿಕೊಂಡು ಬರುತ್ತಿರುವ ಯುಗಾದಿಯ ಹಿಂದಿದೆ ರೋಚಕ ಕಥೆ

(Story behind Ugadi celebration) ತನ್ನ ಎಲೆಗಳನ್ನು ಉದುರಿಸಿಕೊಂಡು ಮತ್ತೆ ಚಿಗುರೊಡೆಯುವ ಪ್ರಕೃತಿಗೆ ಮತ್ತೆ ಹೊಸ ರೂಪ, ಹೊಸ ಉತ್ಸಾಹ ತರುವ ದಿನವಿದಾದರೆ, ಭಾರತೀಯರ ಪಾಲಿಗೆ ಇದು ಹೊಸ ಸಂವತ್ಸರದ ಮೊದಲ ದಿನವಾಗಿದೆ. ‘ಯುಗಾದಿ’ ಬಂದಿತೆಂದರೆ ಎಲ್ಲಡೆಯಲ್ಲಿ ಸಂತೋಷ, ಸಂಭ್ರಮ ತುಂಬಿ ತುಳುಕುತ್ತಿರುತ್ತದೆ. ಚೈತ್ರಮಾಸದಿಂದ ವಸಂತ ಋತು ಶುರುವಾಗುತ್ತದೆ. ವನಗಳೆಲ್ಲ ಚಿಗುರಿ ಹೂ ಬಿಟ್ಟು ಯುಗಾದಿಯ ಹರ್ಷವನ್ನು ಬೀರುವವು.

ಪೂರ್ಣ ಪ್ರಮಾಣದ ಬಿಸಿಲಿನಲ್ಲಿ ಹಸಿರು ಹಸಿರಾಗಿ ಕಂಗೊಳಿಸುತ್ತಾ ಫಲಪುಷ್ಪಗಳನ್ನು ಜೀವಸಂಕುಲಕ್ಕೆ ನೀಡುವ ವಸಂತ ಕಾಲವಿದು. ವೇದಗಳ ಪ್ರಕಾರ ಯುಗಾದಿ ಆಚರಣೆಯ ಹಿಂದೆ ಮಹತ್ತರವಾದ ಸಾಕ್ಷಿಗಳನ್ನು ನೀಡುವ ರೋಚಕ ಕಥೆಗಳಿವೆ. ಬ್ರಹ್ಮ ದೇವನು ಯುಗವನ್ನು ಸೃಷ್ಟಿಸಿದ ದಿನವಿದು ಎಂದು ಪುರಾಣಗಳಲ್ಲಿ ಹೇಳಲಾಗುತ್ತದೆ. ಮೊದಲು ಬ್ರಹ್ಮದೇವನು ನಕ್ಷತ್ರ, ಮಾಸ, ಋತು, ವರ್ಷಾಧಿಪತಿಯನ್ನ ಸೃಷ್ಟಿಸಿ ಕಾಲಗಣೆನಯನ್ನು ಆರಂಭಿಸಿ ನಂತರ ಜೀವರಾಶಿ , ಜಲರಾಶಿ , ಸಸ್ಯರಾಶಿ ಬೆಟ್ಟ ಗುಡ್ಡಗಳನ್ನ ಸೃಷ್ಟಿಸಲು ಆರಂಭಿಸಿದ ಎಂದು ಪುರಾಣಗಳಲ್ಲಿ ಹೇಳಲಾಗುತ್ತದೆ.

ರಾಮಾಯಣದಲ್ಲಿ ಶ್ರೀ ರಾಮಚಂದ್ರ ಅಯೋಧ್ಯೆಯಲ್ಲಿ ರಾಮ ರಾಜ್ಯ ಸ್ಥಾಪಿಸಿದ ದಿನವು ಯುಗಾದಿಯ ದಿನದಂದೇ ಎಂದು ಪುರಾಣದಲ್ಲಿ ಹೇಳಲಾಗುತ್ತದೆ. ಲಂಕಾಧಿಪತಿ ರಾವಣನನ್ನು ಸಂಹರಿಸಿ ಅಯೋಧ್ಯೆಗೆ ಮರಳಿ, ನಂತರ ಅಯೋಧ್ಯೆಯಲ್ಲಿ ತನ್ನ ರಾಜ್ಯಭಾರವನ್ನು ಆರಂಭಿಸುತ್ತಾನೆ. ಇದೇ ದಿನ ದ್ವಾಪರ ಯುಗವು ಕೊನೆಯಾಗಿ ಕಲಿಯುಗ ಪ್ರಾರಂಭವಾಯಿತು ಎಂದು ವೇದವ್ಯಾಸರು ತಮ್ಮ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ. ಬ್ರಹ್ಮನಿಂದ ನಾಲ್ಕು ವೇದಗಳನ್ನು ಕದ್ದು, ಸಮುದ್ರದೊಳಗೆ ಅವಿತು ಕುಳಿತ ರಕ್ಕಸ ಸೋಮಕಾಸುರನನ್ನು ಮತ್ಸ್ಯಾವತಾರ ತಾಳುವ ಮೂಲಕ ಸಂಹರಿಸಿ ವೇದಗಳನ್ನು ಹಿಂಪಡೆಯುತ್ತಾನೆ. ಮಹಾವಿಷ್ಣುವಿನ ದಶಾವತಾರಗಳಲ್ಲಿ ಮೊದಲನೇ ಅವತಾರವಾದ ಮತ್ಸ್ಯಾವತಾರವೆತ್ತಿದ ದಿನವು ಯುಗಾದಿಯ ದಿನವೇ ಎಂದು ಹೇಳಲಾಗುತ್ತದೆ.

ಯುಗಾದಿ ಹಬ್ಬ ಅಂದ್ರೆ ಹೊಸತನದ ಹುರುಪು. ಎಣ್ಣೆ ಸ್ನಾನ , ಹೊಸ ಉಡುಗೆ ತೊಡುವ ಸಂಭ್ರಮ, ಮನೆ ಮನೆಗಳಲ್ಲಿ ಹಸಿರು ತೋರಣಗಳ ಅಲಂಕಾರ ಹೀಗೆ ಹೊಸತನದ ಅನುಭವವನ್ನು ನೀಡುವ ಹಬ್ಬವಿದಾಗಿದೆ. ಧರ್ಮಸಿಂಧು ಗ್ರಂಥಗಳಲ್ಲಿ ಯುಗಾದಿ ಹಬ್ಬವನ್ನು ಆಚರಿಸುವ ಐದು ವಿಧಾನಗಳನ್ನು ಸಹ ನೀಡಲಾಗಿದೆ. ಮೊದಲನೆಯದಾಗಿ ಬೆಳಿಗ್ಗೆ ಎದ್ದ ಕೂಡಲೇ ತುಪ್ಪದ ಪಾತ್ರೆಯಲ್ಲಿ ಮುಖವನ್ನು ನೋಡಿಕೊಳ್ಳಬೇಕು. ಇದರಿಂದ ದೃಷ್ಟಿ ನಿವಾರಣೆಯಾಗುತ್ತದೆ ಹಾಗೂ ದೋಷಗಳು ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ. ಎರಡನೆಯಾದಾಗಿ ತೈಲ ಅಭ್ಯಂಜನ. ಹರಳೆಣ್ಣೆ ದೇಹವನ್ನು ತಂಪಾಗಿಸುತ್ತದೆ. ವರ್ಷದ ಶಾಖದ ದಿನಗಳನ್ನು ಕಳೆಯುವುದಕ್ಕೆ ದೇಹವನ್ನು ಸಜ್ಜುಗೊಳಿಸುವ ಒಂದು ಪ್ರಕ್ರಿಯೆ ಇದಾಗಿದೆ.

ಮೂರನೆಯದಾಗಿ ಮನೆದೇವರು, ಇಷ್ಟದೇವರು ಹಾಗೂ ತ್ರಿಮೂರ್ತಿಗಳನ್ನು ಪೂಜಿಸುವಂತದ್ದು. ಯುಗಾದಿ ಸಮಯದಲ್ಲಿ ತ್ರಿಮೂರ್ತಿಗಳನ್ನು ಭಕ್ತಿಯಿಂದ ಪೂಜಿಸಿದರೆ ದೇವಕೃಪೆ ನಮ್ಮನ್ನು ಕಾಪಾಡುತ್ತದೆಂಬ ನಂಬಿಕೆಯಿದೆ. ನಾಲ್ಕನೆಯದಾಗಿ ಪಂಚಾಂಗ ಶ್ರವಣ ಮಾಡುವುದು. ಇದರಿಂದ ಅಯುಷ್ಯ ವೃದ್ದಿ, ಪಾಪ ಪರಿಹಾರ, ರೋಗ ನಿವಾರಣೆ,ಶ್ರೇಯಸ್ಸು ಲಭಿಸುತ್ತದೆ ಎನ್ನಲಾಗುತ್ತದೆ. ಇನ್ನು ಕೊನೆಯದಾಗಿ ಬೇವು ಬೆಲ್ಲ ಸೇವನೆ. ಜೀವನದಲ್ಲಿ ಎದುರಾಗುವ ಸುಖ ದುಃಖವನ್ನು , ನೋವು ನಲಿವನ್ನು ಸಮನಾಗಿ ಸ್ವೀಕರಿಸಬೇಕು ಎನ್ನುವ ಕಾರಣಕ್ಕೆ ಬೇವು ಬೆಲ್ಲವನ್ನು ನೀಡಲಾಗುತ್ತದೆ. ಇದರ ಜೊತೆಗೆ ಬೇವು ಬೆಲ್ಲಕ್ಕೆ ವಿಶೇಷವಾದ ಔಷಧಿ ಗುಣಗಳು ಇರುವುದರಿಂದ ಬೇವು ಬೆಲ್ಲ ಸ್ವೀಕರಿಸಿದರೆ ಶರೀರ ವಜ್ರಕಾಯವಾಗುತ್ತೆಂಬ ನಂಬಿಕೆ ಕೂಡ ವೇದಗಳಲ್ಲು ಉಲ್ಲೇಖವಾಗಿದೆ.

ಇದನ್ನೂ ಓದಿ : Ugadi festival 2023: ಚೈತ್ರಮಾಸದಲ್ಲಿ‌‌ ಚಿಗುರೆಲೆ ಚಿಗುರಿ ಹೊಸ ಹರ್ಷವನ್ನು ತರುವ ಹಬ್ಬ ಯುಗಾದಿ

Story behind Ugadi celebration: There is an exciting story behind Ugadi, which has been celebrated since ages

Comments are closed.