ಮನೆಯಲ್ಲಿ ವಿಪರೀತ ಜಗಳಗಳಾಗುತ್ತಿದೆಯಾ? ಹಾಗಾದ್ರೆ ಈ 3 ಜಾಗಗಳಲ್ಲಿ ಈ ಬದಲಾವಣೆ ಮಾಡಿ

ಮನೆಯಲ್ಲಿ ನೆಮ್ಮದಿ, ಶಾಂತಿ ನೆಲೆಸಲು ಈ ಮೂರು ಜಾಗಗಳಲ್ಲಿನ ವಾಸ್ತು ದೋಷವನ್ನು ದೂರಮಾಡಬೇಕು ಎಂದು ಶಾಸ್ತ್ರ ಹೇಳುತ್ತದೆ. ಅದೇನು? ಇಲ್ಲಿದೆ ಓದಿ

Vastu Tips For Happy Home: ಮನೆಯೆಂಬುದು ದಣಿದು ಬಂದ ಮನಗಳಿಗೆ ನೆಮ್ಮದಿ ನೀಡುವ ಜಾಗ. ಜೊತೆಗೆ ಮರುದಿನದ ಕೆಲಸಗಳಿಗಾಗಿ ದೇಹ, ಮನಸ್ಸುಗಳನ್ನು ಸಜ್ಜುಗೊಳಿಸಿಕೊಳ್ಳಲು ಇರುವ ಜಾಗವೂ ಹೌದು. ಆದರೆ ಮನೆಯ ನೆನಪಾದರೆ ಸಾಕು ಮನಸ್ಥಿತಿ ಹಾಳುಗುವಂತಾದರೆ ಅದಕ್ಕೆ ಅರ್ಥವೇ ಇಲ್ಲ. ಮನೆಯಲ್ಲಿ ಸದಾ ಜಗಳ, ಕಿರಿಕಿರಿ, ವೈಮನಸ್ಸು ಇವೆಲ್ಲ ಇದ್ದರೆ ಆ ಮನೆಯು ನೆಮ್ಮದಿಯ ತಾಣವಾಗುವುದರ ಬದಲಿಗೆ ನರಕವೆನಿಸತೊಡಗುತ್ತದೆ. ಕೆಲವರು ಇದನ್ನು ನಮ್ಮ ಹಣೆಬರಹ ಎಂದು ಕೈಚೆಲ್ಲಿ ಕೂಡುತ್ತಾರೆ. ಆದರೆ ವಾಸ್ತು ಶಾಸ್ತ್ರದಲ್ಲಿ ಗೃಹ ಕಲಹಗಳಿಗೆ ವಾಸ್ತು ದೋಷವೇ ಕಾರಣ ಎಂದು ಹೇಳಲಾಗಿದೆ. ಅದಕ್ಕೆ ಪರಿಹಾರಗಳನ್ನು ಸಹ ಸೂಚಿಸಲಾಗಿದೆ. ವಾಸ್ತು ಶಾಸ್ತ್ರ ಜೀವನದಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ. ಮನೆಯಲ್ಲಿ ಸಕಾರಾತ್ಮಕ ಶಕ್ತಿ ಇರುವಂತೆ ಮಾಡಿ, ಜಗಳ, ಕುಟುಂಬದಲ್ಲಿನ ವಿರಸಗಳನ್ನು ದೂರಮಾಡುತ್ತದೆ. ವಾಸ್ತು ದೋಷ ನಿವಾರಣೆಗೆ ಕೆಲವು ಉಪಾಯಗಳನ್ನು ಶಾಸ್ತ್ರದಲ್ಲಿ ಹೇಳಲಾಗಿದೆ. ಮನೆಯಲ್ಲಿ ನೆಮ್ಮದಿ, ಶಾಂತಿ ನೆಲೆಸಲು ಈ ಮೂರು ಜಾಗಗಳಲ್ಲಿನ ವಾಸ್ತು ದೋಷವನ್ನು ದೂರಮಾಡಬೇಕು ಎಂದು ಶಾಸ್ತ್ರ ಹೇಳುತ್ತದೆ. ಅದೇನು? ಇಲ್ಲಿದೆ ಓದಿ.

ಮನೆಯಲ್ಲಿ ಅತಿ ಹೆಚ್ಚು ಬಳಕೆಯಾಗುವ ಮೂರು ಜಾಗಗಳೆಂದರೆ ಅಡುಗೆ ಮನೆ, ಡೈನಿಂಗ್ ಹಾಲ್‌ ಮತ್ತು ಮಲಗುವ ಕೋಣೆ. ಈ ಮೂರು ಜಾಗಗಳನ್ನು ವಾಸ್ತು ಪ್ರಕಾರ ಅಳವಡಿಸಿದರೆ ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ.

ಅಡುಗೆ ಮನೆ

ಅಡುಗೆ ಮನೆ ಮನೆಯ ಅತಿ ಮುಖ್ಯ ಭಾಗ. ಅಲ್ಲಿ ಅಡುಗೆ ಬೇಯಿಸುವುದರ ಜೊತೆಗೆ ಮನೆಯ ಆಗುಹೋಗುಗಳನ್ನು ಚರ್ಚಿಸಲಾಗುತ್ತದೆ. ಆದ್ದರಿಂದ ಅದನ್ನು ವಾಸ್ತು ಪ್ರಕಾರ ಜೋಡಿಸಬೇಕು. ವಾಸ್ತು ಪ್ರಕಾರ ಅಡುಗೆ ಮನೆ ಮನೆಯ ಆಗ್ನೇಯ ದಿಕ್ಕಿಗೆ ಇರಬೇಕು. ಬೆಂಕಿಗೆ ಸಂಬಂಧಿಸಿ ಕೆಲಸವನ್ನು ಆಗ್ನೇಯ ದಿಕ್ಕಿನಲ್ಲಿ ಮಾಡಬೇಕು ಎನ್ನುತ್ತದೆ ವಾಸ್ತು. ಇದರಿಂದ ಮನೆಯಲ್ಲಿ ಘರ್ಷಣೆಗಳು ಕಡಿಮೆಯಾಗಿ, ಸಕಾರಾತ್ಮಕ ಶಕ್ತಿ ನೆಲೆಸುತ್ತದೆ.

ಊಟದ ಹಾಲ್‌

ತಯಾರಿಸಿದ ಅಡುಗೆಯನ್ನು ಸೇವಿಸಲು ಒಂದು ಕ್ರಮವಿದ್ದಂತೆ, ಅದನ್ನು ಯಾವ ಜಾಗದಲ್ಲಿ ಸೇವಿಸಬೇಕು ಎನ್ನುವುದು ಬಹಳ ಮುಖ್ಯ. ಮನುಷ್ಯರು ಜೀವಂತವಾಗಿರಲು ಆಹಾರ ಅತಿ ಅವಶ್ಯಕ. ಸಾತ್ವಿಕ ರೀತಿಯಲ್ಲಿ ಆಹಾರ ಸೇವಿಸಿದರೆ ಅದು ಸಕಾರಾತ್ಮಕ ಚಿಂತನೆ ಮಾಡುವಂತೆ ಮಾಡುತ್ತದೆ. ಊಟದ ಟೇಬಲ್‌ನ್ನು ತಪ್ಪು ದಿಕ್ಕಿನಲ್ಲಿ ಇಡುವುದರಿಂದ ವಾಸ್ತು ದೋಷವುಂಟಾಗುತ್ತದೆ.ಇದರಿಂದ ಮನೆಯಲ್ಲಿ ಸಂತೋಷ, ಶಾಂತಿ ಇಲ್ಲವಾಗುತ್ತದೆ. ಶಾಸ್ತ್ರದ ಪ್ರಕಾರ ಊಟದ ಟೇಬಲ್‌ನ್ನು ಮನೆಯ ಪೂರ್ವ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇಡಬೇಕು. ಅದರ ಆಕಾರವೂ ಅಷ್ಟೇ ಮುಖ್ಯವಾಗಿದೆ. ಆಯಾತಾಕಾರದ ಟೇಬಲ್‌ ಉತ್ತಮವೆಂದು ವಾಸ್ತು ಹೇಳುತ್ತದೆ. ಮನೆಯ ಎಲ್ಲ ಸದಸ್ಯರು ಒಟ್ಟಿಗೆ ಕುಳಿತು ಊಟ ಮಾಡಿ. ಮನೆಯ ಯಜಮಾನ ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡಿ ಕುಳಿತು ಕೊಳ್ಳಬೇಕು. ಇದು ಮನೆಗೆ ಸಕಾರಾತ್ಮಕ ಶಕ್ತಿ ತರುತ್ತದೆ. ಜನರ ನಡುವಿನ ಸಂಘರ್ಷಗಳು ದೂರವಾಗುತ್ತವೆ.

ಇದನ್ನೂ ಓದಿ: ರಾಮ ನವಮಿ 2026: ದಶರಥ ನಂದನನ ಜನ್ಮದಿನ ಹೀಗೆ ಆಚರಿಸಿ

ಮಲಗುವ ಕೋಣೆ

ದೇಹಕ್ಕೆ ಊಟ ಎಷ್ಟು ಅವಶ್ಯಕವೋ ಅಷ್ಟೇ ವಿಶ್ರಾಂತಿಯೂ ಮುಖ್ಯ. ಹಾಗಾಗಿ ಮಲಗುವ ಕೋಣೆ ವಾಸ್ತು ಪ್ರಕಾರವಿದ್ದರೆ, ಅರ್ಧದಷ್ಟ ಸಮಸ್ಯೆಗಳು ದೂರವಾಗುತ್ತವೆ. ಶಾಸ್ತ್ರದ ಪ್ರಕಾರ ಮಲಗುವ ಕೋಣೆ ನೈಋತ್ಯ ದಿಕ್ಕಿನಲ್ಲಿರಬೇಕು. ಗೋಡೆಯ ಬಣ್ಣ ಕ್ರೀಮ್‌, ಗುಲಾಬಿ, ತಿಳಿ ನೀಲಿ ಅಥವಾ ಹಸಿರುವ ಬಣ್ಣಗಳಾಗಿದ್ದರೆ ಉತ್ತಮ. ಮಲಗುವ ಕೋಣೆಯಲ್ಲಿ ಅಕ್ವೇರಿಯಂನಂತಹ ವಸ್ತುಗಳನ್ನುಇರಿಸಬಾರದು.

ನಿಮ್ಮ ಮನೆಯಲ್ಲೂ ವಾಸ್ತು ದೋಷದಿಂದ ಕಲಹಗಳಾಗುತ್ತಿದ್ದರೆ ಈ ಮೇಲೆ ಹೇಳಿರುವ ಬದಲಾವಣೆಗಳನ್ನು ಮಾಡಿ ನೋಡಿ. ಮನೆಯಲ್ಲಿ ಜಗಳಗಳಿಲ್ಲದೇ ಸಂತೋಷದಿಂದ ಕೂಡಿದ್ದರೆ ಜೀವನ ಸುಂದರವೆನಿಸುತ್ತದೆ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories