ದೇವರ ಮನೆಯಲ್ಲಿ ಎಷ್ಟು ಶಂಖ ಇಟ್ಟುಕೊಳ್ಳಬೇಕು, ಒಂದು ಅಥವಾ ಎರಡು? ಸಂಪತ್ತು ವೃದ್ಧಿಗೆ ಶಂಖವನ್ನು ಈ ದಿಕ್ಕಿನಲ್ಲಿಡಿ
ಜ್ಯೋತಿಷ್ಯ ಶಾಸ್ತ್ರದಲ್ಲಿ ಶಂಖವನ್ನು ಗ್ರಹ ದೋಷಗಳ ಪರಿಹಾರವಾಗಿ ಬಳಸಲಾಗುತ್ತದೆ. ಮನೆಯಲ್ಲಿ ಶಂಖ ಮೊಳಗುವುದರಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ ಎಂಬ ನಂಬಿಕೆಯಿದೆ.

ಹಿಂದೂ ಧರ್ಮದಲ್ಲಿ ದೇವರ ಪೂಜೆ ಮಾಡುವಾಗ ಗಂಟೆ, ಜಾಗಟೆ, ಶಂಖ ಮುಂತಾದವುಗಳನ್ನು ಬಳಸಲಾಗುತ್ತದೆ. ಇವುಗಳಿಂದ ಹೊರಡುವ ನಾದವನ್ನು ಮಂಗಳ ವಾದ್ಯಗಳೆಂದೂ ಕರೆಯುತ್ತಾರೆ. ಸಮುದ್ರ ಮಂಥನದಲ್ಲಿ ಹುಟ್ಟಿದ ಶಂಖಕ್ಕೆ ಹಿಂದೂ ಧರ್ಮದಲ್ಲಿ ವಿಶೇಷ ಸ್ಥಾನವಿದೆ. ಮಹಾವಿಷ್ಣುವಿನ ಕೈಯಲ್ಲಿರುವ ಶಂಖವನ್ನು ಪಾಂಚಜನ್ಯ ಎಂದು ಕರೆಯುತ್ತಾರೆ. ಶಂಖದಿಂದ ಹೊರಡುವ ಓಂ ನಾದವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಇದನ್ನು ಸೃಷ್ಟಿಯ ಮೊದಲ ಶಬ್ದವೆಂದು ನಂಬಲಾಗಿದೆ. ಶುದ್ಧ, ತೇಜಸ್ಸು ಮತ್ತು ಶುಭದ ಸಂಕೇತವಾಗಿರುವ ಶಂಖವನ್ನು ಸಾಮಾನ್ಯವಾಗಿ ಎಲ್ಲರೂ ತಮ್ಮ ಮನೆಗಳಲ್ಲಿ ಇಟ್ಟುಕೊಳ್ಳುತ್ತಾರೆ. ಪೂಜಿಸುತ್ತಾರೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಶಂಖವನ್ನು ಗ್ರಹ ದೋಷಗಳ ಪರಿಹಾರವಾಗಿ ಬಳಸಲಾಗುತ್ತದೆ. ಮನೆಯಲ್ಲಿ ಶಂಖ ಮೊಳಗುವುದರಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ ಎಂಬ ನಂಬಿಕೆಯಿದೆ. ದೇವರ ಮನೆಯಲ್ಲಿ ಶಂಖವನ್ನು ಇಡುವುದರಿಂದ ಗ್ರಹದೋಷಗಳು ದೂರವಾಗುತ್ತವೆ. ಆದರೆ ದೇವರ ಮನೆಯಲ್ಲಿ ಎಷ್ಟು ಶಂಖಗಳನ್ನು ಇಟ್ಟುಕೊಳ್ಳಬೇಕು ಎಂಬುದು ಬಹಳ ಮುಖ್ಯವಾಗಿದೆ. ದೇವರ ಮನೆಯಲ್ಲಿ ಶಂಖ ಇಡಲು ಇರುವ ಪ್ರಮುಖ ನಿಯಮಗಳೇನು ಇಲ್ಲಿದೆ ಓದಿ.
ದೇವರ ಮನೆಯಲ್ಲಿ ಎಷ್ಟು ಶಂಖಗಳನ್ನು ಇಟ್ಟುಕೊಳ್ಳಬೇಕು?
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಎರಡು ಶಂಖಗಳನ್ನು ದೇವರ ಮನೆಯಲ್ಲಿ ಎಂದಿಗೂ ಒಟ್ಟಿಗೆ ಇಡಬಾರದು. ಹಾಗೆ ಇಡುವುದರಿಂದ ಎರಡು ಶಂಖಗಳ ಶಕ್ತಿಗಳು ಘರ್ಷಣೆ ಒಳಗಾಗುತ್ತವೆ. ಇದರಿಂದ ಮನೆಯಲ್ಲಿ ಸಂಘರ್ಷ, ಸಮಸ್ಯೆಗಳು ಉಂಟಾಗುತ್ತವೆ ಎಂದು ಶಾಸ್ತ್ರ ಹೇಳುತ್ತದೆ. ಪೂಜೆಗೆ ಬಳಸುವ ಶಂಖವನ್ನು ದೇವರ ಮುಂದೆ ಸರಿಯಾದ ದಿಕ್ಕಿನಲ್ಲಿಟ್ಟರೆ, ಮಂಗಳ ನಾದವನ್ನು ಹೊರಡಿಸುವ ಶಂಖವನ್ನು ಬೇರೆ ಜಾಗದಲ್ಲಿ ಇಡಿ.
ಶಂಖವನ್ನು ಯಾವ ದಿಕ್ಕಿನಲ್ಲಿಡಬೇಕು?
ಶಾಸ್ತ್ರದ ಪ್ರಕಾರ ಯಾವಾಗಲೂ ದೇವರ ಮನೆಯ ಈಶಾನ್ಯ ಮೂಲೆಯಲ್ಲಿ ಇಡಬೇಕು. ಇದನ್ನು ದೇವರುಗಳ ದಿಕ್ಕು ಎನ್ನಲಾಗುತ್ತದೆ. ಈ ದಿಕ್ಕಿನಲ್ಲಿ ಶಂಖವನ್ನು ಇಡುವುದರಿಂದ ಜಾತಕದಲ್ಲಿ ಗುರು ಗ್ರಹವು ಬಲಗೊಳ್ಳುತ್ತದೆ. ಸುಜ್ಞಾನದ ಬೆಳಕು ಮನೆಯಲ್ಲಿ ತುಂಬುತ್ತದೆ.
ಇದನ್ನೂ ಓದಿ : ಮನೆಯ ಮುಖ್ಯ ದ್ವಾರದ ಬಳಿ ಯಾವ ಗಿಡಗಳನ್ನು ನೆಡುವುದು ಶುಭ ಮತ್ತು ಅಶುಭ? ವಾಸ್ತು ನಿಯಮ ತಿಳಿದು ಗಿಡ ಬೆಳೆಸಿ
ಗ್ರಹ ದೋಷ ನಿವಾರಣೆ
ಶಾಸ್ತದಲ್ಲಿ ಶಂಖವನ್ನು ಗ್ರಹ ದೋಷ ನಿವಾರಣೆ ಉತ್ತಮ ಎನ್ನಲಾಗಿದೆ. ದೇವರ ಮನೆಯಲ್ಲಿ ಇಟ್ಟ ಶಂಖಕ್ಕೆ ಪ್ರತಿದಿನ ಗಂಗಾಜಲ ಅಥವಾ ಶುದ್ಧ ನೀರನ್ನು ತುಂಬಿಸಿ. ಮರುದಿನ ಮನೆಯ ಎಲ್ಲಾ ಜಾಗಗಳಿಗೆ ಸಿಂಪಡಿಸಿ. ಇದರಿಂದ ರಾಹು ಮತ್ತು ಕೇತು ದೋಷ ನಿವಾರಣೆಯಾಗುತ್ತದೆ. ಕೆಟ್ಟ ದೃಷ್ಟಿ ಕೂಡಾ ದೂರವಾಗುತ್ತದೆ.
ಶುಕ್ರ ಗ್ರಹ ಬಲಗೊಳ್ಳಲು ಹೀಗೆ ಮಾಡಿ
ಶಂಖದಲ್ಲಿ ಎರಡು ವಿಧ ಒಂದು ಬಲಮುರಿ ಇನ್ನೊಂದು ಎಡಮುರಿ ಶಂಖ. ದೇವರ ಮನೆಯಲ್ಲಿ ಬಲಮುರಿ ಶಂಖವನ್ನು ಇಡುವುದರಿಂದ ಶುಕ್ರ ಗ್ರಹದ ಶುಭ ಫಲಗಳು ದೊರೆಯುತ್ತವೆ. ಇದರಿಂದ ಮನೆಯಲ್ಲಿ ಸಂಪತ್ತು, ಸಮೃದ್ಧಿ ಹೆಚ್ಚುತ್ತದೆ.

