ಉತ್ಥಾನ ದ್ವಾದಶಿ ವಿಶೇಷತೆ : ತುಳಸಿ ಪೂಜೆ ಯಾಕೆ ಮಾಡಬೇಕು ? ಹಿನ್ನಲೆ ಏನು ಗೊತ್ತಾ ?

  • ವಂದನಾ ಕೊಮ್ಮುಂಜೆ

ಉತ್ತಾನ ದ್ವಾದಶಿ ಇದು ವಿಷ್ಣು ಯೋಗ ನಿದ್ರೆಯಿಂದ ಏಳುವ ದಿನ. ಲೋಕಕ್ಕಕೆ ಸಂತಸ ತುಂಬುವ ದಿನ ಅಂತ ನಮ್ಮ ಪುರಾಣಗಳು ಹೇಳುತ್ತವೆ. ಷಾಢ ಶುದ್ಧ ಏಕಾದಶಿಯ “ಶಯನೈಕಾದಶಿ” ಯಂದು ಮಲಗಿದ ಶ್ರೀಮನ್ನಾರಯಣನು ಉತ್ಥಾನ ದ್ವಾದಶಿಯಂದು ನಿದ್ರೆ ಯಿಂದು ಎದ್ದು ಭಕ್ತರ ಅಭೀಷ್ಟವನ್ನು ಈಡೇರಿಸುತ್ತಾನೆ ಅನ್ನೋ ನಂಬಿಕೆ ಭಕ್ತರಲ್ಲಿದೆ. ಈ ದಿನ ವಿಷ್ಣುವನ್ನು ಭಕ್ತಿಯಿಂದ ಆರಾಧಿಸಲಾಗುತ್ತೆ. ಅದರಂತೆ ಈ ದಿನ ತುಳಸಿಯನ್ನು ವಿಶೇಷವಾಗಿ ಪೂಜಿಸಲಾಗುತ್ತೆ. ಈ ದಿನವನ್ನು ತುಳಸಿ ಪೂಜಾದಿನ ಅಂತಾನೂ ಕರೆಯಲಾಗುತ್ತೆ.

ಉತ್ಥಾನ ಅಂದ್ರೆನೇ ಏಳೋದು ಅಂತ ಅರ್ಥ ಆಷಾಢ ಶುದ್ಧ ಏಕಾದಶಿಯ “ಶಯನೈಕಾದಶಿ”ಯಂದು ಯೋಗ ನಿದ್ರೆಗೆ ಜಾರುವ ಮಹಾವಿಷ್ಣು ಉತ್ಥಾನ ದ್ವಾದಶಿಯಂದು ಏಳುತ್ತಾನೆ ಅಂತ ನಮ್ಮ ಪುರಾಣಗಳು ಹೇಳುತ್ತವೆ. ಹೀಗಾಗಿ ಕೆಲವು ಕಡೆಗಳಲ್ಲಿ ಈ ನಾಲ್ಕು ತಿಂಗಳು ಯಾವುದೇ ಶುಭ ಕಾರ್ಯ ನಡೆಸಲಾಗುವುದಿಲ್ಲ. ಅಲ್ಲಿ ಈ ತಿಂಗಳನ್ನು ಆಷಾಡ ಅಂತ ಕರೆಯಲಾಗುತ್ತೆ.

ಇನ್ನು ತುಳಸಿ ಪೂಜೆಯ ವಿಷಯಕ್ಕೆ ಬರೋದಾದ್ರೆ ಈ ದಿನವನ್ನು ತುಳಸಿಯ ವಿವಾಹದ ದಿನವಾಗಿ ಪರಿಗಣಿಸಲಾಗುತ್ತೆ. ಈ ದಿನ ತುಳಸಿ ಹಾಗೂ ನೆಲ್ಲಿ ಗಿಡಕ್ಕೆ ವಿವಾಹ ಮಾಡಲಾಗುತ್ತೆ. ಇದು ತುಳಸಿಯನ್ನು ಮಾಹಾವಿಷ್ಣುವು ವಿವಾಹವಾದ ದಿನ ಎನ್ನಲಾಗುತ್ತೆ. ಈ ಬಗ್ಗೆ ಒಂದು ಕಥೆ ಕೂಡಾ ಇದೆ.

ಹಂಸಧ್ವಜನ ಮಗ ಧರ್ಮಧ್ವಜನಿಂದ ಅವನ ಪತ್ನಿ ಮಾಧವಿಯಲ್ಲಿ ಲಕ್ಷ್ಮಿಯ ಅಂಶದಿಂದ ಜನಿಸಿದವಳು ತುಲಸೀ. ಈಕೆಯು ಬಾಲ್ಯದಲ್ಲಿಯೇ ಬದರಿಕಾಶ್ರಮದಲ್ಲಿ ತಪಸ್ಸು ಮಾಡಿ, ಬ್ರಹ್ಮನಿಂದ “ವಿಷ್ಣು ತನಗೆ ಪತಿಯಾಗಬೇಕೆಂದು” ವರ ಬೇಡಿದಳು. ಆದರೆ ಬ್ರಹ್ಮನು ನೀನು ಗಿಡವಾಗಿ ಹುಟ್ಟಿದಾಗ ನಿನ್ನ ಆಸೆ ಈಡೇರುತ್ತೆ ಅಂತ ಹೇಳದ.

ನಂತರ ಆಕೆ ಬೃಂದಾಳಾಗಿ ಜಲಂಧರಾಸುರನನ್ನು ವಿವಾಹವಾದಳು. ಆಕೆಯ ಪಾತಿವೃತದ ಶಕ್ತಿಯಿಂದ ಲೋಕಕಂಟಕನಾಗಿ ಬೆಳೆದ ಆತನನ್ನು ಯಾರಿಂದಲೂ ಸಂಹರಿಸಲಾಗಲಿಲ್ಲ.ಆಗ ಮಹಾ ವಿಷ್ಣು ಜಲಂಧನರನ ವೇಷದರಿಸಿ ಆಕೆಯ ಮುಂದೆ ಬಂದು ನಿಂತ. ಆಗ ಮಹಾವಿಷ್ಣುವನ್ನು ತನ್ನ ಪತಿಯೆಂದು ತಿಳಿದು ವೃಂದಾ ತಬ್ಬಿಕೊಂಡಳು. ಹೀಗೆ ಪತ್ನಿ ವೃಂದಾಳ ಪಾತಿವ್ರತ್ಯ ಭಂಗ ಮಾಡಿದ. ನಂತರ ಜಲಂಧರನ ಸಂಹಾರ ಸಾಧ್ಯವಾಯಿತು.ನಿಜ ವಿಚಾರವನ್ನು ತಿಳಿದ ಬೃಂದೆಯು ನಿನಗೂ ಬಹಳ ಕಾಲ ಪತ್ನಿಯಿಂದ ವಿಯೋಗವಾಗಲಿ” ಎಂದು ವಿಷ್ಣುವಿಗೆ ಶಾಪವಿತ್ತಳು. ಆಗ ಬೃಂದಾಳಿಗೆ (ವೃಂದಾ) ವಿಷ್ಣುವು “ನೀನು ಪತಿವ್ರತೆ. ಪವಿತ್ರ ತುಳಸಿಯಾಗಿ ಪೂಜೆಗೊಳ್ಳು” ಎಂದು ವರವನ್ನಿತ್ತನು.

ನಂತರ ಸಮುದ್ರ ಮಥನದ ಕಾಲದಲ್ಲಿ ಅಮೃದ ಕಲಶ ಬಂದಾಗ ವಿಷ್ಣುವಿನ ಕಣ್ಣಿನ ಹನಿಯಿಂದ ಗಿಡವಾಗಿ ಜನ್ಮತಳೆದ ಈ ತುಳಸಿ ಮಹಾಲಕ್ಷ್ಮಿಯೊಂದಿಗೆ ವಿಷ್ಣುವನ್ನು ಮದುವೆಯಾದಳು. ಮುಂದೆ ಇದೇ ತುಳಸಿಯು ದ್ವಾಪರಯುಗದಲ್ಲಿ ರುಕ್ಮಿಣಿಯಾಗಿಯೂ ಕೃಷ್ಣನನ್ನು ಮದುವೆಯಾದಳು ಅನ್ನೋ ನಂಬಿಕೆ ಇದೆ.

ಹೀಗಾಗಿ ವಿಷ್ಣುಸ್ವರೂಪದ ನೆಲ್ಲಿಕೊಂಬೆಯನ್ನು ತುಲಸಿ ಗಿಡದೊಂದಿಗಿಟ್ಟು ಅಲಂಕರಿಸಿ ದೀಪಗಳನ್ನು ಹಚ್ಚಿ ತುಲಸೀ ವಿವಾಹ ಮಾಡಿ ಹಬ್ಬ ಆಚರಿಸಲಾಗುತ್ತೆ. ಅದರ ಮುನ್ನ ನೆಲೆಕಾಯಿಯನ್ನು ಮನೆಗೆ ತರುವುದು ಅಶುದ್ದ ಅನ್ನಲಾಗುತ್ತೆ. ತುಳಸಿ ಪೂಜೆಯ ನಂತರ ಇದು ತಿನ್ನಲು ಯೋಗ್ಯ ಅನ್ನೋ ನಂಬಿಕೆ ಇದೆ.

ಇಷ್ಟೇ ಅಲ್ಲದೆ ಈ ತುಳಸಿಗೆ ನಮ್ಮ ಸಸ್ಕೃತಿಯಲ್ಲಿ ಉನ್ನತ ಸ್ಥಾನವಿದೆ. ಯಾವುದೇ ಪೂಜೆ ಹವನಗಳಲ್ಲಿ ತುಳಸಿಗೆ ಅಗ್ರಸ್ಥಾನ. ತೀರ್ಥದಲ್ಲಿ ತುಳಸಿ ಉಪಯೋಗಿಸೋದ್ರಿಂದ ಆರೋಗ್ಯ ಕೂಡಾ ವೃದ್ಧಿಸುತ್ತೆ.
ತುಳಸಿ ವೈಶಿಷ್ಟ್ಯ: ತುಲಸೀ ಕಾನನಂ ಚೈವ ಗೃಹೇ ಯಸ್ಯಾವತಿಷ್ಠತಿ
ತದ್ಗೃಹಂ ತೀರ್ಥಭೂತಂ ಹಿ ನಾಯಾಂತಿ ಯಮಕಿಂಕರಃ ॥

ಅಂದರೆ ‘ಯಾವ ಮನೆಯಲ್ಲಿ ತುಳಸೀವನವಿರುವದೋ ಆ ಮನೆ ತೀರ್ಥಕ್ಷೇತ್ರದಂತೆ. ಆ ಮನೆಯಲ್ಲಿ ಅ ಕಾಲ ಮೃತ್ಯು ಅಶುಭವಾಗುವು ದಿಲ್ಲ. ‘ಲಕ್ಶ್ಮೀರ್ಭವತಿ ನಿಶ್ಚಲಾ’ ಎಂಬಂತೆ ಆ ಮನೆಯಲ್ಲಿ ಸಂಪತ್ತು ಸದಾ ನೆಲೆಸುತ್ತದೆ ಎನ್ನುವುದು.

ಹಬ್ಬದ ಆಚರಣೆಯ ವಿಧಾನ :
ತುಳಸಿ ಮದುವೆಗೆ ರೇವತೀ ನಕ್ಷತ್ರದಿಂದ ದ್ವಾದಶಿ ತಿಥಿ ಶ್ರೇಷ್ಠ. ಹೀಗಾಗಿ ರಾತ್ರಿಯ ಮೊದಲ ಯಾಮದಲ್ಲಿ ತುಳಸಿ ವಿವಾಹವನ್ನು ನಡೆಸಬೇಕು. ಮೊದಲು ತುಳಸಿ ಕಟ್ಟೆಯನ್ನು ಶುಚಿಗೊಳಿಸಿ, ರಂಗವಲ್ಲಿ, ಸಿಂಧೂರ, ನೆಲ್ಲಿಯ ಟೊಂಗೆ, ಮಾವಿನ ತಳಿರು ಮುಂತಾದ ವಿವಿಧ ಫಲ-ಪುಷ್ಪಗಳನ್ನು ಇಟ್ಟು ಅಲಂಕರಿಸಬೇಕು. ತುಳಸಿಯ ಸನ್ನಿಧಿಯಲ್ಲಿ ಶ್ರೀ ಕೃಷ್ಣನ ಪ್ರತಿಮೆಯನ್ನು ಇಡಬೇಕು. ಅರಿಶಿಣ ಕುಂಕುಮ ಮುಂತಾದ ಅಲಂಕಾರ ಮಾಡಬೇಕು. ಎಲ್ಲೆಡೆ ದೀಪ ಹಚ್ಚಿ, ಭಗವಂತನನ್ನು ಪ್ರಾರ್ಥಿಸಬೇಕು.

ನಂತರ ಮಂಗಲಾಷ್ಟಕ ಹೇಳಿ, ‘ದೇವೀಂ ಕನಕಸಂಪನ್ನಾಂ ಕನಕಾಭರಣೈರ್ಯತಾಂ ದಾಸ್ಯಾಮಿ ವಿಷ್ಣವೇ ತುಭ್ಯಂ ಬ್ರಹ್ಮಲೋಕ ಜಿಗೀಷಯಾ ಎಂದು ಹೇಳಿ ತುಳಸೀ ವಿವಾಹವನ್ನು ಮಾಡಬೇಕು. ಈ ಮೂಲಕ ತುಳಸಿ ವಿವಾಹ ಮಾಡಲಾಗುತ್ತೆ. ನಂತರ ದೇವರಿಗೆ ವಿವಿಧ ಬಗೆಯ ನೈವೇದ್ಯವನ್ನು ಮಾಡಲಾಗುತ್ತೆ. ಮಕ್ಕಳು ಇದೇ ವೇಳೆ ಪಟಾಕಿ ಹೊಡೆದು ಸಂಭ್ರಮಿಸುತ್ತಾರೆ. ಕೆಲವು ಕಡೆ ಇದೇ ದಿನ ಗೋವುಗಳ ಪೂಜೆಯನ್ನು ಮಾಡುತ್ತಾರೆ.

ಇನ್ನು ವೈಜ್ಞಾನಿಕವಾಗಿಯೂ ಈ ತುಳಸಿಗೆ ಮಹತ್ವವಿದೆ. ತುಳಸಿ ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕವನ್ನು ವಾತಾವರಕ್ಕೆ ಬಿಡುತ್ತೆ. ಜೊತೆಗೆ ಅಸ್ತಮಾವನ್ನು ಕ್ಷಯವನ್ನು ದಂತಹ ಸ್ವಾಸಕೋಶ ಸಂಬಂಧಿತ ರೋಗಗಳಿಗೆ ರಾಮಬಾಣವಾಗಿದೆ. ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತೆ. ಹೀಗಾಗಿ ತುಳಸಿ ಪೂಜೆ ಮಾಡೋದ್ರಿಂದ ಉಪಯೋಗವೇ ಹೆಚ್ಚು ಅಂದ್ರೆ ತಪ್ಪಾಗಲ್ಲ.

Comments are closed.