World Coconut Day 2022 : ಇಂದು ವಿಶ್ವ ತೆಂಗು ದಿನ : ತೆಂಗಿನಕಾಯಿಯಿಂದ ಮಾಡಬಹುದಾದ ಸವಿರುಚಿಗಳು

ಕಲ್ಪವೃಕ್ಷ, ನಾರಿಕೇಳ ಎಂದೆಲ್ಲಾ ಕರೆಯುವ ತೆಂಗು (Coconut) ಭಾರತೀಯರಿಗೆ ಚಿರಪರಿಚಿತ. ದೇವರಪೂಜೆಯಿಂದ, ಅಡುಗೆಯವೆರಗೆ ತೆಂಗು ಎಲ್ಲ ಕಡೆಯೂ ಜನಪ್ರಿಯ. ಅಷ್ಟೇ ಅಲ್ಲದೇ, ಇದು ಅಗಾಧವಾದ ಆರೋಗ್ಯದ ಗುಣಗಳನ್ನೂ ಹೊಂದಿದೆ. ಕೂದಲು ಮತ್ತು ತ್ವಚೆಗಂತೂ ಬಹಳ ಪ್ರಯೋಜನಕಾರಿ. ನಾವು ತೆಂಗನ್ನು ಹಲವು ರೀತಿಯಲ್ಲಿ ಉಪಯೋಗಿಸುತ್ತೇವೆ. 2009 ರಲ್ಲಿ ಏಷ್ಯನ್‌ ಪೆಸಿಫಿಕ್‌ ಕೋಕೊನಟ್‌ ಕಮ್ಯುನಿಟಿ ಎಂಬ ಸರ್ಕಾರಿ ಸಂಸ್ಥೆಗಳ ಒಕ್ಕೂಟ ಅಸ್ತಿತ್ವಕ್ಕೆ ಬಂತು. ಆ ದಿನದ ನೆನಪಿಗಾಗಿ ಪ್ರತಿವರ್ಷ ಸೆಪ್ಟೆಂಬರ್‌ 2 ರಂದು ‘ವಿಶ್ವ ತೆಂಗು ದಿನ (World Coconut Day 2022)’ ವನ್ನಾಗಿ ಆಚರಿಸುತ್ತೇವೆ. ‘ಉತ್ತಮ ಭವಿಷ್ಯ ಹಾಗೂ ಬದುಕಿಗಾಗಿ ತೆಂಗನ್ನು ಬೆಳೆಸುವುದು’ ಈ ಘೋಷವಾಕ್ಯದೊಂದಿಗೆ ಈ ವರ್ಷ ವಿಶ್ವ ತೆಂಗು ದಿನವನ್ನು ಆಚರಿಸಲಾಗುತ್ತಿದೆ. ಈ ಆಚರಣೆಯ ಮುಖ್ಯ ಗುರಿ ತೆಂಗಿನ ಪ್ರಾಮುಖ್ಯತೆ ಮತ್ತು ವಿವಿಧ ಪ್ರಯೋಜನಗಳ ಮಾಹಿತಿಯನ್ನು ಹರಡುವುದಾಗಿದೆ.

ತೆಂಗಿನಕಾಯಿ ನಮ್ಮ ನಾಲಿಗೆಯಲ್ಲಿರುವ ರುಚಿ ಮೊಗ್ಗುಗಳನ್ನು ಉತ್ತೇಜಿಸುತ್ತದೆ. ಕಾಯಿಲೆಗಳಿಂದ ಚೇತರಿಸಿಕೊಳ್ಳುವಾಗ ವೈದ್ಯರು ತೆಂಗಿನಕಾಯಿ ನೀರನ್ನು ಸೇವಿಸಲು ಸಲಹೆ ನೀಡುತ್ತಾರೆ. ಇದು ಡೀಹೈಡ್ರೇಶನ್‌ ಅನ್ನು ಸಮರ್ಪಕವಾಗಿ ದೂರಮಾಡಬಲ್ಲದು. ರೋಗನಿರೋಧಕ ಶಕ್ತಿ ಹೆಚ್ಚಿಸುವ ಗುಣವಿರುವುದರಿಂದ ಇದನ್ನು ಅಡುಗೆಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ದಕ್ಷಿಣ ಭಾರತದಲ್ಲಿ ತೆಂಗಿನ ಬಳಕೆ ಅತಿ ಹೆಚ್ಚು. ಅದರಿಂದ ಅನೇಕ ಬಗೆಯ ಅಡುಗೆ, ಸಿಹಿ ತಿನಿಸುಗಳನ್ನು ಮಾಡುತ್ತಾರೆ. ಬೆಳಗ್ಗಿನ ದೋಸೆ, ಇಡ್ಲಿಗೆ ತೆಂಗಿನ ಚಟ್ನಿ ಬೆಸ್ಟ್‌ ಕಾಂಬಿನೇಷನ್‌. ತೆಂಗಿನಕಾಯಿ ಉಪಯೋಗಿಸಿ ಮಾಡಬಹುದಾದ ಕೆಲವು ಸವಿರುಚಿಗಳು ಇಲ್ಲಿವೆ.

  • ತೆಂಗಿನ ಕಾಯಿ ಚಿತ್ರಾನ್ನ :
    ಸುಲಭವಾಗಿ ಮಾಡಬಹುದಾದ ರುಚಿ ಎಂದರೆ ತೆಂಗಿನ ಕಾಯಿ ಚಿತ್ರಾನ್ನ. ಒಂದು ಬಾಣಲೆಗೆ ತೆಂಗಿನ ಎಣ್ಣೆ ಹಾಕಿ. ಅದಕ್ಕೆ ಕಡಲೆಕಾಯಿ ಬೀಜ (ಶೇಂಗಾ), ಸಾಸಿವೆ ಮತ್ತು ಜೀರಗೆ ಹಾಕಿ ಸಿಡಿಸಿ. ಅದಕ್ಕೆ ಕರಿಬೇವಿನ ಎಲೆ, ಹಸಿಮೆಣಸಿನ ಕಾಯಿ ಸೇರಿಸಿ ಹುರಿದುಕೊಳ್ಳಿ. ನಂತರ, ತಾಜಾ ತೆಂಗಿನ ತುರಿ ಸೇರಿಸಿ. ಅದಕ್ಕೆ ಅನ್ನ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಕಲಸಿ. ಅದಕ್ಕೆ ಲಿಂಬು ರಸ ಸೇರಿಸಿ.
  • ತೆಂಗಿನ ಕಾಯಿ ಬರ್ಫಿ :
    ಬಾಯಲ್ಲಿ ನೀರೂರಿಸುವ ತೆಂಗಿನ ಕಾಯಿ ಬರ್ಫಿ ತಯಾರಿಸುವುದು ಬಹಳ ಸುಲಭ. ಮೊದಲಿಗೆ ತೆಂಗಿನಕಾಯಿಯನ್ನು ತುರಿದುಕೊಳ್ಳಿ. ಸಕ್ಕರೆಯ ಪಾಕ ಮಾಡಿ. ಅದಕ್ಕೆ ತೆಂಗಿನ ತುರಿ ಮತ್ತು ಒಂದು ಚಮಚ ಹುರಿದ ಕಡೆಲೆಹಿಟ್ಟು ಸೇರಿಸಿ. ಬರ್ಫಿಯ ಹದ ಬರುವವರೆಗೆ ಸಣ್ಣ ಉರಿಯಲ್ಲಿ ಕೈಯಾಡಿಸುತ್ತಾ ಇರಿ. ನಂತರ ಒಂದು ಪ್ಲೇಟ್‌ಗೆ ತುಪ್ಪ ಸವರಿ, ಈ ಮಿಶ್ರಣವನ್ನು ಒಂದೇ ಸಮನಾಗಿ ಹರಡಿ. ತಣ್ಣಗಾದ ಮೇಲೆ ಚೌಕಾಕಾರವಾಗಿ ಕತ್ತರಿಸಿ.
  • ತೆಂಗಿನ ಕಾಯಿ ಚಟ್ನಿ :
    ಇಡ್ಲಿ, ದೋಸೆ, ಫಡ್ಡು ಎಲ್ಲದಕ್ಕೂ ಬೇಕಾದ ತೆಂಗಿನಕಾಯಿ ಚಟ್ನಿ ತಯಾರಿಸುವ ವಿಧಾನ ಹೀಗಿದೆ. ಒಂದು ಕಪ್ ತಾಜಾ ತೆಂಗಿನ ತುರಿಗೆ, 1–2 ಹಸಿ ಮೆಣಸಿನಕಾಯಿ, 1 ಚಮಚ ಪುಟಾಣಿ, 2 ಬೆಳ್ಳುಳ್ಳಿ ಎಸಳು, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ. ಅದಕ್ಕೆ ತೆಂಗಿನ ಎಣ್ಣೆ, ಸಾಸಿವೆ, ಉದ್ದಿನ ಬೇಳೆ ಮತ್ತು ಕರಿಬೇವಿನ ಎಲೆಯ ಒಗ್ಗರಣೆ ಮಾಡಿ. ರುಚಿಯಾದ ತೆಂಗಿನ ಕಾಯಿ ಚೆಟ್ನಿ ಸವಿಯಲು ಸಿದ್ಧ.

ಇದನ್ನೂ ಓದಿ : Best Chutneys : ಬೆಳಗಿನ ಉಪಹಾರಕ್ಕೆ 3 ಬೆಸ್ಟ್‌ ಚಟ್ನಿಗಳು : ಮಾಡುವುದು ಹೇಗೆ ?

ಇದನ್ನೂ ಓದಿ : Food to Increase Vitamin B-12 : ವಿಟಮಿನ್‌ ಬಿ–12 ಹೆಚ್ಚಿಸುವ ಆಹಾರಗಳು : ನಿಮ್ಮ ನಿಶ್ಯಕ್ತಿಯ ಸಮಸ್ಯೆಗೆ ಇಲ್ಲಿದೆ ಪರಿಹಾರ

(World Coconut Day 2022 try these simple coconut recipes)

Comments are closed.