ಕಂಕಣ ಕಟ್ಟುವುದರ ಹಿಂದಿನ ಅಸಲಿ ಸತ್ಯ ಇಲ್ಲಿದೆ

ಕಂಕಣ ಎಂದರೆ ಪವಿತ್ರ ದಾರ. ಕಂಕಣಬದ್ಧರಾಗಿರುವುದು ಎಂದರೆ ಒಂದು ಪವಿತ್ರ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಕೊಂಡು ಯಾವುದೇ ರೀತಿಯ ಅಡೆತಡೆಗಳಾಗದಂತೆ ಸಂಪೂರ್ಣವಾಗಿ ಮುಗಿಸಲು ಸಂಕಲ್ಪ ಮಾಡಿಕೊಳ್ಳುವುದು. ಇದು ಒಂದು ರೀತಿಯ ಬದ್ಧತೆ ಎಂದರೆ ತಪ್ಪಲ್ಲ. ಅರಿಶಿನದ ದಾರ ಅಥವಾ ಕೆಲವೊಮ್ಮೆ ಅರಿಶಿನ ಕೊಂಬನ್ನು ಕಂಕಣವಾಗಿ ಕಟ್ಟಿಕೊಳ್ಳಲಾಗುತ್ತದೆ.
ಕಂಕಣ ಧಾರಣೆಯು ಹಿಂದೂ ಸನಾತನ ಸಂಸ್ಕೃತಿಯಲ್ಲಿ ಶುಭ ಕಾರ್ಯಗಳು, ವ್ರತಗಳು, ಯಜ್ಞ ಯಾಗಾದಿಗಳು ಅಥವಾ ಮನೆ ಪ್ರವೇಶ, ವಿವಾಹದಂತಹ ಸಂಕಲ್ಪ ಪೂಜೆಗಳನ್ನು ಕೈಗೊಳ್ಳುವಾಗ ಕಂಕಣ ಧಾರಣೆ ಒಂದು ಪ್ರಮುಖ ಆಚರಣೆಯಾಗಿದೆ. ಕೈಗೆ ಕಟ್ಟುವ ಪವಿತ್ರದಾರವೇ ಕಂಕಣ. ಸಾಮಾನ್ಯವಾಗಿ ಪೂಜೆ ಮಾಡಿಸುವ ವಿಪ್ರರು ಇದನ್ನು ಕಟ್ಟುತ್ತಾರೆ. ವ್ರತಗಳು ಮತ್ತು ಸಂಕಲ್ಪ ಪೂಜೆಗಳಲ್ಲಿ ಮಹತ್ವದ ಆಚರಣೆಯಾಗಿದೆ. ಇದು ಕಾರ್ಯದ ಕಡೆಗೆ ಏಕಾಗ್ರತೆ, ಮನಸ್ಸಿನ ಶಾಂತಿ ಮತ್ತು ದುಷ್ಟ ಶಕ್ತಿಗಳಿಂದ ರಕ್ಷಣೆ ನೀಡುತ್ತದೆ. ಜೊತೆಗೆ ಕಂಕಣವು ದೇಹ ಮತ್ತು ಮನಸ್ಸಿನ ಶುದ್ಧತೆಯನ್ನು ಸೂಚಿಸುತ್ತದೆ.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಫಲಗಳು
ಕಂಕಣವನ್ನು ಪೂಜೆ, ಹವನ, ವ್ರತಗಳು, ಜಾತ್ರೆಗಳು ಅಥವಾ ಯಾವುದೇ ಮಂಗಳಕರ್ಮಗಳಲ್ಲಿ ಕಟ್ಟಿಕೊಳ್ಳುತ್ತಾರೆ. ಈ ನೂಲು ಸಾಮಾನ್ಯವಾಗಿ ಕೆಂಪು, ಹಳದಿ ಅಥವಾ ಕಪ್ಪು ಬಣ್ಣದಲ್ಲಿರುತ್ತದೆ. ಈ ಬಣ್ಣಗಳಿಗೆ ಧಾರ್ಮಿಕವಾಗಿ ವಿಶೇಷ ಅರ್ಥಗಳಿವೆ — ಕೆಂಪು ಶಕ್ತಿ ಮತ್ತು ರಕ್ಷಣೆ, ಹಳದಿ ಶುಭ ಮತ್ತು ಶಾಂತಿ, ಕಪ್ಪು ದೋಷ ನಿವಾರಣೆ. ಕಂಕಣವನ್ನು ದೇವರ ಸನ್ನಿಧಾನದಲ್ಲಿ ಕಟ್ಟುವುದರಿಂದ, ಅದನ್ನು ಧಾರ್ಮಿಕ ಆಶೀರ್ವಾದದ ಸಂಕೇತವೆಂದು ಪರಿಗಣಿಸಲಾಗುತ್ತದೆ. ದೇವರ ಕೃಪೆ, ರಕ್ಷಣೆ ಮತ್ತು ದೈವೀ ಶಕ್ತಿ ಧಾರಕರಿಗೆ ಸಮ್ಮುಖವಾಗುತ್ತವೆ ಎಂಬ ನಂಬಿಕೆ ಇದೆ. ಮನೆಯಲ್ಲಿ ಅಥವಾ ಜೀವನದಲ್ಲಿ ಶುಭಾರಂಭವಾಗಲೆಂದು ಕಂಕಣ ಕಟ್ಟಿಕೊಳ್ಳುವುದು ಒಂದು ವಿಧವಾದ ಸಂಕಲ್ಪ.
ಇದನ್ನೂ ಓದಿ: ಕೇವಲ 1000 ಹೂಡಿಕೆಗೆ 3 ಲಕ್ಷ ಸಾಲ ಪಡೆಯಿರಿ! ರಾಜ್ಯ ಸರ್ಕಾರದಿಂದ ಗೃಹಲಕ್ಷ್ಮಿಯರಿಗೆ ಬಂಪರ್
ಮನೋವೈಜ್ಞಾನಿಕ ಮತ್ತು ವೈಯಕ್ತಿಕ ಫಲಗಳು
ಕಂಕಣ ಕಟ್ಟಿಸುವ ವೇಳೆ ಒಳ್ಳೆಯ ಸಂಕಲ್ಪಗಳನ್ನು ಇಡುವುದು ರೂಢಿ. “ಇದು ನನಗೆ ಒಳ್ಳೆಯದನ್ನು ತರಲಿ”, “ನನ್ನ ಕೆಲಸ ಯಶಸ್ವಿಯಾಗಲಿ”, “ದೈವದ ಕರುಣೆ ನನಗೆ ದೊರಕಲಿ” ಎಂಬಂತೆ ದೇವರನ್ನು ನಂಬಿ ಕೋರಿಕೊಳ್ಳುತ್ತೇವೆ. ಈ ನಂಬಿಕೆಯೇ ವ್ಯಕ್ತಿಗೆ ಆತ್ಮವಿಶ್ವಾಸ, ಧೈರ್ಯ ಮತ್ತು ನೆಮ್ಮದಿಯನ್ನು ಕೊಡುತ್ತದೆ. ವೈಜ್ಞಾನಿಕವಾಗಿ ನೋಡಿದರೂ, ದೇಹದಲ್ಲಿ ಧರಿಸಿರುವ ಯಾವುದೇ ಸಂಕೇತಾತ್ಮಕ ವಸ್ತು ಮನಸ್ಸಿನ ಮೇಲೆ ಸೂಕ್ಷ್ಮ ಪರಿಣಾಮವನ್ನು ಬೀರುತ್ತದೆ. ಅದು ವ್ಯಕ್ತಿಗೆ ಆರೈಕೆ, ಭರವಸೆ ಮತ್ತು ಸಕಾರಾತ್ಮಕ ಚಿಂತನೆಗೆ ಉತ್ತೇಜನ ನೀಡುತ್ತದೆ.
ನಮ್ಮ ಸಂಪ್ರದಾಯದಲ್ಲಿ ಇದಕ್ಕೆ ಒಂದು ವಿಶಿಷ್ಟವಾದ ಸ್ಥಾನವಿದ್ದು, ಅದನ್ನು ಧರಿಸುವವರ ಜೀವನದಲ್ಲಿ ಶುಭ, ರಕ್ಷಣೆ ಮತ್ತು ನೆಮ್ಮದಿಯನ್ನು ತರಲೆಂದು ಆಶಿಸಲಾಗುತ್ತದೆ.



