Kedarnath : ಶಿವನ ದೇಹದ ಭಾಗಗಳಿಂದಾಗಿದೆ ಈ ದೇವಾಲಯಗಳು – ಈ ಕೇದಾರಳಿಗೆ ಹೋದ್ರೆ ಮೋಕ್ಷ ಪ್ರಾಪ್ತಿ

Kedarnath : ಶಂಕರ ಶಿವ ಪರಮೇಶ್ವರ ಈ ಹೆಸರನ್ನು ಕೇಳಿದರೆ ಮೈ ಪುಲಕಗೊಳ್ಳುತ್ತದೆ .ವಿರಾಗಿಯಾಗಿ ಕಾಣಿಸಿಕೊಳ್ಳುವ ಭೋಲೆನಾಥನಿಗೆ ಶಿಖರದಿಂದ ಹಿಡಿದು ಕಣಿವೆವರೆಗೆ ಎಲ್ಲಾ ಕಡೆಯಲ್ಲೂ ದೇವಾಲಯಗಳಿವೆ.
ಅದರಲ್ಲೂ 12 ಜ್ಯೋತಿರ್ಲಿಂಗಗಳಲ್ಲಿ ಶಿವ ನೆಲೆಸಿರುವುದು ಎಲ್ಲರಿಗೂ ಗೊತ್ತೇ ಇದೆ. ಪಾಪಗಳನ್ನು ಕಳೆಯಲು ಭಕ್ತರ ದಂಡೆ ಈ ಕ್ಷೇತ್ರಕ್ಕೆ ಬರುತ್ತಾರೆ. ಜ್ಯೋತಿರ್ಲಿಂಗದಷ್ಟೇ ಪ್ರಭಾವ ಹೊಂದಿರುವ ಹಾಗೂ ಪವಿತ್ರವಾದ ಮತ್ತೊಂದು ಕ್ಷೇತ್ರಗಳೆಂದರೆ ಅದು ಈ ಪಂಚ ಕೇದಾರ ಕ್ಷೇತ್ರಗಳು.
ಆತ್ಮಲಿಂಗಗಳು ಹಾಗೂ ಜ್ಯೋತಿರ್ಲಿಂಗಗಳನ್ನು ಶಿವನ ಅಂಶ ಎಂದು ಅಂದುಕೊಂಡರೆ, ಈ ಕೇದಾರಗಳು ಶಿವನ 5 ದೇಹದ ಭಾಗಗಳು ಅಂತ ಹೇಳಲಾಗುತ್ತದೆ. ಈ ಕೇದಾರಗಳ ಹುಟ್ಟು ನಮ್ಮನ್ನು ದ್ವಾಪರಕ್ಕೆ ಕರೆದೊಯ್ಯುವಂತೆ ಮಾಡುತ್ತದೆ.
ಯಾವಾಗ ಮಹಾಭಾರತ ಯುದ್ಧ ಸಮಾಪ್ತವಾಯಿತೋ , ಪಾಪ ಪರಿಹಾರಕ್ಕಾಗಿ ವರಣಾಸಿಗೆ ಪಾಂಡವರು ಬಂದರಂತೆ. ಆದರೆ ಅವರು ಮಾಡಿದ ಪಾಪಗಳಿಂದ ಕೋಪಗೊಂಡಿದ್ದ ಶಿವ ಪರಮಾತ್ಮ ಕಾಶಿಯಿಂದ ಮಾಯವಾಗಿ ಹಿಮಾಲಯಕ್ಕೆ ಬಂದನಂತೆ.
ಇದನ್ನು ಅರಿತ ಪಾಂಡವರು ಆತನನ್ನು ಹಿಮಾಲಯದವರೆಗೆ ಹಿಂಬಾಲಿಸಿದರು. ಆಗ ಶಿವ ಪರಮಾತ್ಮನು ನಂದಿ ರೂಪ ತಾಳಿ ಆಕಳುಗಳ ಗುಂಪನ್ನು ಸೇರಿದನು. ಶಿವ ಹೀಗೆ ಮಾಡಿದ್ದನ್ನು ಗಮನಿಸಿದ ಭೀಮನು ಬೃಹದಾಕಾರವಾಗಿ ಬೆಳೆದು ನಿಂತನಂತೆ.
ಅಲ್ಲಿ ಸಾಮಾನ್ಯ ಹಸುಗಳು ಭೀಮನ ಕಾಲಿ ನಡುವಿನಿಂದ ತೆರಳಿದವಂತೆ. ಆದರೆ ನಂದಿ ರೂಪ ತಾಳಿದ್ದ ಶಿವಪರಮಾತ್ಮ ಮಾತ್ರ ಹೀಗೆ ಮಾಡಲಿಲ್ಲ. ಇದನ್ನು ಅರಿತ ನಂದಿ ರೂಪದ ಶಿವ ಪರಮಾತ್ಮನನ್ನು ಹಿಡಿಯಲು ಪಾಂಡವರು ಯತ್ನಿಸಿದರು.
ಆಗ ಶಂಕರನು ನಂದಿ ರೂಪದ ದೇಹವನ್ನು ಐದು ಭಾಗವನ್ನಾಗಿ ಮಾಡಿ ಹಿಮಾಲಯದ ಐದು ಕಡೆಗೆ ಹೋಗುವಂತೆ ಮಾಡಿ ಭೂಮಿಯೊಳಗೆ ಅಂತರ್ಧಾನವಾಗಲು ಯತ್ನಿಸಿದರಂತೆ . ಆಗ ನಂದಿಯ ಗೂನಿನ ಭಾಗವನ್ನು ಭೀಮ ಹಿಡಿದು ನಿಲ್ಲಿಸಿ ಶಿವನನ್ನು ಶಾಂತಗೊಳಿಸಿದನಂತೆ.
ಇದೇ ಮುಂದೆ ಐದು ಕೇದಾರ ಕ್ಷೇತ್ರಗಳಾಯಿತು ಎಂಬ ನಂಬಿಕೆ ಇದೆ. ಹೀಗೆ ಶಿವನ ದೇಹದ ಐದು ಭಾಗಗಳು ಬಿದ್ದ ಜಾಗವನ್ನು ಕೇದಾರನಾಥ, ಮಧ್ಯಮಹೇಶ್ವರ, ರುದ್ರನಾಥ, ತುಂಗಾನಾಥ.ಜಟೇಶ್ವರ ಎಂದು ಕರೆಯುತ್ತಾರೆ.
ಕೇದಾರನಾಥ (Kedarnath)
ಇದು ಪಂಚ ಕೇದರಗಳಲ್ಲಿ ಪ್ರಮುಖವಾದ ಕ್ಷೇತ್ರ. ಇದನ್ನು ಸ್ವತಹ ಜ್ಯೋತಿರ್ಲಿಂಗ ಅಂತಾನೂ ಕರೆಯಲಾಗುತ್ತದೆ. ಹಿಮಾಲಯದ ಭಾಗದ ಮಂದಾಕಿನಿ ನದಿಯ ಪಕ್ಕದಲ್ಲಿರುವ ಈ ಕ್ಷೇತ್ರದಲ್ಲಿ ಶಿವ ಪರಮಾತ್ಮ ಪಾಂಡವರಿಗೆ ದರ್ಶನ ನೀಡಿದ್ದ ಅಂತಾನೂ ನಂಬಲಾಗುತ್ತದೆ.
ಇಲ್ಲಿ ಶಿವನ ಲಿಂಗವು ತ್ರಿಕೋನಾಕಾರವಾಗಿದ್ದು, ಇದು ನಂದಿಯ ಬೆನ್ನಿನ ಗೂನಿನಂತೆ ಕಾಣುತ್ತದೆ. ಹೀಗಾಗಿ ಶಿವ ಇಲ್ಲಿ ಗೂನಿನ ರೂಪದಲ್ಲಿ ನೆಲೆ ನಿಂತಿದ್ದಾನೆ ಎಂದು ನಂಬಲಾಗುತ್ತದೆ. ಇಲ್ಲಿ ಶಂಕರಾಚಾರ್ಯರು ಮೋಕ್ಷ ಪಡೆದಿದ್ದರು.
ಇದಕ್ಕೆ ಸಾಕ್ಷಿ ಎಂಬಂತೆ ಕೇದಾರ ದೇವಾಲಯದ ಹಿಂಭಾಗದಲ್ಲಿ ಶಂಕರಾಚಾರ್ಯರ ಸಮಾಧಿ ಇದೆ. ಈ ದೇವಾಲಯದ ಮತ್ತೊಂದು ವಿಶೇಷ ಅಂದ್ರೆ ಇಲ್ಲಿ ಕೇವಲ ಆರು ತಿಂಗಳು ಮಾತ್ರ ದೇವಾಲಯ ತೆರೆಯುತ್ತದೆ.
ಮತ್ತೆ ಆರು ತಿಂಗಳುಗಳ ಕಾಲ ಸುತ್ತಮುತ್ತಲು ವಿಪರೀತ ಹಿಮಪಾತ ಆಗೋ ಕಾರಣ ಈ ದೇವಾಲಯವನ್ನು ಮುಚ್ಚಲಾಗಿರುತ್ತದೆ. ಈ ವೇಳೆಗೆ ದೇವಾನುದೇವತೆಗಳು ಕೇದಾರನಾಥನಿಗೆ ಪೂಜಿ ಸಲ್ಲಿಸುತ್ತಾರೆ ಎಂದು ನಂಬಲಾಗುತ್ತದೆ. ಈ ದೇವಾಲಯ ಸಮುದ್ರ ಮಟ್ಟದಿಂದ 11,700 ಅಡಿ ಎತ್ತರದಲ್ಲಿದೆ.
ಮಧ್ಯಮಹೇಶ್ವರ ( Madhyamaheshwar)
ಉತ್ತರಾಖಂಡದ ರುದ್ರ ಪ್ರಯಾಗ ಹಿಮ ಶಿಖರದ ಮೇಲೆ ನೆಲೆ ನಿಂತಿದೆ ಈ ದೇವಾಲಯ.ಇದನ್ನು ಮಧ್ಯಮಹೇಶ್ವರ ಎಂದು ಕರೆಯುತ್ತಾರೆ .ಇದಕ್ಕೆ ಕಾರಣ ಇಲ್ಲಿ ಶಿವನು ಹೊಕ್ಕಳು ಅಂದರೆ ಮಧ್ಯಭಾಗವನ್ನು ಬಿದ್ದ ಜಾಗ ಎಂದು ನಂಬಲಾಗುತ್ತದೆ.
ಹೀಗಾಗಿ ಇಲ್ಲಿ ಹೊಕ್ಕಳಿನ ಕೇಂದ್ರದ ರೀತಿಯಲ್ಲಿರುವ ಶಿವಲಿಂಗವನ್ನು ಪೂಜಿಸಲಾಗುತ್ತದೆ. ಇದನ್ನು ಎರಡನೆಯ ಕೇದಾರ ಎಂದೂ ಕೂಡಾ ಕರೆಯಲಾಗುತ್ತದೆ. ಇಲ್ಲಿ ಸದಾ ನೀರಿನ ಸೆಲೆಯೊಂದು ಹರಿಯುತ್ತಿದ್ದು, ಇದನ್ನು ಸೇವಿಸಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಅನ್ನೋ ನಂಬಿಕೆ ಇದೆ. ಇನ್ನು ಇದು ಕೂಡ ಹಿಮಾಲಯದ ಶಿಖರದಲ್ಲಿ ಇರೋದ್ರಿಂದ ಚಳಿಗಾಲದಲ್ಲಿ ದೇವಾಲಯ ತೆರೆದಿರುವುದಿಲ್ಲ.
ರುದ್ರನಾಥ (Rudhranatha)
ಇದು ಶಿವನ ಮುಖದ ಭಾಗ ಬಿದ್ದ ಜಾಗ . ಈ ದೇವಾಲಯವನ್ನು ನೀಲಕಂಠ ಮಹಾದೇವ ಎಂದು ಕೂಡಾ ಕರೆಯಲಾಗುತ್ತೆ. ಈ ಲಿಂಗವು ನಂದಿಯ ಮುಖವನ್ನೇ ಹೋಲುವಂತೆ ವೃತ್ತಾಕಾರದಲ್ಲಿದೆ. ಇಲ್ಲಿ ಹೋಗಲು ಚಾರಣದ ದಾರಿಯನ್ನೇ ಆರಿಸಿಕೊಳ್ಳಬೇಕು .ಅದರಲ್ಲೂ ಈ ಕ್ಷೇತ್ರ ಚಾರಣಿಗರಿಗೂ ಸವಾಲನ್ನು ಒಡ್ಡುತ್ತದೆ.
ತುಂಗಾ ನಾಥ (Tungnath )
ಇದು ಜಗತ್ತಿನಲ್ಲಿ ಅತಿ ಎತ್ತರದ ಶಿವ ದೇವಾಲಯ. ರುದ್ರಪ್ರಯಾಗದ ತುಂಗಾ ಪರ್ವತಶ್ರೇಣಿಯಲ್ಲಿದೆ ಈ ಕೇಂದ್ರ. ಇಲ್ಲಿನ ಲಿಂಗವು ನಂದಿಯ ಕಾಲಿನ ರೂಪದಲ್ಲಿದ್ದು, ಇದೇ ಶಿವನ ಕಾಲು ಬಿದ್ದ ಜಾಗ ಅಂತ ನಂಬಲಾಗುತ್ತೆ. ಈದೇವಾಲಯವನ್ನು ಮಧ್ಯಮ ಪಾಂಡವ ಅರ್ಜುನ 5000 ವರ್ಷಗಳ ಹಿಂದೆ ಸ್ಥಾಪಿಸಿದ ಎನ್ನಲಾಗುತ್ತದೆ. ಶ್ರೀರಾಮನು ಕೂಡ ರಾವಣನ ಸಾವಿನ ನಂತರ ತನ್ನ ಪಾಪ ಕಳೆಯೋಕೆ ಇಲ್ಲಿಗೆ ಬಂದಿದ್ದ ಎನ್ನಲಾಗುತ್ತಿದೆ.
ಜಟೇಶ್ವರ /ಕಲ್ಪೇಶ್ವರ ( Jatteshwara / Kalpeshwara)
ಇದು ನಂದಿಯ ರೂಪದ ಜಟೆಯ ಶಿಲೆಹೊಂದಿರುವ ಜಾಗ . ಇಲ್ಲಿ ಶಿವನ ಜಟೆಯನ್ನು ದೇವರ ರೂಪದಲ್ಲಿ ಪೂಜಿಸಲಾಗುತ್ತೆ ಇದು ರುದ್ರ ಪ್ರಯಾಗ್ ಜಿಲ್ಲೆಯಿಂದ ಹೇಲಾಂಗ್ ಗ್ರಾಮದಿಂದ 11 ಕಿಲೋಮೀಟರ್ ಎತ್ತರದಲ್ಲಿದೆ.
ಇಲ್ಲಿಗೆ ಹೋಗಲು ನಾವು ನಡೆದುಕೊಂಡೆ ಹೋಗಬೇಕು.ಇದನ್ನು ಕಲ್ಪೇಶ್ವರ ಅಂತನೂ ಕರೆಯಲಾಗುತ್ತ.ದೆ ಏಕೆಂದರೆ ಇಲ್ಲಿಗೆ ಕಲ್ಪಋಷಿಗಳು ತಪಸ್ಸು ಮಾಡಿದ್ದರು ಅನ್ನೋ ನಂಬಿಕೆ ಇದೆ. ಇನ್ನು ಉಳಿದ ಕೇದಾರಗಳಂತೆ ಇದು ಚಳಿಗಾಲದಲ್ಲಿ ಮುಚ್ಚಿರದೇ ಇಲ್ಲಿನ ತೆರೆದು ಕೊಂಡಿರೋದೆ ಇಲ್ಲಿನ ವಿಶೇಷ.
ಒಟ್ಟಾರೆ ಹಿವ ಪರ್ವತದ ಸಾಲಿನಲ್ಲಿರು ಈ ಕೇದಾರಗಳು ಶಿವನ ಆಸ್ತೆಯ ಭಾಗವಾಗಿದೆ. ಚಳಿಗಾಲದಲ್ಲಿ ಸದಾ ಮುಚ್ಚಿರುವ ಈ ದೇವಾಲಯಗಳು , ಬೇಸಿಗೆಯಲ್ಲಿ ಭಕ್ತರಿಂದ ಕಂಗೊಳಿಸುತ್ತೆ, ಮುಕ್ತಿಯ ಹಾಗೂ ಸೌಂದರ್ಯದ ಕೇಂದ್ರವಾಗಿರೋ ಇಲ್ಲಿಗೆ ನೀವು ಒಂದು ಬಾರಿ ಭೇಟಿ ನೀಡಿ
Indian Temples Kedarnath Badrinath Tungnath Jatteshwara Madhyamaheshwar



