ಹಸಿದ ಹೊಟ್ಟೆಯಲ್ಲೇ ಕ್ರಿಕೆಟ್ ಆಟ, ಟೆಂಟ್ ನಲ್ಲೇ ನಿತ್ಯದ ವಾಸ : ಸಂಬಂಧಿಕರಿಗೆ ಬೇಡವಾಗಿದ್ದ ಜೈಸ್ವಾಲ್ ಯಶಸ್ಸಿನ ಸ್ಟೋರಿ !

0

ಯಶಸ್ವಿ ಜೈಸ್ವಾಲ್.. ಈ ಹೆಸರು ಇದೀಗ ವಿಶ್ವಮಟ್ಟದಲ್ಲಿ ಚಿರಪರಿಚಿತ. ಭಾರತೀಯರ ಪಾಲಿಗೆ ಹಾರ್ಟ್ ಫೇವರೇಟ್. ಭಾರತೀಯ ಕಿರಿಯರ ಕ್ರಿಕೆಟ್ ತಂಡ ಭರವಸೆಯ ಆಟಗಾರ. ಎದುರಾಳಿ ಬೌಲರ್ ಗಳಿಗೆ ನಡುಕ ಹುಟ್ಟಿಸುತ್ತಿರೋ ಯಶಸ್ವಿ ಜೈಸ್ವಾಲ್ ಭರವಸೆಯ ಭವಿಷ್ಯದ ಆಟಗಾರನೆನಿಸಿಕೊಂಡಿದ್ದಾನೆ. ಭಾರತ ತಂಡಕ್ಕೆ ವಿಶ್ವಕಪ್ ಸರಣಿಯುದ್ದಕ್ಕೂ ಸೋಲನ್ನೇ ಕಾಣಲು ಬಿಡದ ಜೈಸ್ವಾಲ್ ಯಶಸ್ವಿ ಆಟಗಾರನಾಗಿ ರೂಪುಗೊಂಡಿರುವುದರ ಹಿನ್ನೆಲೆ ಕೇಳಿದ್ರೆ ಎಂತವರಿಗೂ ಕಣ್ಣಲ್ಲಿ ನೀರುತರಿಸುತ್ತೆ.

ಭಾರತ ಕಿರಿಯರ ತಂಡದಲ್ಲಿ ಯಶಸ್ವಿ ಜೈಸ್ವಾಲ್

ಅಂಡರ್ 19 ವಿಶ್ವಕಪ್ ಸರಣಿಯಲ್ಲಿ ಹಾಲಿ ಚಾಂಪಿಯನ್ ಭಾರತ ಫೈನಲ್ ಪ್ರವೇಶಿಸಿದೆ. ಈ ಬಾರಿಯೂ ಪ್ರಶಸ್ತಿ ಗೆಲ್ಲುವ ಫೇವರೇಟ್ ತಂಡವಾಗಿ ಹೊರಹೊಮ್ಮಿದೆ. ಬಾಂಗ್ಲಾ ವಿರುದ್ದ ನಡೆಯಲಿರೋ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿನ ವಿಶ್ವಾಸದಲ್ಲಿದೆ.

ಸರಣಿಯುದ್ದಕ್ಕೂ ಸೋಲನ್ನೇ ಕಂಡಿರದ ಭಾರತ ಫೈನಲ್ ನಲ್ಲಿಯೂ ಗೆಲುವಿನ ನಗೆ ಬೀರಲಿ ಅಂತಾ ಕೋಟ್ಯಾಂತರ ಭಾರತೀಯ ಪ್ರಾರ್ಥಿಸುತ್ತಿದ್ದಾರೆ. ಆದರೆ ಈ ಬಾರಿಯ ವಿಶ್ವಕಪ್ ನಲ್ಲಿ ಅಬ್ಬರದ ಬ್ಯಾಟಿಂಗ್ ಮೂಲಕ ಎಲ್ಲರ ಮನಗೆದ್ದಿರುವುದು ಭಾರತದ ಎಡಗೈ ಬ್ಯಾಟ್ಸ್ ಮನ್ ಯಶಸ್ವಿ ಜೈಸ್ವಾಲ್.

ವಿಶ್ವಕಪ್ ಸರಣಿಯ ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ದ 59 ರನ್ ಗಳಿಸಿದ್ದ ಜೈಸ್ವಾಲ್ 1 ವಿಕೆಟ್ ಪಡೆದುಕೊಂಡಿದ್ದರು. ಜಪಾನ್ ಕನಿಷ್ಠ ಮೊತ್ತಕ್ಕೆ ಆಲೌಟಾದ್ರೂ ಕೂಡ ವಿರುದ್ದ ಅಜೇಯ 29, ನ್ಯೂಜಿಲೆಂಡ್ ವಿರುದ್ದದ ಪಂದ್ಯದಲ್ಲಿ ಅಜೇಯ 57 ರನ್, ಆಸ್ಟ್ರೇಲಿಯಾ ವಿರುದ್ದ 62 ರನ್ ಸಿಡಿಸಿದ್ರೆ, ಪಾಕಿಸ್ತಾನದ ವಿರುದ್ದ ಸೆಮಿಫೈನಲ್ ಪಂದ್ಯದಲ್ಲಿ ಅಜೇಯ ಶತಕದ ನೆರವಿನಿಂದ 105 ರನ್ ಸಿಡಿಸುವುದರ ಜೊತೆಗೆ 1 ವಿಕೆಟ್ ಪಡೆದುಕೊಂಡಿದ್ದಾರೆ.

ಸರಣಿಯುದ್ದಕ್ಕೂ ಅದ್ಬುತ ಪ್ರದರ್ಶನ ನೀಡುತ್ತಿರೊ ಜೈಸ್ವಾಲ್ ಅದ್ಬುತ ಸಾಧನೆ ತೋರಿದ್ದಾನೆ. ಯಶಸ್ವಿ ಜೈಸ್ವಾಲ್ ಸಾಧನೆಗೆ ಭಾರತೀಯರು ಸಲಾಂ ಹೊಡೆಯುತ್ತಿದ್ದಾರೆ.

ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್ ವೈಖರಿ

ಆದರೆ ಇಂತಹ ಅದ್ಬುತ ಕ್ರಿಕೆಟ್ ಆಟಗಾರ ಬಾಲ್ಯದಲ್ಲಿ ಪಟ್ಟಿದ್ದ ಕಷ್ಟ ಅಷ್ಟಿಷ್ಟಲ್ಲ. ಹೊಟ್ಟೆಗೆ ಹಿಟ್ಟಿಲ್ಲದೇ, ಮಲಗೋಕೆ ಜಾಗವೂ ಇಲ್ಲದೇ. ಸಂಬಂಧಿಕರಿಗೆ ಬೇಡವಾಗಿದ್ದ ಜೈಸ್ವಾಲ್ ಭಾರತದ ಭರವಸೆಯ ಆಟಗಾರನಾಗಿ ರೂಪುಗೊಂಡ ಸ್ಟೋರಿ ರೋಚಕ ರೋಮಾಂಚಕ. ಜೈಸ್ವಾಲ್ ಬಾಲ್ಯದ ಕಣ್ಣೀರ ಕಥೆಯೇ ಇಂಟ್ರಸ್ಟಿಂಗ್. ಉತ್ತರ ಪ್ರದೇಶದ ಭಾದೋಹಿಯಲ್ಲಿ ಜನಿಸಿದ್ದ ಯಶಸ್ವಿ ಜೈಸ್ವಾಲ್ ತಂದೆ ಪಾನಿಪೂರಿ ಮಾರಾಟಗಾರರು. ತನಗೆ ಬರುತ್ತಿದ್ದ ಅಷ್ಟೋ ಇಷ್ಟೋ ಆದಾಯದಿಂದಲೇ ಜೀವನ ಸಾಗಿಸುತ್ತಿದ್ರು.. ಕ್ರಿಕೆಟ್ ಆಟಗಾರನಾಗಬೇಕು ಅಂತಾ ಕನಸು ಕಂಡಿದ್ದ ಜೈಸ್ವಾಲ್ ಉತ್ತರ ಪ್ರದೇಶದಿಂದ ಮುಂಬೈಗೆ ಬಂದಿದ್ದ. ಆದರೆ ಮುಂಬೈನಲ್ಲಿ ಉಳಿದುಕೊಳ್ಳೋದಕ್ಕೆ ಸ್ವಲ್ಪ ಜಾಗವೂ ಆತನಿಗೆ ಇರಲಿಲ್ಲ. ಹೀಗಾಗಿಯೇ ಮುಂಬೈನ ಕಲ್ಬಾದೇವಿಯ ಡೇರಿಯಲ್ಲಿ ಮಲಗುತ್ತಿದ್ದ. ಅಲ್ಲಿದ್ದವರು ನಿತ್ಯವೂ ಕೆಲಸ ಮಾಡಬೇಕು. ಆದರೆ ಕ್ರಿಕೆಟ್ ಹಿಂದೆ ಬಿದ್ದಿದ್ದ ಜೈಸ್ವಾಲ್ ಗೆ ಕೆಲಸ ಮಾಡೋದಕ್ಕೆ ಸಾಧ್ಯವಾಗುತ್ತಿರಲಿಲ್ಲ.

ಪಾನಿಪೂರಿ ಮಾರಾಟ ಮಾಡುತ್ತಿರೊ ಯಶಸ್ವಿ ಜೈಸ್ವಾಲ್ ತಂದೆ

ಹೀಗಾಗಿ ಆತನನ್ನು ಹೊರಕಳುಹಿಸಲಾಯಿತು. ನಂತರ ತನ್ನ ಸಂಬಂಧಿಯೋರ್ವರ ಮನೆಯಲ್ಲಿ ಸ್ವಲ್ಪದಿನ ವಾಸವಿದ್ರೂ ದಿನ ಕಳೆಯುತ್ತಿದ್ದಂತೆ ಜೈಸ್ವಾಲ್ ಅವರಿಗೂ ಬೇಡವಾಗಿ ಹೋಗಿದ್ದ. ಆದರೆ ಆತನ ಅಂಕಲ್ ಜೈಸ್ವಾಲ್ ನನ್ನು ಮುಸ್ಲಿಂ ಯುನೈಟೆಡ್ ಕ್ಲಬ್ ಸೇರಿಸಿದ್ದರು. ಹೀಗಾಗಿ ಜೈಸ್ವಾಲ್ ಎಂಯುಸಿ ಕ್ಲಬ್ ಪರ ಆಡೋದಕ್ಕೆ ಶುರುಮಾಡಿದ್ದ. ಮೈದಾನದಲ್ಲಿರೋ ಟೆಂಟ್ ನಲ್ಲಿಯೇ ವಾಸಿಸುತ್ತಿದ್ದ ಜೈಸ್ವಾಲ್ ಕೊರೆವ ಚಳಿಯಲ್ಲಿ ಟೆಂಟ್ ವಾಸ ಕಣ್ಣೀರು ತರಿಸುತ್ತಿತ್ತು. ಹೊತ್ತಿನ ತುತ್ತಿಗೂ ಜೈಸ್ವಾಲ್ ಬಳಿ ಹಣ ಇರುತ್ತಿರಲಿಲ್ಲ. ಹಣ ಗಳಿಸೋದಕ್ಕಾಗಿ ತಂದೆ ಹೇಳಿಕೊಟ್ಟಿದ್ದ ಪಾನಿಪೂರಿ ಮಾರೋ ಕಾಯಕವನ್ನು ಒಂದಿಷ್ಟು ದಿನ ಮಾಡಿದ್ದ. ಬಂದ ಹಣದಲ್ಲಿ ಒಂದು ಹೊತ್ತು ಊಟಮಾಡಿ, ರಾತ್ರಿ ಉಪವಾಸ ಮಲಗುತ್ತಿದ್ದ.

ಮೈದಾನದಲ್ಲಿಯೇ ಊಟ ಮಾಡುತ್ತಿರೋ ಜೈಸ್ವಾಲ್

ಅಲ್ಲಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯಾಟದಲ್ಲಿ ಸ್ಕೋರರ್ ಆಗಿ, ಬಾಲ್ ಬಾಯ್ ಆಗಿಯೂ ಕೆಲಸ ಮಾಡುತ್ತಿದ್ದ ಜೈಸ್ವಾಲ್ ಗೆ ಆ ದಿನ ಜೀವನಕ್ಕೆ ಹೊಸ ತಿರುವು ಸಿಕ್ಕಿತ್ತು. ಅದು 2013ರ ಡಿಸೆಂಬರ್ ತಿಂಗಳು. ಮುಂಬೈನ್ ಅಜಾದ್ ಮೈದಾನದಲ್ಲಿ ಎ ಡಿವಿಷನ್ ಕ್ರಿಕೆಟ್ ಪಂದ್ಯ ನಡೆಯುತ್ತಿತ್ತು. ಪಿಚ್ ಸಂಪೂರ್ಣವಾಗಿ ಒದ್ದೆಯಾಗಿತ್ತು. ಒದ್ದೆ ಪಿಚ್ ನಲ್ಲಿ ಬ್ಯಾಟಿಂಗ್ ಮಾಡೋದು ಬಲು ಸಾಹಸದ ಕೆಲಸ. ಆದರೆ ಯಶಸ್ವಿ ಜೈಸ್ವಾಲ್ ಒದ್ದೆ ಪಿಚ್ ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ವೈಖರಿಗೆ ಸ್ವತಃ ಯಶಸ್ವಿ ಜೈಸ್ವಾಲ್ ಕೋಚ್ ಫೀದಾ ಆಗಿದ್ರು. ಅಲ್ಲಿಂದ ಜೈಸ್ವಾಲ್ ಅನ್ನೋ ಕ್ರಿಕೆಟ್ ಪ್ರತಿಭೆ ಜಗತ್ತಿಗೆ ಅನಾವರಣಗೊಂಡಿತ್ತು.

ಕಿರಿಯರ ತಂಡವನ್ನು ಪ್ರತಿನಿಧಿಸುತ್ತಿದ್ದ ಜೈಸ್ವಾಲ್, ವಿಜಯ ಹಜಾರೆ ಟೂರ್ನಿಯಲ್ಲಿ ಮುಂಬೈ ತಂಡದ ಪರ ಬ್ಯಾಟ್ ಬೀಸಿದ್ದ ಜೈಸ್ವಾಲ್ ಜಾರ್ಖಂಡ್ ವಿರುದ್ದ ದ್ವಿಶತಕ ಬಾರಿಸಿ ವಿಶ್ವದಾಖಲೆಯನ್ನು ಹೆಸರಿಗೆ ಬರೆಯಿಸಿಕೊಂಡಿದ್ದ. ಇಂಡಿಯನ್ ಪ್ರೀಮಿಯರ್ ಏಕದಿನ ಸರಣಿಯಲ್ಲೂ ಮಿಂಚಿದ ಜೈಸ್ವಾಲ್ 5 ಇನ್ನಿಂಗ್ಸ್ ಗಳಲ್ಲಿ 3 ಶತಕ ಸಿಡಿಸೋ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದ..

ಬಡತನದಲ್ಲಿ ನೊಂದು ಬೆಂದಿದ್ದ ಜೈಸ್ವಾಲ್ ಐಪಿಎಲ್ ಟೂರ್ನಿಯಲ್ಲಿ ರಾಜಸ್ತಾನ ರಾಯಲ್ಸ್ ತಂಡಕ್ಕೆ ದಾಖಲೆಯ ಮೊತ್ತಕ್ಕೆ ಮಾರಾಟವಾಗಿದ್ದ. ಜೈಸ್ವಾಲ್ ಆಟಕ್ಕೆ ಮನಸೋತಿದ್ದ ರಾಜಸ್ತಾನ ತಂಡ ಬರೋಬ್ಬರಿ 1.3 ಕೋಟಿ ಕೊಟ್ಟು ಖರೀದಿಸಿದೆ. ಇದೀಗ ವಿಶ್ವಕಪ್ ಸರಣಿಯಲ್ಲಿ ಅಜೇಯ ಆಟವನ್ನು ಪ್ರದರ್ಶಿಸೋ ಮೂಲಕ ಭಾರತೀಯ ಹೃದಯದಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ.

ಕುಟುಂಬದೊಂದಿಗೆ ಜೈಸ್ವಾಲ್

ಯಶಸ್ವಿ ಜೈಸ್ವಾಲ್ ಅನ್ನೋ ಯುವ ಕ್ರಿಕೆಟಿಗನ ಆಟಕ್ಕೆ ಇದೀಗ ವಿಶ್ವದ ಕ್ರಿಕೆಟ್ ದಿಗ್ಗಜರೆ ಮನಸೋತಿದ್ದಾರೆ. ವಿಶ್ವಕಪ್ ಫೈನಲ್ ಪಂದ್ಯದಲ್ಲೂ ಯಶಸ್ವಿಯಾಗೋ ಮೂಲಕ ಜೈಸ್ವಾಲ್ ಭಾರತಕ್ಕೆ ಗೆಲುವನ್ನು ತರಲಿ ಅನ್ನೋದೇ ನಮ್ಮ ಆಶಯ.

Leave A Reply

Your email address will not be published.