ಬೆಂಗಳೂರು: ಕೇವಲ ಆರೇ ಆರು ರಣಜಿ ಪಂದ್ಯಗಳಲ್ಲಿ ಬರೋಬ್ಬರಿ 937 ರನ್. ಸಾವಿರ ರನ್ ಸರದಾರನಾಗಲು ಬಾಕಿ ಇರೋದಿನ್ನು ಬರೀ 63 ರನ್. ಇದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಆಟಗಾರ, ಮುಂಬೈ ಬ್ಯಾಟ್ಸ್”ಮನ್ ಸರ್ಫರಾಜ್ ಖಾನ್ (Sarfaraz Khan) ತಾಕತ್ತು.

24 ವರ್ಷದ ಸರ್ಫರಾಜ್ ಖಾನ್, ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಮಧ್ಯಪ್ರದೇಶ ವಿರುದ್ಧ ಭರ್ಜರಿ ಶತಕ ಸಿಡಿಸಿದ್ದಾರೆ. ಈ ಮೂಲಕ ಪ್ರಸಕ್ತ ರಣಜಿ ಟ್ರೋಫಿ ಟೂರ್ನಿಯಲ್ಲಿ 4ನೇ ಶತಕ ಬಾರಿಸಿದ್ದಾರೆ. ಮಧ್ಯಪ್ರದೇಶ ವಿರುದ್ಧದ ಫೈನಲ್ ಪಂದ್ಯದ ಮೊದಲ ಇನ್ನಿಂಗ್ಸ್”ನಲ್ಲಿ ಕುಸಿದ ಮುಂಬೈಗ ಆಸರೆಯಾದ ಸರ್ಫರಾಜ್ ಖಾನ್, 243 ಎಸೆತಗಳಲ್ಲಿ 13 ಬೌಂಡರಿ ಮತ್ತು 2 ಸಿಕ್ಸರ್ಸ್ ನೆರವಿನಿಂದ 134 ರನ್ ಗಳಿಸಿದರು. ಸರ್ಫರಾಜ್ ಸಾಹಸದಿಂದ 41 ಬಾರಿಯ ಚಾಂಪಿಯನ್ ಮುಂಬೈ, ತನ್ನ ಮೊದಲ ಇನ್ನಿಂಗ್ಸ್”ನಲ್ಲಿ 374 ರನ್’ಗಳ ಉತ್ತಮ ಮೊತ್ತ ಕಲೆ ಹಾಕಿತು.
ಈ ಬಾರಿಯ ರಣಜಿ ಟ್ರೋಫಿ ಟೂರ್ನಿಯಲ್ಲಿ ಅಕ್ಷರಶಃ ಅಬ್ಬರಿಸುತ್ತಿರುವ ಸರ್ಫರಾಜ್ ಖಾನ್, ಆಡಿರುವ 6 ಪಂದ್ಯಗಳಲ್ಲಿ 4 ಶತಕಗಳ ಸಹಿತ 937 ರನ್ ಕಲೆ ಹಾಕಿದ್ದಾರೆ. ಇದರಲ್ಲಿ ಒಂದು ದ್ವಿಶತಕವೂ ಸೇರಿದೆ. ಸೌರಾಷ್ಟ್ರ ವಿರುದ್ಧ 275, ಒಡಿಶಾ ವಿರುದ್ಧ 165 ರನ್, ಗೋವಾ ವಿರುದ್ಧ 63 ಮತ್ತು 48 ರನ್, ಉತ್ತರಾಖಂಡ್ ವಿರುದ್ಧದ ಕ್ವಾರ್ಟರ್ ಫೈನಲ್’ನಲ್ಲಿ 153 ರನ್, ಉತ್ತರ ಪ್ರದೇಶ ವಿರುದ್ಧದ ಸೆಮಿಫೈನಲ್’ನಲ್ಲಿ 40 ಮತ್ತು ಅಜೇಯ 59 ರನ್, ಈಗ ಮಧ್ಯಪ್ರದೇಶ ವಿರುದ್ಧದ ಫೈನಲ್ ಪಂದ್ಯದಲ್ಲಿ 134 ರನ್.
2019-20ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲೂ ಅಬ್ಬರಿಸಿದ್ದ ಸರ್ಫರಾಜ್ ಖಾನ್ 6 ಪಂದ್ಯಗಳಿಂದ 3 ಶತಕಗಳ ಸಹಿತ 928 ರನ್ ಕಲೆ ಹಾಕಿದ್ದರು. ಇದರಲ್ಲೊಂದು ಅಜೇಯ ತ್ರಿಶತಕವೂ ಸೇರಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಐಪಿಎಲ್ ಪಂದ್ಯಗಳನ್ನಾಡುತ್ತಿದ್ದಾಗ ವೆಸ್ಟ್ ಇಂಡೀಸ್ ದಿಗ್ಗಜ ಕ್ರಿಸ್ ಗೇಲ್, ಸರ್ಫರಾಜ್ ಖಾನ್ ಅವರನ್ನು ಪಾಂಡಾ ಎಂದು ಕರೆದದ್ದು ವೈರಲ್ ಆಗಿತ್ತು.
ರಣಜಿ ಟ್ರೋಫಿ 2021-22 : ಸರ್ಫರಾಜ್ ಖಾನ್ (Sarfaraz Khan) ಸಾಧನೆ
ಪಂದ್ಯ: 06
ಇನ್ನಿಂಗ್ಸ್: 08
ರನ್: 937
ಸರಾಸರಿ: 133.85
ಶತಕ: 04
ಅರ್ಧಶತಕ: 02
ಬೆಸ್ಟ್: 275
ಕಳೆದ 14 ರಣಜಿ ಇನ್ನಿಂಗ್ಸ್’ಗಳಲ್ಲಿ ಸರ್ಫರಾಜ್ ಖಾನ್:
301, 226, 25, 78, 177, 06, 275, 63, 48, 165, 153, 40, 59*, 134.
ಇದನ್ನೂ ಓದಿ : Dinesh Karthik : 18 ವರ್ಷ 10 ಮಂದಿಯ ನಾಯಕತ್ವದಲ್ಲಿ ಆಡಿದ ದಿನೇಶ್ ಕಾರ್ತಿಕ್
ಇದನ್ನೂ ಓದಿ : ಲಂಡನ್‌ನಲ್ಲಿ ಕ್ರಿಸ್ ಗೇಲ್ ಭೇಟಿ ಮಾಡಿದ ಆರ್‌ಸಿಬಿ ಮಾಜಿ ಓನರ್ ವಿಜಯ್ ಮಲ್ಯ
937 runs in 6 matches, RCB Player Sarfaraz Khan performance in Ranji cricket