UP Yoddhas vs Bengaluru Bulls : ಇಂದು ಯು.ಪಿ ಯೋಧಾ ವಿರುದ್ಧ ಗೆದ್ದರೆ ಬೆಂಗಳೂರು ಬುಲ್ಸ್’ಗೆ ಪ್ಲೇ ಆಫ್ ಟಿಕೆಟ್

ಹೈದರಾಬಾದ್: ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್ ಭಾನುವಾರ ನಡೆಯುವ ಯು.ಪಿ ಯೋಧಾ (UP Yoddhas vs Bengaluru Bulls) ವಿರುದ್ಧದ ಪಂದ್ಯವನ್ನು ಗೆದ್ದರೆ ಪ್ರೊ ಕಬಡ್ಡಿ ಲೀಗ್ (Pro Kabaddi League) 9ನೇ ಆವೃತ್ತಿಯಲ್ಲಿ ಪ್ಲೇ ಆಫ್ ಹಂತಕ್ಕೆ ಅರ್ಹತೆ ಪಡೆಯಲಿದೆ.

ಹೈದರಾಬಾದ್’ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ತನ್ನ 20ನೇ ಲೀಗ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್, ಯು.ಪಿ ಯೋಧಾ ವಿರುದ್ಧ ಗೆದ್ದರೆ ಮೂರನೇ ತಂಡವಾಗಿ ಪ್ಲೇ ಆಫ್’ಗೆ ಎಂಟ್ರಿ ಕೊಡಲಿದೆ. ಈಗಾಗಲೇ ಜೈಪುರ ಪಿಂಕ್ ಪ್ಯಾಂಥರ್ಸ್ ಮತ್ತು ಪುಣೇರಿ ಪಲ್ಟನ್ ತಂಡಗಳು ಪ್ಲೇ ಆಫ್ ಹಂತಕ್ಕೇರಿದ್ದು, ಭಾನುವಾರ ನಡೆಯುವ ಬೆಂಗಳೂರು ಬುಲ್ಸ್ ಹಾಗೂ ಯು.ಪಿ ಯೋಧಾ ನಡುವಿನ ಪಂದ್ಯದಲ್ಲಿ ಗೆದ್ದವರು ಮೂರನೇ ತಂಡವಾಗಿ ಪ್ಲೇ ಆಫ್ ಹಂತ ಪ್ರವೇಶಿಸಲಿದ್ದಾರೆ.

ಬೆಂಗಳೂರು ಬುಲ್ಸ್ ತಂಡ ಆಡಿರುವ 19 ಪಂದ್ಯಗಳಿಂದ 11 ಗೆಲುವು, 7 ಸೋಲು, 1 ಟೈ ಸಹಿತ ಒಟ್ಟು 63 ಅಂಕ ಕಲೆ ಹಾಕಿ 4ನೇ ಸ್ಥಾನದಲ್ಲಿದ್ರೆ, ಯು.ಪಿ ಯೋಧಾ ಪಡೆ 19 ಪಂದ್ಯಗಳಿಂದ 11 ಗೆಲುವು, 6 ಸೋಲು ಹಾಗೂ 2 ಟೈಗಳೊಂದಿಗೆ 65 ಅಂಕ ಕಲೆಹಾಕಿ ಪಾಯಿಂಟ್ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಭಾನುವಾರ ನಡೆಯುವ ಮತ್ತೊಂದು ಪಂದ್ಯದಲ್ಲಿ ಯು ಮುಂಬಾ ಹಾಗೂ ಗುಜರಾತ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿದ್ದು, ಪ್ಲೇ ಆಫ್ ರೇಸ್’ನಲ್ಲಿ ಈ ಪಂದ್ಯ ಎರಡೂ ತಂಡಗಳಿಗೆ ಮಹತ್ವದ್ದಾಗಿದೆ. ಸೋತ ತಂಡ ಪ್ಲೇ ಆಫ್ ರೇಸ್’ನಿಂದ ಬಹುತೇಕ ಹೊರ ಬೀಳಲಿದೆ.

ಶನಿವಾರ ನಡೆದ ಪಂದ್ಯಗಳಲ್ಲಿ ಬೆಂಗಾಲ್ ವಾರಿಯರ್ಸ್ ವಿರುದ್ಧ ಜೈಪುರ ಪಿಂಕ್ ಪ್ಯಾಂಥರ್ಸ್ 57-31ರ ಭರ್ಜರಿ ಗೆಲುವು ದಾಖಲಿಸಿ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡ್ರೆ, ಮತ್ತೊಂದು ಪಂದ್ಯದಲ್ಲಿ ತಮಿಳ್ ತಲೈವಾಸ್ ತಂಡ ತೆಲುಗು ಟೈಟನ್ಸ್ ತಂಡವನ್ನು 52-24ರಿಂದ ಬಗ್ಗು ಬಡಿದು ಒಟ್ಟು 61 ಅಂಕಗಳೊಂದಿಗೆ ಪ್ಲೇ ಆಫ್ ಹಂತಕ್ಕೆ ಮತ್ತಷ್ಟು ಹತ್ತಿರವಾಯಿತು. ದಿನದ ಮತ್ತೊಂದು ಪಂದ್ಯದಲ್ಲಿ ಪುಣೇರಿ ಪಲ್ಟನ್ ವಿರುದ್ಧ 44-47ರಲ್ಲಿ ಸೋತ ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ಪ್ಲೇ ಆಫ್ ಹಾದಿಯನ್ನು ಮತ್ತಷ್ಟು ದುರ್ಗಮಗೊಳಿಸಿಕೊಂಡಿತು.

ಇದನ್ನೂ ಓದಿ : Pro Kabaddi League: ಇಂದು “ತ್ರಿಪಲ್ ಪಂಗಾ”, ಸತತ 6ನೇ ಸೋಲಿನ ಭೀತಿಯಲ್ಲಿ ಹಾಲಿ ಚಾಂಪಿಯನ್ಸ್ ದಬಾಂಗ್ ಡೆಲ್ಲಿ

ಇದನ್ನೂ ಓದಿ : Pro Kabaddi League: ದಕ್ಷಿಣ ಭಾರತ ಡರ್ಬಿಯಲ್ಲಿ ತಲೈವಾಸ್ ವಿರುದ್ಧ ಗೆದ್ದರೆ ಬೆಂಗಳೂರು ಬುಲ್ಸ್ ಟೇಬಲ್ ಟಾಪರ್

ಇದನ್ನೂ ಓದಿ : Puneri Paltan vs Bengaluru Bulls : ಪಾಯಿಂಟ್ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಕುಸಿದ ಬೆಂಗಳೂರು ಬುಲ್ಸ್

UP Yoddhas vs Bengaluru Bulls : ಪ್ರೊ ಕಬಡ್ಡಿ ಲೀಗ್-9: ಭಾನುವಾರದ ಪಂದ್ಯಗಳು (Pro Kabaddi League)

  1. ಗುಜರಾತ್ ಜೈಂಟ್ಸ್ Vs ಯು ಮುಂಬಾ
  2. ಬೆಂಗಳೂರು ಬುಲ್ಸ್ Vs ಯು.ಪಿ ಯೋಧಾ

ಸ್ಥಳ: ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣ, ಹೈದರಾಬಾದ್
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್

Bengaluru Bulls’ play off ticket if they win against UP Yodha today

Comments are closed.