ಶಾರ್ಜ: ಉದಯೋನ್ಮುಖ ಆಟಗಾರ ಸಜು ಸ್ಯಾಮ್ಸನ್ ಹಾಗೂ ಸ್ಮಿತ್ ಸ್ಪೋಟಕ ಬ್ಯಾಟಿಂಗ್ ನಿಂದಾಗಿ ಐಪಿಎಲ್ 2020 ಟೂರ್ನಿಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ 16 ರನ್ ಗಳಿಂದ ಗೆಲುವು ಸಾಧಿಸಿದೆ. ಈ ಮೂಲಕ ರಾಜಸ್ಥಾನ ರಾಯಲ್ಸ್ ತಂಡ ಪ್ರಸಕ್ತ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 216 ರನ್ ಗಳಿಸಿತು. ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ (6) ರನ್ ಗಳಿಸಿ ನಿರ್ಗಮಿಸುತ್ತಲೇ ನಾಯಕ ಸ್ಟೀವ್ ಸ್ಮಿತ್ ಜೊತೆಗೂಡಿದ ಯುವ ಆಟಗಾರ ಸಂಜು ಸ್ಯಾಮ್ಸನ್ ಶತಕದ ಜತೆಯಾಟವಾಡಿ ತಂಡಕ್ಕೆ ಭದ್ರ ಬುನಾದಿ ಹಾಕಿದರು.

ಕೇವಲ 34 ಎಸೆತಗಳಲ್ಲಿ 9 ಸಿಕ್ಸರ್, 1 ಬೌಂಡರಿ ನೆರವಿನೊಂದಿಗೆ ಸ್ಫೋಟಕ 74 ರನ್ ಕಲೆಹಾಕಿದ್ದ ಸ್ಯಾಮ್ಸನ್ ಬಿರುಸಿನ ಹೊಡೆತಕ್ಕೆ ಕೈಹಾಕಿ ಕ್ಯಾಚಿತ್ತು ನಿರ್ಗಮಿಸಿದರು. ಇದರ ಬೆನ್ನಲ್ಲೇ ಬಾಲಂಗೋಚಿಯಂತೆ ಡೇವಿಡ್ ಮಿಲ್ಲರ್ (0), ರಾಬಿನ್ ಉತ್ತಪ್ಪ (5), ರಾಹುಲ್ ತೆವಾಟಿಯಾ (10), ರಿಯಾನ್ ಪರಾಗ್ (6) ಟಾಮ್ ಕರನ್ (0) ವಿಕೆಟ್ ಒಪ್ಪಿಸಿ ಪೆವಲಿಯನ್ ಸೇರಿದರು. ಜವಾಬ್ದಾರಿಯುತ ಆಟವಾಡಿದ ಸ್ಮಿತ್ 47 ಎಸೆತಗಳಲ್ಲಿ 4 ಸಿಕ್ಸರ್, 4 ಬೌಂಡರಿ ನೆರವಿನೊಂದಿಗೆ 69 ರನ್ ಗಳಿಸಿ ತಂಡಕ್ಕೆ ಆಸರೆಯಾದರು.

ಕೊನೆಯಲ್ಲಿ ಅಬ್ಬರಿಸಿದ ಜೋಫ್ರಾ ಆರ್ಚರ್ ಕೇವಲ 8 ಎಸೆತಗಳಲ್ಲಿ 4 ಸಿಕ್ಸರ್ ನೆರವಿನೊಂದಿಗೆ 27* ರನ್ ಗಳಿಸಿದರೆ, ಟಾಮ್ ಕರನ್ (10*) ರನ್ ಕಲೆಹಾಕಿ ಅಜೇಯರಾಗಿ ಉಳಿದರು. ಸಿಎಸ್ಕೆ ಪರ ಸ್ಯಾಮ್ ಕರನ್ 3 ವಿಕೆಟ್ ಕಬಳಿಸಿದರೆ, ದೀಪಕ್ ಚಹಾರ್, ಲುಂಗಿ ಎನ್‌ಗಿಡಿ ಹಾಗೂ ಪಿಯೂಷ್ ಚಾವ್ಲ ತಲಾ 1 ವಿಕೆಟ್ ಪಡೆದರು.

ರಾಜಸ್ತಾನ್ ರಾಯಲ್ಸ್ ತಂಡ ನೀಡಿದ ಬೃಹತ್ ಮೊತ್ತವನ್ನು ಬೆನ್ನತ್ತಿದ ಚೆನ್ಮೈ ತಂಡಕ್ಕೆ ಮುರಳಿ ವಿಜಯ್ ಮತ್ತು ಶೇನ್ ವ್ಯಾಟ್ಸನ್ 56 ರನ್ಗಳ ಜತೆಯಾಟದೊಂದಿಗೆ ಉತ್ತಮ ಆರಂಭ ಒದಗಿಸಿದರು. ಆದರೆ, 33 ರನ್ ಗಳಿಸಿದ್ದ ವ್ಯಾಟ್ಸನ್ ಹಾಗೂ 21 ರನ್ ಗಳಿಸಿದ್ದ ವಿಜಯ್ ಬ್ಯಾಕ್ ಟು ಬ್ಯಾಕ್ ವಿಕೆಟ್ ಒಪ್ಪಿಸಿದ್ದು ತಂಡಕ್ಕೆ ಹಿನ್ನೆಡೆಯಾಯಿತು.

ಇತ್ತ ಫ್ಲಾಫ್ ಡುಪ್ಲೆಸಿಸ್ಗೆ ಸಾಥ್ ನೀಡುತ್ತಿದ್ದ ಸ್ಯಾಮ್ ಕರನ್ (17) ರನ್ ಗಳಿಸಿ ಕ್ಯಾಚಿತ್ತು ನಿರ್ಗಮಿಸಿದರು. ಇದರ ಬೆನಲ್ಲೇ ರುತುರಾಜ್ ಗಾಯಕ್ವಾಡ್ ರನ್ ಖಾತೆ ತೆರೆಯದೇ ಹಿಂದಿರುಗಿದರು. ಬಳಿಕ ಬಂದ ಕೇದರ್ ಜಾಧವ್ (22) ಉತ್ತಮವಾಗಿ ಆಡಿದರೂ ಸಹ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ.

ಮೂರನೇ ಕ್ರಮಾಂಕದಲ್ಲಿ ಇಳಿದು ಕೊನೆಯವರೆಗೂ ಸ್ಫೋಟಕ ಆಟವಾಡಿದ ಡು ಪ್ಲೆಸಿಸ್ ಕೇವಲ 37 ಎಸೆತಗಳಲ್ಲಿ 7 ಸಿಕ್ಸರ್, 1 ಬೌಂಡರಿ ನೆರವಿನಿಂದ 72 ರನ್ ಗಳಿಸಿ ಏಕಾಂಗಿಯಾಗಿ ಹೋರಾಡಿದರೂ. ಆದರೆ, ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ಗಳು ಸಾಥ್ ನೀಡದೇ ಇದ್ದಿದ್ದು ತಂಡಕ್ಕೆ ಹಿನ್ನೆಡೆಯಾಯಿತು. ಕೊನೆಯಲ್ಲಿ ಅಬ್ಬರಿಸಿದ ನಾಯಕ ಧೋನಿ ಕೇವಲ 16 ಎಸೆತಗಳಲ್ಲಿ 3 ಸಿಕ್ಸರ್ ನೆರವಿನಿಂದ ಅಜೇಯ 28 ರನ್ ಗಳಿಸಿದರೂ ಗೆಲವು ಮಾತ್ರ ದಕ್ಕಲಿಲ್ಲ.

ರವೀಂದ್ರ ಜಡೇಜಾ 1 ರನ್ ಗಳಿಸಿ ಅಜೇಯರಾಗಿ ಉಳಿದರು. ರಾಜಸ್ಥಾನ ಪರ ರಾಹುಲ್ ತೆವಾಟಿಯಾ ಪ್ರಮುಖ ಮೂರು ವಿಕೆಟ್ ಕಬಳಿಸಿ ಮಿಂಚಿದರು. ಉಳಿದಂತೆ ಜೋಫ್ರಾ ಆರ್ಚರ್, ಶ್ರೇಯಸ್ ಗೋಪಾಲ್ ಮತ್ತು ಟಾಮ್ ಕುರನ್ ತಲಾ 1 ವಿಕೆಟ್ಗೆ ತೃಪ್ತಿಪಟ್ಟರು.