ದುಬೈ : ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಜಯಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈಗಾಗಲೇ ಫೈನಲ್ ಪ್ರವೇಶಿಸಿದೆ. ಎರಡನೇ ಎಲಿಮಿನೇಟರ್ ಪಂದ್ಯ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ್ತಾ ನೈಟ್‌ರೈಡರ್ಸ್ ತಂಡ ನಡುವೆ ನಡೆಯಲಿದೆ. ಆದರೆ ಪಂದ್ಯ ಆರಂಭಕ್ಕೂ ಮುನ್ನವೇ ಆರ್‌ಸಿಬಿ ತಂಡದ ಸ್ಟಾರ್ ಆಟಗಾರರು ತಂಡದಿಂದ ಹೊರ ನಡೆದಿದ್ದಾರೆ.

ಐಪಿಎಲ್ ಪಂದ್ಯಾವಳಿಯನ್ನೂ ಇನ್ನೂ ಜಯಿಸದ ಆರ್‌ಸಿಬಿ ಟ್ರೋಫಿಯ ಮೇಲೆ ಕಣ್ಣಿಟ್ಟಿದೆ. ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿರುವ ಕೊಯ್ಲಿ ಪಡೆ ಕೆಕೆಆರ್ ತಂಡದ ವಿರುದ್ದ ಗೆಲ್ಲುವ ವಿಶ್ವಾಸದಲ್ಲಿದೆ. ಆದರೆ ತಂಡದ ಸ್ಟಾರ್ ಆಟಗಾರರಾದ ಶ್ರೀಲಂಕಾದ ವಾನಿಂದು ಹಸರಂಗ ಹಾಗೂ ದುಷ್ಮಾಂತ ಚಮೀರ ಈಗಾಗಲೇ ಆರ್‌ಸಿಬಿ ಪಾಳಯವನ್ನು ತೊರೆದಿದ್ದಾರೆ. ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿರುವ ಈ ಇಬ್ಬರೂ ಆಟಗಾರರು ಅಕ್ಟೋಬರ್ 10 ರ ಒಳಗೆ ತಂಡವನ್ನು ಕೂಡಿಕೊಳ್ಳುವಂತೆ ಈಗಾಗಲೇ ಶ್ರೀಲಂಕಾ ಕ್ರಿಕೆಟ್ ಮಂಡಳಿ ಸೂಚನೆಯನ್ನು ನೀಡಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲಿ ಇಬ್ಬರು ಅಲಭ್ಯರಾಗಲಿದ್ದಾರೆ.
ಇನ್ನೊಂದೆಡೆಯಲ್ಲಿ ಕೆಕೆಆರ್ ತಂಡ ಪ್ರಸಕ್ತ ಐಪಿಎಲ್ ಋತುವಿನಲ್ಲಿ ಶ್ರಮವಹಿಸಿ ಕ್ವಾಲಿಫೈಯರ್ ಪ್ರವೇಶವನ್ನು ಕಂಡಿದೆ. ಆದರೆ ಆರ್‌ಸಿಬಿ ವಿರುದ್ದ ಇಂದಿನ ಪಂದ್ಯದಲ್ಲಿ ಕೆಕೆಆರ್ ತಂಡಕ್ಕೆ ಕೂಡ ಹೊಡೆತ ಬಿದ್ದಿದೆ. ಬಾಂಗ್ಲಾದೇಶ ತಂಡ ಪ್ರಮುಖ ಆಟಗಾರ ಶಕೀಬ್ ಹಲ್ ಹಸನ್ ರಾಷ್ಟ್ರೀಯ ತಂಡವನ್ನು ಸೇರಿಕೊಂಡಿದ್ದಾರೆ. ಹೀಗಾಗಿ ಇಂದಿನ ಪಂದ್ಯಕ್ಕೆ ಅವರು ಅಲಭ್ಯರಾಗಲಿದ್ದಾರೆ. ಆಲ್‌ರೌಂಡರ್ ಆಟಗಾರ ತಂಡದಿಂದ ಹೊರ ನಡೆದಿರೋದು ಕೆಕೆಆರ್ ತಂಡಕ್ಕೆ ಆಘಾತವನ್ನು ನೀಡಿದೆ.

ಎರಡನೇ ಎಲಿಮಿನೇಟರ್ ಪಂದ್ಯದಲ್ಲಿ ಗೆಲ್ಲುವ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಸೆಣೆಸಾಡಲಿದೆ. ಅಲ್ಲಿ ಗೆಲ್ಲುವ ತಂಡ ಚೆನ್ನೈ ವಿರುದ್ದ ಫೈನಲ್ ಪಂದ್ಯದಲ್ಲಿ ಕಾದಾಟ ನಡೆಸಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಇಂದಿನ ಪಂದ್ಯ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವ ಅವಕಾಶವನ್ನು ಪಡೆದಿರುವ ಕೊಯ್ಲಿ ಪಡೆದ ಕಠಿಣ ಅಭ್ಯಾಸದಲ್ಲಿ ನಿರತವಾಗಿದೆ.