KL Rahul vs Rishabh Pant : ಯಾರಾಗ್ತಾರೆ ಗೊತ್ತಾ ಟೀಂ ಇಂಡಿಯಾ ನಾಯಕ ?

ಮುಂಬೈ : ಟೀಂ ಇಂಡಿಯಾ ಟಿ20 ವಿಶ್ವಕಪ್‌ಗೆ ಸಿದ್ದವಾಗುತ್ತಿದೆ. ಇನ್ನೊಂದೆಡೆಯಲ್ಲಿ ಗ್ರೇಟ್‌ ವಾಲ್‌ ಕನ್ನಡಿಗ ರಾಹುಲ್‌ ದ್ರಾವಿಡ್‌ ಟೀಂ ಇಂಡಿಯಾದ ಮುಖ್ಯ ಕೋಚ್‌ ಆಗಿ ನೇಮಕ ಗೊಂಡಿದ್ದಾರೆ. ಜೊತೆಗೆ ವಿಶ್ವಕಪ್‌ ಬೆನ್ನಲ್ಲೇ ಟಿ20 ತಂಡದ ನಾಯಕತ್ವಕ್ಕೆ ವಿರಾಟ್‌ ಕೊಯ್ಲಿ ರಾಜೀನಾಮೆಯನ್ನು ನೀಡಲಿದ್ದಾರೆ. ಈ ಹಿನ್ನೆಲೆಯಲ್ಲೀಗ ಟೀಂ ಇಂಡಿಯಾದ ನಾಯಕ ಯಾರು ಅನ್ನೋ ಬಗ್ಗೆ ಚರ್ಚೆ ಶುರುವಾಗಿದೆ. ಟೀಂ ಇಂಡಿಯಾದ ನಾಯಕನ ಸ್ಥಾನಕ್ಕೆ ಹಲವು ಹೆಸರುಗಳು ಕೇಳಿಬರುತ್ತಿವೆಯಾದ್ರೂ ಆ ಎರಡು ಹೆಸರುಗಳೇ ಬಹುತೇಕ ಫೈನಲ್‌ ಆಗುವ ಸಾಧ್ಯತೆಯಿದೆ.

ವಿರಾಟ್‌ ಕೊಯ್ಲಿ ರಾಜೀನಾಮೆಯ ಬೆನ್ನಲ್ಲೇ ಟೀಂ ಇಂಡಿಯಾದ ನಾಯಕನಾಗಲು ರೋಹಿತ್‌ ಶರ್ಮಾ, ಅಜಿಂಕ್ಯಾ ರಹಾನೆ, ಶ್ರೇಯಸ್‌ ಅಯ್ಯರ್‌, ಶಿಖರ್‌ ಧವನ್‌, ಭುವನೇಶ್ವರ್‌ ಕುಮಾರ್‌, ಕೆ.ಎಲ್.ರಾಹುಲ್‌ ಹಾಗೂ ರಿಷಬ್‌ ಪಂತ್‌ ಹೆಸರಗಳು ಮುಂಚೂಣಿಯಲ್ಲಿ ಕೇಳಿಬರುತ್ತಿದೆ. ಆದರೆ ಭವಿಷ್ಯದ ದೃಷ್ಠಿಯಿಂದ ಯುವ ಆಟಗಾರರಿಗೆ ಬಿಸಿಸಿಐ ಮಣೆ ಹಾಕುವ ಸಾಧ್ಯತೆ ತೀರಾ ದಟ್ಟವಾಗುತ್ತಿದೆ. ರೋಹಿತ್‌ ಶರ್ಮಾ ಈಗಾಗಲೇ ವಯಸ್ಸು ದಾಟುತ್ತಿದ್ದು, ನಾಯಕತ್ವವನ್ನು ನೀಡಿದ್ರೆ ಹೆಚ್ಚು ವರ್ಷ ಸೇವೆಯನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಇನ್ನು ಭುವನೇಶ್ವರ್‌ ಕುಮಾರ್‌ ಎಲ್ಲಾ ಪಂದ್ಯಗಳಿಗೆ ಲಭ್ಯವಾಗುತ್ತಿಲ್ಲ. ಜೊತೆಗೆ ಶಿಖರ್‌ ಧವನ್‌ ಕೂಡ ರೋಹಿತ್‌ ಶರ್ಮಾರಂತೆಯೇ ವಯಸ್ಸಿನ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ.

Virat Kohli is the captain of the Indian team and MS Dhoni is the mentor

ಇನ್ನು ಶ್ರೇಯಸ್‌ ಅಯ್ಯರ್‌, ಕೆ.ಎಲ್.ರಾಹುಲ್‌ ಹಾಗೂ ರಿಷಬ್‌ ಪಂತ್‌ ನಡುವೆ ಪೈಪೋಟಿ ಏರ್ಪಟ್ಟರೂ ಕೂಡ ಮೂರು ಫಾರ್ಮೆಟ್‌ನಲ್ಲಿಯೂ ತಂಡವನ್ನು ಮುನ್ನಡೆಸುವ ಆಟಗಾರ ನ ಅಗತ್ಯತೆ ಎದ್ದು ಕಾಣುತ್ತಿದೆ. ಶ್ರೇಯಸ್‌ ಅಯ್ಯರ್‌ ಫಾರ್ಮ್‌ ಕೊರತೆ ನಾಯಕತ್ವ ಪಟ್ಟಕ್ಕೇರದಂತೆ ತಡೆಯುತ್ತಿದೆ. ಶ್ರೇಯಸ್‌ ಅಯ್ಯರ್‌ ಇದುವರೆಗೂ ಟೆಸ್ಟ್‌ ಪಂದ್ಯವನ್ನಾಡಿಲ್ಲ. ಹೀಗಾಗಿ ಬಿಸಿಸಿಐ ಮುಂದಿರುವ ಆಯ್ಕೆ ಕನ್ನಡಿಗ ಕೆ.ಎಲ್.ರಾಹುಲ್‌ ಹಾಗೂ ಉತ್ತರಾಖಂಡದ ರಿಷಬ್‌ ಪಂತ್.‌

ರಾಹುಲ್‌ ದ್ರಾವಿಡ್‌ ನಂತರದಲ್ಲಿ ಭಾರತದ ತಂಡದ ಭರವಸೆಯ ಆಟಗಾರ ಅನ್ನೋ ಖ್ಯಾತಿ ಕೆ.ಎಲ್.ರಾಹುಲ್‌ಗೆ ಸಲ್ಲುತ್ತಿದೆ. ಟೆಸ್ಟ್‌, ಏಕದಿನ, ಟಿ20, ಐಪಿಎಲ್‌ ಪಂದ್ಯಗಳಲ್ಲಿ ರಾಹುಲ್‌ ಭರ್ಜರಿ ಪ್ರದರ್ಶನವನ್ನು ನೀಡುತ್ತಿದ್ದಾರೆ. ಇನ್ನೊಂದೆಡೆಯಲ್ಲಿ ದೇಶೀಯ ಪಂದ್ಯಾವಳಿಯಲ್ಲಿಯೂ ಅತ್ಯುತ್ತಮವಾದ ಆಟವನ್ನು ಪ್ರದರ್ಶಿಸಿದ್ದಾರೆ. ಬ್ಯಾಟಿಂಗ್‌ ಜೊತೆಗೆ ಕೀಪಿಂಗ್‌ ನಲ್ಲಿಯೂ ರಾಹುಲ್‌ ಸಾಧನೆಯನ್ನು ಮಾಡಿದ್ದಾರೆ. ಅಲ್ಲದೇ ಆರಂಭಿಕನಾಗಿ ಮಾತ್ರವಲ್ಲದೇ ಯಾವುದೇ ಕ್ರಮಾಂಕದಲ್ಲಿಯೂ ಬ್ಯಾಟಿಂಗ್‌ ನಡೆಸಲು ಸೈ ಎನಿಸಿಕೊಂಡಿದ್ದಾರೆ ರಾಹುಲ್.‌ ಜೊತೆಗೆ ಪಂಜಾಬ್‌ ಕಿಂಗ್ಸ್‌ ತಂಡದ ನಾಯಕರಾಗಿಯೂ ಗಮನಾರ್ಹ ಸಾಧನೆಯನ್ನು ಮಾಡಿದ್ದಾರೆ.

ಕೆ.ಎಲ್.ರಾಹುಲ್‌ ಸಾಧನೆ

ಕನ್ನಡಿಗ ಕೆ.ಎಲ್.ರಾಹುಲ್‌ ಹುಟ್ಟಿದ್ದು ಮಂಗಳೂರಿನಲ್ಲಿ, ಭಾರತ ತಂಡದ ಆರಂಭಿಕ ಆಟಗಾರನಾಗಿ ಗುರುತಿಸಿಕೊಂಡಿರುವ ರಾಹುಲ್‌ ತಮ್ಮ ಸೌಮ್ಯ ಸ್ವಭಾವದ ಮೂಲಕವೇ ಎಲ್ಲರಿಗೂ ಅಚ್ಚು ಮೆಚ್ಚಾಗಿದ್ದಾರೆ. ರಾಹುಲ್‌ ಈಗಾಗಲೇ ಟೀ ಇಂಡಿಯಾದ ಉಪ ನಾಯಕನಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಪಂಜಾಬ್‌ ಕಿಂಗ್ಸ್‌ ತಂಡ ನಾಯಕನಾಗಿ ಅತ್ಯುತ್ತಮ ಆಟವನ್ನು ಪ್ರದರ್ಶಿಸಿದ್ದಾರೆ. ಟಿ 20 ಪಂದ್ಯಗಳಲ್ಲಿ ಅಬ್ಬರಿಸುತ್ತಿರುವ ರಾಹುಲ್‌ ಹೆಸರು ಟೀಂ ಇಂಡಿಯಾ ನಾಯಕನ ಸ್ಥಾನಕ್ಕೆ ಬಲವಾಗಿ ಕೇಳಿಬರುತ್ತಿದೆ.

29 ವರ್ಷ ಪ್ರಾಯದ ಕೆ.ಎಲ್.ರಾಹುಲ್‌ ಇದುವರೆಗೆ 40 ಟೆಸ್ಟ್‌ ಪಂದ್ಯಗಳನ್ನು ಆಡಿದ್ದಾರೆ. 68 ಇನ್ನಿಂಗ್ಸ್‌ಗಳ ಮೂಲಕ 35.17ರ ಸರಾಸರಿಯೊಂದಿಗೆ 2321ರನ್‌ ಸಿಡಿಸಿದ್ದಾರೆ. ಅಲ್ಲದೇ ಇದುವರೆಗೆ ಒಟ್ಟು 6 ಬಾರಿ ಶತಕ ಹಾಗೂ 12 ಬಾರಿ ಅರ್ಧಶತಕ ಬಾರಿಸಿದ್ದಾರೆ. ಇನ್ನಿಂಗ್ಸ್‌ವೊಂದರಲ್ಲಿ ಅತ್ಯಧಿಕ 199 ರನ್‌ ಸಿಡಿಸಿದ್ದು, ಸದ್ಯ 54.13ರ ಸ್ಟ್ರೈಕ್‌ ರೇಟ್‌ ಹೊಂದಿದ್ದಾರೆ.

ಇನ್ನು 38 ಏಕದಿನ ಪಂದ್ಯಗಳನ್ನು ಆಡಿರುವ ರಾಹುಲ್‌ 37 ಇನ್ನಿಂಗ್ಸ್‌ ಮೂಲಕ 46.48ರ ಸರಾಸರಿಯೊಂದಿಗೆ 1509ರನ್‌ ಬಾರಿಸಿದ್ದಾರೆ. ಇದರಲ್ಲಿ 5 ಶತಕ ಹಾಗೂ 9 ಅರ್ಧಶತಕ ಒಳಗೊಂಡಿದೆ. ಇನ್ನಿಂಗ್ಸ್‌ನಲ್ಲಿ ಅತ್ಯಧಿಕ 112 ರನ್‌ ಬಾರಿಸಿದ್ದು, 89. 29ರ ಸ್ಟ್ರೈಕ್‌ ರೇಟ್‌ ಕಾಯ್ದುಕೊಂಡಿದ್ದಾರೆ.

ಟಿ20 ಪಂದ್ಯಗಳಲ್ಲಿಯೂ ರಾಹುಲ್‌ ಉತ್ತಮ ದಾಖಲೆ ಬರೆದಿದ್ದಾರೆ. ಒಟ್ಟು 48 ಟಿ20 ಪಂದ್ಯಗಳನ್ನು ಆಡಿರುವ ರಾಹುಲ್‌ 45 ಇನ್ನಿಂಗ್ಸ್‌ಗಳಲ್ಲಿ 39.92ರ ಸರಾಸರಿಯೊಂದಿಗೆ 1557ರನ್‌ ಬಾರಿಸಿದ್ದಾರೆ. 2ಬಾರಿ ಶತಕ ಬಾರಿಸಿರುವ ರಾಹುಲ್‌ 12 ಬಾರಿ ಅರ್ಧ ಶತಕವನ್ನು ಸಿಡಿಸಿದ್ದಾರೆ. ಇನ್ನಿಂಗ್ಸ್‌ವೊಂದರಲ್ಲಿ ಅತ್ಯಧಿಕ 110 ರನ್‌ ಬಾರಿಸಿದ್ದು, 142.19 ರ ಸ್ಟ್ರೈಕ್‌ ರೇಟ್‌ ಹೊಂದಿದ್ದಾರೆ.

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿಯೂ ರಾಹುಲ್‌ ಆರ್ಭಟಿಸಿದ್ದಾರೆ. ಕಳೆದ ಎರಡು ಋತುವಿನಲ್ಲಿಯೂ ಲೀಗ್‌ ಹಂತದಲ್ಲಿ ಅತ್ಯಧಿಕ ಸ್ಕೋರರ್‌ ಆಗಿ ಹೊರ ಹೊಮ್ಮಿದ್ದಾರೆ. 94 ಐಪಿಎಲ್‌ ಪಂದ್ಯಗಳನ್ನು ಆಡಿರುವ ರಾಹುಲ್‌, 94 ಪಂದ್ಯಗಳನ್ನು ಆಡಿದ್ದಾರೆ. ಈ ಪೈಕಿ 85 ಇನ್ನಿಂಗ್ಸ್‌ಗಳಲ್ಲಿ 47.43ರ ಸರಾಸರಿಯೊಂದಿಗೆ 3273 ರನ್‌ ಬಾರಿಸಿದ್ದಾರೆ. ಐಪಿಎಲ್‌ ನಲ್ಲಿಯೂ 2 ಬಾರಿ ಶತಕ ಬಾರಿಸಿರುವ ರಾಹುಲ್‌ 27 ಬಾರಿ ಅರ್ಧ ಶತಕ ಸಿಡಿಸಿದ್ದಾರೆ. ಪಂದ್ಯವೊಂದರಲ್ಲಿ ಅತ್ಯಧಿಕ 132 ರನ್‌ ಬಾರಿಸುವ ಮೂಲಕ 136.38 ರ ಸ್ಟ್ರೈಕ್‌ ರೇಟ್‌ ಹೊಂದಿದ್ದಾರೆ. ವಿಶ್ವ ಟೆಸ್ಟ್‌ನಲ್ಲಿ 46 ರಾಂಕ್‌, ಏಕದಿನದಲ್ಲಿ 27 ಹಾಗೂ ಟಿ20 ಯಲ್ಲಿ 6 ರಾಂಕ್‌ನಲ್ಲಿದ್ದಾರೆ.

ಇನ್ನು ರಿಷಬ್‌ ಪಂತ್‌ ಕೂಡ ಅತ್ಯುತ್ತಮ ಆಟಗಾರ ಅನ್ನುವುದರಲ್ಲಿ ಎರಡು ಮಾತಿಲ್ಲ. ಮಹೇಂದ್ರ ಸಿಂಗ್‌ ಧೋನಿ ನಂತರದಲ್ಲಿ ವಿಕೆಟ್‌ ಕೀಪಿಂಗ್‌ ಹಾಗೂ ಬ್ಯಾಟಿಂಗ್‌ನಲ್ಲಿ ತನ್ನ ತಾಕತ್ತು ತೋರಿಸುತ್ತಿದ್ದಾರೆ. ಟೆಸ್ಟ್‌, ಏಕದಿನ, ಟಿ೨೦ ಹಾಗೂ ಐಪಿಎಲ್‌ ಪಂದ್ಯಾವಳಿಗಳಲ್ಲಿಯೂ ಉತ್ತಮ ಸಾಧನೆಯನ್ನು ತೋರಿಸಿದ್ದಾರೆ. ಪ್ರಸಕ್ತ ಸಾಲಿನ ಐಪಿಎಲ್‌ ಪಂದ್ಯಾವಳಿ ಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಕ್ವಾಲಿಫೈಯರ್‌ ಹಂತಕ್ಕೆ ಕೊಂಡೊಯ್ದ ಖ್ಯಾತಿ ರಿಷಬ್‌ ಪಂತ್‌ ಅವರದ್ದು. ಜೊತೆಗೆ ಬ್ಯಾಟಿಂಗ್‌ನಲ್ಲಿಯೂ ಅತ್ಯುತ್ತಮವಾದ ಸಾಧನೆಯನ್ನು ಮಾಡಿದ್ದಾರೆ. ಪಂತ್.‌

ರಿಷಬ್‌ ಪಂತ್‌ ಸಾಧನೆ

ಉತ್ತರಾಖಂಡ ಹರಿದ್ವಾರದಲ್ಲಿ ಜನಿಸಿರುವ ರಿಷಬ್‌ ಪಂತ್‌ ಭಾರತದ ತಂಡ ವಿಕೆಟ್‌ ಕೀಪರ್‌ ಆಗಿ ಗುರುತಿಸಿಕೊಂಡಿದ್ದಾರೆ. 24 ವರ್ಷ ವಯಸ್ಸಿನ ಪಂತ್‌ ಈಗಾಗಲೇ ಕೀಪಿಂಗ್‌ ಹಾಗೂ ಬ್ಯಾಟಿಂಗ್‌ನಲ್ಲಿಯೂ ಮಿಂಚುತ್ತಿದ್ದಾರೆ. ವಿಶ್ವ ಟೆಸ್ಟ್‌ ರಾಂಕಿಂಗ್‌ ನಲ್ಲಿ 13 ಏಕದಿನದಲ್ಲಿ 86 ಹಾಗೂ ಟಿ20ಯಲ್ಲಿ 78 ನೇ ರಾಂಕ್‌ ಗಳಿಸಿದ್ದಾರೆ.

ರಿಷಬ್‌ ಪಂತ್‌ ಇದುವರೆಗೆ ಒಟ್ಟು 25 ಟೆಸ್ಟ್‌ ಪಂದ್ಯಗಳನ್ನು ಆಡಿದ್ದಾರೆ. ಈ ಪೈಕಿ 42 ಇನ್ನಿಂಗ್ಸ್‌ ಬ್ಯಾಟಿಂಗ್‌ ನಡೆಸಿರುವ ಪಂತ್‌ 39.72 ಸರಾಸರಿಯಲ್ಲಿ ಒಟ್ಟು 1549 ರನ್‌ ಗಳಿಸಿದ್ದಾರೆ. ಅಲ್ಲದೇ ಅತ್ಯಧಿಕ 159 ರನ್‌ ಬಾರಿಸಿದ್ದಾರೆ. ಅಲ್ಲದೇ ಒಟ್ಟು 3 ಶತಕ ಹಾಗೂ ೭ ಅರ್ಧ ಶತಕ ಸಿಡಿಸಿದ್ದಾರೆ. 67 ಸ್ಟ್ರೈಕ್‌ ರೇಟ್‌ ಹೊಂದಿದ್ದಾರೆ.

ಇನ್ನು ಭಾರತದ ಏಕದಿನ ತಂಡವನ್ನೂ ಪ್ರತಿನಿಧಿಸಿರುವ ಪಂತ್‌ ಇದುವರೆಗೆ ಒಟ್ಟು 18 ಏಕದಿನ ಪಂದ್ಯವನ್ನಾಡಿದ್ದಾರೆ. ಈ ಪೈಕಿ 16 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್‌ ನಡೆಸಿರುವ ಪಂತ್‌ 33ರ ಸರಾಸರಿಯಲ್ಲಿ 529ರನ್‌ ಗಳಿಸಿದ್ದಾರೆ. 78 ಅತ್ಯಧಿಕ ರನ್‌ ಆಗಿದ್ರೆ, 114 3 ಸ್ಕ್ರೈಕ್‌ ರೇಟ್‌ ಹೊಂದಿದ್ದು, 3 ಅರ್ಧ ಶತಕ ಬಾರಿಸಿದ್ದಾರೆ.

ಟಿ20 ಪಂದ್ಯಗಳ ಪೈಕಿ ಒಟ್ಟು 32 ಪಂದ್ಯಗಳನ್ನಾಡಿದ್ದು, 29 ಪಂದ್ಯಗಳಲ್ಲಿ ಬ್ಯಾಟಿಂಗ್‌ ನಡೆಸಿದ್ದಾರೆ. ಒಟ್ಟು 21.33 ಸರಾಸರಿಯೊಂದಿಗೆ 512ರನ್‌ ಗಳಿಸಿದ್ದಾರೆ. ಅತ್ಯಧಿಕ 65 ರನ್‌ ಗಳಿಸಿರುವ ಪಂತ್‌ ಒಟ್ಟು123.37 ಸ್ಟ್ರೈಕ್‌ ರೇಟ್‌ ಹೊಂದಿದ್ದಾರೆ. ಇನ್ನು ಎರಡು ಅರ್ಧ ಶತಕ ಬಾರಿಸಿದ್ದಾರೆ.

ರಿಷಬ್‌ ಪಂತ್‌ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಅಲ್ಲದೇ ಪ್ರಸಕ್ತ ಸಾಲಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ನಾಯಕರಾಗಿ ತಂಡವನ್ನು ಮುನ್ನಡೆಸಿದ್ದಾರೆ. ಇದುವರೆಗೆ ಒಟ್ಟು 84 ಐಪಿಎಲ್‌ ಪಂದ್ಯಗಳ ಪೈಕಿ 84 ಇನ್ನಿಂಗ್ಸ್‌ನಲ್ಲಿಯೂ ಬ್ಯಾಟಿಂಗ್‌ ಮಾಡಿದ್ದು 35.18ರನ್‌ ಸರಾಸರಿಯೊಂದಿಗೆ 2498 ರನ್‌ ಕಲೆ ಹಾಕಿದ್ದಾರೆ. ಈ ಪೈಕಿ ಒಂದು ಶತಕ ಸಿಡಿಸುವ ಮೂಲಕ ಇನ್ನಿಂಗ್ಸ್‌ನಲ್ಲಿ ಅತ್ಯಧಿಕ 147 ರನ್‌ ಸಿಡಿಸಿದ್ದಾರೆ.

ಭಾರತದ ತಂಡ ನವೆಂಬರ್‌ 17ರಿಂದ ನ್ಯೂಜಿಲೆಂಡ್‌ ಸರಣಿಯನ್ನು ಕೈಗೊಳ್ಳಲಿದೆ. ಈ ಸರಣಿಯಲ್ಲಿ ಭಾರತ 3 ಟಿ 20 ಹಾಗೂ2 ಟೆಸ್ಟ್‌ ಪಂದ್ಯಗಳನ್ನು ಆಡಲಿದೆ. ಈಗಾಗಲೇ ಕೊಯ್ಲಿ ರಾಜೀನಾಮೆ ಘೋಷಿಸಿದ ಹಿನ್ನೆಲೆಯಲ್ಲಿ ಟಿ20 ತಂಡಕ್ಕೆ ಹೊಸ ನಾಯಕನನ್ನು ಬಿಸಿಸಿಐ ಆಯ್ಕೆ ಮಾಡಲಿದೆ. ಹೀಗಾಗಿ ವಿಶ್ವಕಪ್‌ ಮುಕ್ತಾಯದ ಬೆನ್ನಲ್ಲೇ ಹೊಸ ನಾಯಕ ಟೀಂ ಇಂಡಿಯಾವನ್ನು ಮುನ್ನಡೆಸೋದು ಖಚಿತ. ರಿಷಬ್‌ ಪಂತ್‌ಗೆ ಹೋಲಿಕೆ ಮಾಡಿದ್ರೆ ಕೆ.ಎಲ್.ರಾಹುಲ್‌ ಹೆಚ್ಚು ಅನುಭವಿ ಆಟಗಾರ. ಮಾತ್ರವಲ್ಲ ಟೆಸ್ಟ್‌, ಏಕದಿನ, ಟಿ20 ಹಾಗೂ ಐಪಿಎಲ್‌ ಪಂದ್ಯಾವಳಿಗಳಲ್ಲಿ ಶತಕ ಬಾರಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ಅಲ್ಲದೇ ಉತ್ತಮ ರನ್‌ ಧಾರಣೆಯನ್ನೂ ಕಾಯ್ದುಕೊಂಡಿದ್ದಾರೆ. ಇನ್ನೊಂದೆಡೆಯಲ್ಲಿ ಪಂತ್‌ ಟೆಸ್ಟ್‌ನಲ್ಲಿ ಉತ್ತಮ ರಾಕಿಂಗ್‌ ಹೊಂದಿದ್ರೆ, ರಾಹುಲ್‌ ಟಿ 20 ಯಲ್ಲಿ ವಿಶ್ವದಲ್ಲಿಯೇ 6ನೇ ರಾಂಕ್‌ನಲ್ಲಿದ್ದಾರೆ. ಹೀಗಾಗಿ ಇಬ್ಬರಲ್ಲಿ ಮುಂದಿನ ಟೀಂ ಇಂಡಿಯಾದ ನಾಯಕ ಯಾರಾಗ್ತಾರೆ ಅನ್ನೋದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ : ಡೆಲ್ಲಿ ಕ್ಯಾಪಿಟಲ್ಸ್‌ ಸೋಲಿಗೆ ಕಾರಣವಾಯ್ತು ರಿಷಬ್‌ ಪಂತ್‌ ಕೈಗೊಂಡ ಒಂದು ನಿರ್ಧಾರ

ಇದನ್ನೂ ಓದಿ : ಬೆಂಗಳೂರು ತಂಡಕ್ಕೆ ಮರಳುತ್ತಾರೆ ರಾಹುಲ್‌ : ಆರ್‌ಸಿಬಿಗೆ ಕನ್ನಡಿಗನೇ ನಾಯಕ

( Who will be the next captain of Team India in KL Rahul and Rishabh Pant? )

Comments are closed.