ಮುಂಬೈ : ಟಿ20 ವಿಶ್ವಕಪ್‌ನಲ್ಲಿ ಭಾರತ ಅಂತಿಮ ಪಂದ್ಯವನ್ನು ನಮೀಬಿಯಾ ವಿರುದ್ದ ಆಡಿದೆ. ಈ ಮೂಲಕ ಭಾರತ ಟೂರ್ನಿಯಿಂದಲೇ ಹೊರ ಬಿದ್ದಿದೆ. ಇದೀಗ ಭಾರತ ತಂಡ ಕೋಚ್ ಆಗಿರುವ ರವಿಶಾಸ್ತ್ರಿ ಅವರ ಅವಧಿ ಕೂಡ ಮುಕ್ತಾಯವಾಗಲಿದೆ. ಈ ಬೆನ್ನಲ್ಲೇ ರವಿಶಾಸ್ತ್ರಿ ಐಪಿಎಲ್‌ಗೆ ಹೊಸದಾಗಿ ಸೇರ್ಪಡೆಯಾಗಿರುವ ಅಹಮದಾಬಾದ್ ತಂಡದ ಕೋಚ್ ಆಗ್ತಾರೆ ಅನ್ನೋ ಮಾತು ಕೇಳಿಬರುತ್ತಿದೆ.

ಭಾರತ ತಂಡ ಮಾಜಿ ಆಟಗಾರ ರವಿಶಾಸ್ತ್ರಿ 2017ರಿಂದಲೂ ಟೀಂ ಇಂಡಿಯಾದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಐದು ವರ್ಷಗಳ ರವಿಶಾಸ್ತ್ರಿ ಹಾಗೂ ಬಿಸಿಸಿಐ ನಡುವಿನ ಒಪ್ಪಂದ ಇಂದು ಕೊನೆಯಾಗುತ್ತಿದೆ. ಟಿ೨೦ ವಿಶ್ವಕಪ್ ಬೆನ್ನಲ್ಲೇ ರವಿಶಾಸ್ತ್ರಿ ಟೀಂ ಇಂಡಿಯಾದಿಂದ ದೂರವಾಗುತ್ತಿದ್ದಾರೆ. ಈಗಾಗಲೇ ರವಿಶಾಸ್ತ್ರಿ ಅವರ ಜಾಗಕ್ಕೆ ರಾಹುಲ್ ದ್ರಾವಿಡ್ ಅವರನ್ನು ಬಿಸಿಸಿಐ ನೇಮಕ ಮಾಡಿದೆ.

ರವಿಶಾಸ್ತ್ರಿ ಅವರ ಅವಧಿಯಲ್ಲಿ ಭಾರತ ತಂಡ ಹೇಳಿಕೊಳ್ಳುವಂತಹ ಸಾಧನೆಯನ್ನು ಮಾಡಿಲ್ಲ. ಕೋಚ್ ಹುದ್ದೆ ತೆರವಾಗುತ್ತಲೇ ಶಾಸ್ತ್ರಿ ಅವರು ಮತ್ತೆ ಕಾಮೆಂಟೇಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಮಾತು ಕೇಳಿಬಂದಿತ್ತು. ಇನ್ನೊಂದೆಡೆ ಐಪಿಎಲ್ ತಂಡದ ಕೋಚ್ ಆಗ್ತಾರೆ ಅನ್ನೋ ಸುದ್ದಿಯೂ ಹರಿದಾಡುತ್ತಿದೆ. ಈ ನಡುವಲ್ಲೇ ಅಹಮದಾಬಾದ್ ತಂಡದ ಪರ ಕೋಚ್ ಆಗಿ ಕಾರ್ಯನಿರ್ವಹಿಸುವಂತೆ ತಂಡ ಮಾಲೀಕರಾಗಿರುವ ಸಿವಿಸಿ ಕ್ಯಾಪಿಟಲ್ಸ್ ರವಿಶಾಸ್ತ್ರಿ ಅವರನ್ನು ಸಂಪರ್ಕ ಮಾಡಿದೆ ಅನ್ನೋ ಕುರಿತು ವರದಿಯಾಗಿದೆ.

ಕೇವಲ ರವಿಶಾಸ್ತ್ರಿ ಮಾತ್ರವಲ್ಲ ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ಅವರ ಅವಧಿಯೂ ಮುಕ್ತಾಯವಾಗಲಿದೆ. ಹೀಗಾಗಿ ಈ ಮೂವರು ಕೂಡ ಮುಂದಿನ ಐಪಿಎಲ್‌ನಲ್ಲಿ ಅಹಮದಾಬಾದ್ ತಂಡದ ಕೋಚ್ ಆಗಿ ಕಾಣಿಸಿಕೊಳ್ಳಲಿದ್ದಾರಂತೆ. ಆದರೆ ಅಹಮದಾಬಾದ್ ತಂಡದ ಆಡಳಿತ ಮಂಡಳಿಯಾಗಲಿ, ರವಿಶಾಸ್ತ್ರಿ ಅವರಾಗಲಿ ಯಾವುದೇ ಮಾಹಿತಿಯನ್ನೂ ಬಿಟ್ಟುಕೊಟ್ಟಿಲ್ಲ.

ಭಾರತ ತಂಡ ಟಿ20 ವಿಶ್ವಕಪ್ ಗೆಲ್ಲುತ್ತೆ ಅಂತಾ ಕನಸು ಕಂಡಿದ್ದ ಭಾರತೀಯರಿಗೆ ನಿರಾಸೆಯಾಗಿದೆ. ಈ ನಡುವಲ್ಲೇ ರವಿಶಾಸ್ತ್ರಿ ಅವರು ಕೋಚ್ ಹುದ್ದೆಯಿಂದ ದೂರವಾಗುತ್ತಿದ್ದಾರೆ. ಇನ್ನೊಂದೆಡೆಯಲ್ಲಿ ನಾಯಕ ವಿರಾಟ್ ಕೊಯ್ಲಿ ಕೂಡ ಚುಟುಕು ಕ್ರಿಕೆಟ್ ನಾಯಕತ್ವದಿಂದ ಕೆಳಗಿಳಿಯುತ್ತಿದ್ದಾರೆ. ಒಟ್ಟಿನಲ್ಲಿ ಮುಂದಿನ ನ್ಯೂಜಿಲೆಂಡ್ ಸರಣಿಯಲ್ಲಿ ಭಾರತ ಹೊಸ ಕೋಚ್ ಜೊತೆಗೆ ಹೊಸ ನಾಯಕನ ನೇತೃತ್ವದಲ್ಲಿ ಕಣಕ್ಕೆ ಇಳಿಯಲಿದೆ.
ಇದನ್ನೂ ಓದಿ : ಅತಿಯಾ ಶೆಟ್ಟಿಗೆ “ಹ್ಯಾಪಿ ಬರ್ತ್ ಡೇ ಮೈ ಹಾರ್ಟ್ ಐಕಾನ್” ಎಂದ ಕೆಎಲ್ ರಾಹುಲ್
ಇದನ್ನೂ ಓದಿ : ವಿಶ್ವಕಪ್ ಗೆಲ್ಲುವ ಭಾರತದ ಕನಸು ಭಗ್ನ : ಸೆಮಿಫೈನಲ್ ಪ್ರವೇಶಿಸಿದ ನ್ಯೂಜಿಲೆಂಡ್