Shreyas Gopal : ಕರ್ನಾಟಕ ತೊರೆಯಲು ಮತ್ತೊಬ್ಬ ಸ್ಟಾರ್ ಆಟಗಾರ ಸಜ್ಜು, ಅನ್ಯ ರಾಜ್ಯದ ಪರ ಆಡಲಿದ್ದಾರೆ ಶ್ರೇಯಸ್ ಗೋಪಾಲ್ ?

ಬೆಂಗಳೂರು: ಕರ್ನಾಟಕದ ಸ್ಟಾರ್ ಆಲ್ರೌಂಡರ್ ಶ್ರೇಯಸ್ ಗೋಪಾಲ್ ರಾಜ್ಯ ತಂಡವನ್ನು ತೊರೆದು ಬೇರೆ ರಾಜ್ಯದ ಪರ ಆಡುವ ಸಾಧ್ಯತೆಯಿದೆ. ಕರ್ನಾಟಕ ತಂಡದಲ್ಲಿ ಅದರಲ್ಲೂ ವಿಶೇಷವಾಗಿ ವೈಟ್ ಬಾಲ್ ಕ್ರಿಕೆಟ್’ನಲ್ಲಿ ಕಡೆಗಣಿಸುತ್ತಿರುವುದರಿಂದ ಬೇಸರಗೊಂಡಿರುವ ಶ್ರೇಯಸ್ ಗೋಪಾಲ್ (Shreyas Gopal) ಬೇರೆ ರಾಜ್ಯಕ್ಕೆ ವಲಸೆ ಹೋಗುವ ಬಗ್ಗೆ ಗಂಭೀರ ಆಲೋಚನೆ ಯಲ್ಲಿದ್ದಾರೆ.

ಶ್ರೇಯಸ್ ಗೋಪಾಲ್ ಕರ್ನಾಟಕ (Karnataka State Cricket Association – KSCA) ಕಂಡ ಅತ್ಯುತ್ತಮ ಆಲ್ರೌಂಡರ್’ಗಳಲ್ಲಿ ಒಬ್ಬರು. 2013ರಲ್ಲಿ ಕರ್ನಾಟಕ ತಂಡಕ್ಕೆ ಪದಾರ್ಪಣೆ ಮಾಡಿದ ನಂತರ ರಣಜಿ ಟ್ರೋಫಿ, ಇರಾನಿ ಕಪ್, ವಿಜಯ್ ಹಜಾರೆ ಟ್ರೋಫಿ, ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಗಳಲ್ಲಿ ಕರ್ನಾಟಕ ತಂಡದ ಯಶಸ್ಸಿನಲ್ಲಿ ಶ್ರೇಯಸ್ ಗೋಪಾಲ್ ಅವರ ಪಾತ್ರ ದೊಡ್ಡದು. ಅಷ್ಟೇ ಅಲ್ಲ, ಐಪಿಎಲ್’ನಲ್ಲಿ ಹ್ಯಾಟ್ರಿಕ್ ವಿಕೆಟ್’ಗಳನ್ನು ಪಡೆದ ದಾಖಲೆಯೂ ಶ್ರೇಯಸ್ ಗೋಪಾಲ್ ಹೆಸರಲ್ಲಿದೆ. ರಾಜಸ್ಥಾನ ರಾಯಲ್ಸ್ ಪರ ಆಡುತ್ತಿದ್ದಾಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ದಿಗ್ಗಜರಾದ ವಿರಾಟ್ ಕೊಹ್ಲಿ ಮತ್ತು ಎಬಿ ಡಿ’ವಿಲಿಯರ್ಸ್ ಅವರನ್ನು ಮೂರು ಮೂರು ಬಾರಿ ಔಟ್ ಮಾಡಿದ ಲೆಗ್’ಸ್ಪಿನ್ನರ್. ಆದ್ರೆ ನಿಮ್ಗೆ ಅಚ್ಚರಿಯಾಗ್ಬಹ್ದು, ಕಳೆದ ವರ್ಷದ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿ ಮತ್ತು ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಶ್ರೇಯಸ್ ಗೋಪಾಲ್ ಅವರಿಗೆ ಒಂದೇ ಒಂದು ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ.

ಕಳೆದ ವರ್ಷ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ (Vijay Hazare Trophy) ಏಕದಿನ ಟೂರ್ನಿ ಮತ್ತು ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ (Syed Mushtaq Ali T20) ಸೇರಿ ಒಟ್ಟು 16 ವೈಟ್ ಬಾಲ್ ಪಂದ್ಯಗಳನ್ನು ಆಡಿದೆ. ಆದರೆ ಕನಿಷ್ಠ ಒಂದು ಪಂದ್ಯದಲ್ಲೂ ಶ್ರೇಯಸ್ ಗೋಪಾಲ್ ಅವರನ್ನು ಆಡಿಸಿರಲಿಲ್ಲ. ಪ್ರವೀಣ್ ದುಬೆ, ಅನಿರುದ್ಧ ಜೋಶಿಯಂತಹ ಆಟಗಾರರಿಗಾಗಿ ಶ್ರೇಯಸ್ ಗೋಪಾಲ್ ಅವರನ್ನು ಕಡೆಗಣಿಸಲಾಗುತ್ತಿದೆ ಎಂಬ ಮಾತುಗಳು ರಾಜ್ಯ ಕ್ರಿಕೆಟ್ ಸಂಸ್ಥೆಯಿಂದಲೇ ಕೇಳಿ ಬಂದಿದ್ದವು.

ಐಪಿಎಲ್’ನಲ್ಲಿ ಮಿಂಚಿದ ಆಟಗಾರ ಕರ್ನಾಟಕ ತಂಡಕ್ಕೆ ಬೇಡವಾಗಿದ್ದಾರೆ ಎಂದರೆ ಅಚ್ಚರಿಯಾಗುವುದು ಸಹಜ. ಇದರ ಹಿಂದೆ ಕ್ರಿಕೆಟ್ ಹೊರತಾದ ಬೇರೆಯದ್ದೇ ಕಾರಣಗಳಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ. ನಿರಂತರ ಕಡೆಗಣನೆಯಿಂದ ಬೇಸರಗೊಂಡಿರುವ 28 ವರ್ಷದ ಶ್ರೇಯಸ್ ಗೋಪಾಲ್ ಮುಂದಿನ ದೇಶೀಯ ಕ್ರಿಕೆಟ್ ಟೂರ್ನಿಗಳಲ್ಲಿ ಬೇರೆ ರಾಜ್ಯದ ಪರ ಆಡುವ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಕರ್ನಾಟಕ ತಂಡದಲ್ಲಿ ಅವಕಾಶ ಸಿಗದ ಕಾರಣ ಅದು ಐಪಿಎಲ್ ಹರಾಜಿನಲ್ಲೂ ಪರಿಣಾಮ ಬೀರಿದ್ದು, ಶ್ರೇಯಸ್ ಗೋಪಾಲ್ ಅವರಿಗೆ ಈ ಹಿಂದೆ ಇದ್ದ ಬೇಡಿಕೆ ಕಡಿಮೆಯಾಗಿದೆ. 2022ರ ಐಪಿಎಲ್’ನಲ್ಲಿ ಸನ್’ರೈಸರ್ಸ್ ಹೈದರಾಬಾದ್ ತಂಡದ ಪರ ಶ್ರೇಯಸ್ ಗೋಪಾಲ್ ಅವರಿಗೆ ಕೇವಲ ಒಂದು ಪಂದ್ಯದಲ್ಲಷ್ಟೇ ಆಡುವ ಅವಕಾಶ ಸಿಕ್ಕಿತ್ತು.

ಶ್ರೇಯಸ್ ಗೋಪಾಲ್ ಅವರಿಗೀಗ 28 ವರ್ಷ. ಇನ್ನೂ ಸಾಕಷ್ಟು ಕ್ರಿಕೆಟ್ ಆಡುವ ಸಾಮರ್ಥ್ಯವಿದೆ. ಆದರೆ ಕರ್ನಾಟಕ ತಂಡದಲ್ಲಿ ಅವಕಾಶವೇ ಸಿಗದಿದ್ದರೆ ಅದು ಶ್ರೇಯಸ್ ಅವರ ಕ್ರಿಕೆಟ್ ಬದುಕಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳಿವೆ. ಹೀಗಾಗಿ ಕರ್ನಾಟಕವನ್ನು ತೊರೆದು ಬೇರೆ ರಾಜ್ಯದ ಪರ ಆಡುವ ಚಿಂತನೆಯಲ್ಲಿದ್ದಾರೆ ಎನ್ನಲಾಗ್ತಿದೆ. ಕಳೆದ 9 ವರ್ಷಗಳಿಂದ ಕರ್ನಾಟಕ ಪರ ಶ್ರೇಯಸ್ ಗೋಪಾಲ್ 68 ಪ್ರಥಮದರ್ಜೆ ಪಂದ್ಯಗಳನ್ನಾಡಿದ್ದು 4 ಶತಕಗಳು ಹಾಗೂ 12 ಅರ್ಧಶತಕಗಳ ನೆರವಿನಿಂದ 2,777 ರನ್ ಗಳಿಸಿದ್ದಾರೆ, 203 ವಿಕೆಟ್’ಗಳನ್ನೂ ಕಬಳಿಸಿದ್ದಾರೆ. 47 ಲಿಸ್ಟ್ ‘ಎ’ ಪಂದ್ಯಗಳಿಂದ 434 ರನ್ ಹಾಗೂ 77 ವಿಕೆಟ್ ಉರುಳಿಸಿದ್ದಾರೆ. ಟಿ20 ವೃತ್ತಿಬದುಕಿನಲ್ಲಿ ಆಡಿರುವ 83 ಪಂದ್ಯಗಳಿಂದ 389 ರನ್ ಹಾಗೂ 92 ವಿಕೆಟ್ ಪಡೆದಿದ್ದಾರೆ.

ಇದನ್ನೂ ಓದಿ : Gautam Gambhir : ಭಾರತ ಪರ ಮತ್ತೆ ಬ್ಯಾಟ್ ಹಿಡಿದು ಅಬ್ಬರಿಸಲಿದ್ದಾರೆ ವಿಶ್ವಕಪ್ ಹೀರೋ, ಸಂಸದ ಗೌತಮ್ ಗಂಭೀರ್

ಇದನ್ನೂ ಓದಿ : T20 World Cup Team India : ಸೆಪ್ಟೆಂಬರ್ 15ಕ್ಕೆ ಟೀಮ್ ಇಂಡಿಯಾ ಆಯ್ಕೆ; Follow Live Updates

Another star player is set to leave Karnataka, Shreyas Gopal will play for another state

Comments are closed.