Ben Stokes : 2016ರ ದುಸ್ವಪ್ನ.., 2019ರಲ್ಲಿ ವಿಶ್ವಕಪ್, ಆಷಸ್, 2022ರಲ್ಲಿ ಮತ್ತೊಂದು ವಿಶ್ವಕಪ್; ಇಂಗ್ಲೆಂಡ್‌ನ ಗ್ರೇಟೆಸ್ಟ್ ವಿಶ್ವಕಪ್ ಹೀರೊ

ಮೆಲ್ಬೋರ್ನ್: ಆತ ಛಲದಂಕಮಲ್ಲ, ಇಂಗ್ಲೆಂಡ್ ಕ್ರಿಕೆಟ್ ಕಂಡ ಗ್ರೇಟೆಸ್ಟ್ ವಿಶ್ವಕಪ್ ಹೀರೋ. ಆರು ವರ್ಷಗಳ ಹಿಂದೆ ಟಿ20 ವಿಶ್ವಕಪ್ ಫೈನಲ್’ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿದ್ದವ ಈಗ ಇಂಗ್ಲೆಂಡ್’ಗೆ ಟಿ20 ವಿಶ್ವಕಪ್ (T20 World Cup 2022) ಗೆದ್ದುಕೊಟ್ಟಿದ್ದಾನೆ. ಇದು ಬೆನ್ ಸ್ಟೋಕ್ಸ್ (Ben Stokes World cup Hero) ಎಂಬ ಛಲಗಾರ ಸ್ಫೂರ್ತಿಯುತ ಕಥೆ.

ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್’ನಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಅಜೇಯ 52 ರನ್ ಬಾರಿಸಿದ ಬೆನ್ ಸ್ಟೋಕ್ಸ್ ಇಂಗ್ಲೆಂಡ್ ತಂಡ ಚಾಂಪಿಯನ್ ಆಗಲು ಕಾರಣರಾಗಿದ್ದಾರೆ.

2016ರಲ್ಲಿ ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್’ನಲ್ಲಿ ಬೆನ್ ಸ್ಟೋಕ್ಸ್ ಇಂಗ್ಲೆಂಡ್ ಸೋಲಿಗೆ ಕಾರಣರಾಗಿದ್ದರು. ವೆಸ್ಟ್ ಇಂಡೀಸ್ ತಂಡಕ್ಕೆ ಗೆಲ್ಲಲು ಕೊನೆಯ ಓವರ್’ನಲ್ಲಿ 19 ರನ್’ಗಳು ಬೇಕಿದ್ದಾಗ ಬೆನ್ ಸ್ಟೋಕ್ಸ್ ಅವರ ಸತತ ನಾಲ್ಕು ಎಸೆತಗಳಲ್ಲಿ ವಿಂಡೀಸ್ ಆಲ್ರೌಂಡರ್ ಕಾರ್ಲೋಸ್ ಬ್ರಾಥ್’ವೇಟ್ ನಾಲ್ಕು ಸಿಕ್ಸರ್ ಬಾರಿಸಿ ವೆಸ್ಟ್ ಇಂಡೀ ಗೆಲುವಿಗೆ ಕಾರಣರಾಗಿದ್ದರು. ಅವತ್ತು ಇಂಗ್ಲೆಂಡ್ ಸೋಲಿಗೆ ಕಾರಣರಾಗಿದ್ದ ಬೆನ್ ಸ್ಟೋಕ್ಸ್ ಆರು ವರ್ಷಗಳ ನಂತರ ಇಂಗ್ಲೆಂಡ್’ಗೆ ಟಿ20 ವಿಶ್ವಕಪ್ ಗೆದ್ದು ಕೊಟ್ಟಿದ್ದಾರೆ.

2019ರಲ್ಲಿ ಇಂಗ್ಲೆಂಡ್’ನಲ್ಲೇ ನಡೆದಿದ್ದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಚಾಂಪಿಯನ್ ಆಗಲು ಬೆನ್ ಸ್ಟೋಕ್ಸ್ ಕಾರಣರಾಗಿದ್ದರು. ನ್ಯೂಜಿಲೆಂಡ್ ವಿರುದ್ಧದ ಫೈನಲ್’ನಲ್ಲಿ ಅಜೇ 84 ರನ್ ಬಾರಿಸಿದ್ದ ಬೆನ್ ಸ್ಟೋಕ್ಸ್ ಇಂಗ್ಲೆಂಡ್ ತಂಡವನ್ನು ಸೋಲಿನ ಸುಳಿಯಿಂದ ಮೇಲೆತ್ತಿ ಪಂದ್ಯ ಟೈ ಆಗಲು ಕಾರಣರಾಗಿದ್ದರು. ನಂತರ ಸೂಪರ್ ಓವರ್’ನಲ್ಲಿ ಪಂದ್ಯ ಗೆದ್ದಿದ್ದ ಇಂಗ್ಲೆಂಡ್ ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದು ಬೀಗಿತ್ತು.

2019ರ ಆಷಸ್ ಟೆಸ್ಟ್ ಸರಣಿಯ 3ನೇ ಪಂದ್ಯದಲ್ಲಿ ಅಜೇಯ 135 ರನ್ ಬಾರಿಸಿದ್ದ ಬೆನ್ ಸ್ಟೋಕ್ಸ್ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್’ಗೆ ರೋಚಕ ಗೆಲುವು ತಂದುಕೊಟ್ಟಿದ್ದರು. ಅಂತಿಮ ಟೆಸ್ಟ್ ಪಂದ್ಯವನ್ನು ಗೆಲ್ಲಲು 359 ರನ್’ಗಳ ಗುರಿ ಬೆನ್ನಟ್ಟಿದ್ದ ಇಂಗ್ಲೆಂಡ್ 286 ರನ್’ಗಳಿಗೆ 9 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು. ಆಗ ಬೆನ್ ಸ್ಟೋಕ್ಸ್ 61 ರನ್ ಗಳಿಸಿ ಆಡುತ್ತಿದ್ದ ಸ್ಚೋಕ್ಸ್ ಭರ್ಜರಿ ಶತಕ ಬಾರಿಸಿ ಇಂಗ್ಲೆಂಡನ್ನು 1 ವಿಕೆಟ್ ಅಂತರದಲ್ಲಿ ರೋಚಕವಾಗಿ ಗೆಲುವಿನ ದಡ ಸೇರಿಸಿದ್ದರು. ಮುರಿಯದ 10ನೇ ವಿಕೆಟ್’ಗೆ ಜ್ಯಾಕ್ ಲೀಚ್ ಜೊತೆ ಸ್ಟೋಕ್ಸ್ 76 ರನ್ ಸೇರಿಸಿದ್ದರು. ಇದರಲ್ಲಿ ಜ್ಯಾಕ್ ಲೀಚ್ ಕೊಡುಗೆ 17 ಎಸೆತಗಳಲ್ಲಿ ಕೇವಲ ಒಂದು ರನ್. ಉಳಿದ 75 ರನ್’ಗಳನ್ನು ಬಾರಿಸಿದ್ದು ಬೆನ್ ಸ್ಟೋಕ್ಸ್..

2016ರಲ್ಲಿ ಟಿ20 ವಿಶ್ವಕಪ್ ಫೈನಲ್’ನಲ್ಲಿ ಇಂಗ್ಲೆಂಡ್ ಸೋಲಿಗೆ ಕಾರಣರಾದ ನಂತರ 2019ರಲ್ಲಿ ಆಷಸ್, ಅದೇ ವರ್ಷ ಏಕದಿನ ವಿಶ್ವಕಪ್, ಈಗ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟಿರುವ 31 ವರ್ಷದ ಬೆನ್ ಸ್ಟೋಕ್ಸ್ ಇಂಗ್ಲೆಂಡ್’ನ ಗ್ರೇಟೆಸ್ಟ್ ವಿಶ್ವಕಪ್ ವಿನ್ನರ್ ಆಗಿ ಮೂಡಿ ಬಂದಿದ್ದಾರೆ.

ಇದನ್ನೂ ಓದಿ : ಟಿ20 ವಿಶ್ವಕಪ್ ಗೆದ್ದ ಇಂಗ್ಲೆಂಡ್‌ : 2ನೇ ಬಾರಿಗೆ ಟಿ20 ವಿಶ್ವಕಪ್ ಕಿರೀಟ

ಇದನ್ನೂ ಓದಿ : IPL Trading : 9 ಆಟಗಾರರನ್ನು ಉಳಿಸಿಕೊಂಡ ರಾಯಲ್ ಚಾಲೆಂಜರ್ಸ್, ಐವರು RCBಯಿಂದ ಔಟ್

Ben Stokes World cup Hero England Win t20 world cup 2022

Comments are closed.