Robin Uthappa : 2ನೇ ಮಗುವಿನ ತಂದೆಯಾಗುತ್ತಿದ್ದಾರೆ ಕ್ರಿಕೆಟಿಗ ರಾಬಿನ್ ಉತ್ತಪ್ಪ

ಬೆಂಗಳೂರು: ಕೊಡಗಿನ ವೀರ ರಾಬಿನ್ ಉತ್ತಪ್ಪ ಟೀಮ್ ಇಂಡಿಯಾ (Team India Star Robin Uthappa) ಪರ ಒಂದು ಕಾಲದಲ್ಲಿ ಘರ್ಜಿಸಿದ ಕರ್ನಾಟಕದ ಕ್ರಿಕೆಟ್ ಹುಲಿ. ರಾಬಿನ್ ಉತ್ತಪ್ಪ ಅವರ ಸಿಡಿಲ ಹೊಡೆತಗಳ ಆಟ ಇನ್ನೂ ಕಣ್ಣಿಗೆ ಕಟ್ಟಿದ ಹಾಗೇ ಇದೆ. ಮೈದಾನಕ್ಕಿಳಿದ್ರೆ ಬೌಂಡರಿ, ಸಿಕ್ಸರ್”ಗಳ ಸುರಿಮಳೆಗೈಯುತ್ತಿರುವ ರಾಬಿನ್ ಉತ್ತಪ್ಪ, ಈಗ ಟೀಮ್ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ಐಪಿಎಲ್’ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿರುವ ಉತ್ತಪ್ಪ ಅವರ ಆಟದ ಖದರ್ ಮಾತ್ರ ಇನ್ನೂ ಕಮ್ಮಿಯಾಗಿಲ್ಲ.

ಕ್ರಿಕೆಟ್ ಕರಿಯರ್’ನಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿರುವ ರಾಬಿನ್ ಉತ್ತಪ್ಪ, ವೈಯಕ್ತಿಕ ಬದುಕಲ್ಲಿ ಮತ್ತೊಂದು ಸಂಭ್ರಮವನ್ನು ಎದುರು ನೋಡುತ್ತಿದ್ದಾರೆ. ಉತ್ತಪ್ಪ ಅವರ ಪತ್ನಿ ಶೀತಲ್ ಗೌತಮ್ ಗರ್ಭಿಣಿಯಾಗಿದ್ದು, 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತನ್ನ ಗರ್ಭಿಣಿ ಪತ್ನಿಯ ಫೋಟೋವನ್ನು ವಿಶ್ವ ಅಪ್ಪಂದಿರ ದಿನ ಸ್ವತಃ ರಾಬಿನ್ ಉತ್ತಪ್ಪ ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ರಾಬಿನ್ ಉತ್ತಪ್ಪ-ಶೀತಲ್ ದಂಪತಿಗೆ ಈಗಾಗಲೇ ಐದು ವರ್ಷದ ಮಗನಿದ್ದಾನೆ. ಹೆಸರು ನೀಲ್ ನೋಲನ್ ಉತ್ತಪ್ಪ. ತಮ್ಮ ಕಾಲೇಜು ದಿನಗಳ ಗೆಳತಿ ಶೀತಲ್ ಗೌತಮ್ ಅವರನ್ನು ರಾಬಿನ್ ಉತ್ತಪ್ಪ 2016ರಲ್ಲಿ ಮದುವೆಯಾಗಿದ್ದರು.

36 ವರ್ಷದ ರಾಬಿನ್ ಉತ್ತಪ್ಪ ಭಾರತ ಪರ 46 ಏಕದಿನ ಪಂದ್ಯಗಳನ್ನಾಡಿದ್ದು, 934 ರನ್ ಗಳಿಸಿದ್ದಾರೆ. 13 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನೂ ಆಡಿರುವ ಉತ್ತಪ್ಪ, 249 ರನ್ ಕಲೆ ಹಾಕಿದ್ದಾರೆ. ಟಿ20 ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಭಾರತ ಪರ ಮೊದಲ ಅರ್ಧಶತಕ ಬಾರಿಸಿದ ಆಟಗಾರನೆಂಬ ದಾಖಲೆ ರಾಬಿನ್ ಉತ್ತಪ್ಪ ಹೆಸರಲ್ಲಿದೆ. 2007ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಉತ್ತಪ್ಪ ಈ ದಾಖಲೆ ಬರೆದಿದ್ದರು. ಪಾಕಿಸ್ತಾನ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಅಬ್ಬರಿಸಿದ್ದ ಉತ್ತಪ್ಪ 39 ಎಸೆತಗಳಲ್ಲಿ ಸ್ಫೋಟಕ 50 ರನ್ ಸಿಡಿಸಿ, ಟಿ 20 ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಭಾರತ ಪರ ಅರ್ಧಶತಕ ಸಿಡಿಸಿದ ಮೊದಲ ಬ್ಯಾಟ್ಸ್”ಮನ್ ಎಂಬ ಹಿರಿಮೆಗೆ ಪಾತ್ರರಾಗಿದ್ದರು. ಟೈನಲ್ಲಿ ಅಂತ್ಯಗೊಂಡಿದ್ದ ಆ ಪಂದ್ಯವನ್ನು ಭಾರತ ನಂತರ ಬಾಲ್ ಔಟ್’ನಲ್ಲಿ ಗೆದ್ದುಕೊಂಡಿತ್ತು.

ವೃತ್ತಿಜೀವನದಲ್ಲಿ ಒಟ್ಟು 142 ಪ್ರಥಮದರ್ಜೆ ಪಂದ್ಯಗಳನ್ನಾಡಿರುವ ಉತ್ತಪ್ಪ, 22 ಶತಕಗಳ ಸಹಿತ 40ರ ಸರಾಸರಿಯಲ್ಲಿ 9,446 ರನ್ ಗಳಿಸಿದ್ದಾರೆ. 203 ಲಿಸ್ಟ್ ‘ಎ’ ಪಂದ್ಯಗಳಿಂದ 16 ಶತಕಗಳೊಂದಿಗೆ 6,534 ರನ್ ಕಲೆ ಹಾಕಿದ್ದಾರೆ. ಐಪಿಎಲ್”ನಲ್ಲೂ ಅಮೋಘ ದಾಖಲೆ ಹೊಂದಿರುವ ಉತ್ತಪ್ಪ 205 ಪಂದ್ಯಗಳಿಂದ 27 ಅರ್ಧಶತಕಗಳ ಸಹಿತ 3,799 ರನ್ ಗಳಿಸಿದ್ದಾರೆ. 2021ರ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಚಾಂಪಿಯನ್ ಆಗುವಲ್ಲಿ ಉತ್ತಪ್ಪ ಅವರ ಪಾತ್ರ ಮಹತ್ವದ್ದಾಗಿತ್ತು. 2014ರ ಟೂರ್ನಿಯಲ್ಲಿ 16 ಪಂದ್ಯಗಳಿಂದ 479 ರನ್ ಗಳಿಸಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಉತ್ತಪ್ಪ ಚಾಂಪಿಯನ್ ಪಟ್ಟಕ್ಕೇರಿಸಿದ್ದರು.

ಇದನ್ನೂ ಓದಿ : India vs Leicestershire : ಟೀಮ್ ಇಂಡಿಯಾದ ವಿರುದ್ಧವೇ ಕಣಕ್ಕಿಳಿದ ಪಂತ್, ಪೂಜಾರ, ಬುಮ್ರಾ, ಪ್ರಸಿದ್ದ ಕೃಷ್ಣ

ಇದನ್ನೂ ಓದಿ : India tour of England : ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾಗೆ ಬಿಗ್ ಶಾಕ್

Cricketer Robin Uthappa to be a dad again

Comments are closed.