India Vs South Africa Live : ಕೈಯಲ್ಲಿದ್ದ ಮ್ಯಾಚ್ ಕೈ ಚೆಲ್ಲಿದ ಭಾರತ, ಟೀಮ್ ಇಂಡಿಯಾಗೆ ಮೊದಲ ಸೋಲು

ಪರ್ತ್: India Vs South Africa Live : ಸತತ ಎರಡು ಪಂದ್ಯಗಳನ್ನು ಗೆದ್ದು ಬೀಗಿದ್ದ ಭಾರತ ತಂಡ ಟಿ20 ವಿಶ್ವಕಪ್ (T20 World Cup 2022) ಟೂರ್ನಿಯಲ್ಲಿ ಮೊದಲ ಸೋಲು ಅನುಭವಿಸಿದೆ. ಪರ್ತ್’ನ ವಾಕಾ ಮೈದಾನದಲ್ಲಿ ನಡೆದ ಗ್ರೂಪ್-2ನ ಸೂಪರ್-12 ಹಂತದ ತನ್ನ 3ನೇ ಲೀಗ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 5 ವಿಕೆಟ್’ಗಳ ಅಂತರದಲ್ಲಿ ಸೋಲಿಗೆ ಶರಣಾಯಿತು.

134 ರನ್’ಗಳ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 19.4 ಓವರ್’ಗಳಲ್ಲಿ 5 ವಿಕೆಟ್ ನಷ್ಟದಲ್ಲಿ ಗುರಿ ತಲುಪಿತು. ಇನ್ನಿಂಗ್ಸ್’ನ 2ನೇ ಓವರ್’ನಲ್ಲೇ ಎರಡು ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿದ ಹರಿಣ ಪಡೆಗೆ ಮಧ್ಯಮ ಕ್ರಮಾಂಕದಲ್ಲಿ ಏಡನ್ ಮಾರ್ಕ್ರಮ್ ಮತ್ತು ಡೇವಿಡ್ ಮಿಲ್ಲರ್ ಆಸರೆಯಾದರು. ಈ ಬಲಗೈ ಎಡಗೈ ಜೋಡಿ 4ನೇ ವಿಕೆಟ್’ಗೆ 76 ರನ್ ಸೇರಿಸಿ ದಕ್ಷಿಣ ಆಫ್ರಿಕಾ ಗೆಲುವಿಗೆ ಕಾರಣವಾಯಿತು. ಮಾರ್ಕ್ರಮ್ 52 ರನ್ ಗಳಿಸಿದರೆ, ಡೇವಿಡ್ ಮಿಲ್ಲರ್ ಅಜೇಯ 59 ರನ್ ಗಳಿಸಿ ದಕ್ಷಿಣ ಆಫ್ರಿಕಾ ತಂಡವನ್ನು ಗೆಲುವಿನ ದಡ ಸೇರಿಸಿದರು. ಕೈಗೆ ಬಂದ ಕ್ಯಾಚ್’ಗಳನ್ನು ಕೈ ಚೆಲ್ಲಿದ್ದು, ರನೌಟ್’ಗಳನ್ನು ಮಿಸ್ ಮಾಡಿದ್ದು ಭಾರತಕ್ಕೆ ಮುಳುವಾಯಿತು.

ಇದಕ್ಕೂ ಮೊದಲು ಟಾಸ್ ಗೆದ್ದ ಟೀಮ್ ಇಂಡಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ 5 ಓವರ್’ಗಳ ಒಳಗೆ ಆರಂಭಿಕರಿಬ್ಬರನ್ನೂ ಕಳೆದುಕೊಂಡ ಭಾರತ ಆರಂಭಿಕ ಆಘಾತ ಎದುರಿಸಿತು. ನಾಯಕ ರೋಹಿತ್ ಶರ್ಮಾ (Rohit Sharma) 15 ರನ್ ಗಳಿಸಿ ಔಟಾದ್ರೆ, ಉಪನಾಯಕ ಕೆ.ಎಲ್ ರಾಹುಲ್ (KL Rahul) 9 ರನ್ನಿಗೆ ವಿಕೆಟ್ ಒಪ್ಪಿಸಿದರು. ಇಬ್ಬರನ್ನೂ ವೇಗಿ ಲುಂಗಿ ಎನ್’ಗಿಡಿ ಪೆವಿಲಿಯನ್’ಗಟ್ಟಿದರು. ನಂತರ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಕೂಡ 12 ರನ್ ಗಳಿಸಿ ಎನ್’ಗಿಡಿಗೆ ವಿಕೆಟ್ ಒಪ್ಪಿಸಿದರು. 5ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದ ಆಲ್ರೌಂಡರ್ ದೀಪಕ್ ಹೂಡ (Deepak Hooda)ಶೂನ್ಯಕ್ಕೆ ಔಟಾದ್ರೆ, ಕೇವಲ 2 ರನ್ನಿಗೆ ಔಟಾದ ಮತ್ತೊಬ್ಬ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಎನ್’ಗಿಡಿಗೆ 4ನೇ ಬಲಿಯಾದರು.

ಒಂದೆಡೆ ವಿಕೆಟ್’ಗಳು ಉರುಳುತ್ತಿದ್ದಾಗ ಕೌಂಟರ್ ಅಟ್ಯಾಕ್ ನಡೆಸಿದ ಸೂರ್ಯಕುಮಾರ್ ಯಾದವ್ (Suryakumar Yadav) 40 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್’ಗಳ ನೆರವಿನಿಂದ 68 ರನ್ ಸಿಡಿಸಿ ಭಾರತಕ್ಕೆ ಆಸರೆಯಾದರು. ಅಂತಿಮವಾಗಿ ಭಾರತ ನಿಗದಿತ 20 ಓವರ್’ಗಳಲ್ಲಿ 9 ವಿಕೆಟ್ ನಷ್ಟಕ್ಕೆ 133 ರನ್ ಕಲೆ ಹಾಕಿತು. ಆಡಿರುವ 3 ಪಂದ್ಯಗಳಲ್ಲಿ 2ನ್ನು ಗೆದ್ದು ಒಂದರಲ್ಲಿ ಸೋತಿರುವ ಭಾರತ ಬುಧವಾರ (ನವೆಂಬರ್ 2) ಅಡಿಲೇಡ್ ಮೈದಾನದಲ್ಲಿ ನಡೆಯಲಿರುವ ತನ್ನ 4ನೇ ಲೀಗ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ.

ಇದನ್ನೂ ಓದಿ : ಭಾರತ Vs ದಕ್ಷಿಣ ಆಫ್ರಿಕಾ ಮ್ಯಾಚ್, ರೋಹಿತ್ ಔಟಾದಾಗ ಮುಗಿಲು ಮುಟ್ಟಿತು ಭಾರತೀಯ ಪ್ರೇಕ್ಷಕರ ಸಂಭ್ರಮ, ಕಾರಣವೇನು ಗೊತ್ತಾ ?

ಇದನ್ನೂ ಓದಿ : KL Rahul failed again: 4, 9, 9; ಮುಂದುವರಿದ ರಾಹುಲ್ ವೈಫಲ್ಯ, 3ನೇ ಅಗ್ನಿಪರೀಕ್ಷೆ ಯಲ್ಲೂ ಸೋತ ಕನ್ನಡಿಗ

India Vs South Africa Live Team India lost the first match in T20 World Cup 2022

Comments are closed.