India won : U19 ಮಹಿಳಾ ಟಿ20 ವಿಶ್ವಕಪ್ ಗೆದ್ದು ಇತಿಹಾಸ ಬರೆದ ಟೀಮ್ ಇಂಡಿಯಾ ಹುಡುಗಿಯರು

ಪೋಚೆಫ್’ಸ್ಟ್ರೂಮ್ (ದಕ್ಷಿಣ ಆಫ್ರಿಕಾ): ಶೆಫಾಲಿ ವರ್ಮಾ ಸಾರಥ್ಯದ ಟೀಮ್ ಇಂಡಿಯಾ ವನಿತೆಯರು ಚೊಚ್ಚಲ ಆವೃತ್ತಿಯ ಐಸಿಸಿ ಅಂಡರ್-19 ಮಹಿಳಾ ಟಿ20 ವಿಶ್ವಕಪ್ (ICC Under 19 women’s t20 World Cup 2023) ಟೂರ್ನಿಯಲ್ಲಿ ಚಾಂಪಿಯನ್ (India won) ಪಟ್ಟಕ್ಕೇರಿ ಇತಿಹಾಸ ನಿರ್ಮಿಸಿದ್ದಾರೆ.

ಪೋಚೆಫ್’ಸ್ಟ್ರೂಮ್’ನ ಸೆನ್ವೆಸ್ ಪಾರ್ಕ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ವನಿತೆಯರನ್ನು 7 ವಿಕೆಟ್’ಗಳಿಂದ ಏಕಪಕ್ಷೀಯವಾಗಿ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತು.

ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್, ಶೆಫಾಲಿ ಪಡೆಯ ಸಂಘಟಿತ ದಾಳಿಗೆ ತತ್ತರಿಸಿ 17.1 ಓವರ್’ಗಳಲ್ಲಿ ಕೇವಲ 68 ರನ್ನಿಗೆ ಆಲೌಟಾಯಿತು. ಭಾರತ ಪರ ಟೈಟಸ್ ಸಧು 4 ಓವರ್’ಗಳಲ್ಲಿ ಕೇವಲ 6 ರನ್ನಿತ್ತು 2 ವಿಕೆಟ್ ಪಡೆದರೆ, ಅರ್ಚನಾ ದೇವಿ (2/17) ಮತ್ತು ಪಾರ್ಷವಿ ಚೋಪ್ರಾ (2/13) ತಲಾ ವಿಕೆಟ್ ಉರುಳಿಸಿದರು. ಮನ್ನತ್ ಕಶ್ಯಪ್ (1/13), ನಾಯಕಿ ಶೆಫಾಲಿ ವರ್ಮಾ (1/16) ಮತ್ತು ಸೋನಮ್ ಯಾದವ್ (1/3) ತಲಾ ಒಂದು ವಿಕೆಟ್ ಪಡೆದು ಇಂಗ್ಲೆಂಡನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು.

ನಂತರ ಸುಲಭ ಗುರಿ ಬೆನ್ನಟ್ಟಿದ ಭಾರತ 14 ಓವರ್’ಗಳಲ್ಲಿ 3 ವಿಕೆಟ್ ನಷ್ಟಕ್ಕೆ 69 ರನ್ ಗಳಿಸಿ ವಿಶ್ವಕಪ್ ಟ್ರೋಫಿಯನ್ನು ಎತ್ತಿ ಹಿಡಿಯಿತು. ಭಾರತ ಪರ ನಾಯಕಿ ಶೆಫಾಲಿ ವರ್ಮಾ 15 ರನ್, ಉಪನಾಯಕಿ ಶ್ವೇತಾ ಸೆಹ್ರಾವತ್ 5 ರನ್, ಸೌಮ್ಯ ತಿವಾರಿ ಅಜೇಯ 24 ರನ್ ಹಾಗೂ ಗೊಂಗಾಡಿ ತ್ರಿಷಾ 24 ರನ್ ಗಳಿಸಿ ಭಾರತದ ಗೆಲುವಿಗೆ ಕಾರಣರಾದರು.

ಇದು ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಭಾರತ ಗೆದ್ದ ಮೊದಲ ವಿಶ್ವಕಪ್ ಟ್ರೋಫಿ. ಭಾರತ ಮಹಿಳಾ ಸೀನಿಯರ್ ತಂಡ 2005 ಮತ್ತು 2017ರಲ್ಲಿ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ತಲುಪಿತ್ತು. ಆದರೆ ಎರಡು ಬಾರಿಯೂ ಫೈನಲ್’ನಲ್ಲಿ ಸೋತು ರನ್ನರ್ಸ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಆದರೆ ಜ್ಯೂನಿಯರ್ ಮಹಿಳಾ ತಂಡ ಭಾರತದ ವಿಶ್ವಕಪ್ ಬರವನ್ನು ನೀಗಿಸುವಲ್ಲಿ ಯಶಸ್ವಿಯಾಗಿದೆ.

ಭಾರತದ ವನಿತೆಯರ ಐತಿಹಾಸಿಕ ಸಾಧನೆಗೆ ಸೋಷಿಯಲ್ ಮೀಡಿಯಾದಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

ಇದನ್ನೂ ಓದಿ : ಮದುವೆ ಮಹೋತ್ಸವದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ರಾಹುಲ್

ಇದನ್ನೂ ಓದಿ : Mahendra Singh Dhoni : ಭಾರತ Vs ನ್ಯೂಜಿಲೆಂಡ್ ಟಿ20 ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡ ವಿಶೇಷ ಅತಿಥಿ

India won inaugural Women’s Under-19 T20 World Cup

Comments are closed.