ಜ್ಯೂನಿಯರ್ ಮಹಿಳಾ ವಿಶ್ವಕಪ್ ಗೆದ್ದ ಭಾರತೀಯ ವನಿತೆಯರಿಗೆ ಬಿಸಿಸಿಐನಿಂದ 5 ಕೋಟಿ ರೂ. ಬಂಪರ್ ಗಿಫ್ಟ್

ಮುಂಬೈ: ಐಸಿಸಿ ಮಹಿಳಾ ಅಂಡರ್-19 ಟಿ20 ವಿಶ್ವಕಪ್ ಟೂರ್ನಿಯಲ್ಲಿ (ICC Under 19 women’s World Cup 2023) ಚಾಂಪಿಯನ್ ಪಟ್ಟಕ್ಕೇರಿದ (Junior Women’s World Cup) ಭಾರತ ಮಹಿಳಾ ತಂಡಕ್ಕೆ ಬಿಸಿಸಿಐ (BCCI) 5 ಕೋಟಿ ರೂ.ಗಳ ನಗದು ಬಹುಮಾನ ಘೋಷಿಸಿದೆ.ಭಾನುವಾರ ದಕ್ಷಿಣ ಆಫ್ರಿಕಾದ ಪೋಚೆಫ್’ ಸ್ಟ್ರೂಮ್’ನಲ್ಲಿರುವ ಸೆನ್ವೆಸ್ ಪಾರ್ಕ್’ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಶೆಫಾಲಿ ವರ್ಮಾ ಸಾರಥ್ಯದ ಟೀಮ್ ಇಂಡಿಯಾ, ಇಂಗ್ಲೆಂಡ್ ತಂಡವನ್ನು 7 ವಿಕೆಟ್’ಗಳಿಂದ ಸುಲಭವಾಗಿ ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು.

ವಿಶ್ವಕಪ್ ಗೆಲ್ಲಲಿ ತಂಡದ ಆಟಗಾರ್ತಿಯರು ಮತ್ತು ಸಹಾಯಕ ಸಿಬ್ಬಂದಿಯನ್ನು ಅಭಿನಂದಿಸಿರುವ ಬಿಸಿಸಿಐ ಒಟ್ಟು ರೂ. 5ಕೋಟಿಯ ನಗದು ಬಹುಮಾನ ಘೋಷಿಸಿದೆ. ಭಾರತ ತಂಡದ ಉಪನಾಯಕಿ ಶ್ವೇತಾ ಸೆಹ್ರಾವತ್ ಟೂರ್ನಿಯಲ್ಲೇ ಅತ್ಯಧಿಕ 297 ರನ್ ಕಲೆ ಹಾಕಿದ್ರೆ, ಲೆಗ್ ಸ್ಪಿನ್ನರ್ ಪಾರ್ಷವಿ ಚೋಪ್ರಾ ಭಾರತ ಪರ ಅತ್ಯಧಿಕ 11 ವಿಕೆಟ್ ಕಬಳಿಸಿ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟಕ್ಕೇರಲು ಕಾರಣರಾಗಿದ್ದರು.

ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್, ಶೆಫಾಲಿ ಪಡೆಯ ಸಂಘಟಿತ ದಾಳಿಗೆ ತತ್ತರಿಸಿ 17.1 ಓವರ್’ಗಳಲ್ಲಿ ಕೇವಲ 68 ರನ್ನಿಗೆ ಆಲೌಟಾಯಿತು. ಭಾರತ ಪರ ಟೈಟಸ್ ಸಧು 4 ಓವರ್’ಗಳಲ್ಲಿ ಕೇವಲ 6 ರನ್ನಿತ್ತು 2 ವಿಕೆಟ್ ಪಡೆದರೆ, ಅರ್ಚನಾ ದೇವಿ (2/17) ಮತ್ತು ಪಾರ್ಷವಿ ಚೋಪ್ರಾ (2/13) ತಲಾ ವಿಕೆಟ್ ಉರುಳಿಸಿದರು. ಮನ್ನತ್ ಕಶ್ಯಪ್ (1/13), ನಾಯಕಿ ಶೆಫಾಲಿ ವರ್ಮಾ (1/16) ಮತ್ತು ಸೋನಮ್ ಯಾದವ್ (1/3) ತಲಾ ಒಂದು ವಿಕೆಟ್ ಪಡೆದು ಇಂಗ್ಲೆಂಡನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು.

ನಂತರ ಸುಲಭ ಗುರಿ ಬೆನ್ನಟ್ಟಿದ ಭಾರತ 14 ಓವರ್’ಗಳಲ್ಲಿ 3 ವಿಕೆಟ್ ನಷ್ಟಕ್ಕೆ 69 ರನ್ ಗಳಿಸಿ ವಿಶ್ವಕಪ್ ಟ್ರೋಫಿಯನ್ನು ಎತ್ತಿ ಹಿಡಿಯಿತು. ಭಾರತ ಪರ ನಾಯಕಿ ಶೆಫಾಲಿ ವರ್ಮಾ 15 ರನ್, ಉಪನಾಯಕಿ ಶ್ವೇತಾ ಸೆಹ್ರಾವತ್ 5 ರನ್, ಸೌಮ್ಯ ತಿವಾರಿ ಅಜೇಯ 24 ರನ್ ಹಾಗೂ ಗೊಂಗಾಡಿ ತ್ರಿಷಾ 24 ರನ್ ಗಳಿಸಿ ಭಾರತದ ಗೆಲುವಿಗೆ ಕಾರಣರಾದರು.

ಇದನ್ನೂ ಓದಿ : ಟೀಮ್ ಇಂಡಿಯಾಗೆ ಟಾಪ್-3 ಫೋಬಿಯಾ : ಕಾಡುತ್ತಿದೆ ತ್ರಿಮೂರ್ತಿಗಳ ಅನುಪಸ್ಥಿತಿ

ಇದನ್ನೂ ಓದಿ : India Vs Australia test series : ಭಾರತವನ್ನು ಮಣಿಸಲು ಆಸೀಸ್ ಮಾಸ್ಟರ್ ಪ್ಲಾನ್; ಆಸ್ಟ್ರೇಲಿಯಾದಲ್ಲೇ ಸ್ಪಿನ್ ಪಿಚ್ ನಿರ್ಮಿಸಿ ಕಾಂಗರೂಗಳು

ಇದನ್ನೂ ಓದಿ : MS Dhoni bike craze : RX100 ಬೈಕ್’ಗೆ ಹೊಸ ಲುಕ್ ಕೊಟ್ಟ ಎಂ.ಎಸ್ ಧೋನಿ; ಹೇಗಿದೆ ಗೊತ್ತಾ ಮಾಹಿ ಆರ್.ಎಕ್ಸ್ 100 ?

ಇದು ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಭಾರತ ಗೆದ್ದ ಮೊದಲ ವಿಶ್ವಕಪ್ ಟ್ರೋಫಿ. ಭಾರತ ಮಹಿಳಾ ಸೀನಿಯರ್ ತಂಡ 2005 ಮತ್ತು 2017ರಲ್ಲಿ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ತಲುಪಿತ್ತು. ಆದರೆ ಎರಡು ಬಾರಿಯೂ ಫೈನಲ್’ನಲ್ಲಿ ಸೋತು ರನ್ನರ್ಸ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. 2020ರ ಟಿ20 ವಿಶ್ವಕಪ್ ಫೈನಲ್’ನಲ್ಲೂ ಭಾರತ ಸೋಲು ಕಂಡಿತ್ತು. ಆದರೆ ಜ್ಯೂನಿಯರ್ ಮಹಿಳಾ ತಂಡ ಭಾರತದ ವಿಶ್ವಕಪ್ ಬರವನ್ನು ನೀಗಿಸುವಲ್ಲಿ ಯಶಸ್ವಿಯಾಗಿದೆ.

Junior Women’s World Cup: BCCI will give Rs 5 crore to the Indian women who won the Junior Women’s World Cup.

Comments are closed.