Arjun Tendulkar duck out : ಕರ್ನಾಟಕ ವಿರುದ್ಧ ನಡೆಯದ ಅರ್ಜುನನ ಆಟ, ಮೊದಲ ಎಸೆತದಲ್ಲೇ ಸಚಿನ್ ಪುತ್ರ ಡಕೌಟ್ !

ಪೊರ್ವರಿಮ್ (ಗೋವಾ): ತಂದೆಯಂತೆ ರಣಜಿ ಪದಾರ್ಪಣೆ ಪಂದ್ಯದಲ್ಲೇ ಶತಕ ಬಾರಿಸಿ ಮಿಂಚಿದ್ದ ಅರ್ಜುನ್ ತೆಂಡೂಲ್ಕರ್ (Arjun Tendulkar duck out ), ಕರ್ನಾಟಕ ವಿರುದ್ಧದ ರಣಜಿ ಪಂದ್ಯದಲ್ಲಿ (Karnataka Vs Goa Ranji match) ಶೂನ್ಯಕ್ಕೆ ಔಟಾಗಿದ್ದಾರೆ. ಪೊರ್ವರಿಮ್’ನಲ್ಲಿರುವ ಗೋವಾ ಕ್ರಿಕೆಟ್ ಅಸೋಸಿಯಷನ್ ಅಕಾಡೆಮಿ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ (Ranji Trophy 2022-23) ಎಲೈಟ್ ‘ಸಿ’ ಹಂತದ ಪಂದ್ಯದಲ್ಲಿ ಅರ್ಜುನ್ ತೆಂಡೂಲ್ಕರ್ ಎದುರಿಸಿದ ಮೊದಲ ಎಸೆತದಲ್ಲೇ ಔಟಾದರು. 8ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದ ಎಡಗೈ ಆಟಗಾರ ಅರ್ಜುನ್ ತೆಂಡೂಲ್ಕರ್, ಕರ್ನಾಟಕ ತಂಡದ ಯುವ ಬಲಗೈ ಮಧ್ಯಮ ವೇಗದ ಬೌಲರ್ ವೈಶಾಕ್ ವಿಜಯ್ ಕುಮಾರ್ ದಾಳಿಯಲ್ಲಿ ವಿಕೆಟ್ ಕೀಪರ್ ಶರತ್ ಬಿ.ಆರ್ ಕೈಗೆ ಕ್ಯಾಚಿತ್ತರು.

ರಾಜಸ್ಥಾನ ವಿರುದ್ಧದ ರಣಜಿ ಪದಾರ್ಪಣೆಯ ಪಂದ್ಯದಲ್ಲೇ ಶತಕ ಬಾರಿಸಿದ್ದ ಅರ್ಜುನ್ ತೆಂಡೂಲ್ಕರ್ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದರು. ಅರ್ಜುನ್ ತಂದೆ ಸಚಿನ್ ತೆಂಡೂಲ್ಕರ್ ಕೂಡ ತಮ್ಮ ಚೊಚ್ಚಲ ರಣಜಿ ಪಂದ್ಯದಲ್ಲೇ ಶತಕ ಸಿಡಿಸಿದ್ದರು. 1988ರಲ್ಲಿ ಗುಜರಾತ್ ವಿರುದ್ಧದ ಪಂದ್ಯದ ಮೂಲಕ ಸಚಿನ್ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ್ದರು. ತಂದೆಯಂತೆ ಮೊದಲ ಪಂದ್ಯದಲ್ಲೇ ಶತಕ ಬಾರಿಸಿದ್ದ ಅರ್ಜುನ್ ತೆಂಡೂಲ್ಕರ್ ಆಟ ಕರ್ನಾಟಕ ವಿರುದ್ಧ ನಡೆಯಲಿಲ್ಲ. ಕರ್ನಾಟಕ ತಂಡದ 603 ರನ್’ಗಳಿಗೆ ಪ್ರತಿಯಾಗಿ ಗೋವಾ ತಂಡ ತನ್ನ ಪ್ರಥಮ ಇನ್ನಿಂಗ್ಸ್’ನಲ್ಲಿ 3ನೇ ದಿನದಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 321 ರನ್ ಗಳಿಸಿದ್ದು, ಫಾಲೋ ಆನ್ ಸುಳಿಯಲ್ಲಿ ಸಿಲುಕಿದೆ. ಈಗಲೂ 282 ರನ್’ಗಳ ಭಾರೀ ಹಿನ್ನಡೆಯಲ್ಲಿರುವ ಗೋವಾ, ಫಾಲೋ ಆನ್ ತಪ್ಪಿಸಿಕೊಳ್ಳಲು ಇನ್ನೂ 132 ರನ್ ಗಳಿಸಬೇಕಿದೆ.

ಗೋವಾ ಪರ RCB ಆಟಗಾರ ಸುಯಾಶ್ ಪ್ರಭುದೇಸಾಯಿ 87 ರನ್ ಗಳಿಸಿದ್ರೆ, ಗೋವಾ ತಂಡವನ್ನು ಪ್ರತಿನಿಧಿಸುತ್ತಿರುವ ಮುಂಬೈ ಆಟಗಾರ ಸಿದ್ದೇಶ್ ಲಾಡ್ ಬಿರುಸಿನ 63 ರನ್ ಗಳಿಸಿದರು. ಕೆಳಕ್ರಮಾಂಕದಲ್ಲಿ ನಾಯಕ ದರ್ಶನ್ ಮಿಸಾಲ್ ಅಜೇಯ 66 ರನ್’ಗಳೊಂದಿಗೆ ಆಡುತ್ತಿದ್ದು, 4ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಕರ್ನಾಟಕ ಪರ ಆಫ್ ಸ್ಪಿನ್ನರ್ ಕೃಷ್ಣಪ್ಪ ಗೌತಮ್ 109 ರನ್ನಿಗೆ 3 ವಿಕೆಟ್ ಪಡೆದರೆ, ಯುವ ಮಧ್ಯಮ ವೇಗಿ ವೈಶಾಕ್ ವಿಜಯ್ ಕುಮಾರ್ 46 ರನ್ನಿಗೆ 2 ವಿಕೆಟ್ ಹಾಗೂ ಯುವ ಎಡಗೈ ಸ್ಪಿನ್ನರ್ ಶುಭಾಂಗ್ ಹೆಗ್ಡೆ 79 ರನ್ನಿಗೆ 2 ವಿಕೆಟ್ ಉರುಳಿಸಿದ್ದಾರೆ. ಉಳಿದೊಂದು ವಿಕೆಟ್ ವೇಗಿ ರೋನಿತ್ ಮೋರೆ ಪಾಲಾಗಿದೆ. ಕರ್ನಾಟಕ ತಂಡ ಮಾಜಿ ನಾಯಕ ಮನೀಶ್ ಪಾಂಡೆ ಅವರ ಅಮೋಘ ದ್ವಿಶತಕ (ಅಜೇಯ 208 ರನ್) ಮತ್ತು ಉಪನಾಯಕ ಆರ್.ಸಮರ್ಥ್ (140) ಅವರ ಶತಕದ ನೆರವಿನಿಂದ ತನ್ನ ಪ್ರಥಮ ಇನ್ನಿಂಗ್ಸ್’ನಲ್ಲಿ 7 ವಿಕೆಟ್’ಗೆ 603 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿತ್ತು.

ಇದನ್ನೂ ಓದಿ : Ramiz Raja: ಟೀಮ್ ಇಂಡಿಯಾ ನಾಯಕತ್ವ ಬದಲಾವಣೆಗೆ ಪಾಕಿಸ್ತಾನ ಕಾರಣವಂತೆ!

ಇದನ್ನೂ ಓದಿ : World’s richest T20 league : ಇಲ್ಲಿ 13 ಕೋಟಿ, ಅಲ್ಲಿ 82 ಲಕ್ಷ, ಐಪಿಎಲ್ ಮುಂದೆ ಲೆಕ್ಕಕ್ಕೇ ಇಲ್ಲ ಪಾಕಿಸ್ತಾನ್ ಸೂಪರ್ ಲೀಗ್

Karnataka vs Goa Ranji Trophy Sachin Tendulkar son Arjun Tendulkar duck out in the first ball

Comments are closed.