ವಿಂಬಲ್ಡನ್ ಟೆನಿಸ್ ಕೋರ್ಟ್‌ನಲ್ಲಿ ಬರ್ತ್ ಡೇ ಬಾಯ್ ಮಹೇಂದ್ರ ಸಿಂಗ್ ಧೋನಿ

ಲಂಡನ್: ಇವತ್ತು ಟೀಮ್ ಇಂಡಿಯಾ ಮಾಜಿ ನಾಯಕ, ಕ್ರಿಕೆಟ್ ಜಗತ್ತಿನ ಸರ್ವಶ್ರೇಷ್ಠ ಫಿನಿಷರ್, ಭಾರತಕ್ಕೆ ಎರಡು ವಿಶ್ವಕಪ್”ಗಳನ್ನು ಗೆದ್ದುಕೊಟ್ಟ ನಾಯಕ ಮಹೇಂದ್ರ ಸಿಂಗ್ ಧೋನಿಯವರ ಹುಟ್ಟುಹಬ್ಬ (Mahendra Singh Dhoni Birthday ). 41ನೇ ವರ್ಷಕ್ಕೆ ಕಾಲಿಟ್ಟಿರುವ ಎಂ.ಎಸ್ ಧೋನಿ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಜನ್ಮದಿನದ ಹಿಂದಿನ ದಿನ ಧೋನಿ ಎಲ್ಲಿದ್ದರು ಗೊತ್ತಾ? ವಿಂಬಲ್ಡನ್ ಟೆನಿಸ್ ಕೋರ್ಟ್”ನಲ್ಲಿ. ಹೌದು, ಹುಟ್ಟುಹಬ್ಬದ ಮುನ್ನಾ ದಿನ, ಅಂದರೆ ಬುಧವಾರ ಲಂಡನ್”ನಲ್ಲಿ ನಡೆಯುತ್ತಿರುವ ವಿಂಬಲ್ಡನ್ ಗ್ರ್ಯಾಂಡ್ ಸ್ಲ್ಯಾಮ್ ಪಂದ್ಯವನ್ನು ವೀಕ್ಷಿಸಿದ್ದಾರೆ.

ತಮ್ಮ ನೆಚ್ಚಿನ ಟೆನಿಸ್ ತಾರೆ ರಾಫೆಲ್ ನಡಾಲ್ ಪಂದ್ಯವನ್ನು ಧೋನಿ ತಮ್ಮ ಸ್ನೇಹಿತರೊಂದಿಗೆ ವಿಂಬಲ್ಡನ್ ಕೋರ್ಟ್”ನಲ್ಲಿ ವೀಕ್ಷಿಸಿದ್ದಾರೆ (MS Dhoni Watches Rafael Nadal’s Match At Wimbledon). ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಶ್ವದಾಖಲೆಯ ಗ್ರ್ಯಾಂಡ್ ಸ್ಲ್ಯಾಮ್ ಕಿರೀಟಗಳ ಒಡೆಯ ರಾಫೆಲ್ ನಡಾಲ್, ವಿಂಬಲ್ಡನ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಮೆರಿಕದ ಟೇಲರ್ ಫ್ರಿಟ್ಜ್ ಅವರನ್ನು ರೋಚಕ 5 ಸೆಟ್”ಗಳ ಹೋರಾಟದಲ್ಲಿ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಅಮೆರಿಕದ 24 ವರ್ಷದ ಯುವ ಆಟಗಾರನ ವಿರುದ್ಧ ಮೊದಲ ಮತ್ತು 3ನೇ ಸೆಟ್ ಸೋತ 36 ವರ್ಷದ ನಡಾಲ್ 2, 4 ಹಾಗೂ 5ನೇ ಸೆಟ್ ಗೆದ್ದು ಸೆಮಿಫೈನಲ್”ಗೆ ಲಗ್ಗೆಯಿಟ್ಟರು. ಈ ರೋಚಕ ಪಂದ್ಯಕ್ಕೆ ಟೀಮ್ ಇಂಡಿಯಾ ಮಾಜಿ ನಾಯಕ ಎಂ.ಎಸ್ ಧೋನಿ ಸಾಕ್ಷಿಯಾದರು. 14 ಬಾರಿ ಫ್ರೆಂಚ್ ಓಪನ್ ಗೆದ್ದು ವಿಶ್ವದಾಖಲೆ ಬರೆದಿರುವ ರಾಫೆಲ್ ನಡಾಲ್, 2008 ಹಾಗೂ 2010ರಲ್ಲಿ ವಿಂಬಲ್ಡನ್ ಗ್ರ್ಯಾಂಡ್ ಸ್ಲ್ಯಾಮ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು.

ವಿಂಬಲ್ಡನ್ ಪಂದ್ಯ ವೀಕ್ಷಿಸಿದ ನಂತರ ಎಂ.ಎಸ್ ಧೋನಿ ಲಂಡನ್”ನಲ್ಲಿ ಪತ್ನಿ-ಮಗಳು ಹಾಗೂ ಸ್ನೇಹಿತರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಬರ್ತ್ ಡೇ ಬಾಯ್ ಧೋನಿಗೆ ಪತ್ನಿ ಸಾಕ್ಷಿ ಹಾಗೂ ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಭ್ ಪಂತ್‌ ವಿಶೇಷ ಉಡುಗೊರೆಯನ್ನು ನೀಡಿದ್ದಾರೆ.

https://www.instagram.com/reel/CfsExi5gMgO/?utm_source=ig_web_copy_link

2020ರ ಆಗಸ್ಟ್ 15ರಂದು ಎಲ್ಲಾ ಮಾದರಿಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ್ದ ಎಂ.ಎಸ್ ಧೋನಿ, ಭಾರತೀಯ ಕ್ರಿಕೆಟ್ ಕಂಡ ದಿಗ್ಗಜ ಆಟಗಾರ ಮತ್ತು ದಿಗ್ಗಜ ನಾಯಕ. 2004ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ಜಾರ್ಖಂಡ್ ಹೀರೋ ಧೋನಿ, ಭಾರತ ಪರ 90 ಟೆಸ್ಟ್ ಪಂದ್ಯಗಳನ್ನಾಡಿ 6 ಶತಕ ಹಾಗೂ 33 ಅರ್ಧಶತಕಗಳ ನೆರವಿನೊಂದಿಗೆ 4,876 ರನ್ ಗಳಿಸಿದ್ದಾರೆ.

ವೈಟ್ ಬಾಲ್”ನಲ್ಲಿ ಭಾರತೀಯ ಕ್ರಿಕೆಟ್ ಕಂಡ ಸರ್ವೇಶ್ರೇಷ್ಠ ಮ್ಯಾಚ್ ವಿನ್ನರ್ ಆಗಿರುವ ಎಂಎಸ್, 350 ಏಕದಿನ ಪಂದ್ಯಗಳನ್ನಾಡಿದ್ದು, 10 ಶತಕ ಮತ್ತು 73 ಅರ್ಧಶತಕಗಳ ಸಹಿತ 50.57ರ ಸರಾಸರಿಯಲ್ಲಿ 10,773 ರನ್ ಕಲೆ ಹಾಕಿದ್ದಾರೆ. 98 ಟಿ20 ಅಂತರಾಷ್ಟ್ರೀಯ ಪಂದ್ಯಗಳಿಂದ 1,617 ರನ್ ಗಳಿಸಿದ್ದಾರೆ.

ಧೋನಿ ನಾಯಕತ್ವದಲ್ಲಿ ಭಾರತ ತಂಡ 2007ರಲ್ಲಿ ಐಸಿಸಿ ಟಿ20 ವಿಶ್ವಕಪ್, 2011ರಲ್ಲಿ ಐಸಿಸಿ ಏಕದಿನ ವಿಶ್ವಕಪ್ ಮತ್ತುಪ 2013ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದಿದೆ. ಟಿ20 ವಿಶ್ವಕಪ್, ಏಕದಿನ ವಿಶ್ವಕಪ್ ಹಾಗೂ ಚಾಂಪಿಯನ್ಸ್ ಟ್ರೋಫಿ ಗೆದ್ದಿರುವ ಜಗತ್ತಿನ ಮೊದಲ ಮತ್ತು ಏಕೈಕ ನಾಯಕನೆಂಬ ದಾಖಲೆ ಇಂದಿಗೂ ಧೋನಿ ಹೆಸರಲ್ಲಿದೆ.

ಇದನ್ನೂ ಓದಿ : MS Dhoni Turns 41: ಅಭಿಮಾನಿಗಳಿಂದ ನಿರ್ಮಾಣವಾಯಿತು 41 ಅಡಿಯ ಧೋನಿ ಕಟೌಟ್‌

ಇದನ್ನೂ ಓದಿ : MS Dhoni 41st birthday : ಎಂಎಸ್ ಧೋನಿಗೆ 41ನೇ ಹುಟ್ಟುಹಬ್ಬ: ವಿಶೇಷ ಗಿಫ್ಟ್‌ ಕೊಟ್ಟ ಪತ್ನಿ ಸಾಕ್ಷಿ, ರಿಷಬ್ ಪಂತ್

Mahendra Singh Dhoni Birthday Celebration on the Wimbledon tennis court

Comments are closed.