Exclusive: ಜ್ಯೂನಿಯರ್ ಮಹಿಳಾ ವಿಶ್ವಕಪ್ ವಿಕ್ರಮದ ಹಿಂದೆ ಕನ್ನಡತಿಯ ಕಮಾಲ್, ಭಾರತದ ಯಶಸ್ಸಿನ ಹಿಂದಿದ್ದಾರೆ ಕಲ್ಬುರ್ಗಿ ಕೋಚ್

ಬೆಂಗಳೂರು: ಐಸಿಸಿ ಮಹಿಳಾ ಜ್ಯೂನಿಯರ್ ಟಿ20 ವಿಶ್ವಕಪ್ ಟೂರ್ನಿಯಲ್ಲಿ (ICC U19 women’s world cup) ಭಾರತ ತಂಡ ಚಾಂಪಿಯನ್ ಆಗಿದ್ದು ನಿಮ್ಗೆ ಗೊತ್ತೇ ಇದೆ. ಆ ವಿಶ್ವಕಪ್ ವಿಕ್ರಮದ ಹಿಂದೆ ಕನ್ನಡತಿಯೊಬ್ಬರ ಕಮಾಲ್ ಅಡಗಿದೆ.ಭಾರತದ ಮಹಿಳಾ ಜ್ಯೂನಿಯರ್ ತಂಡದ ವಿಶ್ವಕಪ್ ಗೆಲುವಿನ ಹಿಂದಿನ ಸೂತ್ರಧಾರಿಣಿ ನಮ್ಮ ಕನ್ನಡತಿ. ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿ ಕರ್ನಾಟಕದ ಆಟಗಾರ್ತಿಯರಿಲ್ಲ. ಆದರೆ ಇಡೀ ತಂಡದ ಶಕ್ತಿ ನಮ್ಮ ಕನ್ನಡತಿ ಎಂಬುದು ಹೆಮ್ಮೆಯ ವಿಚಾರ. ಅಂದ ಹಾಗೆ ಆ ಕನ್ನಡತಿಯ ಹೆಸರು ನೂಶೀನ್ ಅಲ್ ಖಾದೀರ್ (Nooshin Al Khadeer).

ಕಲ್ಬುರ್ಗಿಯವರಾದ 42 ವರ್ಷದ ನೂಶೀನ್ ಅಲ್ ಖಾದೀರ್ ಐಸಿಸಿ ಅಂಡರ್-19 ಮಹಿಳಾ ಟಿ20 ವಿಶ್ವಕಪ್ ಗೆದ್ದಿರುವ ಭಾರತ ತಂಡದ ಹೆಡ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಆಫ್’ಸ್ಪಿನ್ನರ್ ಆಗಿದ್ದ ನೂಶೀನ್ ಅಲ್ ಖಾದೀರ್ 2003ರಿಂದ 2012ರವರೆಗೆ ಭಾರತ ಪರ ಐದು ಟೆಸ್ಟ್, 78 ಏಕದಿನ ಹಾಗೂ 2 ಟಿ20 ಪಂದ್ಯಗಳನ್ನಾಡಿದ್ದಾರೆ. ಕ್ರಿಕೆಟಾ ಕರಿಯರ್’ಗೆ ನಿವೃತ್ತಿ ಘೋಷಿಸಿದ ನಂತರ ಕೋಚಿಂಗ್ ಜವಾಬ್ದಾರಿ ಹೊತ್ತಿದ್ದ ಖಾದೀರ್ ಈಗ ಭಾರತೀಯ ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ವಿಶ್ವಕಪ್ ಗೆದ್ದ ತಂಡದ ಕೋಚ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ಚೊಚ್ಚಲ ಆವೃತ್ತಿಯ ಐಸಿಸಿ ಮಹಿಳಾ ಅಂಡರ್-19 ಟಿ20 ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿ ಇತಿಹಾಸ ನಿರ್ಮಿಸಿರುವ ಭಾರತ ಜ್ಯೂನಿಯರ್ ತಂಡವನ್ನು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಸನ್ಮಾನಿಸಲಿದ್ದಾರೆ. ಅಹ್ಮದಾಬಾದ್’ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಬಿಸಿಸಿಐ (BCCI) ಈ ಸನ್ಮಾನ ಕಾರ್ಯಕ್ರಮ ಏರ್ಪಡಿಸಿದ್ದು, ವಿಶ್ವಕಪ್ ವಿಜೇತ ತಂಡವನ್ನು ಸಚಿನ್ ತೆಂಡೂಲ್ಕನ್ ಸನ್ಮಾನಿಸಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ.

ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ 3ನೇ ಟಿ20 ಪಂದ್ಯ ಇಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಪಂದ್ಯಕ್ಕೂ ಮುನ್ನ ವಿಶ್ವಕಪ್ ವಿಜೇತ ಭಾರತ ಜ್ಯೂನಿಯರ್ ಮಹಿಳಾ ತಂಡದ ಆಟಗಾರ್ತಿಯರನ್ನು ಬಿಸಿಸಿಐ ಅಭಿನಂದಿಸಲಿದೆ. ಇದೇ ವೇಳೆ ತಂಡದ ಆಟಗಾರ್ತಿಯರು ಮತ್ತು ಸಹಾಯಕ ಸಿಬ್ಬಂದಿಗೆ 5 ಕೋಟಿ ರೂ.ಗಳ ನಗದು ಬಹುಮಾನವನ್ನು ಬಿಸಿಸಿಐ ವಿತರಿಸಲಿದೆ.

ದಕ್ಷಿಣ ಆಫ್ರಿಕಾದ ಪೋಚೆಫ್’ಸ್ಟ್ರೂಮ್’ನ ಸೆನ್ವೆಸ್ ಪಾರ್ಕ್ ಮೈದಾನದಲ್ಲಿ ಭಾನುವಾರ ನಡೆದ ಅಂಡರ್-19 ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತದ ಜ್ಯೂನಿಯರ್ ಮಹಿಳಾ ತಂಡ ಇಂಗ್ಲೆಂಡ್ ವನಿತೆಯರನ್ನು 7 ವಿಕೆಟ್’ಗಳಿಂದ ಏಕಪಕ್ಷೀಯವಾಗಿ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತ್ತು.

ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್, ಶೆಫಾಲಿ ಪಡೆಯ ಸಂಘಟಿತ ದಾಳಿಗೆ ತತ್ತರಿಸಿ 17.1 ಓವರ್’ಗಳಲ್ಲಿ ಕೇವಲ 68 ರನ್ನಿಗೆ ಆಲೌಟಾಗಿತ್ತು. ಭಾರತ ಪರ ಟೈಟಸ್ ಸಧು 4 ಓವರ್’ಗಳಲ್ಲಿ ಕೇವಲ 6 ರನ್ನಿತ್ತು 2 ವಿಕೆಟ್ ಪಡೆದರೆ, ಅರ್ಚನಾ ದೇವಿ (2/17) ಮತ್ತು ಪಾರ್ಷವಿ ಚೋಪ್ರಾ (2/13) ತಲಾ ವಿಕೆಟ್ ಉರುಳಿಸಿದ್ದರು. ಮನ್ನತ್ ಕಶ್ಯಪ್ (1/13), ನಾಯಕಿ ಶೆಫಾಲಿ ವರ್ಮಾ (1/16) ಮತ್ತು ಸೋನಮ್ ಯಾದವ್ (1/3) ತಲಾ ಒಂದು ವಿಕೆಟ್ ಪಡೆದು ಇಂಗ್ಲೆಂಡನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದರು.

ನಂತರ ಸುಲಭ ಗುರಿ ಬೆನ್ನಟ್ಟಿದ್ದ ಭಾರತ 14 ಓವರ್’ಗಳಲ್ಲಿ 3 ವಿಕೆಟ್ ನಷ್ಟಕ್ಕೆ 69 ರನ್ ಗಳಿಸಿ ವಿಶ್ವಕಪ್ ಟ್ರೋಫಿಯನ್ನು ಎತ್ತಿ ಹಿಡಿದಿತ್ತು. ಭಾರತ ಪರ ನಾಯಕಿ ಶೆಫಾಲಿ ವರ್ಮಾ 15 ರನ್, ಉಪನಾಯಕಿ ಶ್ವೇತಾ ಸೆಹ್ರಾವತ್ 5 ರನ್, ಸೌಮ್ಯ ತಿವಾರಿ ಅಜೇಯ 24 ರನ್ ಹಾಗೂ ಗೊಂಗಾಡಿ ತ್ರಿಷಾ 24 ರನ್ ಗಳಿಸಿ ಭಾರತದ ಗೆಲುವಿಗೆ ಕಾರಣರಾಗಿದ್ದರು.

ಇದನ್ನೂ ಓದಿ : ಋಷಿಕೇಶದ ಸ್ವಾಮಿ ದಯಾನಂದ ಆಶ್ರಮಕ್ಕೆ ಭೇಟಿ ಕೊಟ್ಟ ವಿರಾಟ್ ಕೊಹ್ಲಿ ದಂಪತಿ

ಇದನ್ನೂ ಓದಿ : ರಣಜಿ ಕ್ವಾರ್ಟರ್ ಫೈನಲ್ : ಉತ್ತರಾಖಂಡ್ ವಿರುದ್ಧ ಮೊದಲ ದಿನವೇ ಕನ್ನಡಿಗರ ಆರ್ಭಟ

ಇದನ್ನೂ ಓದಿ : KL Rahul : ಕಾಂಗರೂ ಬೇಟೆಗೆ ಕನ್ನಡಿಗನ ಭರ್ಜರಿ ಸಮರಾಭ್ಯಾಸ; ಮುಂಬೈನಲ್ಲಿ 3 ದಿನ ಅಭ್ಯಾಸ ನಡೆಸಿದ ರಾಹುಲ್

ಇದು ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಭಾರತ ಗೆದ್ದ ಮೊದಲ ವಿಶ್ವಕಪ್ ಟ್ರೋಫಿ. ಭಾರತ ಮಹಿಳಾ ಸೀನಿಯರ್ ತಂಡ 2005 ಮತ್ತು 2017ರಲ್ಲಿ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ತಲುಪಿತ್ತು. ಆದರೆ ಎರಡು ಬಾರಿಯೂ ಫೈನಲ್’ನಲ್ಲಿ ಸೋತು ರನ್ನರ್ಸ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಅಷ್ಟೇ ಅಲ್ಲ, 2020ರಲ್ಲಿ ಆಸ್ಟ್ರೇಲಿಯಾ ನಡೆದ ಐಸಿಸಿ ಟಿ20 ವಿಶ್ವಕಪ್ ಫೈನಲ್’ನಲ್ಲೂ ಭಾರತ ಸೋಲು ಕಂಡಿತ್ತು. ಆದರೆ ಜ್ಯೂನಿಯರ್ ಮಹಿಳಾ ತಂಡ ಭಾರತದ ವಿಶ್ವಕಪ್ ಬರವನ್ನು ನೀಗಿಸುವಲ್ಲಿ ಯಶಸ್ವಿಯಾಗಿದೆ.

Nooshin Al Khadeer: Kannada’s Kamal behind Vikram’s Junior Women’s World Cup, Kalburgi coach behind India’s success

Comments are closed.