PAK vs NZ T20 Semi-Final: ಟಿ20 ವಿಶ್ವಕಪ್ ಫೈನಲ್’ಗೆ ಪಾಕಿಸ್ತಾನ ಲಗ್ಗೆ, ಭಾನುವಾರ ನಡೆಯುತ್ತಾ ಭಾರತ Vs ಪಾಕ್ ಫೈನಲ್ ?

ಸಿಡ್ನಿ: PAK vs NZ T20 Semi-Final : ಅದೃಷ್ಟದ ಬಲದಿಂದ ಸೆಮಿಫೈನಲ್ ತಲುಪಿದ್ದ ಪಾಕಿಸ್ತಾನ (Pakistan) ತಂಡ, ಸೆಮಿಫೈನಲ್’ನಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಟಿ20 ವಿಶ್ವಕಪ್ (T20 World Cup 2022) ಟೂರ್ನಿಯಲ್ಲಿ ಫೈನಲ್’ಗೆ ಲಗ್ಗೆಯಿಟ್ಟಿದೆ. ಸಿಡ್ನಿ ಕ್ರಿಕೆಟ್ ಗ್ರೌಂಡ್’ನಲ್ಲಿ ಬುಧವಾರ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಬಾಬರ್ ಅಜಮ್ ನಾಯಕತ್ವದ ಪಾಕಿಸ್ತಾನ, ಕೇನ್ ವಿಲಿಯಮ್ಸನ್ ಸಾರಥ್ಯದ ಕಿವೀಸ್ ಪಡೆಯನ್ನು 7 ವಿಕೆಟ್’ಗಳಿಂದ ಸೋಲಿಸಿ ಫೈನಲ್ ತಲುಪಿತು. ಇದರೊಂದಿಗೆ ಟಿ20 ವಿಶ್ವಕಪ್ ಇತಿಹಾಸದಲ್ಲಿ ಪಾಕಿಸ್ತಾನ ಮೂರನೇ ಬಾರಿ ಫೈನಲ್ ತಲುಪಿದ ಸಾಧನೆ ಮಾಡಿತು.

2007ರ ಚೊಚ್ಚಲ ವಿಶ್ವಕಪ್’ನಲ್ಲಿ ಫೈನಲ್ ತಲುಪಿ ಭಾರತ ವಿರುದ್ಧ ಸೋತಿದ್ದ ಪಾಕಿಸ್ತಾನ 2009ರಲ್ಲಿ ಚಾಂಪಿಯನ್ ಆಗಿತ್ತು. ಇದೀಗ 13 ವರ್ಷಗಳ ನಂತರ ಮತ್ತೆ ಪಾಕಿಸ್ತಾನ ಫೈನಲ್ ತಲುಪಿದ್ದು, ಭಾನುವಾರ ಮೆಲ್ಬೋರ್ನ್’ನಲ್ಲಿ ನಡೆಯುವ ಫೈನಲ್ ಪಂದ್ಯದಲ್ಲಿ ಭಾರತ ಅಥವಾ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಗುರುವಾರ ಅಡಿಲೇಡ್ ಓವಲ್ ಮೈದಾನದಲ್ಲಿ ಭಾರತ ಮತ್ತು ಇಂಗ್ಲೆಂಡ್ ಮುಖಾಮುಖಿಯಾಗಲಿವೆ.

ಮೊದಲ ಸೆಮಿಫೈನಲ್’ನಲ್ಲಿ ಗೆಲ್ಲುವ ಹಾಟ್ ಫೇವರಿಟ್ ಆಗಿ ಕಣಕ್ಕಿಳಿದ ನ್ಯೂಜಿಲೆಂಡ್, ಪಾಕಿಸ್ತಾನದ ಆರ್ಭಟಕ್ಕೆ ಬೆಚ್ಚಿ ಬಿತ್ತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕಿವೀಸ್’ಗೆ ಪಾಕ್’ನ ಯುವ ವೇಗಿ ಶಾಹೀನ್ ಶಾ ಅಫ್ರಿದಿ ಮೊದಲ ಓವರ್’ನಲ್ಲೇ ಫಿನ್ ಅಲೆನ್ ವಿಕೆಟ್ ಪಡೆಯುವ ಮೂಲಕ ಆಘಾತ ನೀಡಿದರು. ಮಧ್ಯಮ ಕ್ರಮಾಂಕದಲ್ಲಿ ನಾಯಕ ಕೇನ್ ವಿಲಿಯಮ್ಸನ್ 46 ರನ್ ಮತ್ತು ಡ್ಯಾರಿಲ್ ಮಿಚೆಲ್ ಅಜೇಯ 53 ರನ್ ಬಾರಿಸಿದ್ದರಿಂದ ನ್ಯೂಜಿಲೆಂಡ್ ನಿಗದಿತ 20 ಓವರ್’ಗಳಲ್ಲಿ 4 ವಿಕೆಟ್ ನಷ್ಟಕ್ಕೆ 152 ರನ್’ಗಳ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತು.

ಗುರಿ ಬೆನ್ನಟ್ಟಿದ ಪಾಕಿಸ್ತಾನಕ್ಕೆ ಆರಂಭಿಕರಾದ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಮೊದಲ ವಿಕೆಟ್’ಗೆ 105 ರನ್ ಸೇರಿಸಿ ಭದ್ರ ಬುನಾದಿ ಹಾಕಿಕೊಟ್ಟರು. ಈ ಪಂದ್ಯಕ್ಕೂ ಮುನ್ನ ಟೂರ್ನಿಯಲ್ಲಿ ಆಡಿದ 5 ಪಂದ್ಯಗಳಿಂದ ಕೇವಲ 39 ರನ್ ಗಳಿಸಿದ್ದ ನಾಯಕ ಬಾಬರ್ ಅಜಮ್ ಸೆಮಿಫೈನಲ್’ನಲ್ಲೇ ಫಾರ್ಮ್ ಕಂಡುಕೊಂಡು 42 ಎಸೆತಗಳಲ್ಲಿ 53 ರನ್ ಬಾರಿಸಿದರು. ಉಪನಾಯಕ ಮೊಹಮ್ಮದ್ ರಿಜ್ವಾನ್ 43 ಎಸೆತಗಳಲ್ಲಿ 57 ರನ್’ಗಳ ಕಾಣಿಕೆಯಿತ್ತರು. ಅಂತಿಮವಾಗಿ ಪಾಕಿಸ್ತಾನ 19.1 ಓವರ್’ಗಳಲ್ಲಿ 3 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿ ಫೈನಲ್’ಗೆ ಲಗ್ಗೆ ಇಟ್ಟಿತು.

ಇದನ್ನೂ ಓದಿ : LIVE Updates | IND vs ENG : ಟಿ20 ವಿಶ್ವಕಪ್: ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್‌ಗೆ ಹೀಗಿದೆ ಭಾರತದ ಪ್ಲೇಯಿಂಗ್ XI

ಇದನ್ನೂ ಓದಿ : Raghuram Bhat KSCA President : ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ರಘುರಾಮ್ ಭಟ್, ಚುನಾವಣೆಯೇ ಇಲ್ಲದೆ ಗೆದ್ದ ಬ್ರಿಜೇಶ್ ಬಣ

PAK vs NZ 1st T20 Semi-Final Pakistan Qualify for final T20 World Cup

Comments are closed.