KL Rahul Out : ಕಳಪೆ ಫಾರ್ಮ್‌ಗೆ ಸಿಗಲಿದೆ ಗೇಟ್ ಪಾಸ್ ಶಿಕ್ಷೆ, ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಕೆ.ಎಲ್ ರಾಹುಲ್ ಔಟ್ ?

ಬೆಂಗಳೂರು: KL Rahul Out : ಮುಂಬರುವ ಶ್ರೀಲಂಕಾ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಗಳಿಗೆ (India Vs Sri Lanka series) ಭಾರತ ತಂಡದ ಆಯ್ಕೆ ಸದ್ಯದಲ್ಲೇ ನಡೆಯಲಿದ್ದು, ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿ ಟೀಮ್ ಇಂಡಿಯಾ ಆಯ್ಕೆ ಮಾಡಲಿದೆ. ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ವೈಫಲ್ಯದ ನಂತರ ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯನ್ನು ಬಿಸಿಸಿಐ (BCCI) ವಜಾ ಮಾಡಿತ್ತು. ಆದರೆ ಹೊಸ ಆಯ್ಕೆ ಸಮಿತಿಯ ನೇಮಕವಾಗದ ಕಾರಣ ಹಳೇ ಆಯ್ಕೆ ಸಮಿತಿಯೇ ಶ್ರೀಲಂಕಾ ವಿರುದ್ಧದ ಸರಣಿಗೆ ಟೀಮ್ ಇಂಡಿಯಾವನ್ನು ಆಯ್ಕೆ ಮಾಡಲಿದೆ ಎಂದು ತಿಳಿದು ಬಂದಿದೆ.

ವೃತ್ತಿಜೀವನದ ಅತ್ಯಂತ ಕಳಪೆ ಫಾರ್ಮ್’ನಲ್ಲಿರುವ ಭಾರತ ತಂಡದ ಉಪನಾಯಕ ಕೆ.ಎಲ್ ರಾಹುಲ್ ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ತಂಡದಲ್ಲಿ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಯಿದೆ. ಬಾಂಗ್ಲಾದೇಶ ಪ್ರವಾಸದಲ್ಲಿ ದಯನೀಯ ವೈಫಲ್ಯ ಎದುರಿಸಿರುವ ರಾಹುಲ್ ಟೆಸ್ಟ್ ಸರಣಿಯ ನಾಲ್ಕು ಪಂದ್ಯಗಳಲ್ಲಿ ಕೇವಲ 57 ರನ್ (22, 23, 10, 02) ಗಳಿಸಿದ್ದಾರೆ. ಅದಕ್ಕೂ ಮೊದಲು ನಡೆದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ 73 ರನ್ ಗಳಿಸಿ ಮಿಂಚಿದ್ದ ರಾಹುಲ್ ನಂತರದ ಎರಡೂ ಪಂದ್ಯಗಳಲ್ಲಿ (14, 08 ರನ್) ಎಡವಿದ್ದರು. ಹೀಗೆ ಬಾಂಗ್ಲಾ ಪ್ರವಾಸದಲ್ಲಿ ಸತತ ಆರು ಇನ್ನಿಂಗ್ಸ್’ಗಳಲ್ಲಿ ರಾಹುಲ್ ದೊಡ್ಡ ಮೊತ್ತ ಗಳಿಸಲು ವಿಫಲರಾಗಿದ್ದಾರೆ. ಹೀಗಾಗಿ ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ರಾಹುಲ್ ಟೀಮ್ ಇಂಡಿಯಾದಲ್ಲಿ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಯಿದೆ.

ಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದು, ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ರೋಹಿತ್ ಶರ್ಮಾ ಸರಣಿಯಿಂದ ಹೊರಗುಳಿಯಲಿದ್ದಾರೆ. ಅನುಭವಿ ಆಟಗಾರರಿಗೆ ವಿಶ್ರಾಂತಿ ನೀಡಿ ಯುವ ಆಟಗಾರರಿಗೆ ಸ್ಥಾನ ಕಲ್ಪಿಸುವ ಸಾಧ್ಯತೆಯಿದೆ. ಮಾಜಿ ನಾಯಕ ವಿರಾಟ್ ಕೊಹ್ಲಿ ಅವರಿಗೂ ಲಂಕಾ ವಿರುದ್ಧದ ಟಿ20 ಸರಣಿಯಿಂದ ವಿಶ್ರಾಂತಿ ನೀಡುವ ಸಾದ್ಯತೆಯಿದೆ. ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿ ಜನವರಿ 3ರಂದು ಆರಂಭವಾಗಲಿದೆ. ಏಕದಿನ ಸರಣಿ ಜನವರಿ 10ರಂದು ಆರಂಭವಾಗಲಿದೆ.

ಭಾರತ Vs ಶ್ರೀಲಂಕಾ ಸರಣಿಯ ವೇಳಾಪಟ್ಟಿ
ಮೊದಲ ಟಿ20: ಜನವರಿ 03 (ಮುಂಬೈ)
2ನೇ ಟಿ20: ಜನವರಿ 05 (ಪುಣೆ)
3ನೇ ಟಿ20: ಜನವರಿ 07 (ರಾಜ್’ಕೋಟ್)
ಮೊದಲ ಏಕದಿನ: ಜನವರಿ 10 (ಗುವಾಹಟಿ)
2ನೇ ಏಕದಿನ: ಜನವರಿ 12 (ಕೋಲ್ಕತಾ)
3ನೇ ಏಕದಿನ: ಜನವರಿ 15 (ತಿರುವನಂತಪುರಂ)

Poor form will get gate pass punishment, KL Rahul out for T20 series India vs Sri Lanka

Comments are closed.