Rajat Patidar : ಆರ್‌ಸಿಬಿಗೆ ಡಬಲ್ ಶಾಕ್, ಸ್ಟಾರ್ ಬ್ಯಾಟ್ಸ್‌ಮನ್ ಐಪಿಎಲ್ ಟೂರ್ನಿಯಿಂದಲೇ ಔಟ್

ಬೆಂಗಳೂರು: ಐಪಿಎಲ್-2023 ಟೂರ್ನಿಯ ತನ್ನ ಮೊದಲ ಪಂದ್ಯದಲ್ಲೇ ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಬೀಗುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡಕ್ಕೆ ಡಬಲ್ ಶಾಕ್ (Rajat Patidar) ಎದುರಾಗಿದೆ. ಆರ್’ಸಿಬಿ ಪರ ಆಡುತ್ತಿರುವ ಇಂಗ್ಲೆಂಡ್’ನ ಎಡಗೈ ವೇಗದ ಬೌಲರ್ ರೀಸೀ ಟೋಪ್ಲೆ (Reece Topley) ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಬಲಭುಜದ ಗಾಯಕ್ಕೊಳಗಾಗಿ ಮುಂದಿನ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಅಷ್ಟೇ ಅಲ್ಲ, 3ರಿಂದ 4 ಪಂದ್ಯಗಳಿಂದ ಟೋಪ್ಲೆ ಹೊರಗುಳಿಯುವ ಸಾಧ್ಯತೆಯಿದೆ.

ಗಾಯದ ಮೇಲೆ ಬರೆ ಎಳೆದಂತೆ ರಾಯಲ್ ಚಾಲೆಂಜರ್ಸ್ ತಂಡಕ್ಕೆ ಮತ್ತೊಂದು ಶಾಕ್ ಎದುರಾಗಿದೆ. ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್’ಮನ್ ರಜತ್ ಪಾಟಿದಾರ್ (Rajat Patidar) ಗಾಯದ ಕಾರಣ ಐಪಿಎಲ್ ಟೂರ್ನಿಯಿಂದಲೇ ಹೊರ ಬಿದ್ದಿದ್ದಾರೆ. ಹಿಮ್ಮಡಿ ಗಾಯದಿಂದ ಬಳಲುತ್ತಿದ್ದ ರಜತ್ ಪಾಟಿದಾರ್, ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಆಡಿರಲಿಲ್ಲ. ಆದರೆ ಗಾಯದ ಪ್ರಮಾಣ ಗಂಭೀರವಾಗಿರುವ ಕಾರಣ ಇಡೀ ಟೂರ್ನಿಗೇ ಪಾಟಿದಾರ್ ಅಲಭ್ಯರಾಗಲಿದ್ದಾರೆ ಎಂದು ಆರ್’ಸಿಬಿ ಟೀಮ್ ಮ್ಯಾನೇಜ್ಮೆಂಟ್ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಪಾಟಿದಾರ್ ಅವರಿಗೆ ಆರ್’ಸಿಬಿ ಫ್ರಾಂಚೈಸಿ ಇನ್ನೂ ಬದಲಿ ಆಟಗಾರನನ್ನು ಹೆಸರಿಸಿಲ್ಲ.

ಮಧ್ಯಪ್ರದೇಶದ 29 ವರ್ಷದ ರಜತ್ ಪಾಟಿದಾರ್ ಕಳೆದ ವರ್ಷದ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಪರ ಅಮೋಘ ಪ್ರದರ್ಶನ ತೋರಿದ್ದರು. ಅದರಲ್ಲೂ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ 2ನೇ ಎಲಿನಿಮೇಟರ್ ಪಂದ್ಯದಲ್ಲಿ ಅಬ್ಬರಿಸಿದ್ದ ರಜತ್ ಪಾಟಿದಾರ್ ಕೇವಲ 54 ಎಸೆತಗಳಲ್ಲಿ ಅಜೇಯ 112 ರನ್ ಸಿಡಿಸಿ ಆರ್’ಸಿಬಿ ಗೆಲುವಿಗೆ ಕಾರಣರಾಗಿದ್ದರು.

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ರಜತ್ ಪಾಟಿದಾರ್ 3ನೇ ಕ್ರಮಾಂಕದಲ್ಲಿ ಆಡಬೇಕಿತ್ತು. ಕಳೆದ ಬಾರಿಯೂ 3ನೇ ಕ್ರಮಾಂಕದಲ್ಲಿ ಪಾಟಿದಾರ್ ಉತ್ತಮ ಪ್ರದರ್ಶನ ತೋರಿದ್ದರು. ಆದರೆ ಗಾಯದ ಸಮಸ್ಯೆ ಆರ್’ಸಿಬಿಗೆ ಹಿನ್ನಡೆಯಾಗಿ ಪರಿಣಮಿಸಿದೆ. ಪಾಟಿದಾರ್ ಸ್ಥಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯಾರಿಗೆ ಮಣೆ ಹಾಕಲಿದೆ ಎಂಬುದೇ ಸದ್ಯದ ಕುತೂಹಲ.

ಇದನ್ನೂ ಓದಿ : RCB vs KKR: RCB ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ: IPL 2023 ರಿಂದ ಪ್ರಮುಖ ಆಟಗಾರ ಔಟ್

ಇದನ್ನೂ ಓದಿ : Virat Kohli tattoo : ಅಧ್ಯಾತ್ಮದತ್ತ ವಾಲುತ್ತಿದ್ದಾರಾ ವಿರಾಟ್ ಕೊಹ್ಲಿ..?, ಸುಳಿವು ಬಿಟ್ಟು ಕೊಟ್ಟ ಹೊಸ ಟ್ಯಾಟೂ

ಇದನ್ನೂ ಓದಿ : IPL 2023 : ಐಪಿಎಲ್ ಗೆ ಕರೋನಾ ಭಯ : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿ

Rajat Patidar ruled out of IPL 2023: Double shock for RCB, star batsman ruled out of IPL tournament

Comments are closed.